ದೀಪಾವಳಿ ದಿನ ತಮಿಳುನಾಡಿನಲ್ಲಿ ಭೀಕರ ಹತ್ಯೆ: ಮೂವರು ಸಾವು
x

ತಮಿಳುನಾಡಿನ ತಿರುಚ್ಚಿರಾಪಳ್ಳಿಯಲ್ಲಿ ದೀಪಾವಳಿ ದಿನವೇ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು 17 ವರ್ಷದ ಬಾಲಕರು ಸೇರಿ ಮೂವರು ಹತ್ಯೆಯಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ದೀಪಾವಳಿ ದಿನ ತಮಿಳುನಾಡಿನಲ್ಲಿ ಭೀಕರ ಹತ್ಯೆ: ಮೂವರು ಸಾವು

ತಮಿಳುನಾಡಿನ ತಿರುಚ್ಚಿರಾಪಳ್ಳಿಯಲ್ಲಿ ದೀಪಾವಳಿ ದಿನವೇ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು 17 ವರ್ಷದ ಬಾಲಕರು ಸೇರಿ ಮೂವರು ಹತ್ಯೆಯಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.


Click the Play button to hear this message in audio format

ದೀಪಾವಳಿ ಹಬ್ಬದ ಸಂಭ್ರಮದ ನಡುವೆಯೇ ತಮಿಳುನಾಡಿನ ತಿರುಚ್ಚಿರಾಪಳ್ಳಿ ಜಿಲ್ಲೆಯಲ್ಲಿ ಭೀಕರ ಹತ್ಯೆ ಘಟನೆಗಳು ನಡೆದಿವೆ. ಪ್ರತ್ಯೇಕ ಎರಡು ಘಟನೆಗಳಲ್ಲಿ ಇಬ್ಬರು 17 ವರ್ಷದ ಬಾಲಕರು ಸೇರಿದಂತೆ ಒಟ್ಟು ಮೂವರು ಹತ್ಯೆಯಾಗಿದ್ದಾರೆ. ಪಟಾಕಿ ಸಿಡಿಸುವ ವಿಚಾರಕ್ಕೆ ನಡೆದ ಗಲಾಟೆ ಹಾಗೂ ಅಪರಿಚಿತ ದುಷ್ಕರ್ಮಿಗಳ ದಾಳಿಗೆ ಮೂವರು ಬಲಿಯಾಗಿದ್ದಾರೆ.

ತಿರುಚ್ಚಿರಾಪಳ್ಳಿಯ ಸಮಾಯಪುರಂ ಟೋಲ್ ಪ್ಲಾಜಾ ಸಮೀಪದ ಪುಲ್ಲಂಬಾಡಿ ಕಾಲುವೆ ದಡದಲ್ಲಿ ಇಬ್ಬರು 17 ವರ್ಷದ ಬಾಲಕರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಮೃತರನ್ನು ಇನಾಮ್ ಸಮಾಯಪುರಂ ನಿವಾಸಿ ರಾಹುಲ್ ಮತ್ತು ವಿಶಾಲ್ ಎಂದು ಗುರುತಿಸಲಾಗಿದೆ.

ರಾಹುಲ್ ಪೋಷಕರನ್ನು ಕಳೆದುಕೊಂಡಿದ್ದು, ಸಂಬಂಧಿಕರ ಮನೆಯಲ್ಲಿ ವಾಸವಿದ್ದ. ಜೀವನ ನಿರ್ವಹಣೆಗಾಗಿ ದಿನಗೂಲಿ ಕೆಲಸ ಮಾಡುತ್ತಿದ್ದ. ವಿಶಾಲ್ ಕೂಡ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ದೀಪಾವಳಿ ರಾತ್ರಿ ಸುಮಾರು 11.30ರ ವೇಳೆಗೆ ಧನಲಕ್ಷ್ಮಿ ಶ್ರೀನಿವಾಸನ್ ವಿಶ್ವವಿದ್ಯಾಲಯದ ಆವರಣದ ಸಮೀಪ ಇಬ್ಬರೂ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಗಳ ಗುಂಪು ಹರಿತವಾದ ಆಯುಧಗಳಿಂದ ದಾಳಿ ನಡೆಸಿದೆ.

ದಾಳಿಯಲ್ಲಿ ವಿಶಾಲ್ ಮುಖಕ್ಕೆ ಗಂಭೀರ ಗಾಯಗಳಾಗಿದ್ದರೆ, ರಾಹುಲ್ ತಲೆ ಮತ್ತು ಕುತ್ತಿಗೆ ಭಾಗದಲ್ಲಿ ಹಲವು ಗಾಯಗಳಾಗಿದ್ದವು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರನ್ನು ಗಮನಿಸಿದ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಸಮಾಯಪುರಂ ಪೊಲೀಸರು ಪರಿಶೀಲನೆ ನಡೆಸಿದಾಗ ವಿಶಾಲ್ ಸ್ಥಳದಲ್ಲೇ ಮೃತಪಟ್ಟಿದ್ದ. ಗಂಭೀರವಾಗಿ ಗಾಯಗೊಂಡಿದ್ದ ರಾಹುಲ್ ಆಸ್ಪತ್ರೆ ಸಾಗಿಸುವ ಮೊದಲೇ ಕೊನೆಯುಸಿರೆಳೆದಿದ್ದಾನೆ.

