
ಪಶ್ಚಿಮ ಘಟ್ಟದಲ್ಲಿನ ಗಿರಿಶಿಖರಗಳ ಸಾಲು
ಕಸ್ತೂರಿರಂಗನ್ ವರದಿ ಜಾರಿಗೆ ಕೇಂದ್ರ ಸಜ್ಜು: ಕರ್ನಾಟಕ, ಕೇರಳದಲ್ಲಿ ಮುಂದುವರಿದ ಹಗ್ಗಜಗ್ಗಾಟ!
ಕಸ್ತೂರಿರಂಗನ್ ವರದಿಗೆ ಮೊದಲಿನಿಂದಲೂ ತೀವ್ರ ವಿರೋಧ ವ್ಯಕ್ತಪಡಿಸುತ್ತಾ ಬಂದಿರುವ ಕರ್ನಾಟಕ ಮತ್ತು ಕೇರಳ ರಾಜ್ಯಗಳೊಂದಿಗಿನ ಮಾತುಕತೆ ಇನ್ನೂ ಮುಂದುವರಿದಿದ್ದು, ಯಾವುದೇ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ.
ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಗಳ (ESA) ಗಡಿ ಗುರುತಿಸುವಿಕೆ ಪ್ರಕ್ರಿಯೆಗೆ ಕೇಂದ್ರ ಸರ್ಕಾರವು ಕೊನೆಗೂ ಅಂತಿಮ ರೂಪ ನೀಡಲು ಸಜ್ಜಾಗಿದೆ. ಈ ಪ್ರಕ್ರಿಯೆಯ ಮೊದಲ ಹಂತವಾಗಿ ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳ ವ್ಯಾಪ್ತಿಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶಗಳ ಅಧಿಸೂಚನೆಯನ್ನು ಹೊರಡಿಸಲು ಕೇಂದ್ರ ಪರಿಸರ ಸಚಿವಾಲಯ ಸಿದ್ಧತೆ ನಡೆಸಿದೆ ಎಂದು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.
ಈ ಮೂರೂ ರಾಜ್ಯಗಳೊಂದಿಗೆ ಕೇಂದ್ರ ಸರ್ಕಾರ ನಡೆಸಿದ ಸುದೀರ್ಘ ಮಾತುಕತೆಗಳು ಯಶಸ್ವಿಯಾಗಿದ್ದು, ಗಡಿ ಗುರುತಿಸುವಿಕೆಯ ಭಿನ್ನಾಭಿಪ್ರಾಯಗಳು ಬಹುತೇಕ ಬಗೆಹರಿದಿವೆ ಎನ್ನಲಾಗಿದೆ. ಆದರೆ, ಕಸ್ತೂರಿರಂಗನ್ ವರದಿಗೆ ಮೊದಲಿನಿಂದಲೂ ತೀವ್ರ ವಿರೋಧ ವ್ಯಕ್ತಪಡಿಸುತ್ತಾ ಬಂದಿರುವ ಕರ್ನಾಟಕ ಮತ್ತು ಕೇರಳ ರಾಜ್ಯಗಳೊಂದಿಗಿನ ಮಾತುಕತೆ ಇನ್ನೂ ಮುಂದುವರಿದಿದ್ದು, ಯಾವುದೇ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಮತ್ತೊಂದೆಡೆ, ತಮಿಳುನಾಡು ಸರ್ಕಾರವು ಈ ಪ್ರಸ್ತಾವನೆಗೆ ಯಾವುದೇ ಪ್ರಮುಖ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿಲ್ಲ ಎಂದು ವರದಿ ತಿಳಿಸಿದೆ.
ಪಶ್ಚಿಮಘಟ್ಟದ ಕಣಿವೆಗಳಲ್ಲಿ ಹರಿಯುವ ಶರಾವತಿ ನದಿ
ಕಸ್ತೂರಿರಂಗನ್ ಸಮಿತಿ ಪ್ರಸ್ತಾಪಿಸಿದ್ದೇನು?
