x

ಸೋನಿಯಾ ಗಾಂಧಿ ಪುಸ್ತಕದಲ್ಲಿ ಕರ್ನಾಟಕ: ಚಿಕ್ಕಮಗಳೂರು ಮರುಜನ್ಮ, ಬಳ್ಳಾರಿ ಸಮರ

1969ರಲ್ಲಿ ಬೆಂಗಳೂರಿನಲ್ಲಿ ನಡೆದ ಎಐಸಿಸಿ ಸಭೆಯಲ್ಲಿ ಕಾಂಗ್ರೆಸ್ 'ಸಿಂಡಿಕೇಟ್' ಜೊತೆಗಿನ ಭಿನ್ನಾಭಿಪ್ರಾಯ, ರಾಷ್ಟ್ರಪತಿ ಚುನಾವಣೆಯ ಸಂದರ್ಭದಲ್ಲಿ ವಿ.ವಿ. ಗಿರಿ ಅವರನ್ನು ಇಂದಿರಾ ಗಾಂಧಿ ಬೆಂಬಲಿಸಿದ್ದು ಮತ್ತು ಕಾಂಗ್ರೆಸ್ ವಿಭಜನೆಗೆ ಕಾರಣವಾದ ಘಟನೆಗಳೂ ಪುಸ್ತಕದಲ್ಲಿ ದಾಖಲಾಗಿವೆ.


Click the Play button to hear this message in audio format

ಸೋನಿಯಾ ಗಾಂಧಿ ಅವರು ಬರೆದಿರುವ 636 ಪುಟಗಳ 'Belonging: A Journey of Love' ಕೇವಲ ಅವರ ಆತ್ಮಕಥೆಯಷ್ಟೇ ಅಲ್ಲ, ಭಾರತದ ರಾಜಕೀಯ ಇತಿಹಾಸದ ಹಲವು ಮಹತ್ವದ ಘಟ್ಟಗಳ ದಾಖಲೆಯೂ ಹೌದು. ಈ ಪುಸ್ತಕದಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಹಲವು ರಾಜಕೀಯ, ಐತಿಹಾಸಿಕ ಹಾಗೂ ವೈಯಕ್ತಿಕ ವಿಚಾರಗಳನ್ನು ಅವರು ಅತ್ಯಂತ ಆಸಕ್ತಿದಾಯಕವಾಗಿ ಬಿಚ್ಚಿಟ್ಟಿದ್ದಾರೆ. ಇಂದಿರಾ ಗಾಂಧಿಯವರ ರಾಜಕೀಯ ಮರುಜನ್ಮದಿಂದ ಹಿಡಿದು, ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯವರೆಗಿನ ಹಲವು ಮಗ್ಗುಲುಗಳು ಇಲ್ಲಿ ಅನಾವರಣಗೊಂಡಿವೆ.

ಇಂದಿರಾಗೆ ಮರುಜನ್ಮ ನೀಡಿದ ಚಿಕ್ಕಮಗಳೂರು ಹಾಗೂ ಹಲ್ಲೆ ಯತ್ನ

1977ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ರಾಯ್‌ಬರೇಲಿ ಕ್ಷೇತ್ರದಲ್ಲಿ ಇಂದಿರಾ ಗಾಂಧಿ ಅವರು ಸೋಲು ಅನುಭವಿಸಿದಾಗ, ಅವರ ರಾಜಕೀಯ ಭವಿಷ್ಯ ಮುಗಿಯಿತು ಎಂದೇ ವಿಶ್ಲೇಷಿಸಲಾಗಿತ್ತು. ಆದರೆ, 1978ರ ನವೆಂಬರ್‌ನಲ್ಲಿ ಕರ್ನಾಟಕದ ಚಿಕ್ಕಮಗಳೂರಿನಲ್ಲಿ ನಡೆದ ಉಪಚುನಾವಣೆ ಇಂದಿರಾ ಗಾಂಧಿಯವರಿಗೆ ರಾಜಕೀಯ ಮರುಜನ್ಮ ನೀಡಿತು. ಇಲ್ಲಿನ ಗೆಲುವು ಅವರು ಮತ್ತೆ ದೆಹಲಿ ರಾಜಕಾರಣದಲ್ಲಿ ಪ್ರಾಬಲ್ಯ ಮೆರೆಯಲು ಕಾರಣವಾಯಿತು. ಈ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕ ಶ್ರೀಕಾಂತ್ ವರ್ಮಾ ರೂಪಿಸಿದ್ದ "ಏಕ್ ಶೇರ್ನಿ, ಸೌ ಲಂಗೂರ್, ಚಿಕ್ಕಮಗಳೂರು, ಚಿಕ್ಕಮಗಳೂರು!" ಎಂಬ ಘೋಷಣೆಯನ್ನು ಸೋನಿಯಾ ಸ್ಮರಿಸಿದ್ದಾರೆ.

