ಕೇಂದ್ರ ಬಜೆಟ್ 2026: ಕ್ಯಾನ್ಸರ್ ಔಷಧಗಳ ಮೇಲಿನ ಸುಂಕ ಕಡಿತ
x
ಕೇಂದ್ರ ಬಜೆಟ್‌ನಲ್ಲಿ ಕ್ಯಾನ್ಸರ್‌ ಔಷಧಗಳ ಮೇಲಿನ ಸುಂಕ ರದ್ದು

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಔಷಧಗಳ ಮೇಲಿನ ಸುಂಕ ಕಡಿತ

ಕೇಂದ್ರ ಬಜೆಟ್ 2026ರಲ್ಲಿ ಕ್ಯಾನ್ಸರ್ ರೋಗಿಗಳಿಗೆ ಮತ್ತು ವಿದೇಶಕ್ಕೆ ಹೋಗುವವರಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. 36 ಜೀವ ರಕ್ಷಕ ಔಷಧಗಳ ಮೇಲಿನ ಸುಂಕ ರದ್ದುಗೊಳಿಸಿದೆ.


ಕ್ಯಾನ್ಸರ್ ಚಿಕಿತ್ಸೆಯ ವೆಚ್ಚವನ್ನು ತಗ್ಗಿಸುವ ಮತ್ತು ರೋಗಿಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ. ಸುಮಾರು 17 ಔಷಧಗಳ ಮೇಲೆ ವಿಧಿಸಲಾಗಿದ್ದ ಸುಂಕವನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ.

17 ಅಗತ್ಯ ಔಷಧಗಳಿಗೆ ವಿನಾಯಿತಿ

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸಲಾಗುವ 17 ಅತ್ಯಗತ್ಯ ಔಷಧಗಳ ಮೇಲೆ ವಿಧಿಸಲಾಗುತ್ತಿದ್ದ ಮೂಲ ಅಬಕಾರಿ ಸುಂಕವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗಿದೆ. ಇದರಿಂದ ಈ ಔಷಧಗಳ ಬೆಲೆ ಗಣನೀಯವಾಗಿ ಇಳಿಕೆಯಾಗಲಿದೆ. ವೈಯಕ್ತಿಕ ಬಳಕೆಗಾಗಿ ಆಮದು ಮಾಡಿಕೊಳ್ಳುವ ಔಷಧಗಳು ಮತ್ತು ವಿಶೇಷ ವೈದ್ಯಕೀಯ ಆಹಾರಗಳ ಸುಂಕ ವಿನಾಯಿತಿ ಪಟ್ಟಿಗೆ ಇನ್ನೂ ಏಳು ಅಪರೂಪದ ಕಾಯಿಲೆಗಳನ್ನು ಸೇರಿಸಲಾಗಿದೆ.

ವಿಶೇಷ ಚಿಕಿತ್ಸೆಗಳಿಗೆ ಬೆಂಬಲ

ವಿಶೇಷ ಚಿಕಿತ್ಸೆಗಳು ಅಥವಾ ಥೆರಪಿಗಳ ಅಗತ್ಯವಿರುವ ಕ್ಯಾನ್ಸರ್ ರೋಗಿಗಳಿಗೆ ಇದರಿಂದ ಹೆಚ್ಚಿನ ಆರ್ಥಿಕ ಲಾಭ ಸಿಗಲಿದ್ದು, ವಿದೇಶಗಳಿಂದ ಬರುವ ಜೀವ ಉಳಿಸುವ ಔಷಧಗಳು ಇನ್ನು ಮುಂದೆ ಅಗ್ಗವಾಗಲಿವೆ.

ಜೀವ ರಕ್ಷಕ ಔಷಧಗಳ ಬೆಲೆ ಇಳಿಕೆ

ಕ್ಯಾನ್ಸರ್, ಅಪರೂಪದ ಕಾಯಿಲೆಗಳು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಆರ್ಥಿಕ ಹೊರೆ ಕಡಿಮೆ ಮಾಡಲು 36 ಜೀವ ರಕ್ಷಕ ಔಷಧಗಳನ್ನು ಮೂಲ ಅಬಕಾರಿ ಸುಂಕದಿಂದ ಸಂಪೂರ್ಣವಾಗಿ ಮುಕ್ತಗೊಳಿಸಲಾಗಿದೆ. ಇದರ ಜೊತೆಗೆ, ಇನ್ನೂ 6 ಜೀವ ರಕ್ಷಕ ಔಷಧಗಳ ಮೇಲೆ ಶೇ. 5 ರಷ್ಟು ರಿಯಾಯಿತಿ ದರದ ಸುಂಕವನ್ನು ವಿಧಿಸಲು ಪ್ರಸ್ತಾಪಿಸಲಾಗಿದೆ. ಈ ಔಷಧಗಳ ತಯಾರಿಕೆಗೆ ಬಳಸುವ ಕಚ್ಚಾ ವಸ್ತುಗಳಿಗೂ ಇದೇ ವಿನಾಯಿತಿ ಅನ್ವಯವಾಗಲಿದೆ.

