
ಮಗ ಬೆನಿಕ್ಸ್ ಹಾಗೂ ತಂದೆ ಜಯರಾಜ್
ಸಾತನ್‌ಕುಳಂ ಕಸ್ಟಡಿ ಸಾವು: 9 ಪೊಲೀಸರಿಗೆ ಮರಣದಂಡನೆ ವಿಧಿಸಿದ ಕೋರ್ಟ್
ಗಲ್ಲು ಶಿಕ್ಷೆಯ ಜೊತೆಗೆ, ಮರಣ ಹೊಂದಿದ ತಂದೆ-ಮಗನ ಕುಟುಂಬಕ್ಕೆ ಒಟ್ಟು 1.40 ಕೋಟಿ ರೂ.ಗಳ ಬೃಹತ್ ಮೊತ್ತದ ಪರಿಹಾರವನ್ನು ಪಾವತಿಸುವಂತೆಯೂ ನ್ಯಾಯಾಲಯವು ಇದೇ ವೇಳೆ ದೋಷಿ ಪೊಲೀಸರಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ.
ದೇಶದ ಪೊಲೀಸ್ ವ್ಯವಸ್ಥೆಯನ್ನೇ ತಲೆತಗ್ಗಿಸುವಂತೆ ಮಾಡಿದ್ದ ತಮಿಳುನಾಡಿನ ಸಾತನ್‌ಕುಳಂ (Sathankulam) ಪೊಲೀಸ್ ಕಸ್ಟಡಿ ಸಾವು ಪ್ರಕರಣದಲ್ಲಿ, ಮದುರೈ ನ್ಯಾಯಾಲಯವು ಐತಿಹಾಸಿಕ ತೀರ್ಪೊಂದನ್ನು ಪ್ರಕಟಿಸಿದೆ. ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ನೆಪದಲ್ಲಿ ಇಬ್ಬರು ಮುಗ್ಧರ ಪ್ರಾಣ ತೆಗೆದಿದ್ದ 9 ಮಂದಿ ಪೊಲೀಸ್ ಅಧಿಕಾರಿಗಳಿಗೆ ಗರಿಷ್ಠ ಶಿಕ್ಷೆಯಾದ 'ಮರಣದಂಡನೆ' ವಿಧಿಸಿ ಆದೇಶಿಸಿದೆ.
ಸೋಮವಾರ ಈ ಮಹತ್ವದ ತೀರ್ಪು ಪ್ರಕಟಿಸಿದ ಮದುರೈನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಿ. ಮುತ್ತುಕುಮಾರನ್, "ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಿದ್ದ ಪೊಲೀಸ್ ಅಧಿಕಾರಿಗಳೇ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಯಾವುದೇ ಅಪರಾಧ ಹಿನ್ನೆಲೆಯಿಲ್ಲದ ಇಬ್ಬರು ಮುಗ್ಧರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವುದು ಇದೊಂದು ಅತ್ಯಂತ 'ಅಪರೂಪದಲ್ಲಿಯೇ ಅಪರೂಪದ' ಪ್ರಕರಣವಾಗಿದೆ" ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗಲ್ಲು ಶಿಕ್ಷೆಯ ಜೊತೆಗೆ, ಮರಣ ಹೊಂದಿದ ತಂದೆ-ಮಗನ ಕುಟುಂಬಕ್ಕೆ ಒಟ್ಟು 1.40 ಕೋಟಿ ರೂ.ಗಳ ಬೃಹತ್ ಮೊತ್ತದ ಪರಿಹಾರವನ್ನು ಪಾವತಿಸುವಂತೆಯೂ ನ್ಯಾಯಾಲಯವು ಇದೇ ವೇಳೆ ದೋಷಿ ಪೊಲೀಸರಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ.
ಏನಿದು ಭೀಕರ ಪ್ರಕರಣ?
