Supreme Court gives green signal to CM Joseph Vijays Karur visit; DMKs petition dismissed
x

ಸುಪ್ರೀಂ ಕೋರ್ಟ್‌

ಸಿಎಂ ಜೋಸೆಫ್ ವಿಜಯ್ ಕರೂರ್ ಪ್ರವಾಸಕ್ಕೆ ಸುಪ್ರೀಂ ಗ್ರೀನ್ ಸಿಗ್ನಲ್; ಡಿಎಂಕೆ ಅರ್ಜಿ ವಜಾ

ನ್ಯಾಯಾಲಯದ ಕಠಿಣ ನಿಲುವನ್ನು ಗಮನಿಸಿದ ಹಿರಿಯ ವಕೀಲ ರಂಜಿತ್ ಕುಮಾರ್, ಕಾನೂನಿನ ಚೌಕಟ್ಟಿನಲ್ಲಿ ಲಭ್ಯವಿರುವ ಇತರ ವೇದಿಕೆಗಳಲ್ಲಿ ಪರಿಹಾರ ಕಂಡುಕೊಳ್ಳುವ ಸ್ವಾತಂತ್ರ್ಯದೊಂದಿಗೆ ಅರ್ಜಿಯನ್ನು ಹಿಂಪಡೆಯಲು ಒಪ್ಪಿಕೊಂಡರು.


Click the Play button to hear this message in audio format

ತಮಿಳುನಾಡಿನ ಕರೂರ್ ಕಾಲ್ತುಳಿತ ಸಂತ್ರಸ್ತರ ಕುಟುಂಬಗಳನ್ನು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಭೇಟಿ ಮಾಡುವುದನ್ನು ಪ್ರಶ್ನಿಸಿ ಡಿಎಂಕೆ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಮಂಗಳವಾರ (ಜು.7) ನಿರಾಕರಿಸಿದೆ. ಅಷ್ಟೇ ಅಲ್ಲದೆ, ಅರ್ಜಿಯ ಕಾನೂನಾತ್ಮಕ ಆಧಾರಗಳನ್ನು ಪ್ರಶ್ನಿಸಿ ಡಿಎಂಕೆ ಪಕ್ಷಕ್ಕೆ ದೇಶದ ಅತ್ಯುನ್ನತ ನ್ಯಾಯಾಲಯ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ನ್ಯಾಯಮೂರ್ತಿಗಳಾದ ಕೆ.ವಿ. ವಿಶ್ವನಾಥನ್ ಮತ್ತು ಅಲೋಕ್ ಆರಾಧೆ ಅವರನ್ನೊಳಗೊಂಡ ಪೀಠವು ಅರ್ಜಿಯ ವಿಚಾರಣೆ ನಡೆಸಿತು. "ರಾಜ್ಯದ ಮುಖ್ಯಮಂತ್ರಿಯೊಬ್ಬರು ಎಲ್ಲಿಗೆ ಭೇಟಿ ನೀಡಬೇಕು, ಅವರ ಪ್ರವಾಸದ ವೇಳಾಪಟ್ಟಿ ಹೇಗಿರಬೇಕು ಎಂಬುದನ್ನು ಸುಪ್ರೀಂ ಕೋರ್ಟ್ ನಿಯಂತ್ರಿಸಲು ಸಾಧ್ಯವೇ?" ಎಂದು ಪೀಠವು ನೇರವಾಗಿ ಪ್ರಶ್ನಿಸಿತು.

ಸಾಕ್ಷಿಗಳ ಮೇಲೆ ಪ್ರಭಾವ ಹೇಗೆ ಸಾಧ್ಯ?

