Supreme Court gives green signal to CM Joseph Vijays Karur visit; DMKs petition dismissed
x

ಸುಪ್ರೀಂ ಕೋರ್ಟ್‌

ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಎದುರಿಸುತ್ತಿರುವ 105 ವರ್ಷದ ಅಪರಾಧಿಗೆ ಸುಪ್ರೀಂ ಕೋರ್ಟ್‌ನಿಂದ ಮುಕ್ತಿ

105 ವರ್ಷದ ರಸಿಕ್ ಚಂದ್ರ ಮಂಡಲ್ ವಯಸ್ಸು ಮತ್ತು ಆರೋಗ್ಯ ಸ್ಥಿತಿ ಪರಿಗಣಿಸಿದ ಸುಪ್ರೀಂ ಕೋರ್ಟ್, ಜೀವಾವಧಿ ಶಿಕ್ಷೆಯ ಬಾಕಿ ಅವಧಿಯನ್ನು ಮನ್ನಾ ಮಾಡಿ ಪ್ರಕರಣವನ್ನು ಮುಕ್ತಾಯಗೊಳಿಸಿದೆ.


105 ವರ್ಷದ ಕೊಲೆ ಪ್ರಕರಣದ ಅಪರಾಧಿಯೊಬ್ಬರು ಇನ್ನು ಮುಂದೆ ಸ್ವತಂತ್ರ ವ್ಯಕ್ತಿಯಾಗಿ ಜೀವನ ಕಳೆಯಲಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳು ಮತ್ತು ಮುಂದುವರಿದ ವಯಸ್ಸನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್ ಶುಕ್ರವಾರ ಅವರ ವಿರುದ್ಧದ ಪ್ರಕರಣವನ್ನು ಮುಕ್ತಾಯಗೊಳಿಸಿ, ಜೀವಾವಧಿ ಶಿಕ್ಷೆಯ ಬಾಕಿ ಅವಧಿಯನ್ನು ಮನ್ನಾ ಮಾಡಿದೆ.

ರಸಿಕ್ ಚಂದ್ರ ಮಂಡಲ್ ಅವರ ವಯಸ್ಸು ಮತ್ತು ಆರೋಗ್ಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಪ್ರಕರಣವನ್ನು ಮುಕ್ತಾಯಗೊಳಿಸುವುದರ ಜೊತೆಗೆ ಜೀವಾವಧಿ ಶಿಕ್ಷೆಯ ಬಾಕಿ ಅವಧಿ ಏನಾದರೂ ಇದ್ದರೆ ಅದನ್ನೂ ಮನ್ನಾ ಮಾಡುವುದಾಗಿ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ ತಿಳಿಸಿತು.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠ, 2024ರಲ್ಲಿ ಮಂಡಲ್ ಅವರಿಗೆ ನೀಡಿದ್ದ ಮಧ್ಯಂತರ ಜಾಮೀನಿನ ಆದೇಶವನ್ನೂ ಅಂತಿಮಗೊಳಿಸಿತು. “ಜೀವಾವಧಿ ಶಿಕ್ಷೆ ಪೂರ್ಣಗೊಂಡಿಲ್ಲದಿದ್ದರೂ ಅವರನ್ನು ಮತ್ತೆ ಜೈಲಿಗೆ ಕಳುಹಿಸಲಾಗುವುದಿಲ್ಲ,” ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು.

1988ರಲ್ಲಿ ಸಹೋದರನ ಕೊಲೆ ಆರೋಪ

ರಸಿಕ್ ಚಂದ್ರ ಮಂಡಲ್ ಅವರು ಪಶ್ಚಿಮ ಬಂಗಾಳದ ಮಾಲ್ದಾ ಜಿಲ್ಲೆಯಲ್ಲಿ 1920ರಲ್ಲಿ ಜನಿಸಿದ್ದರು. ಆಸ್ತಿ ವಿವಾದದ ಹಿನ್ನೆಲೆಯಲ್ಲಿ 1988ರಲ್ಲಿ ತಮ್ಮ ಸಹೋದರ ಸುರೇಶ್ ಮಂಡಲ್ ಅವರನ್ನು ಕೊಲೆ ಮಾಡಿದ ಆರೋಪ ಅವರ ಮೇಲಿತ್ತು. 1994ರಲ್ಲಿ ನ್ಯಾಯಾಲಯ ಮಂಡಲ್ ಅವರನ್ನು ಅಪರಾಧಿ ಎಂದು ಘೋಷಿಸಿತ್ತು. ಆ ಸಂದರ್ಭದಲ್ಲಿ ಅವರಿಗೆ 74 ವರ್ಷ ವಯಸ್ಸಾಗಿತ್ತು. ಬಳಿಕ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ಮಂಡಲ್ ಅವರು 2024ರ ನವೆಂಬರ್ 29ರವರೆಗೆ ಜೈಲಿನಲ್ಲಿದ್ದರು. 2024ರಲ್ಲಿ ಸುಪ್ರೀಂ ಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು.

