
ಉಪಚುನಾವಣೆ ಗೆಲ್ಲಲು ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್: ಜಮೀರ್-ಸತೀಶ್ ಜಾರಕಿಹೊಳಿಗೆ ಹೈವೋಲ್ಟೇಜ್ ಟಾಸ್ಕ್!
Karnataka By polls| ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗಾಗಿ ಸಿಎಂ ಸಿದ್ದರಾಮಯ್ಯ ಸಚಿವರಾದ ಜಮೀರ್ ಅಹಮದ್ ಮತ್ತು ಸತೀಶ್ ಜಾರಕಿಹೊಳಿಗೆ ಮಹತ್ವದ ಹೊಣೆ ನೀಡಿದ್ದಾರೆ.
ಮುಂಬರುವ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆಗಳು ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆಯ ಕಣವಾಗಿವೆ. ಇಲ್ಲಿನ ಸವಾಲುಗಳನ್ನು ಎದುರಿಸಲು ಸಿಎಂ ತಮ್ಮ ಆಪ್ತ ಸಚಿವರನ್ನು ಕಣಕ್ಕಿಳಿಸಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ: 'ಒಳಮೀಸಲಾತಿ' ಗೊಂದಲ ನಿವಾರಣೆ
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ದಲಿತ ಸಮುದಾಯದಲ್ಲಿ ಪ್ರಬಲ ಹಿಡಿತ ಹೊಂದಿರುವ ನಾಯಕರಾಗಿದ್ದು, ಇವರಿಗೆ ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಸಮುದಾಯದಲ್ಲಿ ನಿರ್ಮಾಣವಾಗಿರುವ ತಪ್ಪು ಕಲ್ಪನೆ ಮತ್ತು ಗೊಂದಲಗಳನ್ನು ನಿವಾರಿಸುವ ಪ್ರಮುಖ ಜವಾಬ್ದಾರಿ ನೀಡಲಾಗಿದೆ. ಈ ಒಳಮೀಸಲಾತಿ ವಿಚಾರವಾಗಿ ಸೃಷ್ಟಿಯಾಗಿರುವ ಗೊಂದಲಗಳು ಸರ್ಕಾರದ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದ್ದು, ಇದು ಮುಂಬರುವ ಉಪಚುನಾವಣೆಯ ಮತದಾನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತೆ ನೋಡಿಕೊಳ್ಳುವುದು ಇವರ ಮುಖ್ಯ ಕಾರ್ಯತಂತ್ರವಾಗಿದೆ.
ಈ ನಿಟ್ಟಿನಲ್ಲಿ ದಾವಣಗೆರೆ ಮತ್ತು ಬಾಗಲಕೋಟೆ ಎರಡೂ ಕ್ಷೇತ್ರಗಳಲ್ಲಿ ದಲಿತ ಸಮುದಾಯದ ಮುಖಂಡರನ್ನು ಖುದ್ದಾಗಿ ಭೇಟಿಯಾಗಲಿರುವ ಸತೀಶ್ ಜಾರಕಿಹೊಳಿ, ಸರ್ಕಾರದ ನಿಲುವು ಮತ್ತು ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡುವ ಮೂಲಕ ಅಸಮಾಧಾನಿತರನ್ನು ಸಮಾಧಾನಪಡಿಸಿ ಸಮುದಾಯವು ಕಾಂಗ್ರೆಸ್ ಪರವಾಗಿ ಮತ ಚಲಾಯಿಸುವಂತೆ ಮಾಡುವ ಹೊಣೆ ಹೊತ್ತಿದ್ದಾರೆ.
ಸಚಿವ ಜಮೀರ್‌ಗೆ ದಾವಣಗೆರೆ ಜವಾಬ್ದಾರಿ
ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ವಿಶೇಷವಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದ ಜವಾಬ್ದಾರಿ ನೀಡಲಾಗಿದೆ. ಈ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ನಾಯಕರಿಗೆ ಟಿಕೆಟ್ ಸಿಗದ ಕಾರಣ ಸಮುದಾಯವು ತೀವ್ರ ಅಸಮಾಧಾನಗೊಂಡಿದೆ. ಮುಸ್ಲಿಂ ಮತದಾರರು ಚುನಾವಣೆಯಲ್ಲಿ ತಟಸ್ಥರಾದರೆ (Neutral) ಕಾಂಗ್ರೆಸ್‌ಗೆ ಸೋಲು ಕಟ್ಟಿಬುತ್ತಿ. ಮುಸ್ಲಿಂ ಮತದಾರರು ಸಕ್ರಿಯವಾಗಿ ಕಾಂಗ್ರೆಸ್ ಪರವಾಗಿರುವಂತೆ ಮಾಡುವುದು. ದಾವಣಗೆರೆಯಲ್ಲೇ ಬೀಡುಬಿಟ್ಟು ಸ್ಥಳೀಯ ಮುಸ್ಲಿಂ ನಾಯಕರನ್ನು ಒಗ್ಗೂಡಿಸುವುದು. ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗನ (ಕಾಂಗ್ರೆಸ್ ಅಭ್ಯರ್ಥಿ) ಗೆಲುವಿಗೆ ಸಮುದಾಯದ ಬೆಂಬಲ ಕ್ರೋಢೀಕರಿಸುವುದು.
ಸಿಎಂ ಸಿದ್ದರಾಮಯ್ಯ ಈ ಇಬ್ಬರನ್ನೇ ಆರಿಸಿದ್ದೇಕೆ?
ಮುಖ್ಯಮಂತ್ರಿಗಳು ಈ ಇಬ್ಬರು ಸಚಿವರನ್ನು ಆರಿಸಲು ಮೂರು ಪ್ರಮುಖ ಕಾರಣಗಳಿವೆ:
- ಸಮುದಾಯದ ಮೇಲಿನ ಹಿಡಿತ: ಸತೀಶ್ ಜಾರಕಿಹೊಳಿ ದಲಿತರ ಹಾಗೂ ಜಮೀರ್ ಅಹಮದ್ ಮುಸ್ಲಿಮರ ಪ್ರಶ್ನಾತೀತ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.
- ಸಿದ್ದರಾಮಯ್ಯ ಆಪ್ತ ವಲಯ: ಇಬ್ಬರೂ ಸಿಎಂ ಅವರ ಅತ್ಯಂತ ನಿಕಟವರ್ತಿಗಳಾದ ಕಾರಣ, ಸಿಎಂ ಅವರ ಸಂದೇಶವನ್ನು ಸಮುದಾಯಕ್ಕೆ ತಲುಪಿಸಲು ಇವರು ಸಮರ್ಥರು.
- ಅಹಿಂದ ಮತ ಬ್ಯಾಂಕ್: ಉಪಚುನಾವಣೆಯಲ್ಲಿ 'ಅಹಿಂದ' (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ಮತಗಳು ಚದುರಿ ಹೋಗದಂತೆ ತಡೆಯುವುದು ಸಿಎಂ ಅವರ ಮೂಲ ಉದ್ದೇಶವಾಗಿದೆ.