2013 ರಲ್ಲಿ ಸಲ್ಲಿಕೆಯಾದ ಇಸ್ರೋ ಮಾಜಿ ಅಧ್ಯಕ್ಷ ಕೆ. ಕಸ್ತೂರಿರಂಗನ್ ಸಮಿತಿಯ ಶಿಫಾರಸುಗಳ ಪ್ರಕಾರ, ಪಶ್ಚಿಮ ಘಟ್ಟಗಳ ಒಟ್ಟು ವಿಸ್ತೀರ್ಣದ ಶೇ. 37 ರಷ್ಟು ಭಾಗವನ್ನು, ಅಂದರೆ ಸುಮಾರು 56,000 ಚದರ ಕಿಲೋಮೀಟರ್ ಭೂಮಿಯನ್ನು 'ಪರಿಸರ ಸೂಕ್ಷ್ಮ ಪ್ರದೇಶ' (ESA) ಎಂದು ಘೋಷಿಸಲು ಪ್ರಸ್ತಾಪಿಸಲಾಗಿತ್ತು. ಈ ವಲಯವು ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ಸೇರಿದಂತೆ ಆರು ರಾಜ್ಯಗಳಲ್ಲಿ ಹರಡಿಕೊಂಡಿದೆ.
ಪ್ರಮುಖ ನಿಷೇಧಗಳು ಮತ್ತು ನಿರ್ಬಂಧಗಳು
ಪರಿಸರ ಸೂಕ್ಷ್ಮ ಪ್ರದೇಶಗಳ (ESA) ವ್ಯಾಪ್ತಿಯಲ್ಲಿ ಗಣಿಗಾರಿಕೆ, ಕಲ್ಲುಗಣಿಗಾರಿಕೆ (ಕ್ವಾರಿ) ಮತ್ತು ಮರಳು ಎತ್ತುವುದನ್ನು ಸಂಪೂರ್ಣವಾಗಿ ನಿಷೇಧಿಸುವುದು. ಪರಿಸರ ಮಾಲಿನ್ಯ ಉಂಟುಮಾಡುವ 'ಕೆಂಪು ವರ್ಗ'ದ ಕೈಗಾರಿಕೆಗಳು ಮತ್ತು ಉಷ್ಣ ವಿದ್ಯುತ್ ಸ್ಥಾವರಗಳ ಸ್ಥಾಪನೆಗೆ ಕಠಿಣ ತಡೆಯೊಡ್ಡುವುದು. ಸೂಕ್ಷ್ಮ ಪ್ರದೇಶಗಳಲ್ಲಿ ಜಲವಿದ್ಯುತ್ ಯೋಜನೆಗಳಿಗೆ ಕಟ್ಟುನಿಟ್ಟಿನ ನಿಯಮಗಳು ಮತ್ತು ವಿವರವಾದ ಪರಿಸರ ಅಧ್ಯಯನದ ನಂತರವಷ್ಟೇ ಷರತ್ತುಬದ್ಧ ಅನುಮತಿ ಹಾಗೂ ದೊಡ್ಡ ಪ್ರಮಾಣದ ಮೂಲಸೌಕರ್ಯ ಅಭಿವೃದ್ಧಿ, ಹೊಸ ಪಟ್ಟಣಗಳ ನಿರ್ಮಾಣ ಮತ್ತು ಪರಿಸರದ ಮೇಲೆ ತೀವ್ರ ಪರಿಣಾಮ ಬೀರುವ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬಾರದು ಎಂದು ತಿಳಿಸಲಾಗಿದೆ.
