
ಬೆಂಗಳೂರು - ಮುಂಬೈ ನಡುವಿನ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅನುಮತಿ ನೀಡಿ ಆದೇಶಿಸಿದ್ದಾರೆ.
ಬೆಂಗಳೂರಿನಿಂದ ಮುಂಬೈ ಇನ್ಮುಂದೆ ಜಸ್ಟ್ 12 ಗಂಟೆ, ವಂದೇ ಭಾರತ್ ಸ್ಲೀಪರ್ ರೈಲಿಗೆ ಗ್ರೀನ್ ಸಿಗ್ನಲ್!
ಸದ್ಯ ಬೆಂಗಳೂರು ಮತ್ತು ಮುಂಬೈ ನಡುವೆ ಸಂಚರಿಸುವ ಸಾಮಾನ್ಯ ರೈಲುಗಳು ಗುರಿ ತಲುಪಲು ಸುಮಾರು 24 ರಿಂದ 30 ಗಂಟೆಗಳನ್ನು ತೆಗೆದುಕೊಳ್ಳುತ್ತಿವೆ. ಖಾಸಗಿ ಮತ್ತು ಸಾರಿಗೆ ಬಸ್‌ಗಳು 16 ರಿಂದ 18 ಗಂಟೆಗಳಲ್ಲಿ ಈ ದೂರವನ್ನು ಕ್ರಮಿಸುತ್ತವೆ.
ಸಿಲಿಕಾನ್ ಸಿಟಿ ಬೆಂಗಳೂರು ಮತ್ತು ವಾಣಿಜ್ಯ ನಗರಿ ಮುಂಬೈ ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಕೇಂದ್ರ ರೈಲ್ವೆ ಇಲಾಖೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಬಹುನಿರೀಕ್ಷಿತ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿಗೆ ಸಚಿವ ಅಶ್ವಿನಿ ವೈಷ್ಣವ್ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್ ಈ ಹೊಸ ರೈಲಿಗಾಗಿ ನಿರಂತರ ಒತ್ತಾಯ ಹೇರಿದ್ದರು. ಡಿ. 2 ರಂದು ನಡೆದ ನೈಋತ್ಯ ರೈಲ್ವೆಯ (SWR) ಸ್ಥಾಯಿ ಸಮಿತಿ ಸಭೆಯಲ್ಲಿ, ಎಸ್‌ಎಂವಿಟಿ (SMVT) ಬೆಂಗಳೂರು ನಿಲ್ದಾಣದಿಂದ ಮುಂಬೈಗೆ ವಂದೇ ಭಾರತ್ ಸ್ಲೀಪರ್ ರೈಲು ಆರಂಭಿಸಬೇಕೆಂದು ಪ್ರಸ್ತಾಪಿಸಿದ್ದರು. ಸಂಸದರ ಈ ಬೇಡಿಕೆಯನ್ನು ಪುರಸ್ಕರಿಸಿರುವ ರೈಲ್ವೆ ಸಚಿವರು, ಪತ್ರದ ಮೂಲಕ ಅನುಮೋದನೆಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಬಸ್‌ಗಿಂತ ವೇಗವಾಗಿ ತಲುಪಲಿದೆ ರೈಲು!
ಸದ್ಯ ಬೆಂಗಳೂರು ಮತ್ತು ಮುಂಬೈ ನಡುವೆ ಸಂಚರಿಸುವ ಸಾಮಾನ್ಯ ರೈಲುಗಳು ಗುರಿ ತಲುಪಲು ಸುಮಾರು 24 ರಿಂದ 30 ಗಂಟೆಗಳನ್ನು ತೆಗೆದುಕೊಳ್ಳುತ್ತಿವೆ. ಖಾಸಗಿ ಮತ್ತು ಸಾರಿಗೆ ಬಸ್‌ಗಳು 16 ರಿಂದ 18 ಗಂಟೆಗಳಲ್ಲಿ ಈ ದೂರವನ್ನು ಕ್ರಮಿಸುತ್ತವೆ. ಹೊಸ ವಂದೇ ಭಾರತ್ ಸ್ಲೀಪರ್ ರೈಲು ಬಸ್‌ಗಳಿಗಿಂತಲೂ ವೇಗವಾಗಿ ಅಂದರೆ ಸುಮಾರು 12 ರಿಂದ 15 ಗಂಟೆಗಳೊಳಗೆ ಮುಂಬೈ ತಲುಪುವ ನಿರೀಕ್ಷೆಯಿದೆ. ಇದು ಕೇವಲ ಸಮಯ ಉಳಿತಾಯ ಮಾಡುವುದಲ್ಲದೆ, ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಆರಾಮದಾಯಕ ಪ್ರಯಾಣವನ್ನು ಕಲ್ಪಿಸಲಿದೆ.