ಇದೇ ವೇಳೆ, ಕರ್ನಾಟಕ ಪ್ರವಾಸದಲ್ಲಿದ್ದಾಗ ಇಂದಿರಾ ಗಾಂಧಿಯವರು ಎದುರಿಸಿದ ಜೀವಬೆದರಿಕೆಯ ಘಟನೆಯನ್ನೂ ಸೋನಿಯಾ ವಿವರಿಸಿದ್ದಾರೆ. ರಸ್ತೆ ತಿರುವೊಂದರ ಬಳಿ ಇಂದಿರಾ ಅವರ ವಾಹನ ನಿಂತಿದ್ದಾಗ, ವಿರೋಧ ಪಕ್ಷದ ಕಾರ್ಯಕರ್ತರು ಲಾಠಿಗಳಿಂದ ಹಲ್ಲೆ ನಡೆಸಲು ಮುಂದಾದರು. ಆಗ ಜೊತೆಗಿದ್ದ ನಾಯಕಿ ನಿರ್ಮಲಾ ದೇಶಪಾಂಡೆ ಅವರು ತಮ್ಮ ಪ್ರಾಣದ ಹಂಗು ತೊರೆದು ಇಂದಿರಾ ಅವರಿಗೆ ಅಡ್ಡ ನಿಂತು ರಕ್ಷಿಸಿದ ಸಾಹಸವನ್ನು ಪುಸ್ತಕದಲ್ಲಿ ಕೊಂಡಾಡಲಾಗಿದೆ.

ಬಳ್ಳಾರಿಯ ರೋಚಕ ಸಮರ

ಸೋನಿಯಾ ಗಾಂಧಿ ಅವರ ರಾಜಕೀಯ ಪ್ರವೇಶದ ಬಹುದೊಡ್ಡ ಘಟ್ಟ ಬಳ್ಳಾರಿ ಚುನಾವಣೆ. 1999ರಲ್ಲಿ ಬಳ್ಳಾರಿಯಿಂದ ಕಣಕ್ಕಿಳಿದಿದ್ದ ಸೋನಿಯಾ ವಿರುದ್ಧ, ಬಿಜೆಪಿಯಿಂದ ಸುಷ್ಮಾ ಸ್ವರಾಜ್ ಸ್ಪರ್ಧಿಸಿದ್ದರು. ಕನ್ನಡ ಕಲಿತು ಪ್ರಚಾರ ಮಾಡಿದ್ದ ಸುಷ್ಮಾ, ಇದನ್ನು 'ದೇಸಿ ಬೇಟಿ' ಮತ್ತು 'ವಿದೇಶಿ ಬಹು' ನಡುವಿನ ಸಮರ ಎಂದು ಬಿಂಬಿಸಿದ್ದರು. ಬಳ್ಳಾರಿಯ ಒಣ ಭೂಪ್ರದೇಶವನ್ನು ವರ್ಣಿಸಿರುವ ಸೋನಿಯಾ, ಪ್ರಚಾರದ ವೇಳೆ ಅಪೂರ್ಣಗೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತನ ಮನೆಯಲ್ಲಿ ತಂಗಿದ್ದನ್ನು ಹಾಗೂ ಅವರ ಆತಿಥ್ಯವನ್ನು ಆಪ್ತವಾಗಿ ನೆನಪಿಸಿಕೊಂಡಿದ್ದಾರೆ.

