ತಿರುಮಲ ಲಡ್ಡು ಕಲಬೆರಕೆಗೆ ಬ್ರೇಕ್: 20 ಕೋಟಿ ರೂ. ವೆಚ್ಚದ ಹೈಟೆಕ್ ಪ್ರಯೋಗಾಲಯ ಆರಂಭ
x

ಸುಮಾರು 20 ಕೋಟಿ ರೂಪಾಯಿಗಳ ಬೃಹತ್ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಹೈಟೆಕ್ ಲ್ಯಾಬ್, ದೇಶದ ಯಾವುದೇ ದೇವಾಲಯದ ಇತಿಹಾಸದಲ್ಲೇ ಮೊದಲ ಬಾರಿಗೆ ತಿರುಮಲದಲ್ಲಿ ತಲೆಎತ್ತಿರುವುದು ವಿಶೇಷವಾಗಿದೆ.

ತಿರುಮಲ ಲಡ್ಡು ಕಲಬೆರಕೆಗೆ ಬ್ರೇಕ್: 20 ಕೋಟಿ ರೂ. ವೆಚ್ಚದ ಹೈಟೆಕ್ ಪ್ರಯೋಗಾಲಯ ಆರಂಭ

ಸುಮಾರು 20 ಕೋಟಿ ರೂಪಾಯಿಗಳ ಬೃಹತ್ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಹೈಟೆಕ್ ಲ್ಯಾಬ್, ದೇಶದ ಯಾವುದೇ ದೇವಾಲಯದ ಇತಿಹಾಸದಲ್ಲೇ ಮೊದಲ ಬಾರಿಗೆ ತಿರುಮಲದಲ್ಲಿ ತಲೆಎತ್ತಿರುವುದು ವಿಶೇಷವಾಗಿದೆ.


Click the Play button to hear this message in audio format

ತಿರುಮಲ ಶ್ರೀವಾರಿ ಲಡ್ಡು ಪ್ರಸಾದದ ಪಾವಿತ್ರ್ಯತೆ ಮತ್ತು ಗುಣಮಟ್ಟವನ್ನು ಕಾಪಾಡುವ ನಿಟ್ಟಿನಲ್ಲಿ ಆಂಧ್ರಪ್ರದೇಶ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಪ್ರಸಾದಕ್ಕೆ ಬಳಸುವ ತುಪ್ಪ ಸೇರಿದಂತೆ ಯಾವುದೇ ಕಚ್ಚಾ ವಸ್ತುಗಳಲ್ಲಿ ಇನ್ನು ಮುಂದೆ ಸಣ್ಣ ಪ್ರಮಾಣದ ಕಲಬೆರಕೆಯಾದರೂ ತಕ್ಷಣವೇ ಪತ್ತೆಹಚ್ಚುವ ಅತ್ಯಾಧುನಿಕ 'ಆಹಾರ ಮತ್ತು ಜಲ ವಿಶ್ಲೇಷಣಾ ಪ್ರಯೋಗಾಲಯ'ವನ್ನು ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಅವರು ಶನಿವಾರ ಲೋಕಾರ್ಪಣೆ ಮಾಡಿದ್ದಾರೆ.

ಸುಮಾರು 20 ಕೋಟಿ ರೂಪಾಯಿಗಳ ಬೃಹತ್ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಹೈಟೆಕ್ ಲ್ಯಾಬ್, ದೇಶದ ಯಾವುದೇ ದೇವಾಲಯದ ಇತಿಹಾಸದಲ್ಲೇ ಮೊದಲ ಬಾರಿಗೆ ತಿರುಮಲದಲ್ಲಿ ತಲೆಎತ್ತಿರುವುದು ವಿಶೇಷವಾಗಿದೆ.

ಲಡ್ಡು ವಿವಾದದ ಹಿನ್ನೆಲೆ

ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ತಿರುಮಲ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಪಾಮೋಲಿನ್ ಎಣ್ಣೆ ಬೆರೆತ ನಕಲಿ ತುಪ್ಪವನ್ನು ಬಳಸಲಾಗಿದೆ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮಾಡಿದ ಆರೋಪ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿತ್ತು. ಈ ಹಗರಣದ ತನಿಖೆಯನ್ನು ಸದ್ಯ ಸಿಬಿಐ ನೇತೃತ್ವದ ಎಸ್‌ಐಟಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ದಿನೇಶ್ ಕುಮಾರ್ ನೇತೃತ್ವದ ಏಕಸದಸ್ಯ ಆಯೋಗ ನಡೆಸುತ್ತಿದೆ. ಈ ಹಿಂದೆ ತುಪ್ಪದ ಗುಣಮಟ್ಟ ಪರೀಕ್ಷೆಗಾಗಿ ಮೈಸೂರು ಅಥವಾ ಗುಜರಾತ್‌ನ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ (ಎನ್‌ಡಿಡಿಬಿ) ಪ್ರಯೋಗಾಲಯಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಇತ್ತು.