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರೈಲು ನಿಲ್ದಾಣದಿಂದ ಈ ರೈಲು ಕಾರ್ಯಾಚರಣೆ ನಡೆಸಲಿದೆ. ಇದರಿಂದ ಬೆಂಗಳೂರಿನ ಜನರಿಗೆ ಮತ್ತು ಐಟಿ ಉದ್ಯೋಗಿಗಳಿಗೆ ಮುಂಬೈ ಪ್ರಯಾಣ ಮತ್ತಷ್ಟು ಸುಲಭವಾಗಲಿದೆ.
ಆರ್ಥಿಕ ಲಾಭ , ಉತ್ತಮ ಸಂಪರ್ಕ
ವಿಮಾನ ಪ್ರಯಾಣಕ್ಕೆ ಹೋಲಿಸಿದರೆ ಈ ರೈಲು ಪ್ರಯಾಣವು ಅತ್ಯಂತ ಕಡಿಮೆ ದರದಲ್ಲಿ ಲಭ್ಯವಿರಲಿದೆ, ಇದು ಮಧ್ಯಮ ವರ್ಗದ ಜನರಿಗೆ ಮತ್ತು ವ್ಯಾಪಾರಿಗಳಿಗೆ ಅನುಕೂಲಕರವಾಗಲಿದೆ. ಈ ರೈಲು ಕೇಂದ್ರ ಕರ್ನಾಟಕದ ಪ್ರಮುಖ ನಗರಗಳಾದ ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಮೂಲಕ ಹಾದುಹೋಗುವುದರಿಂದ ಈ ಭಾಗದ ಜನರಿಗೂ ಮುಂಬೈ ಸಂಪರ್ಕ ಸುಲಭವಾಗಲಿದೆ.
ಅತ್ಯಾಧುನಿಕ ಸೌಲಭ್ಯಗಳು
ವಂದೇ ಭಾರತ್ ಸ್ಲೀಪರ್ ರೈಲುಗಳಲ್ಲಿ ವಿಶ್ವದರ್ಜೆಯ ಸೌಕರ್ಯಗಳಾದ ಸೆನ್ಸಾರ್ ಆಧಾರಿತ ಲೈಟಿಂಗ್, ಉತ್ತಮ ಸಸ್ಪೆನ್ಷನ್ , ಶುಚಿಯಾದ ಬಯೋ-ಟಾಯ್ಲೆಟ್ ಮತ್ತು ವೇಗವಾದ ಸಂಚಾರ ವ್ಯವಸ್ಥೆ ಇರಲಿದೆ.
ನಿಲ್ದಾಣಗಳು
ಈ ರೈಲು ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ಹೊರಟು ಮುಂಬೈನ ಸಿಎಸ್‌ಎಂಟಿ (CSMT) ತಲುಪುವ ಸಾಧ್ಯತೆಯಿದೆ. ಈ ರೈಲು ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಮಿರಾಜ್, ಪುಣೆ ಮಾರ್ಗವಾಗಿ ಮುಂಬೈ ತಲುಪಲಿದೆ. ಈ ಯೋಜನೆಯು ಜಾರಿಗೆ ಬರುವುದರಿಂದ ಉಭಯ ನಗರಗಳ ನಡುವಿನ ವಾಣಿಜ್ಯ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಮತ್ತಷ್ಟು ವೇಗ ಸಿಗಲಿದೆ.

