
ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ
ತಿರುಮಲದಲ್ಲಿ ಆಡಳಿತ ಕ್ರಾಂತಿ: ಭಕ್ತರ ಸೇವೆಗಾಗಿ ಒಂದೇ ಸೂರಿನಡಿ ಬರಲಿದೆ 'ಟಿಟಿಡಿ ಕೇಂದ್ರ ಕಚೇರಿ'
ಕೇಂದ್ರೀಕೃತ ಕಚೇರಿಯಿಂದ ಆಡಳಿತ ಯಂತ್ರಕ್ಕೆ ಹಾಗೂ ಭಕ್ತರಿಗೆ ಅನೇಕ ಪ್ರಯೋಜನಗಳಿವೆ. ಭಕ್ತರು ಎದುರಿಸುವ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿ ತ್ವರಿತವಾಗಿ ಪರಿಹರಿಸಲು ಸಾಧ್ಯ.
ತಿರುಪತಿಯ ಕಪಿಲತೀರ್ಥಂ ರಸ್ತೆಯಲ್ಲಿರುವ ಬೃಹತ್ ಆಡಳಿತ ಭವನದ ಮಾದರಿಯಲ್ಲೇ, ಇದೀಗ ಸಾಕ್ಷಾತ್ ವೆಂಕಟೇಶ್ವರ ಸ್ವಾಮಿ ನೆಲೆಸಿರುವ ತಿರುಮಲ ಬೆಟ್ಟದಲ್ಲಿಯೂ ನೂತನ 'ಕೇಂದ್ರೀಕೃತ ಆಡಳಿತ ಕಚೇರಿ' ತಲೆ ಎತ್ತಲಿದೆ. ಭಕ್ತರಿಗೆ ಒದಗಿಸುವ ಎಲ್ಲ ಸೇವೆಗಳನ್ನು ಒಂದೇ ಸೂರಿನಡಿ ತರುವ ಬೃಹತ್ ಗುರಿಯೊಂದಿಗೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಆಡಳಿತ ಮಂಡಳಿ ಈ ಮಹತ್ವದ ಹೆಜ್ಜೆ ಇಟ್ಟಿದೆ.
ಮಂಗಳವಾರವಷ್ಟೇ ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಹಣಾಧಿಕಾರಿ ಸಿ.ಎಚ್. ವೆಂಕಯ್ಯ ಚೌಧರಿ ಅವರು ನೂತನ ಕಟ್ಟಡ ನಿರ್ಮಾಣಕ್ಕಾಗಿ ಸ್ಥಳ ಪರಿಶೀಲನೆ ನಡೆಸಿದರು. ಶ್ರೀವಾರಿ ದೇವಾಲಯಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿರುವ ರಾಂಬಗೀಚಾ ಅತಿಥಿಗೃಹ ಸಂಕೀರ್ಣದ ಎದುರಿಗಿರುವ ಖಾಲಿ ಜಾಗವು ಈ ಬೃಹತ್ ಆಡಳಿತ ಭವನಕ್ಕೆ ಅತ್ಯಂತ ಸೂಕ್ತ ಎಂದು ಪ್ರಾಥಮಿಕವಾಗಿ ಗುರುತಿಸಲಾಗಿದೆ. "ತಿರುಮಲದಲ್ಲಿ ಭಕ್ತರಿಗೆ ಸೇವೆ ಒದಗಿಸುವ ವಿವಿಧ ಕಚೇರಿಗಳಿದ್ದು, ಅವೆಲ್ಲವನ್ನೂ ಒಂದೇ ಸೂರಿನಡಿ ತಂದು ಸೇವೆಗಳನ್ನು ಸರಳೀಕರಿಸುವುದು ನಮ್ಮ ಮುಖ್ಯ ಉದ್ದೇಶ," ಎಂದು ವೆಂಕಯ್ಯ ಚೌಧರಿ ಸ್ಪಷ್ಟಪಡಿಸಿದ್ದಾರೆ.
