
ಕೇರಳ ಸಿಎಂ ವಿ.ಡಿ.ಸತೀಶನ್
ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿಸಿಗಳ ವಿರುದ್ಧ ಸಿಎಂ ವಿ.ಡಿ. ಸತೀಶನ್ ಆಕ್ರೋಶ!
ಮೋಹನ್ ಭಾಗವತ್ ಅವರು ಭಾಷಣ ಮಾಡಿದ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಮೂವರು ಉಪಕುಲಪತಿಗಳು ಭಾಗವಹಿಸಿರುವುದನ್ನು ನಾವು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಕೇರಳ ಸಿಎಂ ವಿ.ಡಿ. ಸತೀಶನ್ ತಿಳಿಸಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಭಾಗವಹಿಸಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕೇರಳದ ಮೂವರು ಪ್ರಮುಖ ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಪಾಲ್ಗೊಂಡಿರುವುದು ಈಗ ರಾಜ್ಯದಲ್ಲಿ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಆಡಳಿತಾರೂಢ ಯುಡಿಎಫ್ ಮತ್ತು ವಿರೋಧ ಪಕ್ಷವಾದ ಎಲ್‌ಡಿಎಫ್ ನಾಯಕರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಉಪಕುಲಪತಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇರಳ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಡಾ. ಮೋಹನನ್ ಕುನ್ನುಮ್ಮಲ್, ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಡಾ. ಮಾವೂತು ಡಿ. ಮತ್ತು ಮಲಯಾಳಂ ವಿಶ್ವವಿದ್ಯಾಲಯದ ಡಾ. ಸಿ.ಆರ್. ಪ್ರಸಾದ್ ಅವರು ಆರೆಸ್ಸೆಸ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇ ಈ ಇಡೀ ವಿವಾದದ ಕೇಂದ್ರಬಿಂದುವಾಗಿದೆ.
ಸಿಎಂ ವಿ.ಡಿ. ಸತೀಶನ್ ಆಕ್ರೋಶ
ಈ ಇಡೀ ಘಟನೆಯನ್ನು ಮುಖ್ಯಮಂತ್ರಿ ವಿ.ಡಿ. ಸತೀಶನ್ "ಗಂಭೀರ ಲೋಪ" ಎಂದು ಬಣ್ಣಿಸಿದ್ದಾರೆ. ಈ ಕುರಿತು 'ಎಕ್ಸ್' ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಉಪಕುಲಪತಿಗಳ ಈ ನಡೆ ಕೇರಳದ ಶೈಕ್ಷಣಿಕ ಸಂಪ್ರದಾಯಕ್ಕೆ ಮತ್ತು ಅವರ ಹುದ್ದೆಯ ಘನತೆಗೆ ತಕ್ಕುದಲ್ಲ ಎಂದು ಹೇಳಿದ್ದಾರೆ.
ಮುಂದುವರಿದು, "ಮೋಹನ್ ಭಾಗವತ್ ಅವರು ಭಾಷಣ ಮಾಡಿದ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಮೂವರು ಉಪಕುಲಪತಿಗಳು ಭಾಗವಹಿಸಿರುವುದನ್ನು ನಾವು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೇವೆ. ಕೇರಳದ ಜನರು ಉಪಕುಲಪತಿ ಹುದ್ದೆಯನ್ನು ಬಹಳ ಗೌರವಿಸುತ್ತಾರೆ. ತೀವ್ರ ಕೋಮುವಾದವನ್ನು ಬೋಧಿಸುವ ಸಂಘಟನೆಯ ಕಾರ್ಯಕ್ರಮಕ್ಕೆ ಹಾಜರಾಗುವ ಮೂಲಕ ಅವರು ಆ ಗೌರವವನ್ನು ಹಾಳು ಮಾಡಿದ್ದಾರೆ. ಕೋಮುವಾದವನ್ನು ಉತ್ತೇಜಿಸುವ ಯಾವುದೇ ಕೃತ್ಯವನ್ನು ಕ್ಷಮಿಸಲು ಸಾಧ್ಯವಿಲ್ಲ. ಈ ಮೂವರು ಉಪಕುಲಪತಿಗಳು ಕೇರಳದ ಜನರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು" ಎಂದು ಮುಖ್ಯಮಂತ್ರಿ ಒತ್ತಾಯಿಸಿದ್ದಾರೆ.
ಸರ್ಕಾರದ ವಿರುದ್ಧ ಪಿಣರಾಯಿ ವಿಜಯನ್ ವಾಗ್ದಾಳಿ
ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಹಾಲಿ ಯುಡಿಎಫ್ ಸರ್ಕಾರದ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. ಈ ಘಟನೆಯು "ತೀವ್ರ ಗೊಂದಲದ ಮತ್ತು ಕಳವಳಕಾರಿ ಸಂಗತಿ" ಎಂದಿರುವ ಅವರು, ಜಾತ್ಯತೀತ ಕೇರಳ ರಾಜ್ಯವು ಇದನ್ನು ಲಘುವಾಗಿ ಪರಿಗಣಿಸುವುದಿಲ್ಲ ಎಂದಿದ್ದಾರೆ.
