
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಗುರುವಾರ (ಫೆಬ್ರವರಿ 5) ಬೆಳಗಿನ ಜಾವದಿಂದ ಸಂಚಾರ ಸಹಜ ಸ್ಥಿತಿಗೆ ಮರಳಿದೆ.
33 ಗಂಟೆಗಳ ನರಕಯಾತನೆ ಅಂತ್ಯ: ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಮತ್ತೆ ಸಂಚಾರ ಆರಂಭ!
ಮುಂಬೈ ಮತ್ತು ಪುಣೆ ನಡುವಿನ ಈ ಪ್ರಮುಖ ಹೆದ್ದಾರಿಯಲ್ಲಿ ಮಂಗಳವಾರ ಸಂಜೆಯಿಂದ ಉಂಟಾಗಿದ್ದ ಬೃಹತ್ ಟ್ರಾಫಿಕ್ ಜಾಮ್‌ಗೆ ಕೊನೆಗೂ ತೆರೆ ಬಿದ್ದಿದ್ದು, ಗುರುವಾರ ಬೆಳಗಿನ ಜಾವದಿಂದ ವಾಹನ ಸಂಚಾರ ಸುಗಮವಾಗಿದೆ.
ಮುಂಬೈ/ಪುಣೆ: ಬರೋಬ್ಬರಿ 33 ಗಂಟೆಗಳ ಕಾಲ ಪ್ರಯಾಣಿಕರ ಪಾಲಿಗೆ ನರಕಸದೃಶವಾಗಿದ್ದ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಗುರುವಾರ (ಫೆಬ್ರವರಿ 5) ಬೆಳಗಿನ ಜಾವದಿಂದ ಸಂಚಾರ ಸಹಜ ಸ್ಥಿತಿಗೆ ಮರಳಿದೆ. ಮಂಗಳವಾರ ಸಂಜೆ ಸಂಭವಿಸಿದ ಗ್ಯಾಸ್ ಟ್ಯಾಂಕರ್ ಅಪಘಾತದಿಂದಾಗಿ ಸ್ಥಗಿತಗೊಂಡಿದ್ದ ಈ ಪ್ರಮುಖ ಹೆದ್ದಾರಿಯಲ್ಲಿ ಸಾವಿರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಗಳವಾರ ಸಂಜೆ 5 ಗಂಟೆ ಸುಮಾರಿಗೆ ಖಂಡಾಲಾ ಘಾಟ್‌ನ ಅದೋಷಿ ಸುರಂಗದ ಬಳಿ, ಮುಂಬೈ ಕಡೆಗೆ ಹೋಗುತ್ತಿದ್ದ ಅನಿಲ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ಈ ಟ್ಯಾಂಕರ್‌ನಲ್ಲಿ ಅತ್ಯಂತ ಅಪಾಯಕಾರಿ ಮತ್ತು ಸುಲಭವಾಗಿ ಬೆಂಕಿ ಹತ್ತಿಕೊಳ್ಳುವಂತಹ 'ಪ್ರೊಪಿಲೀನ್' ಅನಿಲವಿದ್ದ ಕಾರಣ, ಮುನ್ನೆಚ್ಚರಿಕೆ ಕ್ರಮವಾಗಿ ಹೆದ್ದಾರಿಯನ್ನು ಬಂದ್ ಮಾಡಲಾಗಿತ್ತು. ಇದು ದೇಶದ ಮೊದಲ 6-ಪಥದ ಕಾಂಕ್ರೀಟ್ ಎಕ್ಸ್‌ಪ್ರೆಸ್‌ವೇ ಆಗಿದ್ದು, ಮುಂಬೈ ಮತ್ತು ಪುಣೆ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿದೆ.
20 ಕಿ.ಮೀ ಟ್ರಾಫಿಕ್ ಜಾಮ್!