ಇದರ ಜೊತೆಗೆ, 1969ರಲ್ಲಿ ಬೆಂಗಳೂರಿನಲ್ಲಿ ನಡೆದ ಎಐಸಿಸಿ ಸಭೆಯಲ್ಲಿ ಕಾಂಗ್ರೆಸ್ 'ಸಿಂಡಿಕೇಟ್' ಜೊತೆಗಿನ ಭಿನ್ನಾಭಿಪ್ರಾಯ, ರಾಷ್ಟ್ರಪತಿ ಚುನಾವಣೆಯ ಸಂದರ್ಭದಲ್ಲಿ ವಿ.ವಿ. ಗಿರಿ ಅವರನ್ನು ಇಂದಿರಾ ಗಾಂಧಿ ಬೆಂಬಲಿಸಿದ್ದು ಮತ್ತು ಕಾಂಗ್ರೆಸ್ ವಿಭಜನೆಗೆ ಕಾರಣವಾದ ಘಟನೆಗಳೂ ಪುಸ್ತಕದಲ್ಲಿ ದಾಖಲಾಗಿವೆ.

ಕಬಿನಿ ಡೈರೀಸ್

2022ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಅವರ ರಾಜಕೀಯ ಹಿನ್ನೆಲೆಯನ್ನು ಸೋನಿಯಾ ಶ್ಲಾಘಿಸಿದ್ದಾರೆ. ಖರ್ಗೆ ಅವರ 7ನೇ ವಯಸ್ಸಿನಲ್ಲಿ ನಡೆದ ಜಾತಿ ಸಂಘರ್ಷದಲ್ಲಿ ಮನೆಗೆ ಬೆಂಕಿ ಬಿದ್ದಾಗ, ಕೇವಲ ಖರ್ಗೆ ಮತ್ತು ಅವರ ತಂದೆ ಮಾತ್ರ ಪ್ರಾಣಾಪಾಯದಿಂದ ಪಾರಾದ ಕರಾಳ ಘಟನೆಯನ್ನು ಉಲ್ಲೇಖಿಸಲಾಗಿದೆ. ಸತತ 9 ಬಾರಿ ಶಾಸಕನಾಗಿ ಬೆಳೆದು ಬಂದ ಖರ್ಗೆ ಅಧ್ಯಕ್ಷರಾದಾಗ, ತಮ್ಮ ಮೇಲಿದ್ದ ಬಹುದೊಡ್ಡ ಜವಾಬ್ದಾರಿಯ ಹೊರೆ ಇಳಿದಂತೆ ಭಾಸವಾಯಿತು ಎಂದು ಸೋನಿಯಾ ಹೇಳಿಕೊಂಡಿದ್ದಾರೆ.

ಪುಸ್ತಕದಲ್ಲಿ ರಾಜಕೀಯದಾಚೆಗಿನ ತಾಯಿ-ಮಗನ ಬಾಂಧವ್ಯವೂ ಅನಾವರಣಗೊಂಡಿದೆ. 2022ರಲ್ಲಿ ರಾಹುಲ್ ಗಾಂಧಿ ನಡೆಸಿದ ಭಾರತ್ ಜೋಡೋ ಯಾತ್ರೆಯ ವೇಳೆ, ಕರ್ನಾಟಕದಲ್ಲಿ ಸಿಕ್ಕ ವಿರಾಮದ ಸಮಯದಲ್ಲಿ, ಸೋನಿಯಾ ಹಾಗೂ ರಾಹುಲ್ ಪಶ್ಚಿಮ ಘಟ್ಟದ ಕಬಿನಿ ಅರಣ್ಯದಲ್ಲಿ ಕೆಲವು ದಿನಗಳನ್ನು ಕಳೆದರು. ನದಿಯ ದಡದಲ್ಲಿ ಕುಳಿತು ತಾಯಿ-ಮಗ ನಡೆಸಿದ ಆತ್ಮೀಯ ಮಾತುಕತೆಗಳನ್ನು ಪುಸ್ತಕದಲ್ಲಿ ಸೊಗಸಾಗಿ ಕಟ್ಟಿಕೊಡಲಾಗಿದೆ. 1987-88ರ ಬರಗಾಲದಲ್ಲಿ ಕರ್ನಾಟಕದ ರೈತರ ಸಂಕಷ್ಟ ಹಾಗೂ ಎಲ್‌ಟಿಟಿಇ ಚಟುವಟಿಕೆಗಳ ಬಗ್ಗೆಯೂ ಪುಸ್ತಕದಲ್ಲಿ ಪ್ರಸ್ತಾಪವಿದೆ.

Read More
Next Story