ತಮಿಳುನಾಡು ಮೇಲೆ ಸಾಲದ ಹೊರೆ ಆರೋಪ; ಸಿಎಂ ವಿಜಯ್‌ಗೆ ಮಾಜಿ ಸಿಎಂ ಎಂ.ಕೆ.ಸ್ಟಾಲಿನ್‌ ತಿರುಗೇಟು
x
ಎಂ.ಕೆ.ಸ್ಟಾಲಿನ್‌, ಜೋಸೆಫ್‌ ವಿಜಯ್‌

ತಮಿಳುನಾಡು ಮೇಲೆ ಸಾಲದ ಹೊರೆ ಆರೋಪ; ಸಿಎಂ ವಿಜಯ್‌ಗೆ ಮಾಜಿ ಸಿಎಂ ಎಂ.ಕೆ.ಸ್ಟಾಲಿನ್‌ ತಿರುಗೇಟು

ಸಿಎಂ ವಿಜಯ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರು, ಜನರನ್ನು ತಪ್ಪು ದಾರಿಗೆ ಎಳೆಯಲು ಯತ್ನಿಸಬೇಡಿ ಎಂದು ತಿರುಗೇಟು ನೀಡಿದ್ದಾರೆ.


ತಮಿಳುನಾಡು ಮುಖ್ಯಮಂತ್ರಿಯಾಗಿ ಸಿ.ಜೋಸೆಫ್ ವಿಜಯ್ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ವಿಪಕ್ಷವಾದ ಡಿಎಂಕೆಯ ಟೀಕೆಗೆ ಗುರಿಯಾಗಿದ್ದಾರೆ. ಜೋಸೆಫ್ ವಿಜಯ್ ಅವರು ಪ್ರಮಾಣ ವಚನ ಸ್ವೀಕರಿಸಿ ಮಾತನಾಡುವ ವೇಳೆ ಹಿಂದಿನ ಡಿಎಂಕೆ ಸರ್ಕಾರವು 10 ಲಕ್ಷ ಕೋಟಿಗೂ ಹೆಚ್ಚು ಸಾಲದ ಹೊರೆ ಹೊರಿಸಿದೆ, ರಾಜ್ಯದ ಖಜಾನೆ ಸಂಪೂರ್ಣ ಬರಿದಾಗಿರುವ ಕಷ್ಟಕರ ಪರಿಸ್ಥಿತಿಯಲ್ಲಿ ನಾನು ಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದೇನೆ ಎಂದು ಹೇಳಿದ್ದರು.

ಈಗ ಅದೇ ವಿಚಾರ ಟಿವಿಕೆ ಹಾಗೂ ಡಿಎಂಕೆ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಸಿಎಂ ವಿಜಯ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರು, ಜನರನ್ನು ತಪ್ಪು ದಾರಿಗೆ ಎಳೆಯಲು ಯತ್ನಿಸಬೇಡಿ ಎಂದು ತಿರುಗೇಟು ನೀಡಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಅಧಿಕಾರ ಸ್ವೀಕರಿಸಿದ ತಕ್ಷಣವೇ ನೀವು ಸಹಿ ಹಾಕಿರುವ ಯೋಜನೆಗಳನ್ನು ನಾವು ಸ್ವಾಗತಿಸುತ್ತೇವೆ. ಆದರೆ ಸರ್ಕಾರದ ಬಳಿ ಹಣವೇ ಇಲ್ಲ ಎಂದು ಆರಂಭದಲ್ಲೇ ಹೇಳುವುದು ಸರಿಯಲ್ಲ. ರಾಜ್ಯದಲ್ಲಿ ಹಣವಿದೆ. ಅದನ್ನು ಜನರಿಗೆ ತಲುಪಿಸುವ ಇಚ್ಛಾಶಕ್ತಿ ಹಾಗೂ ಸಾಮರ್ಥ್ಯ ಬೇಕಷ್ಟೇ ಎಂದು ಹೇಳಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಕೋವಿಡ್, ಪ್ರವಾಹ ಸೇರಿದಂತೆ ಅನೇಕ ಸಂಕಷ್ಟಗಳು ಎದುರಾಗಿವೆ. ಕೇಂದ್ರದ ಬಿಜೆಪಿ ಸರ್ಕಾರದ ನಿರ್ಲಕ್ಷ್ಯದ ನಡುವೆಯೂ ನಾವು ಐದು ವರ್ಷ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ನೀವು ನಿಮ್ಮ ಮೊದಲ ಭಾಷಣದಲ್ಲೇ “ಹಿಂದಿನ ಸರ್ಕಾರ 10 ಲಕ್ಷ ಕೋಟಿ ಸಾಲ ಬಿಟ್ಟು ಖಜಾನೆ ಖಾಲಿ ಮಾಡಿದೆ” ಎಂದು ಆರೋಪಿಸಿದ್ದೀರಿ. ಆದರೆ, ತಮಿಳುನಾಡಿನ ಸಾಲದ ಮಟ್ಟ ಅನುಮತಿಸುವ ಮಿತಿಯಲ್ಲೇ ಇದೆ ಎಂದು ಟಾಂಗ್‌ ನೀಡಿದ್ದಾರೆ.