ದೇಶಾದ್ಯಂತ ಕೊರೊನಾ ಲಾಕ್‌ಡೌನ್ ಜಾರಿಯಲ್ಲಿದ್ದಾಗ, 2020ರ ಜೂನ್ 19ರಂದು ತೂತುಕುಡಿ ಜಿಲ್ಲೆಯ ಸಾತನ್‌ಕುಳಂನಲ್ಲಿ ಮೊಬೈಲ್ ಅಂಗಡಿ ಮಾಲೀಕರಾದ ಪಿ. ಜಯರಾಜ್ (59) ಮತ್ತು ಅವರ ಮಗ ಜೆ. ಬೆನಿಕ್ಸ್ (31) ತಮ್ಮ ಅಂಗಡಿಯನ್ನು ನಿಗದಿತ ಸಮಯಕ್ಕಿಂತ ಹೆಚ್ಚು ಹೊತ್ತು ತೆರೆದಿದ್ದರು. ಕೇವಲ ಇದೇ ಕಾರಣಕ್ಕೆ ಇಬ್ಬರನ್ನೂ ವಶಕ್ಕೆ ಪಡೆದಿದ್ದ ಸ್ಥಳೀಯ ಪೊಲೀಸರು, ಪೊಲೀಸ್ ಠಾಣೆಯೊಳಗೆ ರಾತ್ರಿಯಿಡೀ ಮನಬಂದಂತೆ ಥಳಿಸಿ, ಅಮಾನುಷವಾದ ಚಿತ್ರಹಿಂಸೆ ನೀಡಿದ್ದರು.
ಪೊಲೀಸರ ಈ ಭೀಕರ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರಿಗೂ ಸೂಕ್ತ ವೈದ್ಯಕೀಯ ಚಿಕಿತ್ಸೆ ಒದಗಿಸದೆ ಜೈಲಿಗೆ ಅಟ್ಟಲಾಗಿತ್ತು. ಪರಿಣಾಮ, ಗಾಯದ ತೀವ್ರತೆ ತಾಳಲಾರದೆ ಜೂನ್ 22ರಂದು ಮಗ ಬೆನಿಕ್ಸ್ ಹಾಗೂ ಮರುದಿನ ಜೂನ್ 23ರಂದು ತಂದೆ ಜಯರಾಜ್ ಜೈಲಿನ ಆಸ್ಪತ್ರೆಯಲ್ಲೇ ನರಳಿ ನರಳಿ ಪ್ರಾಣಬಿಟ್ಟಿದ್ದರು.
ಈ ಅಮಾನವೀಯ ಘಟನೆ ದೇಶಾದ್ಯಂತ ಭಾರಿ ಜನಾಕ್ರೋಶಕ್ಕೆ ಕಾರಣವಾಗಿತ್ತು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಿಬಿಐ (CBI) ಅಧಿಕಾರಿಗಳು, ಮರಣೋತ್ತರ ಪರೀಕ್ಷಾ ವರದಿಗಳು (ಜಯರಾಜ್ ದೇಹದ ಮೇಲೆ 17 ಹಾಗೂ ಬೆನಿಕ್ಸ್ ದೇಹದ ಮೇಲೆ 13 ಗಾಯಗಳಿದ್ದವು) ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಆಧಾರದ ಮೇಲೆ 9 ಪೊಲೀಸರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದರು.
ಸುಮಾರು ಆರು ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ, ಮಾಜಿ ಇನ್ಸ್‌ಪೆಕ್ಟರ್ ಶ್ರೀಧರ್, ಸಬ್-ಇನ್ಸ್‌ಪೆಕ್ಟರ್‌ಗಳಾದ ಬಾಲಕೃಷ್ಣನ್, ರಘು ಗಣೇಶ್ ಸೇರಿದಂತೆ ಒಟ್ಟು 9 ಮಂದಿ ಪೊಲೀಸರ ಅಮಾನವೀಯ ಕೃತ್ಯ ಸಾಬೀತಾಗಿದ್ದು, ಇದೀಗ ನ್ಯಾಯಾಲಯ ಇವರೆಲ್ಲರಿಗೂ ಗಲ್ಲುಶಿಕ್ಷೆ ವಿಧಿಸಿದೆ.

