
ಶಾಸಕಿಯನ್ನು ಬಲವಂತವಾಗಿ ತಬ್ಬಿಕೊಳ್ಳಲು ಯತ್ನಿಸಿದ ಕಾಂಗ್ರೆಸ್ ನಾಯಕ- ವಿಡಿಯೊ ವೈರಲ್
ಕೇರಳದ ಹಿರಿಯ ಕಾಂಗ್ರೆಸ್ ನಾಯಕ ಚೆರಿಯನ್ ಫಿಲಿಪ್ ಅವರು ಶಾಸಕಿ ಬಿಂದೂ ಕೃಷ್ಣ ಅವರಿಗೆ ಬಲವಂತವಾಗಿ ಆಲಿಂಗನ ಮಾಡಲು ಯತ್ನಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಪ್ರಧಾನ ಕಚೇರಿಯಲ್ಲಿ ನಡೆದ ಘಟನೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ನೂತನವಾಗಿ ಆಯ್ಕೆಯಾದ ಕೊಲ್ಲಂ ಶಾಸಕಿ ಬಿಂದೂ ಕೃಷ್ಣ ಅವರಿಗೆ ಹಿರಿಯ ನಾಯಕ ಚೆರಿಯನ್ ಫಿಲಿಪ್ ಅವರು ಬಲವಂತವಾಗಿ ಆಲಿಂಗನ ಮಾಡಲು ಮುಂದಾದ ವಿಡಿಯೋ ವೈರಲ್ ಆಗಿದ್ದು, ಕಾಂಗ್ರೆಸ್ ನಾಯಕರ ವರ್ತನೆಯ ಬಗ್ಗೆ ಟೀಕೆಗಳು ಕೇಳಿಬರುತ್ತಿವೆ.
ಘಟನೆಯ ವಿವರ:
ಶಾಸಕಾಂಗ ಪಕ್ಷದ ಸಭೆಗೆ ಆಗಮಿಸಿದ 48 ವರ್ಷದ ಬಿಂದೂ ಕೃಷ್ಣ ಅವರು ಮಾಧ್ಯಮದವರಿಗೆ ವಂದಿಸಿ ಪಕ್ಷದ ಕಚೇರಿಯತ್ತ ಹೆಜ್ಜೆ ಹಾಕುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ 71 ವರ್ಷದ ಹಿರಿಯ ನಾಯಕ ಚೆರಿಯನ್ ಫಿಲಿಪ್ ಅವರಿಗೆ ಬಿಂದೂ ಕೃಷ್ಣ ಹಸ್ತಲಾಘವ ಮಾಡಲು ಕೈ ಚಾಚಿದರು. ಆದರೆ, ಚೆರಿಯನ್ ಫಿಲಿಪ್ ಅವರು ಹಸ್ತಲಾಘವದ ಬದಲಿಗೆ ಬಲವಂತವಾಗಿ ಅವರನ್ನು ಆಲಿಂಗಿಸಲು ಮುಂದಾದರು.
ವಿಡಿಯೋದಲ್ಲಿ ಏನಿದೆ?
ವಿಡಿಯೋದಲ್ಲಿ ಫಿಲಿಪ್ ಅವರು ಬಿಂದೂ ಕೃಷ್ಣ ಅವರ ಕುತ್ತಿಗೆಯ ಸುತ್ತ ಕೈ ಹಾಕಲು ಪ್ರಯತ್ನಿಸುವುದು ಮತ್ತು ಅವರು ಚಾಚಿದ್ದ ಕೈಯನ್ನು ಕೆಳಕ್ಕೆ ತಳ್ಳಿ ಅಪ್ಪಿಕೊಳ್ಳಲು ಮುಂದಾಗುವುದು ಕಂಡುಬಂದಿದೆ.
A video from the Kerala Pradesh Congress Committee headquarters in Thiruvananthapuram has gone viral after Cherian Philip allegedly attempted to hug newly elected Kollam MLA Adv. Bindu Krishna despite her apparent reluctance during a legislative party meeting.
— Hate Detector 🔍 (@HateDetectors) May 7, 2026
The viral video… pic.twitter.com/UhURpa80Qz
ಶಾಸಕಿ ಬಿಂದೂ ಕೃಷ್ಣ ಅವರು ತಕ್ಷಣವೇ ಅಸಹಜವಾಗಿ ಅನುಭವಿಸಿ, ಅವರನ್ನು ದೂರ ತಳ್ಳಲು ಪ್ರಯತ್ನಿಸಿದರು. ಅವರು ಹಿಂದೆ ಸರಿದರೂ ಫಿಲಿಪ್ ಮತ್ತೊಮ್ಮೆ ಆಲಿಂಗಿಸಲು ಯತ್ನಿಸಿದಾಗ, ಬಿಂದೂ ಕೃಷ್ಣ ಅವರು ಕೈ ಮುಗಿದು ಅಲ್ಲಿಂದ ಮುನ್ನೆಡೆದರು. ಈ ಘಟನೆ ನಡೆಯುವಾಗ ಅಲ್ಲಿದ್ದ ಮಾಧ್ಯಮದವರು ಮತ್ತು ಪಕ್ಷದ ಕಾರ್ಯಕರ್ತರು ನಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಇದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಕಿಡಿ:
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಚೆರಿಯನ್ ಫಿಲಿಪ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. "ರಾಜಕೀಯ ಹಿರಿತನ ಎನ್ನುವುದು ದೈಹಿಕ ಸ್ಪರ್ಶಕ್ಕೆ ಪರವಾನಗಿ ನೀಡುವುದಿಲ್ಲ," ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಮಹಿಳೆಯೊಬ್ಬರು ಸ್ಪಷ್ಟವಾಗಿ ಅಸಹನೆ ತೋರಿದರೂ ಅಂತರ ಕಾಯ್ದುಕೊಳ್ಳದ ನಾಯಕನ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹ ಕೇಳಿಬಂದಿದೆ. "ಒಬ್ಬ ಮಹಿಳಾ ಶಾಸಕಿಗೇ ಈ ಪರಿಸ್ಥಿತಿ ಎದುರಾದರೆ ಸಾಮಾನ್ಯ ಮಹಿಳೆಯರ ಗತಿಯೇನು?" ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಸದ್ಯಕ್ಕೆ ಈ ಘಟನೆಯ ಬಗ್ಗೆ ಚೆರಿಯನ್ ಫಿಲಿಪ್ ಆಗಲಿ ಅಥವಾ ಶಾಸಕಿ ಬಿಂದೂ ಕೃಷ್ಣ ಆಗಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