ತಿರುಮಲದಲ್ಲಿಯೇ ಪ್ರತ್ಯೇಕ ಆಡಳಿತ ಕಚೇರಿ ಏಕೆ?
ಪ್ರಸ್ತುತ ಟಿಟಿಡಿಯ ಮುಖ್ಯ ಆಡಳಿತ ಕಟ್ಟಡ ತಿರುಪತಿಯಲ್ಲಿದೆ. ಟಿಟಿಡಿ ಎಂದರೆ ಕೇವಲ ಒಂದು ದೇವಸ್ಥಾನವಲ್ಲ, ಅದೊಂದು ಸಣ್ಣ ರಾಜ್ಯವನ್ನು ಮುನ್ನಡೆಸುವಷ್ಟೇ ದೊಡ್ಡ ವ್ಯವಸ್ಥೆ. ದೇವಸ್ಥಾನಗಳ ಉಸ್ತುವಾರಿ, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಹಾಗೂ ಹಿಂದೂ ಧರ್ಮ ಪ್ರಚಾರ ಪರಿಷತ್‌ನಂತಹ (HDPP) ಅನೇಕ ವಿಭಾಗಗಳನ್ನು ಇದು ಒಳಗೊಂಡಿದೆ. ಟಿಟಿಡಿಯಲ್ಲಿ 7,000 ಕಾಯಂ ಹಾಗೂ 14,200 ಗುತ್ತಿಗೆ/ಹೊರಗುತ್ತಿಗೆ ಸಿಬ್ಬಂದಿ ಸೇರಿ ಒಟ್ಟು 22,000 ಉದ್ಯೋಗಿಗಳಿದ್ದಾರೆ.
ತಿರುಮಲಕ್ಕೆ ನಿತ್ಯ ಸರಾಸರಿ 65,000 ದಿಂದ 80,000 ಭಕ್ತರು ಭೇಟಿ ನೀಡುತ್ತಾರೆ. ಭಕ್ತರಿಗೆ ನೇರ ಸೇವೆ ಒದಗಿಸುವ ಕಚೇರಿಗಳು (ಹೆಚ್ಚುವರಿ ಇಒ ಕಚೇರಿ, ವಸತಿ ಹಂಚಿಕೆ ಕೇಂದ್ರ, ಶ್ರೀವಾಣಿ ಟಿಕೆಟ್ ವಿತರಣಾ ಕೇಂದ್ರ ಇತ್ಯಾದಿ) ತಿರುಮಲದಾದ್ಯಂತ ವಿವಿಧ ಕಡೆ ಹಂಚಿಹೋಗಿವೆ. ಇದರಿಂದ ಭಕ್ತರ ಸೇವೆ ಹಾಗೂ ಸಮನ್ವಯದಲ್ಲಿ ಕೊಂಚ ಅಡಚಣೆಯಾಗುತ್ತಿತ್ತು. ಇದನ್ನು ಮನಗಂಡು, ಜುಲೈ 23, 2025 ರಂದು ನಡೆದ ಟಿಟಿಡಿ ಆಡಳಿತ ಮಂಡಳಿ ಸಭೆಯಲ್ಲಿಯೇ ಈ ನೂತನ ಕೇಂದ್ರೀಕೃತ ಕಚೇರಿ ನಿರ್ಮಾಣದ ಮಹತ್ವದ ನಿರ್ಣಯ ಕೈಗೊಳ್ಳಲಾಗಿತ್ತು ಎಂದು ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ವಿವರಿಸಿದ್ದಾರೆ.
ನೂತನ ಕೇಂದ್ರ ಕಚೇರಿಯಿಂದ ಆಗುವ ಲಾಭಗಳೇನು?
