ಇ20 ಇಂಧನ ವಿವಾದ: ಪೆಟ್ರೋಲಿಯಂ ಸಚಿವಾಲಯಕ್ಕೆ ಬರೆದಿದ್ದ ಪತ್ರವನ್ನು ಹಿಂಪಡೆದ ಸಿಯಾಮ್
x

ಇ20 ಇಂಧನ ವಿವಾದ: ಪೆಟ್ರೋಲಿಯಂ ಸಚಿವಾಲಯಕ್ಕೆ ಬರೆದಿದ್ದ ಪತ್ರವನ್ನು ಹಿಂಪಡೆದ ಸಿಯಾಮ್

ದತ್ತಾಂಶಗಳ ದೃಢೀಕರಣದ ಅಗತ್ಯವಿದೆ ಎಂಬ ಕಾರಣ ನೀಡಿ ಸಿಯಾಮ್ ಸಂಸ್ಥೆ ಪತ್ರ ವಾಪಸ್‌ ಪಡೆದ ನಿರ್ಧಾರ ಕೈಗೊಂಡಿರುವುದು ಆಟೋಮೊಬೈಲ್ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.


Click the Play button to hear this message in audio format

ವಾಹನಗಳ ಎಂಜಿನ್‌ಗೆ ಇ20 ಇಂಧನ ಹಾನಿಯಾಗುತ್ತಿದೆ ಮತ್ತು ಇಂಧನದಲ್ಲಿ ಕಲ್ಮಶವಿದೆ ಎಂದು ಆರೋಪಿಸಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಕ್ಕೆ ಪತ್ರ ಬರೆದಿದ್ದ ವಾಹನ ತಯಾರಕರ ಸಂಘಟನೆ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (ಎಸ್‌ಐಎಎಂ), ಇದೀಗ ಅನಿರೀಕ್ಷಿತವಾಗಿ ಆ ಪತ್ರವನ್ನು ಹಿಂಪಡೆದಿದೆ. ದತ್ತಾಂಶಗಳ ದೃಢೀಕರಣದ ಅಗತ್ಯವಿದೆ ಎಂಬ ಕಾರಣ ನೀಡಿ ಈ ನಿರ್ಧಾರ ಕೈಗೊಂಡಿರುವುದು ಆಟೋಮೊಬೈಲ್ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.

ಕೇಂದ್ರ ಸರ್ಕಾರವು ಇಂಧನ ಸ್ವಾವಲಂಬನೆಯ ದೃಷ್ಟಿಯಿಂದ ಪೆಟ್ರೋಲ್‌ನಲ್ಲಿ ಶೇ.20ರಷ್ಟು ಎಥೆನಾಲ್ ಮಿಶ್ರಣ ಮಾಡುವ ಇ20 ಇಂಧನ ಯೋಜನೆಯನ್ನು ಮಹತ್ವಾಕಾಂಕ್ಷೆಯಿಂದ ಜಾರಿಗೆ ತಂದಿದೆ. ಆದರೆ, ಈ ಇಂಧನವನ್ನು ಬಳಸುತ್ತಿರುವ ವಾಹನಗಳ ಎಂಜಿನ್ ಭಾಗಗಳಲ್ಲಿ ತುಕ್ಕು ಹಿಡಿಯುವುದು, ಅತಿಯಾದ ಸವೆತ ಮತ್ತು ವಾಹನಗಳ ಕಾರ್ಯಕ್ಷಮತೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದ್ದವು. ಈ ಬಗ್ಗೆ ಸಚಿವಾಲಯಕ್ಕೆ ಪತ್ರ ಬರೆದಿದ್ದ ಸಿಯಾಮ್, ಇ20 ಇಂಧನದಲ್ಲಿ ಕ್ಲೋರೈಡ್ ಅಂಶ ಹೆಚ್ಚಾಗಿರುವುದು ಎಂಜಿನ್ ಭಾಗಗಳಿಗೆ ತೀವ್ರ ಹಾನಿ ಮಾಡುತ್ತಿದೆ ಎಂದು ಎಚ್ಚರಿಸಿತ್ತು. ಅಲ್ಲದೆ, ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಇಂಧನದಲ್ಲಿ ತೇವಾಂಶ ಹೆಚ್ಚಾಗಿರುವುದು ವಾಹನಗಳು ನಿಂತಲ್ಲೇ ನಿಲ್ಲುವಂತೆ ಮಾಡುತ್ತಿದೆ ಎಂದು ವರದಿ ಮಾಡಿತ್ತು.

