
ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯ
ಶಬರಿಮಲೆ ದೇವಸ್ಥಾನದ ತುಪ್ಪದ ಹಗರಣ; ಮರುತನಿಖೆಗೆ ಕೇರಳ ಹೈಕೋರ್ಟ್ ಆದೇಶ!
ವಿಜಿಲೆನ್ಸ್ ಇಲಾಖೆ ಸಲ್ಲಿಸಿದ್ದ ತನಿಖಾ ವರದಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಾಲಯ, ಭ್ರಷ್ಟಾಚಾರವನ್ನು ಹೊರಗೆಳೆಯಲು ದಕ್ಷ ಹಾಗೂ ಪ್ರಾಮಾಣಿಕ ಹಿರಿಯ ಅಧಿಕಾರಿಗೆ ತನಿಖೆಯ ಜವಾಬ್ದಾರಿ ವಹಿಸುವಂತೆ ಸೂಚಿಸಿದೆ.
ಶಬರಿಮಲೆಯ ಪ್ರಸಿದ್ಧ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಭಕ್ತರಿಗೆ ಮಾರಾಟ ಮಾಡಲಾಗುವ ಪವಿತ್ರ ನೈವೇದ್ಯ ‘ಆದಿಯ ಸಿಷ್ಟಂ ತುಪ್ಪ’ (ಅಭಿಷೇಕದ ತುಪ್ಪ) ಮಾರಾಟದ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಇಡೀ ಹಗರಣದ ಕುರಿತು ನಿಷ್ಪಕ್ಷಪಾತ ಮತ್ತು ಸ್ವತಂತ್ರ ಮರುತನಿಖೆ ನಡೆಸುವಂತೆ ಜಾಗೃತ ಮತ್ತು ಭ್ರಷ್ಟಾಚಾರ ನಿಗ್ರಹ ದಳಕ್ಕೆ (VACB) ಹೈಕೋರ್ಟ್ ಖಡಕ್ ನಿರ್ದೇಶನ ನೀಡಿದೆ.
ವಿಜಿಲೆನ್ಸ್ ಇಲಾಖೆ ಸಲ್ಲಿಸಿದ್ದ ತನಿಖಾ ವರದಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಾಲಯ, ಪ್ರಕರಣದ ಸತ್ಯಾಸತ್ಯತೆ ಹಾಗೂ ಭ್ರಷ್ಟಾಚಾರವನ್ನು ಹೊರಗೆಳೆಯಲು ದಕ್ಷ ಹಾಗೂ ಪ್ರಾಮಾಣಿಕ ಹಿರಿಯ ಅಧಿಕಾರಿಗೆ ತನಿಖೆಯ ಜವಾಬ್ದಾರಿ ವಹಿಸುವಂತೆ ಸೂಚಿಸಿದೆ.
ವಿಜಿಲೆನ್ಸ್ ವರದಿ ವಿರುದ್ಧ ಹೈಕೋರ್ಟ್ ಗರಂ!
ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ವಿ. ಮತ್ತು ಕೆ.ವಿ. ಜಯಕುಮಾರ್ ಅವರನ್ನೊಳಗೊಂಡ ಪೀಠವು ಈ ಆದೇಶ ಹೊರಡಿಸಿದೆ. ತಿರುವಾಂಕೂರು ದೇವಸ್ವಂ ಮಂಡಳಿಗೆ (TDB) ಉಂಟಾದ ಆರ್ಥಿಕ ನಷ್ಟದ ತೀವ್ರತೆಯನ್ನು ಕಡಿಮೆ ಮಾಡುವ ರೀತಿಯಲ್ಲಿ ವಿಜಿಲೆನ್ಸ್ ವರದಿ ಸಿದ್ಧವಾಗಿದೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಕೇವಲ ದಾಖಲೆ ನಿರ್ವಹಣೆಯ ಲೋಪ ಎಂದು ಬಿಂಬಿಸಿ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಂತಿದೆ ಎಂದು ಪೀಠವು ತರಾಟೆಗೆ ತೆಗೆದುಕೊಂಡಿದೆ.
