ತಮಿಳುನಾಡಿನಲ್ಲಿ ಹಕ್ಕಿ ಜ್ವರದ ಆತಂಕ: 1,500 ಕಾಗೆಗಳ ಹಠಾತ್ ಸಾವು, ರಾಜ್ಯಾದ್ಯಂತ ಹೈ ಅಲರ್ಟ್
x

ತಮಿಳುನಾಡಿನಲ್ಲಿ ಹಕ್ಕಿ ಜ್ವರದ ಆತಂಕ: 1,500 ಕಾಗೆಗಳ ಹಠಾತ್ ಸಾವು, ರಾಜ್ಯಾದ್ಯಂತ 'ಹೈ ಅಲರ್ಟ್

ಚೆನ್ನೈನ ಪ್ರಮುಖ ಪ್ರದೇಶಗಳಾದ ಅಡ್ಯಾರ್, ಗಾಂಧಿ ನಗರ, ಪಲ್ಲಿಕರಣೈ, ವೇಲಾಚೇರಿ, ತಿರುವನ್ಮಿಯೂರ್, ಪೂರ್ವ ಕರಾವಳಿ ರಸ್ತೆ ಹಳೆಯ ಮಹಾಬಲಿಪುರಂ ರಸ್ತೆ ಭಾಗಗಳಲ್ಲಿ ಕಾಗೆಗಳ ಹಠಾತ್ ಸಾವು ವರದಿಯಾಗಿದೆ.


Click the Play button to hear this message in audio format

ತಮಿಳುನಾಡು ರಾಜಧಾನಿ ಚೆನ್ನೈ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಏಕಾಏಕಿ 1,500ಕ್ಕೂ ಹೆಚ್ಚು ಕಾಗೆಗಳು ಮೃತಪಟ್ಟಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಮೃತ ಕಾಗೆಗಳ ಮಾದರಿಗಳನ್ನು ಪರೀಕ್ಷಿಸಿದಾಗ ಅವುಗಳಿಗೆ 'ಹಕ್ಕಿ ಜ್ವರ' (H5N1) ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸೋಂಕು ಮತ್ತಷ್ಟು ಹರಡುವುದನ್ನು ತಡೆಯಲು ತಮಿಳುನಾಡು ಸರ್ಕಾರ ರಾಜ್ಯಾದ್ಯಂತ 'ಹೈ ಅಲರ್ಟ್' ಘೋಷಿಸಿದೆ.'

ಚೆನ್ನೈನ ಪ್ರಮುಖ ಪ್ರದೇಶಗಳಾದ ಅಡ್ಯಾರ್, ಗಾಂಧಿ ನಗರ, ಪಲ್ಲಿಕರಣೈ, ವೇಲಾಚೇರಿ, ತಿರುವನ್ಮಿಯೂರ್, ಪೂರ್ವ ಕರಾವಳಿ ರಸ್ತೆ ಹಳೆಯ ಮಹಾಬಲಿಪುರಂ ರಸ್ತೆ ಭಾಗಗಳಲ್ಲಿ ಕಾಗೆಗಳ ಹಠಾತ್ ಸಾವು ವರದಿಯಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಕೇಂದ್ರ ಸರ್ಕಾರವು, ಕೂಡಲೇ ಕಣ್ಗಾವಲು ಹೆಚ್ಚಿಸಲು ಮತ್ತು ರೋಗ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಪಶುಸಂಗೋಪನೆ ಇಲಾಖೆಯು ರಾಜ್ಯದಾದ್ಯಂತ ಇರುವ ಕೋಳಿ ಸಾಕಣೆದಾರರು ಮತ್ತು ಪಕ್ಷಿಧಾಮಗಳ ನಿರ್ವಾಹಕರಿಗೆ ಕಟ್ಟಎಚ್ಚರ ವಹಿಸುವಂತೆ ಸೂಚನೆ ನೀಡಿದೆ.