ಡಿಎಂಕೆ ಕಾರ್ಯದರ್ಶಿ ಆರ್.ಎಸ್. ಭಾರತಿ ಪರವಾಗಿ ಹಿರಿಯ ವಕೀಲ ರಂಜಿತ್ ಕುಮಾರ್ ವಾದ ಮಂಡಿಸಿದರು. ಪ್ರಕರಣದ ಸಿಬಿಐ ತನಿಖೆ ಪ್ರಗತಿಯಲ್ಲಿರುವಾಗ, ಸಿಎಂ ವಿಜಯ್ ಹಾಗೂ ಸಚಿವ ಆಧವ್ ಅರ್ಜುನ ಅವರು ಸಂತ್ರಸ್ತರನ್ನು ಭೇಟಿ ಮಾಡುವುದರಿಂದ ಮತ್ತು ಸಾರ್ವಜನಿಕ ಹೇಳಿಕೆ ನೀಡುವುದರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂದು ಡಿಎಂಕೆ ಆತಂಕ ವ್ಯಕ್ತಪಡಿಸಿತ್ತು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, "ಮುಖ್ಯಮಂತ್ರಿಯವರು ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಿ ಸರ್ಕಾರಿ ನೆರವು ಹಾಗೂ ಅನುಕಂಪದ ಆಧಾರದ ಉದ್ಯೋಗದ ಆದೇಶ ಪತ್ರಗಳನ್ನು ವಿತರಿಸಲಿದ್ದಾರೆ. ಇದು ಸಾಕ್ಷಿಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ? ರಾಜಕೀಯ ವಿರೋಧವನ್ನು ನ್ಯಾಯಾಲಯದ ವೇದಿಕೆಗೆ ತರಬೇಡಿ" ಎಂದು ಬುದ್ಧಿವಾದ ಹೇಳಿತು. ಅಲ್ಲದೆ, ಮುಖ್ಯಮಂತ್ರಿ ವಿಜಯ್ ಅವರು ಈ ಪ್ರಕರಣದ ಎಫ್‌ಐಆರ್‌ನಲ್ಲಿ ಆರೋಪಿಯೇ ಅಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿತು.

ಅರ್ಜಿ ಹಿಂಪಡೆದ ಡಿಎಂಕೆ

ನ್ಯಾಯಾಲಯದ ಕಠಿಣ ನಿಲುವನ್ನು ಗಮನಿಸಿದ ಹಿರಿಯ ವಕೀಲ ರಂಜಿತ್ ಕುಮಾರ್, ಕಾನೂನಿನ ಚೌಕಟ್ಟಿನಲ್ಲಿ ಲಭ್ಯವಿರುವ ಇತರ ವೇದಿಕೆಗಳಲ್ಲಿ ಪರಿಹಾರ ಕಂಡುಕೊಳ್ಳುವ ಸ್ವಾತಂತ್ರ್ಯದೊಂದಿಗೆ ಅರ್ಜಿಯನ್ನು ಹಿಂಪಡೆಯಲು ಒಪ್ಪಿಕೊಂಡರು. ಇದಕ್ಕೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್, ಡಿಎಂಕೆಯ ಅರ್ಜಿಯನ್ನು ವಜಾಗೊಳಿಸಿತು. ಇದರೊಂದಿಗೆ ಜು.10 ರಂದು ಸಿಎಂ ಜೋಸೆಫ್ ವಿಜಯ್ ಅವರು ಕರೂರ್‌ಗೆ ಭೇಟಿ ನೀಡಿ ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಲು ಹಾದಿ ಸುಗಮವಾಗಿದೆ.

ಹಿನ್ನೆಲೆ ಏನು?

ಕಳೆದ 2025ರ ಸೆ.27 ರಂದು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ರ‍್ಯಾಲಿ ವೇಳೆ ನಡೆದ ಭೀಕರ ಕಾಲ್ತುಳಿತದಲ್ಲಿ 41 ಜನರು ಮೃತಪಟ್ಟಿದ್ದರು. ಈ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಕಳೆದ ವರ್ಷ ಅ.13 ರಂದು ಸುಪ್ರೀಂ ಕೋರ್ಟ್ ಇದಕ್ಕೆ ಸಿಬಿಐ ತನಿಖೆಗೆ ಆದೇಶಿಸಿತ್ತು. 2026ರ ವಿಧಾನಸಭಾ ಚುನಾವಣೆಯ ಬಳಿಕ ತಮಿಳುನಾಡಿನಲ್ಲಿ ಟಿವಿಕೆ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಅಂದು ಚಾರ್ಜ್‌ಶೀಟ್‌ನಲ್ಲಿದ್ದ ಕೆಲವರು ಈಗ ಸಚಿವರಾಗಿದ್ದಾರೆ ಎಂಬುದು ಡಿಎಂಕೆಯ ವಾದವಾಗಿತ್ತು.

Read More
Next Story