ಈ ಸಮಸ್ಯೆಗೆ ಶಾಶ್ವತ ಮುಕ್ತಿ ಹಾಡಲು ಹಾಗೂ ಭಕ್ತರ ನಂಬಿಕೆಯನ್ನು ಉಳಿಸಿಕೊಳ್ಳಲು ರಾಜ್ಯ ಸರ್ಕಾರ ಮತ್ತು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಜಂಟಿಯಾಗಿ, ಎಫ್‌ಎಸ್‌ಎಸ್‌ಎಐ (FSSAI) ಸಹಯೋಗದೊಂದಿಗೆ ಈ ಸ್ವಂತ ಪ್ರಯೋಗಾಲಯವನ್ನು ಕೇವಲ ಒಂಬತ್ತು ತಿಂಗಳಲ್ಲಿ ಸಜ್ಜುಗೊಳಿಸಿವೆ.

ಇ-ನಾಲಿಗೆ ಮತ್ತು ಇ-ಮೂಗು ತಂತ್ರಜ್ಞಾನದ ಕಾವಲು

12,000 ಚದರ ಅಡಿ ವಿಸ್ತೀರ್ಣದಲ್ಲಿ ಎರಡು ಮಹಡಿಗಳಲ್ಲಿ ತಲೆಎತ್ತಿರುವ ಈ ಬೃಹತ್ ಪ್ರಯೋಗಾಲಯದಲ್ಲಿ ಫ್ರಾನ್ಸ್ ದೇಶದಿಂದ ತರಿಸಲಾದ ಅತ್ಯಾಧುನಿಕ 'ಇ-ಟಾಂಗ್' (ಇ-ನಾಲಿಗೆ) ಮತ್ತು 'ಇ-ನೋಸ್' (ಇ-ಮೂಗು) ಯಂತ್ರಗಳನ್ನು ಅಳವಡಿಸಲಾಗಿದೆ. ಮನುಷ್ಯನು ತನ್ನ ಮೂಗು ಮತ್ತು ಬಾಯಿಯ ಮೂಲಕ ಹೇಗೆ ರುಚಿ ಹಾಗೂ ವಾಸನೆಯನ್ನು ಗ್ರಹಿಸುತ್ತಾನೋ, ಅದೇ ಮಾದರಿಯಲ್ಲಿ ಈ ಯಂತ್ರಗಳು ಆಹಾರ ಪದಾರ್ಥಗಳ ರುಚಿ ಮತ್ತು ವಾಸನೆಯನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ನಿಖರವಾಗಿ ವಿಶ್ಲೇಷಿಸಲಿವೆ. ಭಾರತದ ಬೆರಳೆಣಿಕೆಯ ಸಂಶೋಧನಾ ಕೇಂದ್ರಗಳಲ್ಲಿ ಮಾತ್ರ ಲಭ್ಯವಿರುವ ಇಂತಹ ಉನ್ನತ ಮಟ್ಟದ ತಂತ್ರಜ್ಞಾನವನ್ನು ಇದೀಗ ತಿರುಮಲದಲ್ಲಿ ಅಳವಡಿಸಲಾಗಿದೆ. ಇದರ ಜೊತೆಗೆ, ಆಹಾರದಲ್ಲಿನ ಕೀಟನಾಶಕ, ಭಾರ ಲೋಹಗಳು, ಬ್ಯಾಕ್ಟೀರಿಯಾ ಮತ್ತು ರಾಸಾಯನಿಕಗಳನ್ನು ಪತ್ತೆಹಚ್ಚಲು ಜಿಸಿ-ಎಂಎಸ್ (GC-MS), ಎಚ್‌ಪಿಎಲ್‌ಸಿ (HPLC) ಹಾಗೂ ಐಸಿಪಿ-ಎಂಎಸ್ (ICP-MS) ನಂತಹ ಐವತ್ತಕ್ಕೂ ಹೆಚ್ಚು ಅತ್ಯಾಧುನಿಕ ಉಪಕರಣಗಳನ್ನು ಇಲ್ಲಿ ಸಜ್ಜುಗೊಳಿಸಲಾಗಿದೆ.

