ತೆಲಂಗಾಣ ಪೊಲೀಸರಿಗೆ ಶರಣಾದ ಸಿಪಿಐ ಪ್ರಧಾನ ಕಾರ್ಯದರ್ಶಿ ದೇವ್‌ಜಿ?
x

ತೆಲಂಗಾಣ ಪೊಲೀಸರಿಗೆ ಶರಣಾದ ಸಿಪಿಐ ಪ್ರಧಾನ ಕಾರ್ಯದರ್ಶಿ ದೇವ್‌ಜಿ?

ಮಾವೋವಾದಿ ನಿಗ್ರಹ ಕಾರ್ಯಾಚರಣೆಗಳನ್ನು ನಿರ್ವಹಿಸುವ ತೆಲಂಗಾಣ ಪೊಲೀಸರ 'ವಿಶೇಷ ಗುಪ್ತಚರ ದಳ' ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ಹಿರಿಯ ಅಧಿಕಾರಿಗಳು ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.


Click the Play button to hear this message in audio format

ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ಪ್ರಧಾನ ಕಾರ್ಯದರ್ಶಿ ಹಾಗೂ ಪೀಪಲ್ಸ್ ಲಿಬರೇಷನ್ ಗೆರಿಲ್ಲಾ ಆರ್ಮಿ (PLGA)ಯ ಪ್ರಮುಖ ರಣತಂತ್ರಗಾರ ಎಂದು ನಂಬಲಾಗಿರುವ 'ದೇವ್‌ಜಿ' ಅಲಿಯಾಸ್ ತಿಪ್ಪಿರಿ ತಿರುಪತಿ ತೆಲಂಗಾಣ ಪೊಲೀಸರ ಮುಂದೆ ಶರಣಾಗಿದ್ದಾರೆ ಎಂಬ ವರದಿಗಳು ಭಾನುವಾರ ಹೊರಬಿದ್ದಿವೆ. ಮೇ 2025ರಲ್ಲಿ ನಂಬಾಲ ಕೇಶವ್ ರಾವ್ ಅಲಿಯಾಸ್ ಬಸವರಾಜು ಅವರ ಸಾವಿನ ನಂತರ ದೇವ್‌ಜಿ ಈ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದರು ಎನ್ನಲಾಗಿದೆ.

ಭಾನುವಾರ (ಫೆಬ್ರವರಿ 22) ಹೊರಬಿದ್ದಿರುವ ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ತೆಲಂಗಾಣ ಮೂಲದ ದೇವ್‌ಜಿ ಜೊತೆಗೆ ಮತ್ತೊಬ್ಬ ಹಿರಿಯ ಮಾವೋವಾದಿ ನಾಯಕ ಮಲ್ಲಾ ರಾಜಿ ರೆಡ್ಡಿ ಹಾಗೂ ಇತರ ಕೆಲವು ಕಾರ್ಯಕರ್ತರು ಕೂಡ ಶರಣಾಗಿದ್ದಾರೆ. ಆದರೆ, ಈ ಬಗ್ಗೆ ತೆಲಂಗಾಣ ಪೊಲೀಸರಿಂದ ಅಥವಾ ಸರ್ಕಾರದ ಕಡೆಯಿಂದ ಇನ್ನೂ ಯಾವುದೇ ಅಧಿಕೃತ ದೃಢೀಕರಣ ಹೊರಬಿದ್ದಿಲ್ಲ. ಮಾವೋವಾದಿ ನಿಗ್ರಹ ಕಾರ್ಯಾಚರಣೆಗಳನ್ನು ನಿರ್ವಹಿಸುವ ತೆಲಂಗಾಣ ಪೊಲೀಸರ 'ವಿಶೇಷ ಗುಪ್ತಚರ ದಳ' ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ಹಿರಿಯ ಅಧಿಕಾರಿಗಳು ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.

ಯಾರಿವನು ದೇವ್‌ಜಿ?

ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯ ನಿವಾಸಿಯಾಗಿರುವ 60 ವರ್ಷದ ದೇವ್‌ಜಿ, ಸಿಪಿಐ (ಮಾವೋವಾದಿ) ಕೇಂದ್ರ ಸಮಿತಿಯ ಹಾಗೂ ಪಾಲಿಟ್‌ಬ್ಯೂರೋದ ಪ್ರಮುಖ ಸದಸ್ಯನಾಗಿದ್ದ. ಪೀಪಲ್ಸ್ ಲಿಬರೇಷನ್ ಗೆರಿಲ್ಲಾ ಆರ್ಮಿ (ಪಿಎಲ್‌ಜಿಎ) ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಈತನ ತಲೆಗೆ ಬರೋಬ್ಬರಿ 1 ಕೋಟಿ ರೂ. ಬಹುಮಾನ ಘೋಷಿಸಲಾಗಿತ್ತು. ಕಳೆದ ವರ್ಷ ಬಸವರಾಜು ಸಾವನ್ನಪ್ಪಿದ ಬಳಿಕ ದೇವ್‌ಜಿಯೇ ಸಂಘಟನೆಯ ಚುಕ್ಕಾಣಿ ಹಿಡಿದಿದ್ದ. ಇತ್ತೀಚಿನ ದಿನಗಳಲ್ಲಿ ನಿಷೇಧಿತ ಸಂಘಟನೆಯ ಅನೇಕ ಉಗ್ರರು ಹಿಂಸಾಚಾರ ತೊರೆದು ಮುಖ್ಯವಾಹಿನಿಗೆ ಸೇರ್ಪಡೆಯಾಗುತ್ತಿರುವುದು ಮಾವೋವಾದಿ ಚಳವಳಿಗೆ ಭಾರಿ ಹಿನ್ನಡೆಯನ್ನುಂಟುಮಾಡಿದೆ.