ಕೇಂದ್ರೀಕೃತ ಕಚೇರಿಯಿಂದ ಆಡಳಿತ ಯಂತ್ರಕ್ಕೆ ಹಾಗೂ ಭಕ್ತರಿಗೆ ಅನೇಕ ಪ್ರಯೋಜನಗಳಿವೆ. ಭಕ್ತರು ಎದುರಿಸುವ ಸಮಸ್ಯೆಗಳನ್ನು ಸ್ಥಳದಲ್ಲೇ ಆಲಿಸಿ ತ್ವರಿತವಾಗಿ ಪರಿಹರಿಸಲು ಸಾಧ್ಯ. ಟಿಟಿಡಿ ಇಒ ಹಾಗೂ ಹೆಚ್ಚುವರಿ ಇಒ ಕಚೇರಿಗಳು ಒಂದೇ ಕಡೆ ಇರುವುದರಿಂದ ಆಡಳಿತಾತ್ಮಕ ನಿರ್ಧಾರಗಳು ಅತ್ಯಂತ ವೇಗವಾಗಿ ಆಗಲಿವೆ. ದರ್ಶನ, ವಸತಿ ಮತ್ತು ಅನ್ನಪ್ರಸಾದ ವಿಭಾಗಗಳ ನಡುವೆ ಅತ್ಯುತ್ತಮ ಸಮನ್ವಯ ಸಾಧಿಸಬಹುದು. ಶಿಫಾರಸು ಪತ್ರಗಳ ಮೂಲಕ ಬರುವ ಭಕ್ತರಿಗೆ ವಸತಿ ಹಂಚಿಕೆ ಸೇರಿ ವಿವಿಧ ಪ್ರಕ್ರಿಯೆಗಳು ವಿಳಂಬವಿಲ್ಲದೆ ನಡೆಯಲಿವೆ.
97 ಸ್ವತಂತ್ರ ವಿಭಾಗಗಳ ಬೃಹತ್ ಸೇವಾ ಜಾಲ
ತಿರುಮಲದಲ್ಲಿ ಭಕ್ತರ ಸೇವೆಗಾಗಿ ಬರೋಬ್ಬರಿ 97 ಸ್ವತಂತ್ರ ವಿಭಾಗಗಳು ಹಗಲಿರುಳು ಶ್ರಮಿಸುತ್ತಿವೆ. ಸಿಆರ್ಒ ಪ್ರತಿದಿನ 8-9 ಸಾವಿರ ವಸತಿ ಕೊಠಡಿಗಳ ಹಂಚಿಕೆ ಮಾಡಿದರೆ, ದರ್ಶನ ಮತ್ತು ಪೇಶ್ಕಾರ್ ಕಚೇರಿಯು ವೈಕುಂಠಂ ಕ್ಯೂ ಕಾಂಪ್ಲೆಕ್ಸ್ (VQC) ನಿರ್ವಹಣೆ ಹಾಗೂ ದೇವಾಲಯದ ನಿತ್ಯ ಪೂಜಾ-ಕೈಂಕರ್ಯಗಳ ಉಸ್ತುವಾರಿ ಮಾಡುತ್ತದೆ. ಅನ್ನಪ್ರಸಾದ ವಿಭಾಗವು ಮಾತೃಶ್ರೀ ತರಿಗೊಂಡ ವೆಂಗಮಾಂಬ ಭವನದ ನಿರ್ವಹಣೆ. ದರ್ಶನದ ಸರದಿಯಲ್ಲಿ ನಿಂತವರಿಗೆ ನಿರಂತರ ಹಾಲು, ಉಪ್ಪಿಟ್ಟು, ಅನ್ನಪ್ರಸಾದ ಪೂರೈಕೆ ಮಾಡುತ್ತಿದೆ. ಕಲ್ಯಾಣಕಟ್ಟೆಯಲ್ಲಿ ಭಕ್ತರ ತಲೆಗೂದಲು ಸಮರ್ಪಣೆ ವಿಭಾಗ (ಇದರಿಂದ ಟಿಟಿಡಿಗೆ ವಾರ್ಷಿಕವಾಗಿ 1,500 ಕೋಟಿ ರೂ. ಆದಾಯವಿದೆ). ವೈದ್ಯಕೀಯ ಮತ್ತು ಭದ್ರತೆಗೆ ಅಶ್ವಿನಿ ಆಸ್ಪತ್ರೆ ಮೂಲಕ 24x7 ತುರ್ತು ಚಿಕಿತ್ಸೆ (ಹೆಚ್ಚಿನ ಚಿಕಿತ್ಸೆಗೆ ಭಕ್ತರನ್ನು ಉಚಿತವಾಗಿ ಸ್ವಿಮ್ಸ್-SVIMS ಆಸ್ಪತ್ರೆಗೆ ರವಾನೆ), ವಿಜಿಲೆನ್ಸ್ ಹಾಗೂ ನೈರ್ಮಲ್ಯ ನಿರ್ವಹಣೆ ಮಾಡಲಾಗುತ್ತಿದೆ.