ಕಳೆದ ಫೆಬ್ರವರಿ ಬಜೆಟ್ನಲ್ಲೇ ರಾಜ್ಯದ ಆರ್ಥಿಕ ಸ್ಥಿತಿಯನ್ನು ಸ್ಪಷ್ಟವಾಗಿ ವಿವರಿಸಿದ್ದೇವೆ. ಅದು ನಿಮಗೆ ತಿಳಿದಿರಲಿಲ್ಲವೇ?, ಆದಾರೂ ನೀವು ಜನರಿಗೆ ಹಲವು ಭರವಸೆಗಳನ್ನು ನೀಡಿದ್ದೀರಾ. ಹೀಗಿರುವಾಗ ಹಿಂದಿನ ಸರ್ಕಾರದ ವಿರುದ್ಧ ಆರೋಪ ಹೊರಿಸಿ ಜನರನ್ನು ತಪ್ಪು ದಾರಿಗೆಳೆಯಲು ಯತ್ನಿಸಬೇಡಿ. ಪ್ರಾಯೋಗಿಕವಾಗಿ ಸಾಧ್ಯವಿರುವ ಭರವಸೆಗಳನ್ನಷ್ಟೇ ನೀಡುತ್ತೇನೆ ಎಂದು ಹೇಳಿ ಅಧಿಕಾರಕ್ಕೆ ಬಂದಿರುವ ನೀವು ಈಗಷ್ಟೇ ಆಡಳಿತಕ್ಕೆ ಕಾಲಿಟ್ಟಿದ್ದೀರಿ. ಜನರಿಗೆ ನೀಡಿದ ಭರವಸೆಗಳನ್ನು ಹೇಗೆ ಈಡೇರಿಸಬೇಕು ಎಂಬ ಆಡಳಿತದ ಸೂಕ್ಷ್ಮತೆಗಳನ್ನು ಬೇಗನೆ ಅರಿತುಕೊಳ್ಳುವಿರಿ ಎಂಬ ನಂಬಿಕೆ ಇದೆ. ನಿಮ್ಮ ಮೇಲೆ ವಿಶ್ವಾಸವಿಟ್ಟು ಮತಹಾಕಿದ ಜನರಂತೆ ನಾನೂ ಅದನ್ನೇ ನಿರೀಕ್ಷಿಸುತ್ತೇನೆ.ನಿಮ್ಮ ಆಡಳಿತದಲ್ಲಿ ತಮಿಳುನಾಡಿನ ಅಭಿವೃದ್ಧಿಯ ಪಯಣ ಮುಂದುವರಿಯಲಿ ಎಂದು ಕೊನೆಯಲ್ಲಿ ಶುಭಾಶಯ ತಿಳಿಸಿದ್ದಾರೆ.

Read More
Next Story