ಅಪಘಾತದ ಪರಿಣಾಮ ಮುಂಬೈ ಕಡೆಗಿನ ಮಾರ್ಗದಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಇದರಿಂದಾಗಿ ಸುಮಾರು 20 ಕಿಲೋಮೀಟರ್‌ವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಬಿಸಿಲು, ದಾಹ ಮತ್ತು ಹಸಿವಿನಿಂದ ಬಳಲಿದ ಪ್ರಯಾಣಿಕರು, ಅದರಲ್ಲೂ ಮಹಿಳೆಯರು ಮತ್ತು ಮಕ್ಕಳು ಶೌಚಾಲಯದ ವ್ಯವಸ್ಥೆಯೂ ಇಲ್ಲದೆ ನಡು ರಸ್ತೆಯಲ್ಲೇ ರಾತ್ರಿ ಕಳೆಯುವಂತಾಯಿತು. ಪರಿಸ್ಥಿತಿಯ ಗಂಭೀರತೆ ಅರಿತ ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (MSRDC), ಸಾರ್ವಜನಿಕರ ಆಕ್ರೋಶದ ಹಿನ್ನೆಲೆಯಲ್ಲಿ ಎಕ್ಸ್‌ಪ್ರೆಸ್‌ವೇ ಟೋಲ್ ಸಂಗ್ರಹವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.
ಕಠಿಣವಾಗಿದ್ದ ತೆರವು ಕಾರ್ಯಾಚರಣೆ
ಪಲ್ಟಿಯಾಗಿದ್ದ ಟ್ಯಾಂಕರ್‌ನಲ್ಲಿ ದ್ರವರೂಪದ ಅನಿಲವಿದ್ದಿದ್ದರಿಂದ ಅದನ್ನು ತೆರವುಗೊಳಿಸುವುದು ಸವಾಲಿನ ಕೆಲಸವಾಗಿತ್ತು. ಸ್ಥಳಕ್ಕೆ ಎನ್‌ಡಿಆರ್‌ಎಫ್ (NDRF), ಎಸ್‌ಡಿಆರ್‌ಎಫ್ (SDRF), ಅಗ್ನಿಶಾಮಕ ದಳ ಮತ್ತು ಭಾರತ್ ಪೆಟ್ರೋಲಿಯಂ ತಜ್ಞರ ತಂಡಗಳು ದೌಡಾಯಿಸಿದವು. ಬುಧವಾರ ರಾತ್ರಿ ಅನಿಲವನ್ನು ಸುರಕ್ಷಿತವಾಗಿ ಮತ್ತೊಂದು ಟ್ಯಾಂಕರ್‌ಗೆ ವರ್ಗಾಯಿಸಿದ ನಂತರ, ಭಾರೀ ಕ್ರೇನ್‌ಗಳ ಸಹಾಯದಿಂದ ಬಿದ್ದಿದ್ದ ವಾಹನವನ್ನು ಮೇಲೆತ್ತಲಾಯಿತು. ಗುರುವಾರ ಬೆಳಗಿನ ಜಾವ 1.46 ಕ್ಕೆ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಯಿತು.
ಅಗತ್ಯ ಸೇವೆಗಳ ಮೇಲೆ ಪರಿಣಾಮ
ಈ ದೀರ್ಘಕಾಲದ ತಡೆಯಿಂದಾಗಿ ಮುಂಬೈ ಮತ್ತು ಪುಣೆ ನಡುವಿನ ಬಸ್ ಸಂಚಾರ ಅಸ್ತವ್ಯಸ್ತವಾಗಿತ್ತು. ನೂರಾರು ಬಸ್‌ಗಳು ರದ್ದುಗೊಂಡರೆ, ಹಾಲು, ತರಕಾರಿ ಮತ್ತು ದಿನಸಿ ಸರಬರಾಜು ಮಾಡುವ ಸರಕು ವಾಹನಗಳು ರಸ್ತೆಯಲ್ಲೇ ಸಿಲುಕಿಕೊಂಡಿದ್ದವು. ಸದ್ಯ ಸಂಚಾರ ಆರಂಭವಾಗಿದ್ದರೂ, ಅಮೃತಾಂಜನ್ ಸೇತುವೆ ಬಳಿ ಕೆಲವು ಭಾರೀ ವಾಹನಗಳು ಕೆಟ್ಟು ನಿಂತಿದ್ದರಿಂದ ಗುರುವಾರ ಬೆಳಿಗ್ಗೆಯೂ ಸಂಚಾರ ತುಸು ನಿಧಾನಗತಿಯಲ್ಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

