
ಕೇರಳದ ಕಕ್ಕೂರ್‌ನಲ್ಲಿ ಸ್ಕೂಟರ್‌ಗೆ ಡಿಕ್ಕಿ ತಪ್ಪಿಸಲು ತಿರುವು ಪಡೆದ ಮದುವೆ ಬಸ್ ಪಲ್ಟಿಯಾಗಿ 30 ಮಂದಿ ಗಾಯಗೊಂಡಿದ್ದಾರೆ.
ಮದುವೆ ದಿಬ್ಬಣದ ಬಸ್ ಪಲ್ಟಿ- ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ಪ್ರವಾಸಿ ಬಸ್ ಪಲ್ಟಿಯಾಗಿದೆ. ಘಟನೆಯಲ್ಲಿ 30 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಎದುರಿನಿಂದ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಈ ದುರಂತ ಸಂಭವಿಸಿದೆ.
ಕೇರಳದ ಎರ್ನಾಕುಳಂ ಜಿಲ್ಲೆಯ ಕೂತಟ್ಟೂಕುಳಂ ಸಮೀಪದ ಕಕ್ಕೂರ್‌ನಲ್ಲಿ ಮದುವೆ ಸಮಾರಂಭದ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಪ್ರವಾಸಿ ಬಸ್ ಪಲ್ಟಿಯಾಗಿ ಸುಮಾರು 30 ಮಂದಿ ಗಾಯಗೊಂಡಿದ್ದಾರೆ. ಬಸ್‌ನಲ್ಲಿ ಸುಮಾರು 35 ಮಂದಿ ಪ್ರಯಾಣಿಸುತ್ತಿದ್ದರು. ಗಾಯಗೊಂಡವರ ಪೈಕಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಕೂತಟ್ಟೂಕುಳಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲಡಿಯಿಂದ ಏಳಂಜಿಗೆ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಬಸ್‌ನ ಪಕ್ಕದಲ್ಲಿ ಸಾಗುತ್ತಿದ್ದ ಸ್ಕೂಟರ್ ಸವಾರ ಏಕಾಏಕಿ ಬಲಕ್ಕೆ ತಿರುಗಿದ್ದಾನೆ ಎನ್ನಲಾಗಿದೆ. ಸ್ಕೂಟರ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಬಸ್ ಚಾಲಕ ತಕ್ಷಣವೇ ಬಸ್ ಅನ್ನು ಏಕಾಏಕಿ ತಿರುಗಿಸಿದ್ದಾರೆ. ಈ ವೇಳೆ ಮಳೆಯಿಂದ ರಸ್ತೆ ಒದ್ದೆಯಾಗಿದ್ದ ಕಾರಣ ಬಸ್ ನಿಯಂತ್ರಣ ಕಳೆದುಕೊಂಡು ಜಾರಿದೆ. ಬಳಿಕ ರಸ್ತೆ ಬದಿಯ ಪೆಟ್ರೋಲ್ ಬಂಕ್ ಸಮೀಪ ಬಸ್ ಪಲ್ಟಿಯಾಗಿದೆ.
ಪೆಟ್ರೋಲ್ ಬಂಕ್‌ಗೆ ಡಿಕ್ಕಿಯಾಗದೆ ತಪ್ಪಿದ ಭಾರೀ ದುರಂತ
ಬಸ್‌ನ ಹಿಂಭಾಗ ಸ್ಕೂಟರ್‌ಗೆ ತಾಗಿದ್ದು, ಬಳಿಕ ಬಸ್ ಪೆಟ್ರೋಲ್ ಬಂಕ್‌ನತ್ತ ಚಲಿಸಿದೆ. ಆದರೆ ಕಾಂಕ್ರೀಟ್ ತಡೆಗೋಡೆಗೆ ಡಿಕ್ಕಿಯಾದ ಪರಿಣಾಮ ಇಂಧನ ಪಂಪ್‌ಗಳಿಗೆ ನೇರವಾಗಿ ಡಿಕ್ಕಿಯಾಗುವುದನ್ನು ತಪ್ಪಿಸಿದೆ. ಅದೇ ವೇಳೆ ಮತ್ತೊಂದು ದ್ವಿಚಕ್ರ ವಾಹನ ಸವಾರ ಕೂಡ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣವೇ ಬಸ್‌ನಲ್ಲಿದ್ದವರನ್ನು ಹೊರತೆಗೆದು, ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಲು ನೆರವಾಗಿದ್ದಾರೆ.
ಸಿಸಿಟಿವಿಯಲ್ಲಿ ಸೆರೆಯಾದ ಅಪಘಾತ
ಅಪಘಾತದ ದೃಶ್ಯಗಳು ಸಮೀಪದ ಪೆಟ್ರೋಲ್ ಬಂಕ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಸ್ಕೂಟರ್ ಸವಾರನ ಏಕಾಏಕಿ ತಿರುವು, ಬಸ್ ಚಾಲಕನ ತೀವ್ರ ತಿರುವು ಹಾಗೂ ಬಳಿಕ ಬಸ್ ಪಲ್ಟಿಯಾಗಿರುವುದು ದೃಶ್ಯಗಳಲ್ಲಿ ಕಂಡುಬಂದಿದೆ. ಬಸ್ ಅತಿವೇಗದಲ್ಲಿತ್ತೇ ಅಥವಾ ಸ್ಕೂಟರ್ ಸವಾರನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿತೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