ತಿಂಗಳಿಗೆ ಸಾವಿರಾರು ಮಾದರಿಗಳ ನಿರಂತರ ಪರೀಕ್ಷೆ

ಹೊಸದಾಗಿ ಆರಂಭವಾಗಿರುವ ಈ ಪ್ರಯೋಗಾಲಯದಲ್ಲಿ ಲಡ್ಡು ಮತ್ತು ಅನ್ನ ಪ್ರಸಾದಕ್ಕೆ ಬಳಸುವ ಪ್ರತಿಯೊಂದು ಕಚ್ಚಾ ವಸ್ತುವನ್ನೂ ಸೂಕ್ಷ್ಮವಾಗಿ ಪರೀಕ್ಷಿಸಲಾಗುತ್ತದೆ. ತುಪ್ಪ, ಗೋಡಂಬಿ, ಬಾದಾಮಿ, ಏಲಕ್ಕಿ, ಕಡಲೆಕಾಯಿ, ಸಕ್ಕರೆ ಮತ್ತು ಅರಿಶಿನದಂತಹ ಪದಾರ್ಥಗಳಲ್ಲಿ ಕೀಟನಾಶಕಗಳ ಉಳಿಕೆ ಅಥವಾ ಸಸ್ಯಜನ್ಯ ಹಾಗೂ ಪ್ರಾಣಿಜನ್ಯ ಕೊಬ್ಬಿನ ಅಂಶಗಳಿವೆಯೇ ಎಂಬುದನ್ನು ನಿಖರವಾಗಿ ಪತ್ತೆಹಚ್ಚಲಾಗುತ್ತದೆ. ಪ್ರಯೋಗಾಲಯದಲ್ಲಿ ಲಭ್ಯವಿರುವ ನುರಿತ ಸಿಬ್ಬಂದಿಯು ಪ್ರತಿ ತಿಂಗಳು ಕನಿಷ್ಠ 1,000 ದಿಂದ 1,500 ಮಾದರಿಗಳನ್ನು ಪರೀಕ್ಷಿಸುವ ಸಾಮರ್ಥ್ಯ ಹೊಂದಿದ್ದು, ಒಂದೇ ಮಾದರಿಯಲ್ಲಿ ಗರಿಷ್ಠ 50 ಬಗೆಯ ವಿಭಿನ್ನ ಪರೀಕ್ಷೆಗಳನ್ನು ನಡೆಸಲು ಸಾಧ್ಯವಿದೆ. ಇದರಿಂದಾಗಿ ಪ್ರಸಾದ ತಯಾರಿಕೆಯಲ್ಲಿ ಇನ್ನು ಮುಂದೆ ಯಾವುದೇ ರೀತಿಯ ಕಲಬೆರಕೆಗೆ ಆಸ್ಪದವೇ ಇರುವುದಿಲ್ಲ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಕ್ತರ ವಿಶ್ವಾಸ ಉಳಿಸಿಕೊಳ್ಳುವಂತೆ ಮುಖ್ಯಮಂತ್ರಿಗಳ ಖಡಕ್ ಸೂಚನೆ

ಪ್ರಯೋಗಾಲಯವನ್ನು ಉದ್ಘಾಟಿಸಿ ಪ್ರತಿಯೊಂದು ಯಂತ್ರದ ಕಾರ್ಯವೈಖರಿಯನ್ನು ಕುತೂಹಲದಿಂದ ವೀಕ್ಷಿಸಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ಶ್ರೀವಾರಿ ಪ್ರಸಾದದ ಮೇಲಿರುವ ಕೋಟ್ಯಂತರ ಭಕ್ತರ ಅಪಾರ ನಂಬಿಕೆಯನ್ನು ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಟಿಟಿಡಿ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು. ಪ್ರಸಾದ ಮತ್ತು ಕುಡಿಯುವ ನೀರಿನ ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗಬಾರದು ಹಾಗೂ ಅನ್ನ ಪ್ರಸಾದ ಕೇಂದ್ರಗಳ ಅಡುಗೆಮನೆಗಳಲ್ಲಿ ಸ್ವಚ್ಛತೆಯನ್ನು ಖಚಿತಪಡಿಸಿಕೊಳ್ಳಲು ನಿರಂತರ ತಪಾಸಣೆ ನಡೆಸಬೇಕು ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ರಾಜ್ಯದ ವೈದ್ಯಕೀಯ ಮತ್ತು ಆರೋಗ್ಯ ಸಚಿವ ಸತ್ಯಕುಮಾರ್ ಯಾದವ್ ಅವರ ಮುತುವರ್ಜಿಯಿಂದಾಗಿ ಕೇಂದ್ರ ಸರ್ಕಾರವು ಈ ಯೋಜನೆಗೆ ಅಗತ್ಯ ಅನುದಾನವನ್ನು ಒದಗಿಸಿದ್ದು, ತಿರುಮಲದಲ್ಲಿ ಕೈಗೊಂಡಿರುವ ಈ ಆಹಾರ ಸುರಕ್ಷತಾ ಕ್ರಮಗಳು ಇಡೀ ದೇಶದ ಇತರ ದೇವಾಲಯಗಳಿಗೆ ಮಾದರಿಯಾಗಲಿವೆ ಎಂದು ಸಿಎಂ ಶ್ಲಾಘಿಸಿದರು.

Read More
Next Story