
ಕೇರಳ ಸಿಎಂ ಆಗಿ ವಿ.ಡಿ. ಸತೀಶನ್ ಇಂದು ಪ್ರಮಾಣ ವಚನ: 20 ಸಚಿವರ ಸಂಪುಟ ಅಸ್ತಿತ್ವಕ್ಕೆ!
ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಧಿಕಾರಕ್ಕೆ ಬರುತ್ತಲೇ VIP ಸಂಸ್ಕೃತಿ ಮತ್ತು ಹೊಸ ಕಾರುಗಳ ಖರೀದಿಗೆ ಬ್ರೇಕ್ ಹಾಕಿದ ಸಿಎಂ ವಿವರ ಇಲ್ಲಿದೆ.
ಕೇರಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ 9 ದಿನಗಳ ಸುದೀರ್ಘ ಹಗ್ಗಜಗ್ಗಾಟದ ಬಳಿಕ, ಕಾಂಗ್ರೆಸ್‌ನ ಹಿರಿಯ ನಾಯಕ ವಿ.ಡಿ. ಸತೀಶನ್ (VD Satheesan) ಅವರು ಇಂದು ಕೇರಳದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜಭವನದಲ್ಲಿ ನಡೆಯಲಿರುವ ಅಧಿಕೃತ ಸಮಾರಂಭದಲ್ಲಿ ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರು ಸತೀಶನ್ ಹಾಗೂ ಅವರ 20 ಮಂದಿ ಸಂಪುಟ ಸಹೋದ್ಯೋಗಿಗಳಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ.
ಕೇಡರ್ ಆಧಾರಿತ ಎಡರಂಗದ (LDF) ಸತತ ಎರಡು ಅವಧಿಯ ಆಡಳಿತಕ್ಕೆ ಬ್ರೇಕ್ ಹಾಕಿ, ಯುಡಿಎಫ್ (UDF) ನೇತೃತ್ವದ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರಲು ಸತೀಶನ್ ಅವರ ತಂತ್ರಗಾರಿಕೆಯೇ ಪ್ರಮುಖ ಕಾರಣ ಎನ್ನಲಾಗಿತ್ತು. ಹೀಗಾಗಿ ಅವರೇ ಸಿಎಂ ಸ್ಥಾನದ ಮುಂಚೂಣಿಯಲ್ಲಿದ್ದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ದೆಹಲಿ ರಾಜಕಾರಣದಲ್ಲಿ ದಶಕಗಳಿಂದ ಸಕ್ರಿಯರಾಗಿರುವ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಸಿಎಂ ಮಾಡಲು ಬಯಸಿತ್ತು.
ರಾಹುಲ್-ಪ್ರಿಯಾಂಕಾಗೆ ಎದುರಾಗಿದ್ದ 'ಅಮೇಥಿ ಭೀತಿ':
ಕಾಂಗ್ರೆಸ್ ಶಾಸಕರು ಹೈಕಮಾಂಡ್ ಆಯ್ಕೆಯಾದ ವೇಣುಗೋಪಾಲ್ ಪರ ನಿಂತಿದ್ದರಾದರೂ, ಕೇರಳದ ಸಾಮಾನ್ಯ ಜನತೆ ಮತ್ತು ಮೈತ್ರಿ ಪಕ್ಷವಾದ ಐಯುಎಂಎಲ್ (IUML) ಸತೀಶನ್ ಅವರನ್ನೇ ಬೆಂಬಲಿಸಿತ್ತು. ಇದರ ನಡುವೆ ಸತೀಶನ್ ಪರವಾಗಿ ಕೇರಳದಾದ್ಯಂತ ಭಾರಿ ಪೋಸ್ಟರ್‌ಗಳು ಪ್ರತ್ಯಕ್ಷವಾಗಿದ್ದವು. ವಯನಾಡ್‌ನಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಿರುದ್ಧ ಎಚ್ಚರಿಕೆಯ ಪೋಸ್ಟರ್‌ಗಳು ತಲೆ ಎತ್ತಿದ್ದವು. "ವಯನಾಡ್ ಅನ್ನು ಮರೆತರೆ, ಮುಂದಿನ ಚುನಾವಣೆಯಲ್ಲಿ ಅಮೇಥಿಯ ಗತಿಯೇ ಇಲ್ಲೂ ಆಗಲಿದೆ" ಎಂಬ ಭೀತಿಯ ಒಕ್ಕಣೆಯಿದ್ದ ಈ ಪೋಸ್ಟರ್ ವಿವಾದ ಈಗ ಕೋರ್ಟ್ ಮೆಟ್ಟಿಲೇರಿದೆ.
ಅಂತಿಮವಾಗಿ ಇಂಡಿಯಾ (INDIA) ಒಕ್ಕೂಟದ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಕೇರಳದ ಹಿರಿಯ ನಾಯಕ ಎ.ಕೆ. ಆಂಟನಿ ನಡುವೆ ನಡೆದ ದೂರವಾಣಿ ಸಂಭಾಷಣೆಯ ಬಳಿಕ ಸತೀಶನ್ ಅವರಿಗೆ ಸಿಎಂ ಪಟ್ಟ ಫೈನಲ್ ಆಯಿತು.
ಕೇರಳ ನೂತನ ಸಂಪುಟದ ಹಂಚಿಕೆ ವಿವರ:
ನೂತನ ಸಂಪುಟದಲ್ಲಿ ಒಟ್ಟು 20 ಮಂದಿ ಸಚಿವರಿದ್ದು, ಇವರಲ್ಲಿ 14 ಮಂದಿ ಹೊಸ ಮುಖಗಳಿಗೆ ಆದ್ಯತೆ ನೀಡಲಾಗಿದೆ.
