
ಕೇರಳಂ ಬಿಕ್ಕಟ್ಟು- ವೇಣುಗೋಪಾಲ್ ಪರ 47 ಶಾಸಕರ ಬಲ, ಪಟ್ಟು ಸಡಿಲಿಸದ ಸತೀಶನ್! ಇಂದು ಸಂಜೆ ನಿರ್ಧಾರ?
ಕೇರಳದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲಕ್ಕೆ ಇಂದು ತೆರೆ ಬೀಳುವ ಸಾಧ್ಯತೆಯಿದೆ. 47 ಶಾಸಕರ ಬೆಂಬಲ ಹೊಂದಿರುವ ಕೆ.ಸಿ. ವೇಣುಗೋಪಾಲ್ ಮತ್ತು ಐಯುಎಂಎಲ್ ಬೆಂಬಲಿತ ವಿ.ಡಿ. ಸತೀಶನ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಕೇರಳಂನ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲಕ್ಕೆ ಮಂಗಳವಾರ ಸಂಜೆಯೊಳಗೆ ತೆರೆ ಬೀಳುವ ಸಾಧ್ಯತೆಯಿದೆ. ಕಾಂಗ್ರೆಸ್ ಹೈಕಮಾಂಡ್ ಮೂಲಗಳ ಪ್ರಕಾರ, ಸಿಎಂ ಹೆಸರನ್ನು ಇಂದು ಘೋಷಿಸಿ, ಮೇ 15 ರಂದು ಪ್ರಮಾಣವಚನ ಸಮಾರಂಭ ನಡೆಸಲು ತಯಾರಿ ನಡೆಸಲಾಗುತ್ತಿದೆ. ಆದರೆ, ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಉಂಟಾಗಿರುವ ಬಿಕ್ಕಟ್ಟು ಮಾತ್ರ ಇನ್ನೂ ಬಗೆಹರಿದಿಲ್ಲ.
ವೇಣುಗೋಪಾಲ್ ಪರ ಶಾಸಕರ ಒಲವು
ಕಾಂಗ್ರೆಸ್‌ನ ಕೇಂದ್ರ ವೀಕ್ಷಕರಾದ ಅಜಯ್ ಮಾಕೆನ್ ಮತ್ತು ಮುಕುಲ್ ವಾಸ್ನಿಕ್ ಅವರಿಗೆ ಲಭ್ಯವಾಗಿರುವ ಮಾಹಿತಿಯಂತೆ, ಆಯ್ಕೆಯಾದ 63 ಶಾಸಕರ ಪೈಕಿ 47 ಶಾಸಕರು ಕೆ.ಸಿ. ವೇಣುಗೋಪಾಲ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್‌ನ ಆಪ್ತರಾಗಿರುವ ವೇಣುಗೋಪಾಲ್ ಅವರಿಗೆ ಸಂಖ್ಯಾಬಲದ ಬಲವಿದೆ. ಆದರೆ, ಜನಪ್ರಿಯ ನಾಯಕ ವಿ.ಡಿ. ಸತೀಶನ್ ಅವರು ಪ್ರಬಲ ಸವಾಲೊಡ್ಡಿದ್ದಾರೆ.
ಕೇರಳಂ ಮುಖ್ಯಮಂತ್ರಿ ಪಟ್ಟಕ್ಕಾಗಿ ನಡೆಯುತ್ತಿರುವ ಪೈಪೋಟಿಯಲ್ಲಿ ಕೆ.ಸಿ. ವೇಣುಗೋಪಾಲ್ ಮತ್ತು ವಿ.ಡಿ. ಸತೀಶನ್ ನಡುವೆ ಸ್ಪಷ್ಟ ವ್ಯತ್ಯಾಸಗಳಿದ್ದು, ಹೈಕಮಾಂಡ್ ವಿಭಿನ್ನ ಸವಾಲುಗಳನ್ನು ಎದುರಿಸುತ್ತಿದೆ. ಸಂಖ್ಯಾಬಲದ ದೃಷ್ಟಿಯಿಂದ ಕೆ.ಸಿ. ವೇಣುಗೋಪಾಲ್ ಅವರಿಗೆ 47 ಶಾಸಕರ ಭರ್ಜರಿ ಬೆಂಬಲವಿದ್ದು, ರಾಜ್ಯ ಮತ್ತು ಕೇಂದ್ರದಲ್ಲಿ ಸಚಿವರಾಗಿ ಕೆಲಸ ಮಾಡಿದ ದೀರ್ಘ ಆಡಳಿತಾತ್ಮಕ ಅನುಭವ ಇವರ ಪ್ಲಸ್ ಪಾಯಿಂಟ್ ಆಗಿದೆ; ಆದರೆ ಇವರು ಹಾಲಿ ಸಂಸದರಾಗಿರುವುದರಿಂದ, ಸಿಎಂ ಆದಲ್ಲಿ ಉಪಚುನಾವಣೆ ಎದುರಿಸಬೇಕಾದ ಅನಿವಾರ್ಯತೆ ಇವರ ಮುಂದಿರುವ ದೊಡ್ಡ ಸವಾಲು. ಇನ್ನೊಂದೆಡೆ, ಶಾಸಕಾಂಗ ಪಕ್ಷದ ನಾಯಕರಾಗಿರುವ ವಿ.ಡಿ. ಸತೀಶನ್ ಅವರಿಗೆ ಕೇವಲ 5 ಶಾಸಕರ ಬೆಂಬಲವಿದ್ದರೂ ಮಿತ್ರಪಕ್ಷಗಳ ಬೆಂಬಲ ಮತ್ತು ಸಾರ್ವಜನಿಕ ಜನಪ್ರಿಯತೆ ಹೆಚ್ಚಿದೆ, ಆದರೆ ಆಡಳಿತಾತ್ಮಕ ಅನುಭವದ ಕೊರತೆ ಹಾಗೂ ಹೈಕಮಾಂಡ್‌ನ ಅಸಮಾಧಾನ ಇವರಿಗೆ ಹಿನ್ನಡೆಯಾಗಿ ಪರಿಣಮಿಸಿದೆ.
