Thalapathy Vijay| ನಟ ವಿಜಯ್ ರೋಡ್ ಶೋ ವೇಳೆ ನೂಕುನುಗ್ಗಲು: ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆಗೆ ಗಾಯ
x

ತಮಿಳಗ ವೆಟ್ರಿ ಕಳಗಂ ಸಂಸ್ಥಾಪಕ ನಟ ವಿಜಯ್ ತಿರುಚ್ಚಿ ಪೂರ್ವ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸುವ ವೇಳೆ ಅಭಿಮಾನಿಗಳ ನೂಕುನುಗ್ಗಲು ಉಂಟಾಗಿ ಪೊಲೀಸ್ ಪೇದೆ ಸತೀಶ್ ಗಾಯಗೊಂಡಿದ್ದಾರೆ.

Thalapathy Vijay| ನಟ ವಿಜಯ್ ರೋಡ್ ಶೋ ವೇಳೆ ನೂಕುನುಗ್ಗಲು: ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆಗೆ ಗಾಯ

ತಮಿಳಗ ವೆಟ್ರಿ ಕಳಗಂ ಸಂಸ್ಥಾಪಕ ನಟ ವಿಜಯ್ ತಿರುಚ್ಚಿ ಪೂರ್ವ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸುವ ವೇಳೆ ಅಭಿಮಾನಿಗಳ ನೂಕುನುಗ್ಗಲು ಉಂಟಾಗಿ ಪೊಲೀಸ್ ಪೇದೆ ಸತೀಶ್ ಗಾಯಗೊಂಡಿದ್ದಾರೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.


Click the Play button to hear this message in audio format

ತಮಿಳಗ ವೆಟ್ರಿ ಕಳಗಂ ಸಂಸ್ಥಾಪಕ ಮತ್ತು ನಟ ವಿಜಯ್ ಅವರ ಚುನಾವಣಾ ಪ್ರಚಾರದ ವೇಳೆ ಭದ್ರತಾ ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆಯೊಬ್ಬರು ಗಾಯಗೊಂಡಿರುವ ಘಟನೆ ತಿರುಚ್ಚಿಯಲ್ಲಿ ಗುರುವಾರ ನಡೆದಿದೆ.

ತಿರುಚ್ಚಿ ಪೂರ್ವ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಲು ವಿಜಯ್ ಆಗಮಿಸಿದಾಗ ಸಾಗರೋಪಾದಿಯಲ್ಲಿ ಹರಿದುಬಂದ ಅಭಿಮಾನಿಗಳ ಜನದಟ್ಟಣೆಯನ್ನು ನಿಯಂತ್ರಿಸುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

ಗಾಯಗೊಂಡ ಪೊಲೀಸ್ ಅಧಿಕಾರಿಯನ್ನು ಸತೀಶ್ ಎಂದು ಗುರುತಿಸಲಾಗಿದ್ದು, ಇವರು ಗಾಂಧಿ ಮಾರುಕಟ್ಟೆ ಸಮೀಪದ ಮರಕ್ಕಡೈ ಜಂಕ್ಷನ್‌ನಲ್ಲಿ ಬಂದೋಬಸ್ತ್‌ ಕರ್ತವ್ಯದಲ್ಲಿದ್ದರು. ಈ ಸ್ಥಳದಲ್ಲಿ ವಿಜಯ್ ಅವರು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಾ ರೋಡ್ ಶೋ ನಡೆಸುತ್ತಿದ್ದರು. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಪಿರಂಬೂರು ಕ್ಷೇತ್ರದಿಂದ ಈಗಾಗಲೇ ನಾಮಪತ್ರ ಸಲ್ಲಿಸಿರುವ ವಿಜಯ್, ಇದೀಗ ಎರಡನೇ ಕ್ಷೇತ್ರವಾಗಿ ತಿರುಚ್ಚಿ ಪೂರ್ವದಿಂದ ಸ್ಪರ್ಧಿಸುತ್ತಿದ್ದಾರೆ. ಪಿರಂಬೂರಿನಲ್ಲಿ ಡಿಎಂಕೆ ಅಭ್ಯರ್ಥಿ ಆರ್‌ಡಿ ಶೇಖರ್ ಮತ್ತು ತಿರುಚ್ಚಿ ಪೂರ್ವದಲ್ಲಿ ಇನಿಗೊ ಎಸ್. ಇರುದಯರಾಜ್ ಅವರ ವಿರುದ್ಧ ವಿಜಯ್ ಕಣಕ್ಕಿಳಿದಿದ್ದಾರೆ. ನಟನ ಆಗಮನದ ಹಿನ್ನೆಲೆಯಲ್ಲಿ ತಿರುಚ್ಚಿ ವಿಮಾನ ನಿಲ್ದಾಣದಿಂದ ಅವರು ಚಲಿಸುವ ಮಾರ್ಗದುದ್ದಕ್ಕೂ ಸಾವಿರಾರು ಕಾರ್ಯಕರ್ತರು ಕಿಕ್ಕಿರಿದು ತುಂಬಿದ್ದರು.