ಇದಲ್ಲದೆ, ಕನಿಷ್ಠ ದರದ (ರೂ. 50, ರೂ. 100) ಕೊಠಡಿಗಳು, ಉಚಿತ ವಸತಿ ಸಮುಚ್ಚಯಗಳು (PAC) ಹಾಗೂ 60 ಉಚಿತ ಎಲೆಕ್ಟ್ರಿಕ್ ಧರ್ಮರಥ ಬಸ್‌ಗಳ ಕಾರ್ಯಾಚರಣೆಯನ್ನೂ ಈ ವಿಭಾಗಗಳು ನೋಡಿಕೊಳ್ಳುತ್ತಿವೆ.
ಭರದಿಂದ ಸಾಗಿದ ಅಧಿಕಾರಿಗಳ ಪರಿಶೀಲನೆ
ನೂತನ ಆಡಳಿತ ಭವನದ ಜೊತೆಗೆ ತಿರುಮಲದ ಇತರ ಅಭಿವೃದ್ಧಿ ಕಾರ್ಯಗಳತ್ತಲೂ ಆಡಳಿತ ಮಂಡಳಿ ಗಮನಹರಿಸಿದೆ. ಹೆಚ್ಚುವರಿ ಇಒ ವೆಂಕಯ್ಯ ಚೌಧರಿ ಅವರು ಎಸ್ಟೇಟ್ ಅಧಿಕಾರಿ ವೆಂಕಟೇಶ್ವರಲು, ವಿಜಿಒ ಸುರೇಂದ್ರ ಮತ್ತು ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಾದ ಶ್ರೀನಿವಾಸ ರಾವ್, ವೇಣುಗೋಪಾಲ್, ಚಂದ್ರಶೇಖರ್ ಅವರೊಂದಿಗೆ ತಿರುಮಲದ ವಿವಿಧೆಡೆ ಆಕಸ್ಮಿಕ ಪರಿಶೀಲನೆ ನಡೆಸಿದರು. ಕಂದಾಯ ಇಲಾಖೆಯ ಕುಟೀರಗಳ ಹಂಚಿಕೆ (ATC ಪ್ರದೇಶ) ಹಾಗೂ ಆಕಾಶಗಂಗೆಯಲ್ಲಿರುವ ಅಂಗಡಿ-ಮುಂಗಟ್ಟುಗಳನ್ನು ಖುದ್ದಾಗಿ ಪರಿಶೀಲಿಸಿದ ಅವರು, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.
ಈ ನೂತನ 'ಟಿಟಿಡಿ ಕೇಂದ್ರ ಕಚೇರಿ'ಯು ತಿರುಮಲದ ಆಡಳಿತ ವ್ಯವಸ್ಥೆಯಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಲಿದ್ದು, ವೆಂಕಟೇಶ್ವರನ ದರ್ಶನ ಹಾಗೂ ಸೇವೆಗಳು ಭಕ್ತರಿಗೆ ಇನ್ನಷ್ಟು ಸುಗಮ ಹಾಗೂ ಭಕ್ತಿಪೂರ್ಣವಾಗುವಂತೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