ರಾಜ್ಯಗಳ ವಿರೋಧ ಮತ್ತು ಸದ್ಯದ ಹಗ್ಗಜಗ್ಗಾಟ
2014 ರಲ್ಲಿ ಕೇಂದ್ರ ಸರ್ಕಾರ ಮೊದಲ ಕರಡು ಅಧಿಸೂಚನೆ ಹೊರಡಿಸಿದ ನಂತರ, ರಾಜ್ಯಗಳ ತೀವ್ರ ವಿರೋಧದಿಂದಾಗಿ ಇದುವರೆಗೆ ಐದು ಬಾರಿ ಕರಡನ್ನು ಪರಿಷ್ಕರಿಸಲಾಗಿದೆ. ಪಶ್ಚಿಮ ಘಟ್ಟಗಳ ಅತಿ ದೊಡ್ಡ ಪಾಲನ್ನು (20,668 ಚದರ ಕಿ.ಮೀ) ಹೊಂದಿರುವ ಕರ್ನಾಟಕವು ಕಸ್ತೂರಿರಂಗನ್ ವರದಿಯನ್ನು ಔಪಚಾರಿಕವಾಗಿ ತಿರಸ್ಕರಿಸಿದೆ. ರಾಜ್ಯದ ಪಾಲನ್ನು 20,668 ಚದರ ಕಿ.ಮೀ ನಿಂದ 16,114 ಚದರ ಕಿ.ಮೀ ಗೆ ಕಡಿತಗೊಳಿಸಬೇಕು ಎಂದು ಒತ್ತಾಯಿಸುತ್ತಿದ್ದು, ಪರ್ಯಾಯ ಮಾರ್ಗಗಳಿಗಾಗಿ ಕೇಂದ್ರದೊಂದಿಗೆ ಮಾತುಕತೆ ನಡೆಸುತ್ತಿದೆ.
ಕೇರಳದ ತನ್ನ ವ್ಯಾಪ್ತಿಯ ಇಎಸ್‌ಎ ಪ್ರದೇಶವನ್ನು 9,937 ಚದರ ಕಿ.ಮೀ ನಿಂದ 8,805 ಚದರ ಕಿ.ಮೀ ಗೆ ಇಳಿಸಬೇಕು ಎಂದು ಕೇರಳ ಕೋರಿದೆ. ವಿಶೇಷವಾಗಿ ಇಡುಕ್ಕಿ ಮತ್ತು ವಯನಾಡು ಜಿಲ್ಲೆಗಳ ಕೆಲವು ಜನವಸತಿ ಪ್ರದೇಶ ಹಾಗೂ ಹಳ್ಳಿಗಳನ್ನು ಇಎಸ್‌ಎ ವ್ಯಾಪ್ತಿಯಿಂದ ಹೊರಗಿಡಲು ಒತ್ತಾಯಿಸಿದೆ. ಆದರೆ ಕೇಂದ್ರದ ತಜ್ಞರ ಸಮಿತಿ ಈ ವಿನಂತಿಗೆ ಒಪ್ಪಿಗೆ ನೀಡಿಲ್ಲ.
ಗೋವಾ ಮತ್ತು ಮಹಾರಾಷ್ಟ್ರ
ಗೋವಾ ತನ್ನ ವ್ಯಾಪ್ತಿಯ 108 ಹಳ್ಳಿಗಳಲ್ಲಿ 21 ಹಳ್ಳಿಗಳನ್ನು ಕೈಬಿಡುವಂತೆ ಕೇಳಿದೆ. ಇತ್ತ ಮಹಾರಾಷ್ಟ್ರವು ತನ್ನ ವ್ಯಾಪ್ತಿಯ 2,515 ಹಳ್ಳಿಗಳಲ್ಲಿ 378 ಹಳ್ಳಿಗಳನ್ನು ಕೈಬಿಡುವಂತೆ ಪ್ರಸ್ತಾಪಿಸಿದ್ದು, ತನ್ನ ಜೀವವೈವಿಧ್ಯ ಮಂಡಳಿಯಿಂದ ಅಂತಿಮ ಮಾಹಿತಿಗಾಗಿ ಕಾಯುತ್ತಿದೆ.
