
ಕೊಲ್ಹಾಪುರ ಭಕ್ತರ ಹೋರಾಟಕ್ಕೆ ಜಯ, ಗುಣಮುಖಳಾದ 'ಮಾಧುರಿ' ಮಠಕ್ಕೆ ವಾಪಸ್
ಕಾಲು ನೋವು, ತೀವ್ರ ಸಂಧಿವಾತ ಹಾಗೂ ಕಾಲಿನ ಉಗುರುಗಳ ಸೋಂಕಿನಿಂದ ಬಳಲುತ್ತಿದ್ದ ಮಾಧುರಿಗೆ ವನತಾರದ ಪಶುವೈದ್ಯರು, ಪೌಷ್ಟಿಕತಜ್ಞರು ಮತ್ತು ಲೇಸರ್ ಥೆರಪಿ ತಂತ್ರಜ್ಞಾನದ ಮೂಲಕ ಅತ್ಯಾಧುನಿಕ ಚಿಕಿತ್ಸೆ ನೀಡಿದ್ದಾರೆ.
ಗುಜರಾತ್‌ನ ಜಾಮ್‌ನಗರ್‌ನಲ್ಲಿರುವ ರಿಲಯನ್ಸ್ ಫೌಂಡೇಶನ್‌ನ ಪ್ರಸಿದ್ಧ 'ವನತಾರ' ವನ್ಯಜೀವಿ ಪುನರ್ವಸತಿ ಕೇಂದ್ರದಲ್ಲಿ ಕಳೆದ ಒಂದು ವರ್ಷದಿಂದ ವಿಶೇಷ ಚಿಕಿತ್ಸೆ ಪಡೆಯುತ್ತಿದ್ದ 36 ವರ್ಷದ ಹೆಣ್ಣು ಆನೆ 'ಮಾಧುರಿ' ಸಂಪೂರ್ಣ ಗುಣಮುಖಳಾಗಿದ್ದು, ಶೀಘ್ರದಲ್ಲೇ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ನಂದಿನಿ ಜೈನ ಮಠಕ್ಕೆ ವಾಪಸ್ ಆಗಲಿದ್ದಾಳೆ. ಈ ಕುರಿತು ವನತಾರ ಆಡಳಿತ ಮಂಡಳಿ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಆರೋಗ್ಯ ಸುಧಾರಣೆ
ಕಾಲು ನೋವು, ತೀವ್ರ ಸಂಧಿವಾತ ಹಾಗೂ ಕಾಲಿನ ಉಗುರುಗಳ ಸೋಂಕಿನಿಂದ ಬಳಲುತ್ತಿದ್ದ ಮಾಧುರಿಗೆ ವನತಾರದ ಪಶುವೈದ್ಯರು, ಪೌಷ್ಟಿಕತಜ್ಞರು ಲೇಸರ್ ಥೆರಪಿ ತಂತ್ರಜ್ಞಾನದ ಮೂಲಕ ಅತ್ಯಾಧುನಿಕ ಚಿಕಿತ್ಸೆ ನೀಡಿದ್ದಾರೆ. ಸದ್ಯ ಆನೆ ಸಂಪೂರ್ಣ ಆರೋಗ್ಯವಾಗಿದ್ದು, ಸ್ವಂತ ಕಾಲಿನ ಮೇಲೆ ಸುಲಭವಾಗಿ ಓಡಾಡುತ್ತಿದೆ.
ಕಾನೂನು ಹೋರಾಟ ಮತ್ತು ಸ್ಥಳಾಂತರ
ಪ್ರಾಣಿ ಕಲ್ಯಾಣ ಸಂಸ್ಥೆ 'ಪೇಟಾ' ಸಲ್ಲಿಸಿದ್ದ ಅರ್ಜಿಯ ಮೇರೆಗೆ, ಬಾಂಬೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಆದೇಶದ ಅನ್ವಯ 2025ರ ಜುಲೈನಲ್ಲಿ ಮಾಧುರಿಯನ್ನು ಮಠದಿಂದ ವನತಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. "ಸಂಪ್ರದಾಯಗಳಿಗಿಂತ ಮೂಕಪ್ರಾಣಿಯ ಆರೋಗ್ಯ ಮತ್ತು ಘನತೆ ಮುಖ್ಯ" ಎಂದು ನ್ಯಾಯಾಲಯ ತೀರ್ಪು ನೀಡಿತ್ತು.