ಮುಂದುವರಿದು, ವಿಶ್ವವಿದ್ಯಾನಿಲಯಗಳಲ್ಲಿ ತನ್ನ ಕಾರ್ಯಸೂಚಿಯನ್ನು ಹೇರಲು ಆರ್‌ಎಸ್‌ಎಸ್ ಮಾಡುತ್ತಿರುವ ಕೇಸರಿಕರಣದ ಪ್ರಯತ್ನಕ್ಕೆ ಈ ಘಟನೆ ಸ್ಪಷ್ಟ ಸಾಕ್ಷಿಯಾಗಿದೆ ಎಂದು ವಿಜಯನ್ ಆರೋಪಿಸಿದ್ದಾರೆ. "ಹಿಂದಿನ ನಮ್ಮ ಎಲ್‌ಡಿಎಫ್ ಸರ್ಕಾರವು ಸಾರ್ವಜನಿಕ ಪ್ರತಿಭಟನೆಗಳು ಮತ್ತು ಕಾನೂನು ಹೋರಾಟಗಳ ಮೂಲಕ ವಿಶ್ವವಿದ್ಯಾಲಯಗಳನ್ನು ಕೇಸರಿಕರಣಗೊಳಿಸುವ ಪ್ರಯತ್ನಗಳ ವಿರುದ್ಧ ಬಲವಾದ ಪ್ರತಿರೋಧ ತೋರಿತ್ತು. ಆದರೆ ಪ್ರಸ್ತುತ ಇರುವ ಯುಡಿಎಫ್ ಸರ್ಕಾರದಲ್ಲಿ ಅಂತಹ ಪ್ರತಿರೋಧದ ಕೊರತೆ ಎದ್ದುಕಾಣುತ್ತಿದೆ" ಎಂದು ಟೀಕಿಸಿದ್ದಾರೆ.
ಕೇರಳಕ್ಕೆ ಇದು ನಾಚಿಕೆಗೇಡಿನ ವಿಷಯ
ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಅಲಪ್ಪುಳ ಸಂಸದ ಕೆ.ಸಿ. ವೇಣುಗೋಪಾಲ್ ಫೇಸ್‌ಬುಕ್ ಪೋಸ್ಟ್ ಮೂಲಕ ಉಪಕುಲಪತಿಗಳ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಶೈಕ್ಷಣಿಕ ಶ್ರೇಷ್ಠತೆ ಮತ್ತು ಜಾತ್ಯತೀತ ದೃಷ್ಟಿಕೋನಕ್ಕೆ ಹೆಸರಾದ ಕೇರಳದ ಉನ್ನತ ಶಿಕ್ಷಣ ಕ್ಷೇತ್ರವನ್ನು ಆರ್‌ಎಸ್‌ಎಸ್ ಕಡೆಗೆ ತಳ್ಳಲು ಇವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿರುವ ಅವರು, "ಈ ಮೂವರು ಉಪಕುಲಪತಿಗಳು ವಿಶ್ವವಿದ್ಯಾಲಯಗಳ ಮುಖ್ಯಸ್ಥರಾಗಿ ಮುಂದುವರಿಯುತ್ತಿರುವುದು ಇಡೀ ಕೇರಳಕ್ಕೇ ನಾಚಿಕೆಗೇಡಿನ ವಿಷಯ" ಎಂದು ಕಿಡಿಕಾರಿದ್ದಾರೆ.
ಬಿಜೆಪಿಯಿಂದ ತಿರುಗೇಟು
ವಿಪಕ್ಷಗಳು ಮತ್ತು ಮುಖ್ಯಮಂತ್ರಿಯವರ ಈ ಟೀಕೆಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಹಾಲಿ ಯುಡಿಎಫ್ ಸರ್ಕಾರವು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮತ್ತು ಜಮಾತ್-ಇ-ಇಸ್ಲಾಮಿಯಂತಹ ಸಂಘಟನೆಗಳ ಬೆಂಬಲದ ಮೇಲೆ ನಿಂತಿದೆ ಎಂದು ನೆನಪಿಸಿರುವ ಅವರು, ಜಾತ್ಯತೀತತೆಯ ಬಗ್ಗೆ ಇತರರಿಗೆ ಉಪನ್ಯಾಸ ನೀಡಲು ಈ ಸರ್ಕಾರಕ್ಕೆ ಯಾವುದೇ ನೈತಿಕ ಅಧಿಕಾರವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
"ಸಂವಿಧಾನವನ್ನು ಎತ್ತಿಹಿಡಿಯುವುದಾಗಿ ಪ್ರಮಾಣ ವಚನ ಸ್ವೀಕರಿಸಿರುವ ಮುಖ್ಯಮಂತ್ರಿಯೊಬ್ಬರು, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕಾಗಿ ಉಪಕುಲಪತಿಗಳನ್ನು ಬೆದರಿಸುತ್ತಿರುವುದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕೇರಳದ ಮುಖ್ಯಮಂತ್ರಿಗಳು ಜಮಾತ್-ಇ-ಇಸ್ಲಾಮಿ ಮತ್ತು ಇಸ್ಲಾಮಿಕ್ ಗಣರಾಜ್ಯಕ್ಕಾಗಿ ಪ್ರತಿಪಾದಿಸುವ ಎಸ್‌ಡಿಪಿಐ ನಂತಹ ಪಡೆಗಳ ಕರುಣೆಯಿಂದ ತಮ್ಮ ಸರ್ಕಾರ ರಚನೆಯಾಗಿದೆ ಎಂಬುದನ್ನು ಅನುಕೂಲಕರವಾಗಿ ಮರೆತಿದ್ದಾರೆ" ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