ಜಿಲ್ಲಾ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಡೇ ಕೇರ್ ಸೆಂಟರ್‌ಗಳು

ಕ್ಯಾನ್ಸರ್ ರೋಗಿಗಳು ಚಿಕಿತ್ಸೆಗಾಗಿ ದೂರದ ನಗರಗಳಿಗೆ ಅಲೆಯುವುದನ್ನು ತಪ್ಪಿಸಲು ಸರ್ಕಾರವು ಮುಂದಿನ 3 ವರ್ಷಗಳಲ್ಲಿ ದೇಶದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ 'ಡೇ ಕೇರ್ ಕ್ಯಾನ್ಸರ್ ಸೆಂಟರ್'ಗಳನ್ನು (ಹಗಲು ವೇಳೆಯ ಚಿಕಿತ್ಸಾ ಕೇಂದ್ರ) ಸ್ಥಾಪಿಸಲಿದೆ. ಈ ಯೋಜನೆಯ ಭಾಗವಾಗಿ 2025-26ನೇ ಸಾಲಿನಲ್ಲಿಯೇ 200 ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಸಚಿವರು ಘೋಷಿಸಿದ್ದಾರೆ.

ವಿದೇಶದಲ್ಲಿ ಶಿಕ್ಷಣ ಮತ್ತು ಚಿಕಿತ್ಸೆ

ಉದಾರೀಕೃತ ರವಾನೆ ಯೋಜನೆಯ (LRS) ಅಡಿಯಲ್ಲಿ ವಿದೇಶಿ ಶಿಕ್ಷಣ ಮತ್ತು ವೈದ್ಯಕೀಯ ಉದ್ದೇಶಗಳಿಗಾಗಿ ಹಣ ಕಳುಹಿಸುವಾಗ ವಿಧಿಸಲಾಗುತ್ತಿದ್ದ ಶೇ. 5 ರಷ್ಟು ಟಿಸಿಎಸ್ ದರವನ್ನು ಕೂಡ ಶೇ. 2ಕ್ಕೆ ಇಳಿಸಲಾಗಿದೆ. ವಿದೇಶಕ್ಕೆ ಪ್ರವಾಸ ಹೋಗುವವರಿಗೆ ಮತ್ತು ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತಿದ್ದ ತೆರಿಗೆಯನ್ನು ಸರ್ಕಾರ ಗಣನೀಯವಾಗಿ ಕಡಿತಗೊಳಿಸಿದೆ.

ವಿದೇಶಿ ಪ್ರವಾಸ ಪ್ಯಾಕೇಜ್‌ಗಳು: ಸದ್ಯ ವಿದೇಶಿ ಪ್ರವಾಸದ ಪ್ಯಾಕೇಜ್‌ಗಳ ಮೇಲೆ ಇರುವ ಶೇ. 5 ಮತ್ತು ಶೇ. 20 ರಷ್ಟು ಟಿಸಿಎಸ್ ದರವನ್ನು ಯಾವುದೇ ಮಿತಿಯಿಲ್ಲದೆ ನೇರವಾಗಿ ಶೇ. 2ಕ್ಕೆ ಇಳಿಸಲು ಪ್ರಸ್ತಾಪಿಸಲಾಗಿದೆ.

ಸೀತಾರಾಮನ್ ಅವರು ತಮ್ಮ ಭಾಷಣದಲ್ಲಿ, "ವಿದೇಶಿ ಪ್ರವಾಸ ಪ್ಯಾಕೇಜ್‌ಗಳ ಮಾರಾಟದ ಮೇಲಿನ ಟಿಸಿಎಸ್ ದರವನ್ನು ಸದ್ಯದ ಶೇ. 5 ಮತ್ತು ಶೇ. 20 ರಿಂದ, ಯಾವುದೇ ಮೊತ್ತದ ಮಿತಿಯಿಲ್ಲದೆ ಶೇ. 2ಕ್ಕೆ ಇಳಿಸಲು ನಾನು ಪ್ರಸ್ತಾಪಿಸುತ್ತೇನೆ. ಹಾಗೆಯೇ ಶಿಕ್ಷಣ ಮತ್ತು ವೈದ್ಯಕೀಯ ಉದ್ದೇಶಗಳಿಗಾಗಿ ಹಣ ರವಾನೆ ಮಾಡುವ ಮೇಲಿನ ಟಿಸಿಎಸ್ ದರವನ್ನು ಶೇ. 5 ರಿಂದ ಶೇ. 2ಕ್ಕೆ ಇಳಿಸಲು ಪ್ರಸ್ತಾಪಿಸುತ್ತೇನೆ," ಎಂದು ತಿಳಿಸಿದರು.

Read More
Next Story