
ತಿರುಪತಿ ಲಡ್ಡು ತಯಾರಿಕೆಗೆ ವೈಎಸ್‌ಆರ್‌ಸಿಪಿ ರಾಸಾಯನಿಕ ಬಳಕೆ; ಚಂದ್ರಬಾಬು ನಾಯ್ಡು ಅರೋಪ
ತಮ್ಮ ಕುಟುಂಬದ ಒಡೆತನದ ಹೆರಿಟೇಜ್ ಫುಡ್ಸ್ ಸಂಸ್ಥೆಯ ಬಗ್ಗೆ ಕೇಳಿಬರುತ್ತಿರುವ ಆರೋಪಗಳು ಸುಳ್ಳು. ತಮ್ಮ ತಪ್ಪುಗಳನ್ನು ಮುಚ್ಚಿಟ್ಟುಕೊಳ್ಳಲು ವೈಎಸ್‌ಆರ್‌ಸಿಪಿ ಸುಳ್ಳು ಆರೋಪ ಮಾಡುತ್ತಿದೆ ಎಂದರು.
ತಿರುಪತಿಯ ಪವಿತ್ರ ಲಡ್ಡು ಪ್ರಸಾದದ ವಿಚಾರದಲ್ಲಿ ಆಂಧ್ರಪ್ರದೇಶದ ರಾಜಕೀಯ ಸಂಘರ್ಷ ತಾರಕಕ್ಕೇರಿದೆ. ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರವು ತಿರುಮಲ ಲಡ್ಡು ತಯಾರಿಸಲು ರಾಸಾಯನಿಕ ಮಿಶ್ರಿತ ಕಲಬೆರಕೆ ತುಪ್ಪವನ್ನು ಬಳಸಿ ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತೆ ಆರೋಪಿಸಿದ್ದಾರೆ.
ಆಂಧ್ರಪ್ರದೇಶದ ಮಾರ್ಕಾಪುರಂನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಸುಮಾರು 20 ಕೋಟಿ ಲಡ್ಡುಗಳನ್ನು ತಯಾರಿಸಲು ರಾಸಾಯನಿಕಯುಕ್ತ ಕಲಬೆರಕೆ ತುಪ್ಪವನ್ನು ಬಳಸಲಾಗಿದೆ. ಇಂತಹ ಮಹಾಪರಾಧ ಎಸಗಿದವರನ್ನು ದೇವರು ಕ್ಷಮಿಸಲು ಸಾಧ್ಯವೇ? ಇದು ಕೇವಲ ಭ್ರಷ್ಟಾಚಾರವಲ್ಲ, ಸಾಕ್ಷಾತ್ ದೇವರ ವಿರುದ್ಧ ಮಾಡಿದ ಅಪಚಾರ ಎಂದು ಕಿಡಿಕಾರಿದ್ದಾರೆ.
"ಟಿಟಿಡಿ ಆಡಳಿತ ಮಂಡಳಿಯಲ್ಲಿ ಸಾಕಷ್ಟು ಸುಧಾರಣೆಗಳನ್ನು ತರಲಾಗುವುದು. ತಿರುಪತಿಯ ಪಾವಿತ್ರ್ಯತೆಯನ್ನು ಕಾಪಾಡಲು ತಮ್ಮ ಸರ್ಕಾರ ಬದ್ಧವಾಗಿದೆ. ಪ್ರಸಾದದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು," ಎಂದು ಎಚ್ಚರಿಕೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ತಮ್ಮ ಕುಟುಂಬದ ಒಡೆತನದ ಹೆರಿಟೇಜ್ ಫುಡ್ಸ್ ಸಂಸ್ಥೆಯ ಬಗ್ಗೆ ಕೇಳಿಬರುತ್ತಿರುವ ಆರೋಪಗಳಿಗೂ ಸ್ಪಷ್ಟನೆ ನೀಡಿದರು. ತಮ್ಮ ತಪ್ಪುಗಳನ್ನು ಮುಚ್ಚಿಟ್ಟುಕೊಳ್ಳಲು ವೈಎಸ್‌ಆರ್‌ಸಿಪಿ ನಾಯಕರು ಈಗ ಹೆರಿಟೇಜ್ ಫುಡ್ಸ್ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಆದರೆ ತಿರುಪತಿ ಲಡ್ಡುಗೆ ಪೂರೈಕೆಯಾದ ತುಪ್ಪಕ್ಕೂ ಹೆರಿಟೇಜ್ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ. ನಮ್ಮ ಸಂಸ್ಥೆಗೆ ಕೆಟ್ಟಹೆಸರು ತರಲು ಅವರು ಪ್ರಯತ್ನಿಸುತ್ತಿದ್ದಾರೆ," ಎಂದು ತಿರುಗೇಟು ನೀಡಿದರು.
2019ರ ಚುನಾವಣಾ ಸಂದರ್ಭದಲ್ಲಿ ನಡೆದ ವೈ.ಎಸ್. ವಿವೇಕಾನಂದ ರೆಡ್ಡಿ (ಜಗನ್ ಮೋಹನ್ ರೆಡ್ಡಿ ಅವರ ಚಿಕ್ಕಪ್ಪ) ಅವರ ಕೊಲೆ ಪ್ರಕರಣವನ್ನು ಚಂದ್ರಬಾಬು ನಾಯ್ಡು ಪ್ರಸ್ತಾಪಿಸಿ, ಅಂದು ವಿವೇಕಾನಂದ ರೆಡ್ಡಿ ಅವರ ಸಾವಿಗೆ ನಾನೇ ಜವಾಬ್ದಾರ ಎಂದು ನನ್ನ ವಿರುದ್ಧ ಅಪಪ್ರಚಾರ ಮಾಡಲಾಗಿತ್ತು. ವೈಎಸ್‌ಆರ್‌ಸಿಪಿ ನಾಯಕರು ರಾಜಕೀಯ ಲಾಭಕ್ಕಾಗಿ ಯಾವುದೇ ಮಟ್ಟಕ್ಕೆ ಇಳಿಯಬಲ್ಲರು ಎಂಬುದಕ್ಕೆ ಇದೊಂದು ಉದಾಹರಣೆ ಎಂದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ತಮ್ಮ ಪತ್ನಿ, ತಾಯಿ ಮತ್ತು ಪಕ್ಷದ ನಾಯಕರ ವಿರುದ್ಧ ವೈಎಸ್‌ಆರ್‌ಸಿಪಿ ಮುಖಂಡರು ಅಸಭ್ಯವಾಗಿ ಮಾತನಾಡಿದ್ದರು. 2019 ರಿಂದ 2024 ರವರೆಗೆ ಆಂಧ್ರಪ್ರದೇಶವು ಸಂಪೂರ್ಣವಾಗಿ ನಾಶವಾಗಿದೆ. ಜನರು ಭಯದ ನೆರಳಿನಲ್ಲಿ ಬದುಕುವಂತಾಗಿತ್ತು. ಪ್ರತಿಯೊಂದು ವ್ಯವಸ್ಥೆಯನ್ನೂ ಅವರು ಹಾಳು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