ಮಾಧುರಿ ಆನೆಯ ಸ್ಥಳಾಂತರದ ವಿರುದ್ಧ ಪ್ರತಿಭಟನಾ ಜಾಥಾ ನಡೆಸಿದ್ದ ಸ್ಥಳೀಯರು
ಜನರ ತೀವ್ರ ಪ್ರತಿಭಟನೆ
ಮಾಧುರಿಯನ್ನು ಮಠದಿಂದ ಕರೆದೊಯ್ಯುವಾಗ ಕೊಲ್ಹಾಪುರ, ಸಾಂಗ್ಲಿ ಮತ್ತು ಸತಾರಾ ಜಿಲ್ಲೆಗಳ ಸಾವಿರಾರು ಭಕ್ತರು ಕಣ್ಣೀರಿಟ್ಟು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸುಮಾರು 45 ಕಿ.ಮೀ. ಬೃಹತ್ ಮೌನ ಪ್ರತಿಭಟನಾ ಮೆರವಣಿಗೆ ನಡೆದಿತ್ತು. ಅಷ್ಟೇ ಅಲ್ಲದೆ, ಅಂಬಾನಿ ಒಡೆತನದ ವನತಾರ ಸಂಸ್ಥೆಗೆ ಆನೆಯನ್ನು ಕಳುಹಿಸಿದ್ದಕ್ಕೆ ಆಕ್ರೋಶಗೊಂಡ ಸ್ಥಳೀಯರು ರಿಲಯನ್ಸ್ ಜಿಯೋ ಸಿಮ್ ಕಾರ್ಡ್‌ಗಳನ್ನು ಬಹಿಷ್ಕರಿಸಿ, ಬೇರೆ ನೆಟ್‌ವರ್ಕ್‌ಗೆ ಪೋರ್ಟ್ ಮಾಡಿಕೊಳ್ಳುವ ಮೂಲಕ ವಿಶಿಷ್ಟ ಆರ್ಥಿಕ ಪ್ರತಿಭಟನೆ ದಾಖಲಿಸಿದ್ದರು.
ಸ್ಥಳೀಯವಾಗಿ ನಿರ್ಮಾಣವಾಗುತ್ತಿದೆ ಹೊಸ ಕೇಂದ್ರ
ಭಕ್ತರ ಭಾವನೆ ಹಾಗೂ ಪ್ರತಿಭಟನೆಗೆ ಮಣಿದ ವನತಾರ ಸಂಸ್ಥೆ ಹಾಗೂ ಮಹಾರಾಷ್ಟ್ರ ಸರ್ಕಾರ, ಕೊಲ್ಹಾಪುರದ ನಂದಿನಿ ಗ್ರಾಮದಲ್ಲೇ ಆನೆಗಾಗಿ ಸುಸಜ್ಜಿತ ಪುನರ್ವಸತಿ ಕೇಂದ್ರವನ್ನು ನಿರ್ಮಿಸಲು ಒಪ್ಪಂದ ಮಾಡಿಕೊಂಡಿವೆ. ಜೈನ ಮಠವು ಇದಕ್ಕಾಗಿ 6 ಎಕರೆ ಜಮೀನು ನೀಡಿದ್ದು, ಅಲ್ಲಿ ಹೈಡ್ರೋಥೆರಪಿ ಪೂಲ್ ಮತ್ತು ಆನೆಗೆ ಮುಕ್ತವಾಗಿ ಓಡಾಡಲು ವ್ಯವಸ್ಥೆ ಮಾಡಲಾಗುತ್ತಿದೆ.
ಪ್ರಸ್ತುತ ವನತಾರದ ತಜ್ಞರ ತಂಡವೊಂದು ಕೊಲ್ಹಾಪುರಕ್ಕೆ ಭೇಟಿ ನೀಡಿ ಭದ್ರತೆ ಮತ್ತು ಆಶ್ರಯದ ವ್ಯವಸ್ಥೆಗಳನ್ನು ಪರಿಶೀಲಿಸುತ್ತಿದೆ. ಎಲ್ಲಾ ಸಿದ್ಧತೆಗಳು ಮುಗಿದಿದ್ದು, ಇನ್ನು 8 ರಿಂದ 10 ದಿನಗಳಲ್ಲಿ ಮಾಧುರಿ ತನ್ನ ಹಳೆಯ ಮನೆಗೆ (ಮಠಕ್ಕೆ) ರಾಜಗೌರವದೊಂದಿಗೆ ಮರಳಲಿದ್ದಾಳೆ ಎಂದು ಮಾಜಿ ಸಂಸದ ರಾಜು ಶೆಟ್ಟಿ ತಿಳಿಸಿದ್ದಾರೆ.