99ನೇ ವಯಸ್ಸಿನಲ್ಲಿ ಬಿಡುಗಡೆಗೆ ಅರ್ಜಿ

ಮಂಡಲ್ ಅವರ ವಿರುದ್ಧದ ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು 2018ರಲ್ಲಿ ಕಲ್ಕತ್ತಾ ಹೈಕೋರ್ಟ್ ವಜಾಗೊಳಿಸಿತ್ತು. ಬಳಿಕ ಅವರು ಸುಪ್ರೀಂ ಕೋರ್ಟ್‌ ಮೊರೆಹೋದರೂ ಅಲ್ಲಿಯೂ ಅರ್ಜಿ ವಜಾಗೊಂಡಿತ್ತು.

2020ರಲ್ಲಿ 99ನೇ ವಯಸ್ಸಿನಲ್ಲಿ, ವಯೋಸಹಜ ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿ ಮಂಡಲ್ ಅವರು ಅವಧಿಗೆ ಮುನ್ನ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 2021ರ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಈ ಅರ್ಜಿಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು.

ಮಂಡಲ್ ಅವರ ವಯೋಸಹಜ ಆರೋಗ್ಯ ಸಮಸ್ಯೆಗಳನ್ನು ಸುಪ್ರೀಂ ಕೋರ್ಟ್ ತನ್ನ ವಿಚಾರಣೆಯಲ್ಲಿ ಪರಿಗಣಿಸಿತ್ತು. 2024ರ ನವೆಂಬರ್‌ನಲ್ಲಿ, ರಿಟ್ ಅರ್ಜಿ ಬಾಕಿ ಇರುವ ಅವಧಿಯಲ್ಲಿ ಮಧ್ಯಂತರ ಜಾಮೀನು ಅಥವಾ ಪೆರೋಲ್ ಮೂಲಕ ಅವರನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಇದಕ್ಕೆ ವಿಚಾರಣಾ ನ್ಯಾಯಾಲಯ ನಿಗದಿಪಡಿಸುವ ಷರತ್ತುಗಳು ಅನ್ವಯವಾಗಿದ್ದವು.

100 ವರ್ಷ ದಾಟಿದರೂ ಕಾನೂನು ಹೋರಾಟ

ಮಂಡಲ್ ಅವರು 100 ವರ್ಷ ದಾಟಿದ ಬಳಿಕವೂ ಬದುಕಿದ್ದು, ತಮ್ಮ ಪ್ರಕರಣದ ಕುರಿತು ವಕೀಲರಿಗೆ ಕಾನೂನು ಸೂಚನೆಗಳನ್ನು ನೀಡುವ ಸ್ಥಿತಿಯಲ್ಲಿರುವುದು ನ್ಯಾಯಪೀಠಕ್ಕೂ ಅಚ್ಚರಿ ಮೂಡಿಸಿತು.

ಇದೀಗ ಸುಪ್ರೀಂ ಕೋರ್ಟ್ ಪ್ರಕರಣದ ಕಾನೂನು ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಮುಕ್ತಾಯಗೊಳಿಸಿದ್ದು, ಜೀವಾವಧಿ ಶಿಕ್ಷೆಯ ಬಾಕಿ ಅವಧಿ ಇದ್ದರೆ ಅದನ್ನು ಮನ್ನಾ ಮಾಡಿದೆ. 2024ರಲ್ಲಿ ನೀಡಿದ್ದ ಮಧ್ಯಂತರ ಜಾಮೀನನ್ನೂ ಅಂತಿಮಗೊಳಿಸಿರುವುದರಿಂದ ಮಂಡಲ್ ಅವರು ಮತ್ತೆ ಜೈಲಿಗೆ ತೆರಳಬೇಕಾಗಿಲ್ಲ.

ಹೀಗಾಗಿ, 105 ವರ್ಷದ ರಸಿಕ್ ಚಂದ್ರ ಮಂಡಲ್ ಅವರು ತಮ್ಮ ಜೀವನದ ಉಳಿದ ಅವಧಿಯನ್ನು ಸ್ವತಂತ್ರ ನಾಗರಿಕರಾಗಿ ಕಳೆಯಲಿದ್ದಾರೆ.

Read More
Next Story