ಪಶ್ಚಿಮ ಘಟ್ಟದ ಬೆಟ್ಟಗಳ ಸಾಲು
ಗುಜರಾತ್ ಮತ್ತು ತಮಿಳುನಾಡು
ತನ್ನ ವ್ಯಾಪ್ತಿಯ 64 ಹಳ್ಳಿಗಳ ಸುಮಾರು 449-470 ಚದರ ಕಿ.ಮೀ ಪ್ರದೇಶವನ್ನು ಇಎಸ್‌ಎ ಎಂದು ಘೋಷಿಸಲು ಗುಜರಾತ್ ಅಂತಿಮ ಒಪ್ಪಿಗೆ ನೀಡಿದೆ. ಆದರೆ, ಅರಣ್ಯೇತರ ಪ್ರದೇಶಗಳಲ್ಲಿ ಸಣ್ಣ ಖನಿಜಗಳ ಗಣಿಗಾರಿಕೆಗೆ ಅನುಮತಿ ನೀಡುವಂತೆ ಕೋರಿದೆ. ತಮಿಳುನಾಡು ತನಗೆ ನಿಗದಿಪಡಿಸಿದ 6,914 ಚದರ ಕಿ.ಮೀ ಪಾಲು ತೀರಾ ಕಡಿಮೆಯಿರುವುದರಿಂದ ಯಾವುದೇ ಪ್ರತಿರೋಧ ತೋರಿಲ್ಲ.
ಗಾಡ್ಗಿಳ್ನಿಂದ ಕಸ್ತೂರಿರಂಗನ್‌ವರೆಗೆ
ಪಶ್ಚಿಮ ಘಟ್ಟಗಳ ರಕ್ಷಣೆಗಾಗಿ ಕೇಂದ್ರ ಸರ್ಕಾರ 2010 ರಲ್ಲಿ ಮೊದಲು ಮಾಧವ ಗಾಡ್ಗಿಳ್ ನೇತೃತ್ವದ ಸಮಿತಿಯನ್ನು ರಚಿಸಿತ್ತು.2011 ರ ವರದಿಯಲ್ಲಿ ಗಾಡ್ಗಿಳ್ ಸಮಿತಿಯು ಇಡೀ 1,29,037 ಚದರ ಕಿ.ಮೀ ಪಶ್ಚಿಮ ಘಟ್ಟಗಳ ಪ್ರದೇಶವನ್ನೇ ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲು ಶಿಫಾರಸು ಮಾಡಿತ್ತು. ಆದರೆ ಇದು ಅಭಿವೃದ್ಧಿ ವಿರೋಧಿ ಎಂಬ ವ್ಯಾಪಕ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ, 2014 ರಲ್ಲಿ ಕಸ್ತೂರಿರಂಗನ್ ಸಮಿತಿಯನ್ನು ನೇಮಿಸಲಾಯಿತು. ಈ ಸಮಿತಿಯು ಇಎಸ್‌ಎ ವ್ಯಾಪ್ತಿಯನ್ನು ಶೇ. 37 ಕ್ಕೆ ಸೀಮಿತಗೊಳಿಸಿ ಮಧ್ಯಮ ಮಾರ್ಗವನ್ನು ಸೂಚಿಸಿತ್ತು.
2014 ರ ಜು. 31 ರಂದು ಹೊರಡಿಸಲಾಗಿದ್ದ ಮೊದಲ ಕರಡು ಅಧಿಸೂಚನೆಯ ಅವಧಿಯು ಈ ವರ್ಷದ ಜು. 27 ಕ್ಕೆ ಕೊನೆಗೊಳ್ಳಲಿದ್ದು, ಈ ಗಡುವಿನ ಒಳಗಾಗಿ ಒಮ್ಮತ ಮೂಡಿರುವ ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಿಗೆ ಹೊಸ ಅಧಿಸೂಚನೆ ಹೊರಡಿಸಲು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC) ಮುಂದಾಗಿದೆ. ರಾಜ್ಯಗಳ ಆಕ್ಷೇಪಣೆಗಳನ್ನು ಪರಿಶೀಲಿಸಲು ಮಾಜಿ ಅರಣ್ಯ ಮಹಾನಿರ್ದೇಶಕ ಸಂಜಯ್ ಕುಮಾರ್ ನೇತೃತ್ವದಲ್ಲಿ ರಚಿಸಲಾಗಿರುವ ತಜ್ಞರ ಸಮಿತಿಯು ಸದ್ಯ ಈ ಪ್ರಕ್ರಿಯೆಯನ್ನು ಅಂತಿಮಗೊಳಿಸುತ್ತಿದೆ.

