
ಅಸ್ವಸ್ಥರಾದ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ತಮಿಳುನಾಡು ಅಮೋನಿಯಾ ಅನಿಲ ಸೋರಿಕೆ ದುರಂತ: ಮೃತರ ಸಂಖ್ಯೆ 9ಕ್ಕೆ ಏರಿಕೆ
ಕಾರ್ಖಾನೆಯಲ್ಲಿ ಸುರಕ್ಷತಾ ಕ್ರಮಗಳ ಲೋಪವಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು,ಅನಿಲ ಸೋರಿಕೆಗೆನಿಖರವಾದ ಕಾರಣವನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮಿಳುನಾಡಿನ ತಿರುವಲ್ಲೂರು ಜಿಲ್ಲೆಯ ಪೆರಿಯಪಾಳಯಂ ಬಳಿಯ ಖಾಸಗಿ ಸಮುದ್ರಾಹಾರ ಸಂಸ್ಕರಣೆ ಮತ್ತು ರಫ್ತು ಘಟಕದಲ್ಲಿ ಸಂಭವಿಸಿದ ಭೀಕರ ಅಮೋನಿಯಾ ಅನಿಲ ಸೋರಿಕೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಒಂಬತ್ತಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಖಚಿತಪಡಿಸಿದೆ. ಮೃತಪಟ್ಟ ಒಂಬತ್ತೂ ಜನರು ಮಹಿಳಾ ಕಾರ್ಮಿಕರಾಗಿದ್ದು, ಇವರಲ್ಲಿ ಏಳು ಮಂದಿ ಒಡಿಶಾ ಮೂಲದವರಾದರೆ, ಇಬ್ಬರು ಅಸ್ಸಾಂ ಮೂಲದ ಕಾರ್ಮಿಕರಾಗಿದ್ದಾರೆ ಎಂದು ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಮೃತರ ಗುರುತು ಪತ್ತೆ
ದುರಂತದಲ್ಲಿ ಮೃತಪಟ್ಟ ಎಂಟು ಜನರನ್ನು ಶಿಬಾನಿ, ಜುಮಾನಿ ಜುವಂಗ್, ಗೀತಾ ಜುವಂಗಾ, ಪುರಿನಾಮ ಜುವಂಗಾ, ಚಂಪಬತಿ ಜುವಂಗಾ, ಪರ್ಬವತಿ ಜುವಂಗಾ, ಸೀತಾ ಹಸ್ದಾ ಮತ್ತು ಅಂಜಿತಾ ಸೊರೆನ್ ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ಮಹಿಳೆಯ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ.
ಘಟನೆಯ ಹಿನ್ನೆಲೆ
ಜೂ. 21 ರಂದು ಮಂಜುಂಗರನೈ ಕೈಗಾರಿಕಾ ಪ್ರದೇಶದಲ್ಲಿರುವ ಸಮುದ್ರಾಹಾರ ಸಂಸ್ಕರಣೆ ಮತ್ತು ರಫ್ತು ಘಟಕದಲ್ಲಿ ಈ ವಿಷಕಾರಿ ರಾಸಾಯನಿಕ ಅನಿಲ ಹಠಾತ್ ಸೋರಿಕೆಯಾಗಿತ್ತು. ಅನಿಲ ಸೋರಿಕೆಯಿಂದಾಗಿ ತೀವ್ರವಾಗಿ ಅಸ್ವಸ್ಥಗೊಂಡಿರುವ ಒಟ್ಟು 69 ಕಾರ್ಮಿಕರು ಪ್ರಸ್ತುತ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವೆಲ್ಸ್ ಆಸ್ಪತ್ರೆಯಲ್ಲಿ 27 ಜನ, ವೆಂಕಟೇಶ್ವರ ಆಸ್ಪತ್ರೆಯಲ್ಲಿ 18 ಜನ, ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ 11 ಜನ, ಸ್ಟಾನ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 13 ಜನ ದಾಖಲಾಗಿದ್ದು, ಪ್ರಾಥಮಿಕ ಚಿಕಿತ್ಸೆಯ ನಂತರ ಇಬ್ಬರನ್ನು ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ವಿಷಕಾರಿ ಅಮೋನಿಯಾ ಅನಿಲವನ್ನು ಉಸಿರಾಡಿದ ಕಾರಣ ಕಾರ್ಮಿಕರಲ್ಲಿ ತೀವ್ರ ಉಸಿರಾಟದ ತೊಂದರೆ, ನಿರಂತರ ಕೆಮ್ಮು, ಎದೆನೋವು ಹಾಗೂ ಕಣ್ಣು ಮತ್ತು ಉಸಿರಾಟದ ಅಂಗಾಂಗಗಳಲ್ಲಿ ತೀವ್ರ ಉರಿ ಕಾಣಿಸಿಕೊಂಡಿದೆ. ಬಾಧಿತರ ಆರೋಗ್ಯ ಸ್ಥಿತಿಯ ಮೇಲೆ ವೈದ್ಯರ ತಂಡ ಸೂಕ್ಷ್ಮ ನಿಗಾವಹಿಸಿದೆ.
ಉನ್ನತ ಮಟ್ಟದ ತನಿಖೆಗೆ ಆದೇಶ
ಕಾರ್ಖಾನೆಯಲ್ಲಿ ಸುರಕ್ಷತಾ ಕ್ರಮಗಳ ಲೋಪವಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಅಪಘಾತಕ್ಕೆ ನಿಖರವಾದ ಕಾರಣವನ್ನು ಪತ್ತೆಹಚ್ಚಲಾಗುತ್ತಿದೆ. ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪೀಡಿತ ಪ್ರದೇಶದ ಪರಿಸರ ಮೌಲ್ಯಮಾಪನ ಮಾಡಲಾಗುತ್ತಿದ್ದು, ಜಿಲ್ಲಾಡಳಿತ ಹಾಗೂ ಆರೋಗ್ಯ ಸಂಸ್ಥೆಗಳು ಜಂಟಿಯಾಗಿ ಪರಿಹಾರ ಮತ್ತು ನಿಗಾ ಚಟುವಟಿಕೆಗಳನ್ನು ಚುರುಕುಗೊಳಿಸಿವೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

