ಕ್ಷೇತ್ರ ಮರುವಿಂಗಡಣೆ ವಿರೋಧಿಸಿ ತಮಿಳುನಾಡಿನಲ್ಲಿ ಕಪ್ಪು ಬಾವುಟ ಪ್ರತಿಭಟನೆ: ಸಿಎಂ ಸ್ಟಾಲಿನ್ ಕರೆ
x

ಕ್ಷೇತ್ರ ಮರುವಿಂಗಡಣೆ ವಿರೋಧಿಸಿ ತಮಿಳುನಾಡು ಸಿಎಂ ಸ್ಟಾಲಿನ್ ರಾಜ್ಯಾದ್ಯಂತ ಕಪ್ಪು ಬಾವುಟ ಪ್ರತಿಭಟನೆಗೆ ಕರೆ ನೀಡಿದ್ದಾರೆ.

ಕ್ಷೇತ್ರ ಮರುವಿಂಗಡಣೆ ವಿರೋಧಿಸಿ ತಮಿಳುನಾಡಿನಲ್ಲಿ ಕಪ್ಪು ಬಾವುಟ ಪ್ರತಿಭಟನೆ: ಸಿಎಂ ಸ್ಟಾಲಿನ್ ಕರೆ

ಕ್ಷೇತ್ರ ಮರುವಿಂಗಡಣೆ ವಿರೋಧಿಸಿ ತಮಿಳುನಾಡು ಸಿಎಂ ಸ್ಟಾಲಿನ್ ರಾಜ್ಯಾದ್ಯಂತ ಕಪ್ಪು ಬಾವುಟ ಪ್ರತಿಭಟನೆಗೆ ಕರೆ ನೀಡಿದ್ದಾರೆ. ದಕ್ಷಿಣದ ರಾಜ್ಯಗಳಿಗೆ ಆಗುವ ಅನ್ಯಾಯದ ವಿರುದ್ಧ ಒಗ್ಗೂಡಲು ಅವರು ಮನವಿ ಮಾಡಿದ್ದಾರೆ.


Click the Play button to hear this message in audio format

ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಮಂಡಿಸಲು ಉದ್ದೇಶಿಸಿರುವ ಕ್ಷೇತ್ರ ಮರುವಿಂಗಡಣೆ ಪ್ರಸ್ತಾವನೆಯನ್ನು ವಿರೋಧಿಸಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದಾರೆ.

ಏಪ್ರಿಲ್ 16ರಂದು ರಾಜ್ಯದ ಮನೆ ಮನೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಕೇಂದ್ರದ ನಿರ್ಧಾರಕ್ಕೆ ತೀವ್ರ ವಿರೋಧ ದಾಖಲಿಸಲು ಅವರು ಜನತೆಗೆ ಮನವಿ ಮಾಡಿದ್ದಾರೆ. ಚುನಾವಣೆಗಳಿಗೆ ಇನ್ನು ಕೇವಲ ಒಂದು ವಾರ ಬಾಕಿ ಇರುವಾಗ, ರಾಜ್ಯದ ಕಳವಳಗಳನ್ನು ನಿರ್ಲಕ್ಷಿಸಿದರೆ ಅದಕ್ಕೆ ತಕ್ಕ ಪ್ರತಿಫಲ ಮತ್ತು ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಅವರು ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ಪಕ್ಷದ ಸಂಸದರು ಹಾಗೂ ಜಿಲ್ಲಾ ಕಾರ್ಯದರ್ಶಿಗಳೊಂದಿಗೆ ತುರ್ತು ವಿಡಿಯೋ ಕಾನ್ಫರೆನ್ಸ್ ನಡೆಸಿದ ಸ್ಟಾಲಿನ್, ಕೇಂದ್ರದ ಈ ನಡೆ ದಕ್ಷಿಣ ಭಾರತದ ರಾಜ್ಯಗಳ ಪಾಲಿಗೆ `ಐತಿಹಾಸಿಕ ಅನ್ಯಾಯ' ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇಶದ ಪ್ರಗತಿಗೆ ಅತಿ ಹೆಚ್ಚು ಕೊಡುಗೆ ನೀಡುತ್ತಿರುವ ದಕ್ಷಿಣದ ರಾಜ್ಯಗಳಿಗೆ ಈ ಮರುವಿಂಗಡಣೆಯು ಒಂದು ರೀತಿಯ ಶಿಕ್ಷೆಯಂತೆ ಭಾಸವಾಗುತ್ತಿದೆ. ಜನಸಂಖ್ಯೆಯನ್ನು ಯಶಸ್ವಿಯಾಗಿ ನಿಯಂತ್ರಿಸಿದ ರಾಜ್ಯಗಳ ರಾಜಕೀಯ ಹಕ್ಕನ್ನು ಕಸಿದುಕೊಂಡು, ಉತ್ತರ ಭಾರತದ ರಾಜ್ಯಗಳ ರಾಜಕೀಯ ಪ್ರಭಾವವನ್ನು ಅಸಮಾನವಾಗಿ ಹೆಚ್ಚಿಸುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಅವರು ಎಚ್ಚರಿಸಿದರು.