ಇಲಾಖೆಯ ಮಾರ್ಗಸೂಚಿ

ಸಾರ್ವಜನಿಕ ಆರೋಗ್ಯ ನಿರ್ದೇಶಕ ಡಾ. ಎ. ಸೋಮಸುಂದರಂ ಅವರು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾತನಾಡಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲದಿದ್ದರೂ ಎಚ್ಚರಿಕೆ ವಹಿಸುವುದು ಕಡ್ಡಾಯ ಎಂದಿದ್ದಾರೆ. ಕೆಮ್ಮು, ಶೀತ, ಜ್ವರ ಅಥವಾ ಉಸಿರಾಟದ ತೊಂದರೆಯಂತಹ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. ವಿಶೇಷವಾಗಿ ಕಸಾಯಿಖಾನೆಗಳಲ್ಲಿ ಕೆಲಸ ಮಾಡುವವರು ಮತ್ತು ಪ್ರಾಣಿ-ಪಕ್ಷಿಗಳ ನಿರ್ವಹಣೆ ಮಾಡುವ ಸಿಬ್ಬಂದಿ ರಕ್ಷಣಾತ್ಮಕ ಕ್ರಮಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಏನಿದು ಹಕ್ಕಿ ಜ್ವರ? ಲಕ್ಷಣಗಳೇನು?

ಹಕ್ಕಿ ಜ್ವರ ಅಥವಾ ಏವಿಯನ್ ಇನ್ಫ್ಲುಯೆನ್ಸ (H5N1) ಎನ್ನುವುದು ಪಕ್ಷಿಗಳಲ್ಲಿ ವೇಗವಾಗಿ ಹರಡುವ ವೈರಲ್ ಸೋಂಕು. ಇದು 1996ರಲ್ಲಿ ಚೀನಾದಲ್ಲಿ ಮೊದಲು ಪತ್ತೆಯಾಗಿತ್ತು. 2021ರ ನಂತರ ಈ ವೈರಸ್ ರೂಪಾಂತರಗೊಂಡು ಪ್ರಾಣಿ ಮತ್ತು ಪಕ್ಷಿಗಳಿಗೆ ಮಾರಕವಾಗಿ ಪರಿಣಮಿಸಿದೆ.

ಪಕ್ಷಿಗಳಿಗೆ ಸೋಂಕು ಬಾಧಿಸಿದರೆ ಆಹಾರ ತಿನ್ನದಿರುವುದು, ಮೊಟ್ಟೆ ಉತ್ಪಾದನೆ ಕುಸಿತ, ಕಣ್ಣುಗಳಲ್ಲಿ ತೇವಾಂಶ, ತಲೆ ಊದಿಕೊಳ್ಳುವುದು, ರೆಕ್ಕೆಗಳು ಕೆದರುವುದು ಮತ್ತು ದಿಢೀರ್ ಸಾಯುತ್ತದೆ. .

ಮನುಷ್ಯರಲ್ಲಿ ತೀವ್ರ ಜ್ವರ, ಮೈಕೈ ನೋವು, ಕೆಮ್ಮು, ಉಸಿರಾಟದ ತೊಂದರೆ, ಗಂಟಲು ನೋವು ಮತ್ತು ಕೆಲವೊಮ್ಮೆ ಮೂಗು ಅಥವಾ ಒಸಡಿನಲ್ಲಿ ರಕ್ತಸ್ರಾವದಂಥ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸದ್ಯ ಹಕ್ಕಿ ಜ್ವರಕ್ಕೆ ನಿರ್ದಿಷ್ಟ ಲಸಿಕೆ ಲಭ್ಯವಿಲ್ಲದಿದ್ದರೂ, ಲಸಿಕೆ ಅಭಿವೃದ್ಧಿಪಡಿಸುವ ಕಾರ್ಯ ಭರದಿಂದ ಸಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

Read More
Next Story