
Vijay Oath Taking | ವಿಜಯ್ ಪ್ರಮಾಣವಚನ ಸಮಾರಂಭದಲ್ಲಿ ಮೊಳಗಿದ 'ವಂದೇ ಮಾತರಂ'ನ ಎಲ್ಲಾ ಚರಣಗಳು!
ಸಿಎಂ ವಿಜಯ್ ಪದಗ್ರಹಣ ಸಮಾರಂಭದಲ್ಲಿ ಕೇಂದ್ರದ ಮಾರ್ಗಸೂಚಿಯಂತೆ ಆರು ಚರಣಗಳ ವಂದೇ ಮಾತರಂ ಹಾಡಲಾಯಿತು. ತಮಿಳು ಪ್ರಾರ್ಥನಾ ಗೀತೆಗಿಂತ ಮೊದಲು ರಾಷ್ಟ್ರೀಯ ಗೀತೆ ಹಾಡಿದ್ದು ಚರ್ಚೆಗೆ ಕಾರಣವಾಗಿದೆ.
ಕೇಂದ್ರ ಗೃಹ ಸಚಿವಾಲಯದ ನೂತನ ಮಾರ್ಗಸೂಚಿಯಂತೆ, ತಮಿಳುನಾಡು ಮುಖ್ಯಮಂತ್ರಿಯಾಗಿ ದಳಪತಿ ವಿಜಯ್ ಅವರು ಅಧಿಕಾರ ಸ್ವೀಕರಿಸಿದ ಸಮಾರಂಭದಲ್ಲಿ ಆರು ಚರಣಗಳ ಪೂರ್ಣ ಪ್ರಮಾಣದ 'ವಂದೇ ಮಾತರಂ' ಗೀತೆಯನ್ನು ಹಾಡಲಾಯಿತು. ಇದು ರಾಜ್ಯದಲ್ಲಿ ದಶಕಗಳಿಂದ ನಡೆದುಬಂದಿದ್ದ ಸಂಪ್ರದಾಯಕ್ಕೆ ಭಿನ್ನವಾಗಿದ್ದು, ಹೊಸ ರಾಜಕೀಯ ಚರ್ಚೆಗೆ ನಾಂದಿ ಹಾಡಿದೆ.
ತಮಿಳು ನಾಡಗೀತೆಗೆ ಮೂರನೇ ಸ್ಥಾನ?
ತಮಿಳುನಾಡಿನ ಸರ್ಕಾರಿ ಕಾರ್ಯಕ್ರಮಗಳಲ್ಲಿ ಇದುವರೆಗೆ 'ತಮಿಳ್ ತಾಯಿ ವಾಳತ್ತು' (ತಮಿಳು ಪ್ರಾರ್ಥನಾ ಗೀತೆ) ಮೂಲಕ ಕಾರ್ಯಕ್ರಮ ಆರಂಭಿಸಿ, ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಳಿಸುವುದು ವಾಡಿಕೆಯಾಗಿತ್ತು. ಆದರೆ ಇಂದು ಮೊದಲಿಗೆ ಆರು ಚರಣಗಳ ವಂದೇ ಮಾತರಂ ಹಾಡಲಾಯಿತು. ನಂತರ ರಾಷ್ಟ್ರಗೀತೆ ಜನ ಗಣ ಮನ ಮೊಳಗಿತು. ಇವೆಲ್ಲದರ ನಂತರ ತಮಿಳು ಪ್ರಾರ್ಥನಾ ಗೀತೆ 'ತಮಿಳ್ ತಾಯಿ ವಾಳತ್ತು' ಹಾಡಲಾಯಿತು.