ಇದೇ ವೇಳೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಆರೋಪದ ಮೇಲೆ ವಿಜಯ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಟಿವಿಕೆ ಪಕ್ಷವು, ಆಡಳಿತಾರೂಢ ಡಿಎಂಕೆ ಮತ್ತು ಪೊಲೀಸರು ಪಕ್ಷಪಾತಿಯಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದೆ.

ಇತ್ತೀಚೆಗಷ್ಟೇ ಚೆನ್ನೈನಲ್ಲಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ್ದ ವಿಜಯ್, ಡ್ರಗ್ಸ್ ಮುಕ್ತ ತಮಿಳುನಾಡು ನಿರ್ಮಾಣ ಮತ್ತು ಸರ್ಕಾರಿ ಪರೀಕ್ಷೆಗಳನ್ನು ವಿಳಂಬವಿಲ್ಲದೆ ನಡೆಸುವ ಭರವಸೆ ನೀಡಿದ್ದರು. ಅದರಲ್ಲೂ ವಿಶೇಷವಾಗಿ ಶಾಲಾ-ಕಾಲೇಜುಗಳ ಸುತ್ತಮುತ್ತ ಮಾದಕ ದ್ರವ್ಯ ತಡೆ ವಲಯಗಳನ್ನು ಸ್ಥಾಪಿಸುವುದಾಗಿ ಅವರು ಘೋಷಿಸಿದ್ದಾರೆ.

ಕರೂರ್‌ನಲ್ಲಿ ನಡೆದ ಭೀಕರ ಕಾಲ್ತುಳಿತ ಪ್ರಕರಣ ಮತ್ತು ಅವರ ಕೊನೆಯ ಚಿತ್ರ 'ಜನನಾಯಗನ್' ಬಿಡುಗಡೆಯ ವಿಳಂಬದ ಹಿಂದೆ ದೊಡ್ಡ ಮಟ್ಟದ ಸಂಚು ಅಡಗಿದೆ ಎಂದು ಅವರು ಈ ವೇಳೆ ಗಂಭೀರ ಆರೋಪ ಮಾಡಿದ್ದಾರೆ.

ಎಲ್ಲರೂ ಮೈತ್ರಿ ಮಾಡಿಕೊಂಡು ತಮ್ಮನ್ನು ವಿರೋಧಿಸುತ್ತಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ 27ರಂದು ಕರೂರ್ ರ್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 41 ಜನರು ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಬಿಐನಿಂದ ಎರಡು ಬಾರಿ ವಿಚಾರಣೆಗೆ ಒಳಗಾಗಿರುವ ವಿಜಯ್, ಈ ದುರಂತದ ಹಿಂದೆ ಪಿತೂರಿ ನಡೆದಿದೆ ಮತ್ತು ತಮಗೂ ಈ ವಿಷಯದಲ್ಲಿ ನ್ಯಾಯ ಬೇಕು ಎಂದು ಪ್ರತಿಪಾದಿಸಿದ್ದಾರೆ.

