Obscene speech: DMK leader sentenced to 3 years in prison for speaking against Governor, Khushboo!
x

ತಮಿಳುನಾಡು ರಾಜ್ಯಪಾಲ ಆರ್‌.ಎನ್‌. ರವಿ, ಬಿಜೆಪಿ ನಾಯಕಿ ಖುಷ್ಬೂ ಸುಂದರ್‌ ಹಾಗೂ ಡಿಎಂಕೆ ಉಚ್ಚಾಟಿತ ಶಿವಾಜಿ ಕೃಷ್ಣಮೂರ್ತಿ

ಅಶ್ಲೀಲ ಭಾಷಣ: ರಾಜ್ಯಪಾಲರು, ಖುಷ್ಬೂ ವಿರುದ್ಧ ಮಾತನಾಡಿದ್ದ ಡಿಎಂಕೆ ನಾಯಕನಿಗೆ 3 ವರ್ಷ ಜೈಲು ಶಿಕ್ಷೆ!

ಡಿಎಂಕೆ ಉಚ್ಚಾಟಿತ ನಾಯಕ ಶಿವಾಜಿ ಕೃಷ್ಣಮೂರ್ತಿ ಹೇಳಿಕೆಗೆ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಸ್ವತಃ ಡಿಎಂಕೆ ಪಕ್ಷವೇ ಮುಜುಗರಕ್ಕೊಳಗಾಗಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಿತ್ತು.


Click the Play button to hear this message in audio format

ರಾಜಕೀಯ ಲಾಭಕ್ಕಾಗಿ ಸಾರ್ವಜನಿಕ ವೇದಿಕೆಗಳಲ್ಲಿ ವಿರೋಧಿಗಳ ವಿರುದ್ಧ ಅಶ್ಲೀಲ ಹಾಗೂ ಅವಹೇಳನಕಾರಿಯಾಗಿ ಮಾತನಾಡುವವರಿಗೆ ನ್ಯಾಯಾಲಯ ಎಚ್ಚರಿಕೆ ನೀಡಿದೆ.

ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಮತ್ತು ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಸೇರಿದಂತೆ ಹಲವು ಗಣ್ಯರ ವಿರುದ್ಧ ಅಶ್ಲೀಲ ಭಾಷೆ ಬಳಸಿದ್ದ ಡಿಎಂಕೆ ಉಚ್ಚಾಟಿತ ನಾಯಕ ಶಿವಾಜಿ ಕೃಷ್ಣಮೂರ್ತಿಗೆ ನ್ಯಾಯಲಯದ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ತೀರ್ಪಿನಲ್ಲೇನಿದೆ ?

ಡಿಎಂಕೆ ಉಚ್ಚಾಟಿತ ನಾಯಕನ ಪ್ರಚೋದನಾಕಾರಿ ಭಾಷಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಮೂರು ಪ್ರತ್ಯೇಕ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸಿದ ಎಗ್ಮೋರ್ ನ್ಯಾಯಾಲಯವು ಮಹತ್ವದ ತೀರ್ಪು ಪ್ರಕಟಿಸಿದ್ದು, ಡಿಎಂಕೆ ನಾಯಕ ಶಿವಾಜಿ ಕೃಷ್ಣಮೂರ್ತಿಗೆ 3 ವರ್ಷಗಳ ಜೈಲು ಶಿಕ್ಷೆ ಹಾಗೂ 20 ಸಾವಿರ ದಂಡ ವಿಧಿಸಿದೆ. ಈಗಾಗಲೇ ಕೃಷ್ಣಮೂರ್ತಿ ಅನುಭವಿಸಿರುವ ನ್ಯಾಯಾಂಗ ಬಂಧನದ ಅವಧಿಯನ್ನು ಈ ಒಟ್ಟು ಶಿಕ್ಷೆಯಲ್ಲಿ ಕಡಿತಗೊಳಿಸಲಾಗುತ್ತದೆ.

ಏನಿದು ಪ್ರಕರಣ?

ಈ ಹಿಂದೆ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ್ದ ಶಿವಾಜಿ ಕೃಷ್ಣಮೂರ್ತಿ, ರಾಜ್ಯಪಾಲ ಆರ್.ಎನ್. ರವಿ, ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಮತ್ತು ಎಐಎಡಿಎಂಕೆ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಅವರ ವಿರುದ್ಧ ಅತ್ಯಂತ ಅಶ್ಲೀಲ ಮತ್ತು ಅಪಮಾನಕಾರಿ ಶಬ್ದಗಳನ್ನು ಬಳಸಿದ್ದರು. ಈ ಹೇಳಿಕೆ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಸ್ವತಃ ಡಿಎಂಕೆ ಪಕ್ಷವೇ ಮುಜುಗರಕ್ಕೊಳಗಾಗಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಿತ್ತು.

"ಇದು ಪ್ರತಿಯೊಬ್ಬ ಮಹಿಳೆಯ ಜಯ": ಖುಷ್ಬೂ

ತೀರ್ಪು ಪ್ರಕಟವಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣ 'ಎಕ್ಸ್' ನಲ್ಲಿ ಪ್ರತಿಕ್ರಿಯಿಸಿರುವ ಖುಷ್ಬೂ ಸುಂದರ್, ನ್ಯಾಯಾಲಯದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. "ಇದು ಕೇವಲ ನನ್ನ ವೈಯಕ್ತಿಕ ಜಯವಲ್ಲ. ಸಾರ್ವಜನಿಕ ಜೀವನದಲ್ಲಿ ಅಶ್ಲೀಲ ದಾಳಿ ಮತ್ತು ಅವಹೇಳನ ಎದುರಿಸುತ್ತಿರುವ ಪ್ರತಿಯೊಬ್ಬ ಮಹಿಳೆಯ ಜಯ. ಇಂತಹ ವಿಕೃತ ಮನಸ್ಥಿತಿಯವರ ವಿರುದ್ಧ ನಾವೆಲ್ಲರೂ ಒಟ್ಟಾಗಿ ಹೋರಾಡಬೇಕು," ಎಂದು ಬರೆದುಕೊಂಡಿದ್ದಾರೆ.

Read More
Next Story