ಕಾರ್ಯಕ್ರಮದ ಅಂತ್ಯದಲ್ಲೂ ಮತ್ತೊಮ್ಮೆ ಪೂರ್ಣ ಪ್ರಮಾಣದ ವಂದೇ ಮಾತರಂ ಮತ್ತು ರಾಷ್ಟ್ರಗೀತೆಯನ್ನು ಹಾಡುವ ಮೂಲಕ ಸಮಾರಂಭ ಮುಕ್ತಾಯಗೊಳಿಸಲಾಯಿತು. ತಮಿಳು ಪ್ರಾರ್ಥನಾ ಗೀತೆಯನ್ನು ಮೂರನೇ ಸ್ಥಾನಕ್ಕೆ ತಳ್ಳಿರುವುದು ರಾಜ್ಯ ರಾಜಕಾರಣದಲ್ಲಿ ಪರ-ವಿರೋಧದ ಚರ್ಚೆಯನ್ನು ಹುಟ್ಟುಹಾಕುವ ಸಾಧ್ಯತೆಯಿದೆ.
ಏನಿದು ಕೇಂದ್ರದ ನೂತನ ಮಾರ್ಗಸೂಚಿ?
ಈ ವರ್ಷದ ಜನವರಿ 28ರಂದು ಕೇಂದ್ರ ಗೃಹ ಸಚಿವಾಲಯವು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 10 ಪುಟಗಳ ಆದೇಶವೊಂದನ್ನು ಹೊರಡಿಸಿತ್ತು. ಬಂಗಾಳಿ ಕವಿ ಬಂಕಿಮ ಚಂದ್ರ ಚಟರ್ಜಿ ಅವರು ಬರೆದ ಮೂಲ ಆರು ಚರಣಗಳ ವಂದೇ ಮಾತರಂ ಗೀತೆಯನ್ನು "ಅಧಿಕೃತ ಆವೃತ್ತಿ" ಎಂದು ಘೋಷಿಸಿ, ಅದನ್ನು ಪೂರ್ಣವಾಗಿ ಹಾಡುವುದನ್ನು ಕಡ್ಡಾಯಗೊಳಿಸಿತ್ತು. ಸುಮಾರು 3 ನಿಮಿಷ 10 ಸೆಕೆಂಡ್‌ಗಳ ಈ ಪೂರ್ಣ ಆವೃತ್ತಿಯನ್ನು ಅಳವಡಿಸಿಕೊಳ್ಳುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿತ್ತು.
ರಾಜಕೀಯ ಸಂಘರ್ಷಕ್ಕೆ ಕಾರಣವಾದ ವಂದೇ ಮಾತರಂ
ಫೆಬ್ರವರಿ ತಿಂಗಳಲ್ಲಿ ಮೋದಿ ಸರ್ಕಾರ ಈ ಆದೇಶ ಹೊರಡಿಸಿದಾಗ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಪಶ್ಚಿಮ ಬಂಗಾಳದ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಇತಿಹಾಸವನ್ನು ತಿರುಚುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ಸಂವಿಧಾನ ರಚನಾ ಸಭೆಯು ಕೇವಲ ಮೊದಲ ಎರಡು ಚರಣಗಳನ್ನು ಮಾತ್ರ ರಾಷ್ಟ್ರೀಯ ಗೀತೆಯನ್ನಾಗಿ ಅಂಗೀಕರಿಸಿತ್ತು, ಆದರೆ ಕೇಂದ್ರ ಸರ್ಕಾರ ಈಗ ಆರು ಚರಣಗಳನ್ನು ಕಡ್ಡಾಯಗೊಳಿಸಿದೆ.
ತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ್ ಅವರು ಈ ಕೇಂದ್ರದ ನಿಯಮವನ್ನು ಪಾಲಿಸಿರುವುದು ಹಲವರ ಗಮನ ಸೆಳೆದಿದೆ. ದ್ರಾವಿಡ ಪಕ್ಷಗಳ ಭದ್ರಕೋಟೆಯಲ್ಲಿ ಕೇಂದ್ರದ ಈ ನಿರ್ಧಾರವನ್ನು ವಿಜಯ್ ಅನುಷ್ಠಾನಗೊಳಿಸಿರುವುದು ಅವರ ಮುಂದಿನ ರಾಜಕೀಯ ನಿಲುವಿನ ದಿಕ್ಸೂಚಿ ಎಂದು ವಿಶ್ಲೇಷಿಸಲಾಗುತ್ತಿದೆ.