ಚುನಾವಣಾ ಪ್ರಚಾರದ ನಡುವೆಯೇ ಈ ಗಂಭೀರ ವಿಷಯದ ಬಗ್ಗೆ ಮಾತನಾಡಿದ ಅವರು, ಮರುವಿಂಗಡಣೆಯ ಹೆಸರಿನಲ್ಲಿ ದಕ್ಷಿಣ ರಾಜ್ಯಗಳ ಹಕ್ಕನ್ನು ಕಸಿದುಕೊಂಡರೆ ಕೇಂದ್ರ ಸರ್ಕಾರವು ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಅಲ್ಲದೆ, ಅಗತ್ಯ ಬಿದ್ದರೆ ತಮಿಳುನಾಡು ಮತ್ತೆ 1950ರ ದಶಕದ ಹೋರಾಟದ ಹಾದಿಯನ್ನು ಹಿಡಿಯಲಿದೆ ಎಂದು ಹೇಳುವ ಮೂಲಕ ತೀವ್ರ ಪ್ರತಿಭಟನೆಯ ಮುನ್ಸೂಚನೆ ನೀಡಿದರು.

ಈ ಹೋರಾಟಕ್ಕೆ ಪೂರಕವಾಗಿ ಡಿಎಂಕೆ ಈಗಾಗಲೇ ದಕ್ಷಿಣದ ಇತರ ರಾಜ್ಯಗಳ ಬೆಂಬಲವನ್ನು ಕೋರಿದೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರೊಂದಿಗೆ ಮಾತುಕತೆ ನಡೆಸಿರುವ ಸ್ಟಾಲಿನ್, ದಕ್ಷಿಣದ ರಾಜ್ಯಗಳು ಒಗ್ಗಟ್ಟಿನಿಂದ ಧ್ವನಿ ಎತ್ತಬೇಕಾದ ಅನಿವಾರ್ಯತೆಯನ್ನು ಪ್ರತಿಪಾದಿಸಿದ್ದಾರೆ. ರಾಜ್ಯಗಳ ಒಟ್ಟು ಜಿಡಿಪಿ ಮತ್ತು ಇತರ ಮಾನದಂಡಗಳನ್ನು ಪರಿಗಣಿಸಿ ಸ್ಥಾನಗಳನ್ನು ಹಂಚಿಕೆ ಮಾಡುವ "ಹೈಬ್ರಿಡ್ ಮಾದರಿ"ಯ ಕುರಿತು ಚರ್ಚೆಗಳು ನಡೆಯುತ್ತಿದ್ದು, ಒಕ್ಕೂಟ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಎಲ್ಲಾ ಬಿಜೆಪಿಯೇತರ ರಾಜ್ಯಗಳು ಒಂದಾಗಬೇಕೆಂದು ಅವರು ಕರೆ ನೀಡಿದ್ದಾರೆ.

