Congress is keen to show solidarity against the Centre at the Kerala CMs inauguration!
x

ಕೇರಳ ನಿಯೋಜಿತ ಸಿಎಂ ವಿ.ಡಿ. ಸತೀಶನ್‌, ಕರ್ನಾಟಕ ಸಿಎಂ ಸಿದ್ದರಾಮಯ್ಯ, ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಹಾಗೂ ತಮಿಳುನಾಡು ಸಿಎಂ ವಿಜಯ್‌

ಕೇರಳ ಸಿಎಂ ಪದಗ್ರಹಣದಲ್ಲೇ ಕೇಂದ್ರದ ವಿರುದ್ಧ ಒಗ್ಗಟ್ಟು ಪ್ರದರ್ಶಿಸಲಿರುವ ಕಾಂಗ್ರೆಸ್‌!

ಕರ್ನಾಟಕ ಸಿಎಂ ಸಿದ್ದರಾಮಯ್ಯ, ತೆಲಂಗಾಣದ ಸಿಎಂ ರೇವಂತ್ ರೆಡ್ಡಿ ಹಾಗೂ ಹಿಮಾಚಲ ಪ್ರದೇಶದ ಸಿಎಂ ಸುಖ್ವಿಂದರ್ ಸಿಂಗ್ ಸುಖು ಅವರು ಭಾಗವಹಿಸುವುದು ಬಹುತೇಕ ಖಚಿತವಾಗಿದೆ.


Click the Play button to hear this message in audio format

ಕೇರಳ ವಿಧಾನಸಭಾ ಚುನಣೆಯಲ್ಲಿ ಭರ್ಜರಿ ಜಯ ದಾಖಲಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಮೈತ್ರಿಕೂಟವು ಹತ್ತು ವರ್ಷಗಳ ಎಡರಂಗದ (LDF) ಆಡಳಿತಕ್ಕೆ ಬ್ರೇಕ್ ಹಾಕಿ ಸರ್ಕಾರ ರಚನೆಗೆ ಸಜ್ಜಾಗಿದ್ದು, ನಿಯೋಜಿತ ಮುಖ್ಯಮಂತ್ರಿ ವಿ.ಡಿ. ಸತೀಶನ್ ಸೋಮವಾರ (ಮೇ 18) ಕೇರಳದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ನಗರದ ಸೆಂಟ್ರಲ್ ಸ್ಟೇಡಿಯಂನಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಈ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್‌ನ ಉನ್ನತ ನಾಯಕರು ಭಾಗವಹಿಸಲಿದ್ದಾರೆ.

ದಕ್ಷಿಣ ಭಾರತದ ಸಿಎಂಗಳ ಸಮ್ಮಿಲನ?

ಈ ಸಮಾರಂಭವನ್ನು ರಾಷ್ಟ್ರ ಮಟ್ಟದಲ್ಲಿ ವಿರೋಧ ಪಕ್ಷಗಳ ಒಗ್ಗಟ್ಟು ಪ್ರದರ್ಶಿಸುವ ವೇದಿಕೆಯನ್ನಾಗಿ ಮಾಡಲು ಕಾಂಗ್ರೆಸ್ ಯೋಜಿಸಿದೆ. ಕರ್ನಾಟಕ ಸಿಎಂ ಸಿದ್ದರಾಮಯ್ಯ, ತೆಲಂಗಾಣದ ಸಿಎಂ ರೇವಂತ್ ರೆಡ್ಡಿ ಹಾಗೂ ಹಿಮಾಚಲ ಪ್ರದೇಶದ ಸಿಎಂ ಸುಖ್ವಿಂದರ್ ಸಿಂಗ್ ಸುಖು ಅವರು ಭಾಗವಹಿಸುವುದು ಬಹುತೇಕ ಖಚಿತವಾಗಿದೆ. ತಮಿಳುನಾಡಿನ ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರಿಗೂ ವಿಶೇಷ ಆಹ್ವಾನ ನೀಡಲಾಗಿದ್ದು, ಅವರ ಭೇಟಿಯ ಬಗ್ಗೆ ಕೇರಳ ಪೊಲೀಸ್ ಮಹಾನಿರ್ದೇಶಕ ರಾವಡಾ ಎ. ಚಂದ್ರಶೇಖರ್ ಖಚಿತಪಡಿಸಿಲ್ಲ.

'ಟೀಮ್ ಯುಡಿಎಫ್' ಉದಯ

20 ಸಚಿವರ ಬೃಹತ್ ಸಂಪುಟ ಕಳೆದ ಕೆಲವು ದಿನಗಳಿಂದ ದೆಹಲಿ ಹಾಗೂ ತಿರುವನಂತಪುರಂನಲ್ಲಿ ನಡೆದ ತೀವ್ರ ರಾಜಕೀಯ ಕಸರತ್ತುಗಳ ಬಳಿಕ ಸಚಿವ ಸಂಪುಟದ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ವಿ.ಡಿ. ಸತೀಶನ್, ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿ ಮಾಡಿ ಒಟ್ಟು 20 ಸಚಿವರ ಪಟ್ಟಿಯನ್ನು ಹಸ್ತಾಂತರಿಸಿದ್ದಾರೆ. ನಾಳಿನ ಸಮಾರಂಭದಲ್ಲೇ ಮುಖ್ಯಮಂತ್ರಿಯವರ ಜತೆಗೆ ಪೂರ್ಣ ಪ್ರಮಾಣದ ಸಚಿವರು ಕೂಡ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಯಾರು ಈ ವಿ.ಡಿ. ಸತೀಶನ್?

ಎರ್ನಾಕುಲಂ ಜಿಲ್ಲೆಯ ನಾರ್ತ್ ಪರವೂರ್ ಕ್ಷೇತ್ರದಿಂದ 2001 ರಿಂದ ಸತತ 6ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಸತೀಶನ್, ತಳಮಟ್ಟದಿಂದ ಬೆಳೆದು ಬಂದ ನಾಯಕರಾಗಿದ್ದಾರೆ. 2021ರ ಚುನಾವಣೆಯ ಸೋಲಿನ ಬಳಿಕ ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಪಿಣರಾಯಿ ವಿಜಯನ್ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಹಾಗೂ ಆಡಳಿತ ವಿರೋಧಿ ಅಲೆ ಸೃಷ್ಟಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.

ವಿವಾದಗಳಿಗೆ ಬ್ರೇಕ್

ಫಲಿತಾಂಶ ಬಂದ 10 ದಿನಗಳ ಕಾಲ ಮುಖ್ಯಮಂತ್ರಿ ಸ್ಥಾನಕ್ಕೆ ಕೆ.ಸಿ. ವೇಣುಗೋಪಾಲ್ ಹಾಗೂ ರಮೇಶ್ ಚೆನ್ನಿತ್ತಲ ಅವರ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಕೊನೆಗೆ ಹೈಕಮಾಂಡ್ ಸತೀಶನ್ ಅವರ ಹೆಸರನ್ನು ಅಂತಿಮಗೊಳಿಸಿದ್ದು, ಎಲ್ಲ ನಾಯಕರನ್ನು ಒಟ್ಟಿಗೆ ಕರೆದೊಯ್ಯುವುದಾಗಿ ಸತೀಶನ್ ತಿಳಿಸಿದ್ದಾರೆ.

Read More
Next Story