ಲಡಾಖ್: ಎನ್‌ಎಸ್‌ಎ ಅಡಿ ಬಂಧನಕ್ಕೊಳಗಾಗಿದ್ದ ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಬಿಡುಗಡೆ
x

ಲಡಾಖ್: ಎನ್‌ಎಸ್‌ಎ ಅಡಿ ಬಂಧನಕ್ಕೊಳಗಾಗಿದ್ದ ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಬಿಡುಗಡೆ

ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆಗಳು ಭುಗಿಲೆದ್ದ ಹಿನ್ನೆಲೆಯಲ್ಲಿ, ಲೇಹ್ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ 2025ರ ಸೆಪ್ಟೆಂಬರ್ 26ರಂದು ವಾಂಗ್ಚುಕ್ ಅವರನ್ನು ಎನ್‌ಎಸ್‌ಎ ಅಡಿಯಲ್ಲಿ ಬಂಧಿಸಲಾಗಿತ್ತು.


Click the Play button to hear this message in audio format

ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯ ಬಂಧನವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ಶನಿವಾರ (ಮಾರ್ಚ್ 14) ತಿಳಿಸಿದೆ.

ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆಗಳು ಭುಗಿಲೆದ್ದ ಹಿನ್ನೆಲೆಯಲ್ಲಿ, ಲೇಹ್ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ 2025ರ ಸೆಪ್ಟೆಂಬರ್ 26ರಂದು ವಾಂಗ್ಚುಕ್ ಅವರನ್ನು ಎನ್‌ಎಸ್‌ಎ ಅಡಿಯಲ್ಲಿ ಬಂಧಿಸಲಾಗಿತ್ತು. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಗೃಹ ಸಚಿವಾಲಯ, ವಾಂಗ್ಚುಕ್ ಅವರು ಈಗಾಗಲೇ ಕಾಯ್ದೆಯಡಿ ನಿಗದಿತ ಬಂಧನದ ಅವಧಿಯ ಬಹುಪಾಲು (ಅರ್ಧದಷ್ಟು) ಸಮಯವನ್ನು ಪೂರೈಸಿದ್ದಾರೆ. ಹೀಗಾಗಿ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಲಭ್ಯವಿರುವ ಅಧಿಕಾರವನ್ನು ಚಲಾಯಿಸಿ ತಕ್ಷಣವೇ ಅವರ ಬಂಧನವನ್ನು ಹಿಂಪಡೆಯಲು ಸರ್ಕಾರ ನಿರ್ಧರಿಸಿದೆ ಎಂದು ಸ್ಪಷ್ಟಪಡಿಸಿದೆ.

ಜನರ ಆಕಾಂಕ್ಷೆ ಈಡೇರಿಸಲು ಮಾತುಕತೆ

ಲಡಾಖ್ ಭಾಗದ ಜನರ ಆಕಾಂಕ್ಷೆಗಳು ಮತ್ತು ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರವು ವಿವಿಧ ಪಾಲುದಾರರು ಹಾಗೂ ಸಮುದಾಯದ ಮುಖಂಡರೊಂದಿಗೆ ಸಕ್ರಿಯವಾಗಿ ಮಾತುಕತೆ ನಡೆಸುತ್ತಿದೆ. ಆದರೆ, ಪ್ರಸ್ತುತ ನಡೆಯುತ್ತಿರುವ ಬಂದ್ ಮತ್ತು ಪ್ರತಿಭಟನೆಗಳು ಸಮಾಜದ ಶಾಂತಿಯುತ ವಾತಾವರಣಕ್ಕೆ ಧಕ್ಕೆ ತರುತ್ತಿವೆ. ಇದರಿಂದಾಗಿ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು, ವ್ಯಾಪಾರಿಗಳು, ಪ್ರವಾಸಿಗರು ಮತ್ತು ಒಟ್ಟಾರೆ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ಎಲ್ಲಾ ಪಾಲುದಾರರೊಂದಿಗೆ ರಚನಾತ್ಮಕ ಮತ್ತು ಅರ್ಥಪೂರ್ಣ ಸಂವಾದವನ್ನು ಸುಗಮಗೊಳಿಸಲು ಲಡಾಖ್‌ನಲ್ಲಿ ಶಾಂತಿ, ಸ್ಥಿರತೆ ಮತ್ತು ಪರಸ್ಪರ ನಂಬಿಕೆಯ ವಾತಾವರಣವನ್ನು ನಿರ್ಮಿಸಲು ಸರ್ಕಾರ ಬದ್ಧವಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

Read More
Next Story