• ಕಾಂಗ್ರೆಸ್ (11 ಸಚಿವರು): ಸಿಎಂ ರೇಸ್‌ನಲ್ಲಿದ್ದ ರಮೇಶ್ ಚೆನ್ನಿತ್ತಲ, ಸನ್ನಿ ಜೋಸೆಫ್, ಕೆ. ಮುರಳೀಧರನ್, ಎ.ಪಿ. ಅನಿಲ್ ಕುಮಾರ್, ಪಿ.ಸಿ. ವಿಷ್ಣುನಾಥ್, ರೋಜಿ ಎಂ. ಜಾನ್, ಬಿಂದು ಕೃಷ್ಣ, ಎಂ. ಲಿಜು, ಟಿ. ಸಿದ್ದಿಕ್, ಕೆ.ಎ. ತುಳಸಿ ಮತ್ತು ಒ.ಜೆ. ಜನೀಶ್.
• ಐಯುಎಂಎಲ್ (IUML - 5 ಸಚಿವರು): ಪಿ.ಕೆ. ಕುಂಞಾಲಿಕುಟ್ಟಿ, ಕೆ.ಎಂ. ಶಾಜಿ, ವಿ. ಅಬ್ದುಲ್ ಗಫೂರ್, ಎನ್. ಶಂಸುದ್ದೀನ್ ಮತ್ತು ಪಿ.ಕೆ. ಬಶೀರ್.
• ಇತರ ಮೈತ್ರಿ ಪಕ್ಷಗಳು: ಮಾನ್ಸ್ ಜೋಸೆಫ್ (ಕೇರಳ ಕಾಂಗ್ರೆಸ್-ಜೋಸೆಫ್), ಶಿಬು ಬೇಬಿ ಜಾನ್ (ಆರ್‌ಎಸ್‌ಪಿ), ಅನೂಪ್ ಜೇಕಬ್ (ಕೇರಳ ಕಾಂಗ್ರೆಸ್-ಜೇಕಬ್), ಮತ್ತು ಸಿ.ಪಿ. ಜಾನ್ (ಸಿಎಂಪತಿ).
ಅಧಿಕಾರಕ್ಕೆ ಬರುತ್ತಲೇ VIP ಸಂಸ್ಕೃತಿಗೆ ಬ್ರೇಕ್!
ಕೆ.ಸಿ. ವೇಣುಗೋಪಾಲ್ ಅವರಂತೆ ವಿ.ಡಿ. ಸತೀಶನ್ ಅವರಿಗೆ ಈ ಮುಂಚಿನ ಯಾವುದೇ ಆಡಳಿತಾತ್ಮಕ ಅನುಭವವಿಲ್ಲ (ಮೊದಲ ಬಾರಿಗೆ ಮಂತ್ರಿಯಾಗುತ್ತಿದ್ದಾರೆ). ಆದರೂ, ಅಧಿಕಾರ ವಹಿಸಿಕೊಳ್ಳುವ ಮುನ್ನವೇ ಅವರು ರಾಜ್ಯದ ಆರ್ಥಿಕ ಶಿಸ್ತಿಗೆ ಕಟ್ಟುನಿಟ್ಟಿನ ಕ್ರಮಗಳನ್ನು ಘೋಷಿಸಿ ಸೈ ಎನಿಸಿಕೊಂಡಿದ್ದಾರೆ.
ಬೆಂಗಾವಲು ವಾಹನ ಕಡಿತ: ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವ ಭಾರಿ ವಿಐಪಿ ಸಂಸ್ಕೃತಿಯನ್ನು ರದ್ದುಗೊಳಿಸಿದ್ದಾರೆ. ಸಿಎಂ ಕೇವಲ ಒಂದು ಪೈಲಟ್ ಮತ್ತು ಒಂದು ಎscore ವಾಹನದಲ್ಲಿ ಚಲಿಸಲಿದ್ದಾರೆ. ಭದ್ರತಾ ವಾಹನಗಳು ಅಥವಾ ಆಂಬ್ಯುಲೆನ್ಸ್ ಹಿಂಬಾಲಿಸುವುದಿಲ್ಲ.
ಹೊಸ ಲಕ್ಸುರಿ ಕಾರುಗಳಿಲ್ಲ: ಹೊಸ ಸರ್ಕಾರ ಬಂದ ತಕ್ಷಣ ಮಂತ್ರಿಗಳಿಗೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಹೊಸ ಐಷಾರಾಮಿ ಕಾರುಗಳನ್ನು ಖರೀದಿಸುವ ಸಂಪ್ರದಾಯಕ್ಕೆ ಬ್ರೇಕ್ ಹಾಕಿದ್ದಾರೆ. ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಸಚಿವರು ಹಿಂದಿನ ಸರ್ಕಾರದ ಅವಧಿಯಲ್ಲಿದ್ದ ಹಳೆಯ ಕಾರುಗಳನ್ನೇ ಬಳಸಲಿದ್ದಾರೆ.
ಗಣ್ಯರ ಉಪಸ್ಥಿತಿ
ಇಂದಿನ ಪ್ರಮಾಣ ವಚನ ಸಮಾರಂಭದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮತ್ತು ಹಿಮಾಚಲ ಪ್ರದೇಶದ ಸಿಎಂ ಸುಖ್ವಿಂದರ್ ಸಿಂಗ್ ಸುಖು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