ಸಿಯಾಮ್ ತನ್ನ ಹೇಳಿಕೆಯಲ್ಲಿ, ನಾವು ಬರೆದ ಪತ್ರವು ವಾಹನ ತಯಾರಕರು, ತೈಲ ಮಾರುಕಟ್ಟೆ ಕಂಪನಿಗಳು ಮತ್ತು ತಾಂತ್ರಿಕ ಪರೀಕ್ಷಾ ಏಜೆನ್ಸಿಗಳ ನಡುವೆ ನಡೆಯುವ ದಿನನಿತ್ಯದ ತಾಂತ್ರಿಕ ಚರ್ಚೆಯ ಒಂದು ಭಾಗವಾಗಿತ್ತು. ಆದರೆ, ಆ ಪತ್ರದಲ್ಲಿ ಉಲ್ಲೇಖಿಸಲಾದ ಕೆಲವು ಅಂಕಿ-ಅಂಶಗಳು ದೇಶದ ವಿವಿಧ ಭಾಗಗಳಿಂದ ಸಂಗ್ರಹಿಸಬೇಕಾದ ಸಮಗ್ರ ದತ್ತಾಂಶದ ಮೂಲಕ ದೃಢೀಕರಿಸಲ್ಪಡಬೇಕಾಗಿದೆ. ಸದ್ಯಕ್ಕೆ ಅವುಗಳನ್ನು ದೃಢೀಕರಿಸಲು ಹೆಚ್ಚಿನ ಸಮಯ ಮತ್ತು ಸಮಾಲೋಚನೆಯ ಅಗತ್ಯವಿದೆ. ಹೀಗಾಗಿ, ಮಾಧ್ಯಮಗಳಲ್ಲಿ ವರದಿಯಾದ ಆ ಪತ್ರವನ್ನು ನಾವು ಹಿಂಪಡೆಯುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದೆ.

ತೈಲ ಕಂಪನಿಗಳೊಂದಿಗೆ ಹೊಂದಾಣಿಕೆ ಮತ್ತು ಸ್ಪಷ್ಟನೆ

ಸಿಯಾಮ್ ಪತ್ರವನ್ನು ಹಿಂಪಡೆದ ಬೆನ್ನಲ್ಲೇ, ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಇಂಧನ ಗುಣಮಟ್ಟದ ಬಗ್ಗೆ ಭರವಸೆ ನೀಡಿವೆ. ಪೆಟ್ರೋಲಿಯಂ ಸಚಿವಾಲಯವು ಈಗಾಗಲೇ ಎಥೆನಾಲ್ ಮಿಶ್ರಣ ಮಾಡುವಾಗ ಕ್ಲೋರೈಡ್ ಮತ್ತು ಸಲ್ಫರ್ ಪ್ರಮಾಣವನ್ನು 3 ಪಿಪಿಎಂ ಮಿತಿಯಲ್ಲಿಡಲು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಇದು ಆಟೋಮೊಬೈಲ್ ಉದ್ಯಮದ ಅವಶ್ಯಕತೆಗಳನ್ನು ಪೂರೈಸುತ್ತದೆ ಎಂದು ಸಿಯಾಮ್ ಒಪ್ಪಿಕೊಂಡಿದೆ. ಅಲ್ಲದೆ, ದೇಶದಾದ್ಯಂತ ಇರುವ ಸುಮಾರು 87 ಸಾವಿರಕ್ಕೂ ಹೆಚ್ಚು ಪೆಟ್ರೋಲ್ ಬಂಕ್‌ಗಳಲ್ಲಿ ದಿನಕ್ಕೆ 8ರಿಂದ 12 ಬಾರಿ ನೀರು ಸೇರ್ಪಡೆ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಮಳೆಯಾದ ಪ್ರತಿ ಬಾರಿಯೂ ಇಂಧನ ದಾಸ್ತಾನು ಟ್ಯಾಂಕ್‌ಗಳನ್ನು ಪರಿಶೀಲಿಸುವ ವ್ಯವಸ್ಥೆಯನ್ನು ತೈಲ ಕಂಪನಿಗಳು ಬಲಪಡಿಸಿವೆ ಎಂದು ಸಿಯಾಮ್ ತಿಳಿಸಿದೆ.