ಪಟಾಕಿ ಸಿಡಿಸುವ ವಿಚಾರಕ್ಕೆ ಐಟಿ ಉದ್ಯೋಗಿಯ ಕೊಲೆ

ಇನ್ನೊಂದು ಘಟನೆಯಲ್ಲಿ ಪಟಾಕಿ ಸಿಡಿಸುವ ವಿಚಾರವಾಗಿ ನಡೆದ ಗಲಾಟೆ 20 ವರ್ಷದ ಐಟಿ ಉದ್ಯೋಗಿಯ ಕೊಲೆಯಲ್ಲಿ ಅಂತ್ಯವಾಗಿದೆ. ಮೃತನನ್ನು ಇರುಂಗಲೂರು ಸಮೀಪದ ಪುರತಕುಡಿ ಗ್ರಾಮದ ಕ್ರಿಸ್ಟೋಫರ್ ಎಂದು ಗುರುತಿಸಲಾಗಿದೆ. ಚೆನ್ನೈನ ಖಾಸಗಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕ್ರಿಸ್ಟೋಫರ್, ದೀಪಾವಳಿ ರಜೆ ಹಿನ್ನೆಲೆಯಲ್ಲಿ ಸ್ವಗ್ರಾಮಕ್ಕೆ ಬಂದಿದ್ದ.

ದೀಪಾವಳಿ ಸಂಜೆ ಸ್ನೇಹಿತರಾದ ರಂಜಿತ್ ಮತ್ತು ಲೆನಿನ್ ಜೊತೆ ಗ್ರಾಮದ ಮಧ್ಯದ ರಸ್ತೆಯಲ್ಲಿ ಪಟಾಕಿ ಸಿಡಿಸುತ್ತಿದ್ದ. ಈ ವೇಳೆ ಅದೇ ಪ್ರದೇಶದ ಡೊನಾಲ್ಡ್, ಎಡಿಸನ್ ಮತ್ತು ಚಾರ್ಲ್ಸ್ ಎಂಬ ಮೂವರು ಪಟಾಕಿ ತಮ್ಮ ಕಡೆಗೆ ಸಿಡಿಸುತ್ತಿರುವುದನ್ನು ಪ್ರಶ್ನಿಸಿದ್ದಾರೆ. ಇದರಿಂದ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ಆರಂಭವಾಗಿ, ಬಳಿಕ ಅದು ಹೊಡೆದಾಟಕ್ಕೆ ತಿರುಗಿದೆ.

ಈ ವೇಳೆ ಡೊನಾಲ್ಡ್ ಕಬ್ಬಿಣದ ಸ್ಪ್ಯಾನರ್‌ನಿಂದ ಕ್ರಿಸ್ಟೋಫರ್ ಎಡಭಾಗದ ಎದೆಗೆ ಹಾಗೂ ರಂಜಿತ್ ಮುಖಕ್ಕೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಗಾಯಾಳುಗಳನ್ನು ಸಮಾಯಪುರಂನ ಧನಲಕ್ಷ್ಮಿ ಶ್ರೀನಿವಾಸನ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೃದಯದ ಭಾಗಕ್ಕೆ ಗಂಭೀರ ಗಾಯಗಳಾಗಿದ್ದರಿಂದ ಕ್ರಿಸ್ಟೋಫರ್ ಮೃತಪಟ್ಟಿದ್ದಾನೆ. ರಂಜಿತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಆರೋಪಿಗಳಿಗಾಗಿ ಪೊಲೀಸರ ಶೋಧ

ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಮೂವರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಲಾಲ್ಗುಡಿ ಡಿವೈಎಸ್ಪಿ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ 20ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.

ಇತ್ತ ಇಬ್ಬರು ಬಾಲಕರ ಹತ್ಯೆ ಪ್ರಕರಣದ ತನಿಖೆಗಾಗಿ ತಿರುಚ್ಚಿರಾಪಳ್ಳಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೊಂಗರೆ ಪ್ರವೀಣ್ ಉಮೇಶ್ ಸೂಚನೆಯಂತೆ ಮೂರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ವಿಧಿವಿಜ್ಞಾನ ತಜ್ಞರು ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಹತ್ಯೆಗಳ ಹಿಂದೆ ಹಳೆಯ ದ್ವೇಷ ಅಥವಾ ಪ್ರತೀಕಾರದ ಕಾರಣವಿದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read More
Next Story