ಎಸ್‌ಐಆರ್‌ ವಿರುದ್ಧದ ಪ್ರತಿಭಟನೆ ನಡುವೆ 42 ನಿವೃತ್ತ ನ್ಯಾಯಮೂರ್ತಿಗಳ ಪತ್ರ
x

ಎಸ್‌ಐಆರ್‌ ವಿರುದ್ಧದ ಪ್ರತಿಭಟನೆ ನಡುವೆ 42 ನಿವೃತ್ತ ನ್ಯಾಯಮೂರ್ತಿಗಳ ಪತ್ರ

ಎಸ್‌ಐಆರ್‌ ಮತ್ತು ಚುನಾವಣಾ ಆಯೋಗದ ವಿರುದ್ಧದ ಆರೋಪಗಳ ನಡುವೆ 42 ನಿವೃತ್ತ ನ್ಯಾಯಮೂರ್ತಿಗಳು ಬಹಿರಂಗ ಪತ್ರ ಬರೆದಿದ್ದಾರೆ. ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆ ಕುಂದಿಸುವ ಪ್ರಯತ್ನಗಳ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.


Click the Play button to hear this message in audio format

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ದೇಶಾದ್ಯಂತ ರಾಜಕೀಯ ಚರ್ಚೆ ಮತ್ತು ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ, 42 ನಿವೃತ್ತ ನ್ಯಾಯಮೂರ್ತಿಗಳು ಬಹಿರಂಗ ಪತ್ರ ಬರೆದು ಚುನಾವಣಾ ಆಯೋಗ ಸೇರಿದಂತೆ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.

ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿಗಳು, ವಿವಿಧ ಹೈಕೋರ್ಟ್‌ಗಳ ಮಾಜಿ ಮುಖ್ಯ ನ್ಯಾಯಮೂರ್ತಿಗಳು ಸೇರಿದಂತೆ 42 ನಿವೃತ್ತ ನ್ಯಾಯಮೂರ್ತಿಗಳು ಸಹಿ ಮಾಡಿರುವ ಪತ್ರದಲ್ಲಿ, ಚುನಾವಣಾ ಆಯೋಗ, ನ್ಯಾಯಾಂಗ ಮತ್ತು ಇತರ ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ನಿರಂತರವಾಗಿ ನಡೆಯುತ್ತಿರುವ ಆರೋಪಗಳ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಲಾಗಿದೆ.

ಸಾಕ್ಷ್ಯಾಧಾರವಿಲ್ಲದೆ ‘ಮತ ಕಳವು’ ಆರೋಪಗಳನ್ನು ಮಾಡುವುದು ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ‘ಕಳ್ಳರು’, ‘ರಾಜಿ ಮಾಡಿಕೊಂಡ ಸಂಸ್ಥೆಗಳು’ ಎಂದು ಪದೇಪದೆ ಬಿಂಬಿಸುವುದು ಜನರ ನಂಬಿಕೆಯನ್ನು ಕುಂದಿಸಬಹುದು ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ. “ಮತಪತ್ರದ ಅರ್ಥ ಕಳೆದುಕೊಂಡಾಗ ಬೀದಿ ಅದರ ಸ್ಥಾನ ಪಡೆಯುತ್ತದೆ” ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ.

ಚುನಾವಣಾ ಆಯೋಗದ ವಿರುದ್ಧದ ಆರೋಪಗಳು ಕೇವಲ ಟೀಕೆಯ ವ್ಯಾಪ್ತಿಯಲ್ಲಿ ಉಳಿದಿಲ್ಲ. ರಾಜಕೀಯ ಹಿತಾಸಕ್ತಿಗಳಿಂದ ಪ್ರೇರಿತವಾದ ವ್ಯವಸ್ಥಿತ ಅಭಿಯಾನದಂತೆ ಕಾಣುತ್ತಿದ್ದು, ಇದರ ಪರಿಣಾಮವಾಗಿ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಸ್ಥಿರತೆಗೆ ಧಕ್ಕೆಯಾಗಬಹುದು ಎಂದು ನಿವೃತ್ತ ನ್ಯಾಯಮೂರ್ತಿಗಳು ಹೇಳಿದ್ದಾರೆ.

ಎಸ್‌ಐಆರ್‌ ಪ್ರಕ್ರಿಯೆಯನ್ನು ಸಮರ್ಥಿಸಿರುವ ಅವರು, ಮತದಾರರ ಪಟ್ಟಿಯನ್ನು ಸ್ವಚ್ಛ ಮತ್ತು ನಿಖರವಾಗಿಡುವ ಉದ್ದೇಶದಿಂದ ಕಾನೂನುಬದ್ಧವಾಗಿ ಕೈಗೊಳ್ಳಲಾಗುವ ಪ್ರಕ್ರಿಯೆ ಇದಾಗಿದೆ ಎಂದು ತಿಳಿಸಿದ್ದಾರೆ.