"ಇದು ಕೇವಲ ಆಡಳಿತಾತ್ಮಕ ನಿರ್ಲಕ್ಷ್ಯವಲ್ಲ. ದೇವಸ್ಥಾನದ ನಿಧಿ ಮತ್ತು ಕಾಣಿಕೆಗಳ ಉಸ್ತುವಾರಿ ಹೊಂದಿದ್ದ ಸಾರ್ವಜನಿಕ ಸೇವಕರೇ ಇದರಲ್ಲಿ ಭಾಗಿಯಾಗಿದ್ದಾರೆ. ಆದ್ದರಿಂದ ಇಡೀ ಪ್ರಕರಣವನ್ನು ನಿಷ್ಪಾಪ ಸಮಗ್ರತೆ ಮತ್ತು ದಕ್ಷತೆ ಹೊಂದಿರುವ ಹಿರಿಯ ಅಧಿಕಾರಿಯಿಂದ ಮರುಪರಿಶೀಲನೆ ನಡೆಸಬೇಕು" ಎಂದು ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ.
43 ನೌಕರರ ರಕ್ಷಣೆಗೆ ಯತ್ನ?
ದಾಖಲೆಗಳ ಸರಿಯಾದ ನಿರ್ವಹಣೆ ಇಲ್ಲದ ಕಾರಣ ವೈಯಕ್ತಿಕ ಹೊಣೆಗಾರಿಕೆ ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದ ವಿಜಿಲೆನ್ಸ್, ಆರೋಪಿಗಳಾಗಿದ್ದ 43 ನೌಕರರ ಮೇಲಿನ ಕೇಸ್ ಕೈಬಿಟ್ಟು ಕೇವಲ ಇಲಾಖಾ ಕ್ರಮಕ್ಕೆ ಶಿಫಾರಸು ಮಾಡಿತ್ತು. ಇದನ್ನು ಒಪ್ಪದ ನ್ಯಾಯಾಲಯ, ಭ್ರಷ್ಟಾಚಾರ ತಡೆ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯಡಿ (BNS) ಅಪರಾಧಗಳು ನಡೆದಿವೆಯೇ ಎಂಬುದನ್ನು ಸ್ವತಂತ್ರವಾಗಿ ಪರಿಶೀಲಿಸಿ, ಮುಂದಿನ 4 ವಾರಗಳ ಒಳಗೆ ಸಮಗ್ರ ವರದಿ ಸಲ್ಲಿಸುವಂತೆ ಹೊಸ ತನಿಖಾ ಅಧಿಕಾರಿಗೆ ಗಡುವು ನೀಡಿದೆ.
ಹಗರಣದ ಹಿನ್ನೆಲೆ ಏನು?
ನ. 17, 2025 ರಿಂದ ಡಿ. 27, 2025 ರ ಅವಧಿಯಲ್ಲಿ ಶಬರಿಮಲೆ ಸನ್ನಿಧಾನದಲ್ಲಿ ಮಾರಾಟವಾದ ಸುಮಾರು 16,628 ಪ್ಯಾಕೆಟ್ ಪವಿತ್ರ ತುಪ್ಪದ ಮಾರಾಟದ ಆದಾಯವನ್ನು ದೇವಸ್ವಂ ಮಂಡಳಿಯ ಖಾತೆಗೆ ಜಮಾ ಮಾಡಲಾಗಿರಲಿಲ್ಲ. ಇದರಿಂದಾಗಿ ಮಂಡಳಿಗೆ ಸುಮಾರು 17 ಲಕ್ಷ ರೂ. ಅಧಿಕ ಆರ್ಥಿಕ ನಷ್ಟ ಉಂಟಾಗಿತ್ತು. ಮಂಡಳಿಯ ಮುಖ್ಯ ಜಾಗೃತ ಅಧಿಕಾರಿ ನೀಡಿದ ವರದಿ ಆಧಾರದ ಮೇಲೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಈ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿದೆ. ಈ ಅಕ್ರಮಗಳು ಕೇವಲ ಒಂದು ತಿಂಗಳಿಗೆ ಸೀಮಿತವಾಗಿರದೆ, ಅದಕ್ಕೂ ಮುಂಚಿನಿಂದಲೂ ನಡೆದುಕೊಂಡು ಬಂದಿವೆ ಎಂಬ ಆರೋಪ ಕೇಳಿಬಂದಿದೆ.