ಶರಣಾದವರಿಗೆ ಪುನರ್ವಸತಿ ಮತ್ತು ಸರ್ಕಾರದ ನೆರವು

ಫೆಬ್ರವರಿ 15ರಂದು ತೆಲಂಗಾಣದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಬಿ. ಶಿವಧರ್ ರೆಡ್ಡಿ ಅವರು, ತೆಲಂಗಾಣದಲ್ಲಿ ಉಳಿದಿರುವ ಸುಮಾರು 15 ಕ್ಯಾಡರ್‌ಗಳು ಸೇರಿದಂತೆ ಅಜ್ಞಾತವಾಸದಲ್ಲಿರುವ ಎಲ್ಲಾ ಸಿಪಿಐ (ಮಾವೋವಾದಿ) ನಾಯಕರು ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗುವಂತೆ ಕರೆ ನೀಡಿದ್ದರು. ಮುಖ್ಯವಾಹಿನಿಗೆ ಮರಳಲು ಇಚ್ಛಿಸುವವರಿಗೆ ರಾಜ್ಯ ಸರ್ಕಾರದ 'ಶರಣಾಗತಿ ಮತ್ತು ಪುನರ್ವಸತಿ ಯೋಜನೆ'ಯಡಿ ತಕ್ಷಣದ ನೆರವು ಮತ್ತು ಪ್ರಯೋಜನಗಳನ್ನು ವಿಸ್ತರಿಸಲಾಗುವುದು ಎಂದು ಅವರು ಭರವಸೆ ನೀಡಿದ್ದರು.

ಜನವರಿಯಲ್ಲಿ ನಡೆದಿದ್ದ ಪ್ರಮುಖ ಶರಣಾಗತಿಗಳು

ಇದಕ್ಕೂ ಮುನ್ನ ಜನವರಿಯಲ್ಲಿ ದಂಡಕಾರಣ್ಯ ರಾಜ್ಯ ವಲಯ ಸಮಿತಿಯ ಸದಸ್ಯ ಬಾದ್ಸೆ ಸುಕ್ಕ ಅಲಿಯಾಸ್ ದೇವ ಮತ್ತು ಕಂಕಣಾಲ ರಾಜಿ ರೆಡ್ಡಿ ಅಲಿಯಾಸ್ ವೆಂಕಟೇಶ್ ಸೇರಿದಂತೆ ಇಬ್ಬರು ಹಿರಿಯ ಮಾವೋವಾದಿ ಪದಾಧಿಕಾರಿಗಳು ಹಾಗೂ 18 ಕಾರ್ಯಕರ್ತರು ಹೈದರಾಬಾದ್‌ನಲ್ಲಿ ತೆಲಂಗಾಣ ಪೊಲೀಸರ ಮುಂದೆ ಶರಣಾಗಿದ್ದರು. ಈ ತಂಡವು 48 ಬಂದೂಕುಗಳು, 2,206 ಸುತ್ತಿನ ಮದ್ದುಗುಂಡುಗಳು ಹಾಗೂ 20.30 ಲಕ್ಷ ರೂ. ನಗದನ್ನು ಒಪ್ಪಿಸಿತ್ತು. "ದೇವ್‌ನ ಶರಣಾಗತಿಯೊಂದಿಗೆ ಸಿಪಿಐ (ಮಾವೋವಾದಿ) ಪಕ್ಷದ ಪಿಎಲ್‌ಜಿಎ ಬಹುತೇಕ ಕುಸಿದಿದೆ" ಎಂದು ತೆಲಂಗಾಣ ಡಿಜಿಪಿ ತಿಳಿಸಿದ್ದರು.

ಕಳೆದ ವರ್ಷ ಆಂಧ್ರಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತನಾದ ಮಡವಿ ಹಿಡ್ಮಾ ಅವರ ಸಮಕಾಲೀನನಾಗಿದ್ದ ದೇವ, ಮಾವೋವಾದಿ ಸಂಘಟನೆಯ ಎರಡನೇ ಅತಿದೊಡ್ಡ ಬುಡಕಟ್ಟು ನಾಯಕನಾಗಿದ್ದ. ಹಿಡ್ಮಾವನ್ನು ಅನುಸರಿಸಿದ್ದ ದೇವ, ಸೇನಾ ತಂತ್ರಗಳು, ಸ್ಫೋಟಕಗಳ ಸಂಗ್ರಹ ಮತ್ತು ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲಿ ಪರಿಣತನಾಗಿದ್ದ. ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಪುವ್ವರ್ತಿ ಗ್ರಾಮದ ನಿವಾಸಿಯಾಗಿದ್ದ ಈತ, ಕಾಂಗ್ರೆಸ್ ಮುಖಂಡ ಮಹೇಂದ್ರ ಕರ್ಮ ಸೇರಿದಂತೆ ಹಲವರ ಹತ್ಯೆಗೆ ಕಾರಣವಾದ ಜೀರಂ ಘಾಟಿ ದಾಳಿಯ ಪ್ರಮುಖ ರೂವಾರಿಯಾಗಿದ್ದ. ಶರಣಾದವರಿಂದ ಟಾವೋರ್ (Tavor) ಮತ್ತು ಕೋಲ್ಟ್ (Colt) ರೈಫಲ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳನ್ನು ಭದ್ರತಾ ಪಡೆಗಳ ಮೇಲಿನ ದಾಳಿಯ ವೇಳೆ ಲೂಟಿ ಮಾಡಿರಬಹುದು ಎಂದು ಶಂಕಿಸಲಾಗಿದೆ.

Read More
Next Story