ಗ್ರಾಹಕರಿಗೆ ಸಿಯಾಮ್‌ನ ಭರವಸೆ

ಸರ್ಕಾರದ ಇ20 ಇಂಧನ ನೀತಿಯು ದೇಶದ ಇಂಧನ ಭದ್ರತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ ಎಂದು ಸಿಯಾಮ್ ಪುನರುಚ್ಚರಿಸಿದೆ. ವರದಿಯಾದ ವಿಷಯಗಳ ಬಗ್ಗೆ ಗ್ರಾಹಕರು ಯಾವುದೇ ಆತಂಕ ಪಡಬೇಕಿಲ್ಲ. ಕಳೆದ ಹಲವು ದಶಕಗಳಿಂದ ವಾಹನ ಉದ್ಯಮ ಮತ್ತು ತೈಲ ಕಂಪನಿಗಳ ನಡುವೆ ಇಂತಹ ಸಣ್ಣಪುಟ್ಟ ತಾಂತ್ರಿಕ ವಿಚಾರಗಳು ಚರ್ಚೆಯಾಗುತ್ತಲೇ ಇವೆ ಮತ್ತು ಅವನ್ನು ಕಾಲಕಾಲಕ್ಕೆ ಸರಿಪಡಿಸಲಾಗುತ್ತಿದೆ ಎಂದು ಸಿಯಾಮ್ ಭರವಸೆ ನೀಡಿದೆ.

ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದ ಸಿಯಾಮ್‌ನ ನಡೆ

ಸಿಯಾಮ್ ಮೊದಲ ಬಾರಿಗೆ ಇಷ್ಟು ಗಂಭೀರವಾದ ಪತ್ರ ಬರೆದಿದ್ದು, ನಂತರ ಅದನ್ನು ಹಿಂಪಡೆದಿದ್ದು ನೋಡಿದರೆ, ತೈಲ ಕಂಪನಿಗಳು ಅಥವಾ ಸರ್ಕಾರದ ಕಡೆಯಿಂದ ಏನಾದರೂ ಒತ್ತಡವಿದೆಯೇ ಎಂಬ ಅನುಮಾನ ಉಂಟಾಗುತ್ತದೆ. ಇ20 ಇಂಧನವು ಹಳೆಯ ಎಂಜಿನ್‌ಗಳ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಬಗ್ಗೆ ಇಂದಿಗೂ ಗ್ರಾಹಕರಲ್ಲಿ ಗೊಂದಲವಿದೆ. ಸಿಯಾಮ್‌ನ ಪತ್ರವು ಈ ಗೊಂದಲವನ್ನು ಸಾರ್ವಜನಿಕಗೊಳಿಸಿತ್ತು, ಆದರೆ ಈಗ ಅದು ತಾಂತ್ರಿಕ ಚರ್ಚೆ ಎಂದು ಹೇಳಿ ವಿಷಯವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ. ಎಥೆನಾಲ್ ಮಿಶ್ರಣವು ಕೃಷಿ ಆಧಾರಿತ ಆರ್ಥಿಕತೆಗೆ ವರದಾನವಾಗಿದ್ದರೂ, ವಾಹನಗಳ ಎಂಜಿನ್ ಬಾಳಿಕೆ ಬಗ್ಗೆ ಉದ್ಯಮ ಮತ್ತು ಸರ್ಕಾರ ಒಮ್ಮತಕ್ಕೆ ಬರುವುದು ಅನಿವಾರ್ಯ.

Read More
Next Story