ತಾವು ಕೇವಲ ಡಿಎಂಕೆ ಅಧ್ಯಕ್ಷರಾಗಿ ಮಾತ್ರವಲ್ಲದೆ ಒಬ್ಬ ಸ್ವಾಭಿಮಾನಿ ತಮಿಳನಾಗಿ ಮಾತನಾಡುತ್ತಿದ್ದೇನೆ. ಇದು ಪಕ್ಷಗಳು ಅಥವಾ ವ್ಯಕ್ತಿಗಳ ವಿಷಯವಲ್ಲ. ಇದು ನಮ್ಮ ಜನರ ಹಕ್ಕುಗಳನ್ನು ರಕ್ಷಿಸುವ ಹೋರಾಟ. ನಮ್ಮ ಪ್ರಜಾಪ್ರಭುತ್ವವನ್ನು ಕಾಪಾಡಲು ಒಗ್ಗೂಡುವಂತೆ ನಾನು ಭಾರತದಾದ್ಯಂತ ಇರುವ ಎಲ್ಲಾ ಪಕ್ಷಗಳು ಮತ್ತು ಸಂಸದರಿಗೆ ಮನವಿ ಮಾಡುತ್ತೇನೆ" ಎಂದರು.

ಡಿಎಂಕೆ ಸಂಸದರು ಮತ್ತು ಜಿಲ್ಲಾ ಕಾರ್ಯದರ್ಶಿಗಳೊಂದಿಗೆ ಸಭೆ

ಅದಕ್ಕೂ ಮುನ್ನ, ಕೇಂದ್ರದ ಪ್ರಸ್ತಾವಿತ ಮರುವಿಂಗಡಣೆಯಿಂದ ರಾಜ್ಯವು ಎದುರಿಸಬಹುದಾದ ಪರಿಣಾಮಗಳ ಬಗ್ಗೆ ಚರ್ಚಿಸಲು ಸ್ಟಾಲಿನ್ ತುರ್ತು ಸಭೆ ನಡೆಸಿದರು. ಧರ್ಮಪುರಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಈ ಸಭೆಯು ಅವರ ಬಿಡುವಿಲ್ಲದ ಚುನಾವಣಾ ಪ್ರಚಾರದ ನಡುವೆಯೇ ನಡೆಯಿತು. ಮರುವಿಂಗಡಣೆ ವಿಷಯದಲ್ಲಿ ಸಂಸತ್ತಿನಲ್ಲಿ ಅನುಸರಿಸಬೇಕಾದ ಪಕ್ಷದ ನಿಲುವಿನ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಉತ್ತರ ತಮಿಳುನಾಡಿನ ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ ಸ್ಟಾಲಿನ್, ಮಹಿಳಾ ಮೀಸಲಾತಿ ಕರಡು ವಿಧೇಯಕವು ಒಂದು ಸಂಚು ಎಂದು ಆರೋಪಿಸಿದರು. ಕ್ಷೇತ್ರ ಮರುವಿಂಗಡಣೆ ಜಾರಿಯಾದಾಗ ಇದು ತಮಿಳುನಾಡು ಮತ್ತು ಉತ್ತರ ರಾಜ್ಯಗಳ ನಡುವಿನ ಅಂತರವನ್ನು ಹೆಚ್ಚಿಸಲಿದೆ ಎಂದು ಅವರು ವಾದಿಸಿದರು.

ಕ್ಷೇತ್ರ ಮರುವಿಂಗಡಣೆ ವಿರುದ್ಧ ಬೆಂಬಲ ಕ್ರೋಢೀಕರಿಸುವ ಪ್ರಯತ್ನವಾಗಿ, ಸ್ಟಾಲಿನ್ ಕಳೆದ ವರ್ಷ ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳ ಸಭೆ ನಡೆಸಿದ್ದರು. ಕೇರಳ ಸಿಎಂ ಪಿಣರಾಯಿ ವಿಜಯನ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಪಂಜಾಬ್ ಸಿಎಂ ಭಗವಂತ್ ಮಾನ್ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವರು ಈ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

Read More
Next Story