ಸತೀಶನ್ ಪಟ್ಟು ಮತ್ತು ಐಯುಎಂಎಲ್ ಬೆಂಬಲ
ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಮೈತ್ರಿಕೂಟದ ಪ್ರಮುಖ ಮಿತ್ರಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಸತೀಶನ್ ಅವರನ್ನು ಬೆಂಬಲಿಸಿರುವುದು ಕಾಂಗ್ರೆಸ್‌ಗೆ ಹೊಸ ತಲೆನೋವಾಗಿದೆ. ಮುಸ್ಲಿಂ ಲೀಗ್‌ನ ಒತ್ತಾಯಕ್ಕೆ ಮಣಿದರೆ, ಬಿಜೆಪಿಯು 'ತುಷ್ಟೀಕರಣ ರಾಜಕಾರಣ' ಎಂದು ಟೀಕಿಸಲು ಅವಕಾಶ ಸಿಗುತ್ತದೆ ಎಂಬ ಭಯ ಕಾಂಗ್ರೆಸ್ ನಾಯಕತ್ವದಲ್ಲಿದೆ.
ಇನ್ನೊಂದೆಡೆ 61 ವರ್ಷದ ಸತೀಶನ್ ಅವರು "ಮುಖ್ಯಮಂತ್ರಿ ಸ್ಥಾನ ಬಿಟ್ಟು ಬೇರೆ ಯಾವುದೇ ಹುದ್ದೆ ಒಪ್ಪುವುದಿಲ್ಲ” ಎಂದು ಪಟ್ಟು ಹಿಡಿದಿದ್ದಾರೆ. ಒಂದು ವೇಳೆ ಅವರು ವೇಣುಗೋಪಾಲ್ ಸಂಪುಟ ಸೇರಲು ನಿರಾಕರಿಸಿದರೆ, ಸರ್ಕಾರ ನಡೆಸುವುದು ವೇಣುಗೋಪಾಲ್ ಅವರಿಗೆ ದೊಡ್ಡ ಸವಾಲಾಗಲಿದೆ.
ರಾಹುಲ್ ಗಾಂಧಿ ಎಚ್ಚರಿಕೆ
ರಾಜ್ಯಾದ್ಯಂತ ಸತೀಶನ್ ಪರ ಪೋಸ್ಟರ್‌ಗಳು ಮತ್ತು ಬಣ ರಾಜಕಾರಣ ಜೋರಾಗಿರುವುದಕ್ಕೆ ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶನಿವಾರ ನಡೆದ ಸಭೆಯಲ್ಲಿ "ಬಣ ರಾಜಕಾರಣ ಮತ್ತು ಶಕ್ತಿ ಪ್ರದರ್ಶನ ನಿಲ್ಲಿಸಿ" ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದು ನೇರವಾಗಿ ಸತೀಶನ್ ಅವರಿಗೆ ನೀಡಿದ ಎಚ್ಚರಿಕೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಈ ಇಬ್ಬರ ಜಗಳದ ನಡುವೆ ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಅವರಿಗೆ ಅದೃಷ್ಟ ಒಲಿಯುವ ಸಾಧ್ಯತೆಯೂ ಇದೆ. ವೇಣುಗೋಪಾಲ್ ಅವರನ್ನು ಮೊದಲ ಆಯ್ಕೆಯಾಗಿ ಹೆಸರಿಸಿದ ಹಲವು ಶಾಸಕರು, ತಮ್ಮ ಎರಡನೇ ಆಯ್ಕೆಯಾಗಿ ಚೆನ್ನಿತ್ತಲ ಅವರ ಹೆಸರನ್ನು ಸೂಚಿಸಿದ್ದಾರೆ ಎನ್ನಲಾಗಿದೆ. ಅಂತಿಮವಾಗಿ ದೆಹಲಿ ನಾಯಕತ್ವವು ಸಂಖ್ಯಾಬಲಕ್ಕೆ ಮಣೆ ಹಾಕುತ್ತದೆಯೇ ಅಥವಾ ಭಿನ್ನಮತ ಶಮನಕ್ಕೆ ಹೊಸ ದಾರಿ ಹುಡುಕುತ್ತದೆಯೇ ಎಂಬುದು ಕೆಲವೇ ಗಂಟೆಗಳಲ್ಲಿ ಸ್ಪಷ್ಟವಾಗಲಿದೆ.