ಇದೇ ವೇಳೆ ತಮ್ಮ ವಿದಾಯದ ಚಲನಚಿತ್ರ 'ಜನನಾಯಗನ್' ಬಿಡುಗಡೆಗೆ ಎದುರಾಗಿರುವ ಅಡೆತಡೆಗಳ ಬಗ್ಗೆಯೂ ಅವರು ಕಿಡಿಕಾರಿದ್ದಾರೆ. ಜನವರಿ 9ರಂದೇ ಬಿಡುಗಡೆಯಾಗಬೇಕಿದ್ದ ಈ ಚಿತ್ರವು ಪ್ರಸ್ತುತ ಸೆನ್ಸಾರ್ ಮಂಡಳಿಯಲ್ಲಿ (CBFC) ಸಿಲುಕಿಕೊಂಡಿದೆ. ಚಿತ್ರದಲ್ಲಿನ ಹಿಂಸಾಚಾರ ಮತ್ತು ಸೇನೆಗೆ ಸಂಬಂಧಿಸಿದ ಕೆಲವು ದೃಶ್ಯಗಳ ಬಗ್ಗೆ ಆಕ್ಷೇಪ ವ್ಯಕ್ತವಾಗಿದ್ದು, ತಜ್ಞರ ಪರಿಶೀಲನೆಗೆ ಒತ್ತಾಯ ಕೇಳಿಬಂದಿದೆ. ಈ ವಿಳಂಬದ ಹಿಂದೆ ಕೇಂದ್ರದ ಬಿಜೆಪಿ ಸರ್ಕಾರದ "ಬ್ಲೇಮ್ ಗೇಮ್" ರಾಜಕಾರಣವಿದೆ ಎಂದು ವಿಜಯ್ ನೇರವಾಗಿ ಆರೋಪಿಸಿದ್ದಾರೆ. ಚುನಾವಣಾ ಸಮಯದಲ್ಲಿ ಈ ಚಿತ್ರವು ತಮಗೆ ಪ್ರಬಲ ಅಸ್ತ್ರವಾಗಲಿದೆ ಎಂಬ ಭಯದಿಂದ ವಿರೋಧಿಗಳು ಅಡ್ಡಿಪಡಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ವಿಶೇಷವೆಂದರೆ, ವಿಜಯ್ ಅವರ ಚಿತ್ರದ ಬಿಡುಗಡೆಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಬೆಂಬಲ ಸೂಚಿಸಿದ್ದು, ಇದಕ್ಕಾಗಿ ವಿಜಯ್ ಅವರು ಮುಖ್ಯಮಂತ್ರಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಏಪ್ರಿಲ್ 23 ರಂದು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರು ಚೆನ್ನೈನ ಪೆರಂಬೂರ್ ಮತ್ತು ತಿರುಚ್ಚಿ ಪೂರ್ವ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದಾರೆ. ತಿರುಚ್ಚಿ ಪೂರ್ವ ಕ್ಷೇತ್ರದಲ್ಲಿ ಅವರು ಡಿಎಂಕೆ ಶಾಸಕ ಇನಿಗೊ ಇರುದಯರಾಜ್ ಮತ್ತು ಎಐಎಡಿಎಂಕೆಯ ಕೆ. ರಾಜಶೇಖರನ್ ಅವರ ವಿರುದ್ಧ ಕಠಿಣ ಪೈಪೋಟಿ ಎದುರಿಸಲಿದ್ದಾರೆ. ರಾಜ್ಯದಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಮೈತ್ರಿಕೂಟಗಳ ನಡುವೆ ನೇರ ಹಣಾಹಣಿ ಇದ್ದರೂ, ವಿಜಯ್ ಅವರ ಎಂಟ್ರಿ ಈ ಚುನಾವಣೆಯನ್ನು ತ್ರಿಕೋನ ಸ್ಪರ್ಧೆಯನ್ನಾಗಿ ಮಾಡುವ ನಿರೀಕ್ಷೆಯಿದೆ.

Read More
Next Story