“ಸಂಸ್ಥೆಗಳ ಟೀಕೆ ಪ್ರಜಾಪ್ರಭುತ್ವದ ಹಕ್ಕು. ಆದರೆ ಸಂಸ್ಥೆಗಳನ್ನು ಹೀಯಾಳಿಸುವುದು ಅಲ್ಲ” ಎಂದು ಪತ್ರದಲ್ಲಿ ಹೇಳಲಾಗಿದೆ. ಚುನಾವಣಾ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ದುರ್ಬಲಗೊಳಿಸುವ ಪ್ರಯತ್ನಗಳು ಅಶಾಂತಿಗೆ ಕಾರಣವಾಗಬಹುದು ಮತ್ತು ಅರಾಜಕ ಶಕ್ತಿಗಳಿಗೆ ಅವಕಾಶ ಕಲ್ಪಿಸಬಹುದು ಎಂದು ಎಚ್ಚರಿಸಲಾಗಿದೆ.

ಕಾಂಗ್ರೆಸ್‌ ಮತ್ತು ‘ಕಾಕ್ರೋಚ್ ಜನತಾ ಪಾರ್ಟಿ’ಯನ್ನು ಹೆಸರಿಸದೆ, ಪತ್ರದಲ್ಲಿ ಪರೋಕ್ಷವಾಗಿ ಟೀಕಿಸಲಾಗಿದೆ. ಚುನಾವಣೆಯಲ್ಲಿ ಸೋತ ಬಳಿಕ ಮಾತ್ರ ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಪ್ರಶ್ನೆ ಎತ್ತಲಾಗುತ್ತದೆ, ಆದರೆ ಅದೇ ಯಂತ್ರಗಳ ಮೂಲಕ ಗೆಲುವು ಸಾಧಿಸಿದಾಗ ಯಾವುದೇ ಆಕ್ಷೇಪ ವ್ಯಕ್ತವಾಗುವುದಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.

ಮಾಜಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಪಂಕಜ್ ಮಿತ್ತಲ್ ಸೇರಿದಂತೆ ಹಲವರು ಪತ್ರಕ್ಕೆ ಸಹಿ ಹಾಕಿದ್ದಾರೆ. ಆದರೆ ಎಸ್‌ಐಆರ್‌ ಕುರಿತು ನ್ಯಾಯಾಂಗ ವಲಯದಲ್ಲೇ ಭಿನ್ನಾಭಿಪ್ರಾಯದ ಧ್ವನಿಗಳೂ ಕೇಳಿಬಂದಿವೆ. ಮಾಜಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ರೋಹಿಂಟನ್ ಫಾಲಿ ನಾರಿಮನ್, ಮತದಾನದ ಹಕ್ಕು ಅಪಾಯದಲ್ಲಿದೆ ಎಂದು ಇತ್ತೀಚೆಗೆ ಕಳವಳ ವ್ಯಕ್ತಪಡಿಸಿದ್ದರು. ಚುನಾವಣಾ ಆಯೋಗವು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದರು.

ಇದೇ ವೇಳೆ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್, ಅಪಾರ ಸಂಖ್ಯೆಯ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಯಾವುದೇ ಪ್ರಕ್ರಿಯೆ ಸಂವಿಧಾನಾತ್ಮಕ ವ್ಯವಸ್ಥೆಯನ್ನೇ ನಿರಾಕರಿಸಿದಂತಾಗುತ್ತದೆ ಎಂದು ಹೇಳಿದ್ದರು. ಹೀಗಾಗಿ, ಎಸ್‌ಐಆರ್‌ ವಿಚಾರ ಇದೀಗ ಕೇವಲ ರಾಜಕೀಯ ಸಂಘರ್ಷಕ್ಕೆ ಸೀಮಿತವಾಗದೆ, ಚುನಾವಣಾ ವ್ಯವಸ್ಥೆಯ ಮೇಲಿನ ನಂಬಿಕೆ, ಮತದಾನದ ಹಕ್ಕು ಮತ್ತು ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆಯ ಕುರಿತ ದೊಡ್ಡ ಚರ್ಚೆಯಾಗಿ ರೂಪುಗೊಂಡಿದೆ.

Read More
Next Story