ಮೀನಾಕ್ಷಿ ನಟರಾಜನ್ ರಾಜ್ಯಸಭಾ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
x

ಮೀನಾಕ್ಷಿ ನಟರಾಜನ್ ರಾಜ್ಯಸಭಾ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಮೀನಾಕ್ಷಿ ನಟರಾಜನ್ ರಾಜ್ಯಸಭಾ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ರಾಜ್ಯಸಭಾ ನಾಮಪತ್ರ ತಿರಸ್ಕಾರ ಪ್ರಶ್ನಿಸಿ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಚುನಾವಣಾ ಆಯೋಗವನ್ನು ಸಂಪರ್ಕಿಸಲು ಸೂಚಿಸಿದೆ.


Click the Play button to hear this message in audio format

ರಾಜ್ಯಸಭಾ ಚುನಾವಣೆಗೆ ಸಲ್ಲಿಕೆಯಾಗಿದ್ದ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕಾರಗೊಂಡಿರುವ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಚುನಾವಣಾ ಅಧಿಕಾರಿಯೊಬ್ಬರು ಅಭ್ಯರ್ಥಿಯ ನಾಮಪತ್ರವನ್ನು ತಿರಸ್ಕರಿಸಿದ ನಂತರ, ಅದಕ್ಕೆ ಸಂಬಂಧಿಸಿದಂತೆ ಕಾನೂನು ಪರಿಹಾರಕ್ಕಾಗಿ ಚುನಾವಣಾ ಆಯೋಗವನ್ನು ಸಂಪರ್ಕಿಸುವುದೊಂದೇ ಏಕೈಕ ಮಾರ್ಗವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಮಧ್ಯಪ್ರದೇಶದಿಂದ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಲು ಮೀನಾಕ್ಷಿ ನಟರಾಜನ್ ಅವರು ಸಲ್ಲಿಸಿದ್ದ ನಾಮಪತ್ರವನ್ನು ಚುನಾವಣಾ ಅಧಿಕಾರಿ ಅರವಿಂದ್ ಶರ್ಮಾ ಅವರು ತಿರಸ್ಕರಿಸಿದ್ದರು. ನಟರಾಜನ್ ಅವರು ತಮ್ಮ ನಾಮಪತ್ರದ ಜೊತೆ ಸಲ್ಲಿಸಿದ ಅಫಿಡವಿಟ್‌ನಲ್ಲಿ (ಫಾರ್ಮ್ 26) ತೆಲಂಗಾಣದಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣವೊಂದರ ಮಾಹಿತಿಯನ್ನು ಮರೆಮಾಚಿದ್ದಾರೆ ಎಂದು ಆಡಳಿತಾರೂಢ ಬಿಜೆಪಿ ಅಭ್ಯರ್ಥಿ ಮಹೇಶ್ ಕೇಾವತ್ ದೂರು ನೀಡಿದ್ದರು. ದಾಖಲೆಗಳ ಪರಿಶೀಲನೆ ನಡೆಸಿದ ಚುನಾವಣಾ ಅಧಿಕಾರಿಯು ಅಫಿಡವಿಟ್ ಅಪೂರ್ಣವಾಗಿದೆ ಎಂದು ತಿಳಿಸಿ ನಾಮಪತ್ರವನ್ನು ತಿರಸ್ಕರಿಸಿದ್ದರು.

ಚುನಾವಣಾ ಅಧಿಕಾರಿಯ ಈ ಕ್ರಮವನ್ನು ಪ್ರಶ್ನಿಸಿ ಮೀನಾಕ್ಷಿ ನಟರಾಜನ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ನಟರಾಜನ್ ಅವರ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ಕನಿಷ್ಠ ಎರಡು ವರ್ಷಗಳ ಶಿಕ್ಷೆ ವಿಧಿಸಬಹುದಾದ ಕ್ರಿಮಿನಲ್ ಪ್ರಕರಣಗಳಿದ್ದರೆ ಮಾತ್ರ ಅಭ್ಯರ್ಥಿಗಳು ಅದನ್ನು ಬಹಿರಂಗಪಡಿಸಬೇಕಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಕೇವಲ ಸಮನ್ಸ್ ಮಾತ್ರ ಜಾರಿಯಾಗಿದೆ, ಆದರೂ ಚುನಾವಣಾ ಅಧಿಕಾರಿಯು ತಪ್ಪು ನಿರ್ಧಾರ ಕೈಗೊಂಡು ನಾಮಪತ್ರವನ್ನು ಅಸಿಂಧುಗೊಳಿಸಿದ್ದಾರೆ ಎಂದು ಕೋರ್ಟ್‌ ಗಮನಕ್ಕೆ ತಂದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಅತುಲ್ ಎಸ್. ಚಂದೂರ್ಕರ್ ಅವರನ್ನೊಳಗೊಂಡ ನ್ಯಾಯಪೀಠವು, ಚುನಾವಣಾ ಅಧಿಕಾರಿಯ ನಿರ್ಧಾರ ಎಷ್ಟೇ ದೋಷಪೂರಿತವಾಗಿದ್ದರೂ, ನಾಮಪತ್ರ ತಿರಸ್ಕೃತಗೊಂಡ ಹಂತದಲ್ಲಿ ನ್ಯಾಯಾಲಯಗಳು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ತಿಳಿಸಿತು. ಇಂತಹ ಹಂತದಲ್ಲಿ ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಮಾಡಿರುವ ಯಾವುದಾದರೂ ಹಳೆಯ ತೀರ್ಪುಗಳಿವೆಯೇ ಎಂದು ಪ್ರಶ್ನಿಸಿದ ನ್ಯಾಯಪೀಠವು, ಈ ಚುನಾವಣಾ ವಿವಾದದ ಕುರಿತು ಸೂಕ್ತ ವೇದಿಕೆಯಲ್ಲಿ ಅಥವಾ ಚುನಾವಣಾ ಆಯೋಗದ ಮುಂದೆ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿ ಅರ್ಜಿಯನ್ನು ವಿಲೇವಾರಿ ಮಾಡಿದೆ.

Read More
Next Story