
ಸಂಘದ ನಿರ್ಧಾರಕ್ಕೆ ತಲೆಬಾಗಿ ಹುದ್ದೆಯಿಂದ ಕೆಳಗಿಳಿಯಲು ಸಿದ್ಧ: ಮೋಹನ್ ಭಾಗವತ್ ಮಹತ್ವದ ಹೇಳಿಕೆ
ಆರ್‌ಎಸ್‌ಎಸ್ ಮುಖ್ಯಸ್ಥರ ಆಯ್ಕೆಗೆ ಜಾತಿ ಮಾನದಂಡವಲ್ಲ, ಹಿಂದೂ ಎನ್ನುವುದೇ ಅರ್ಹತೆ ಎಂದು ಮೋಹನ್ ಭಾಗವತ್ ಸ್ಪಷ್ಟಪಡಿಸಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಹುದ್ದೆಗೆ ಯಾವುದೇ ಚುನಾವಣೆಯಿಲ್ಲ, ಬದಲಾಗಿ ಪ್ರಾದೇಶಿಕ ಮತ್ತು ವಿಭಾಗೀಯ ಮುಖ್ಯಸ್ಥರು ಈ ಆಯ್ಕೆಯನ್ನು ಮಾಡುತ್ತಾರೆ. ಸಂಘವು ಯಾವಾಗ ನಿರ್ದೇಶಿಸುತ್ತದೆಯೋ ಆ ಕ್ಷಣವೇ ನಾನು ಹುದ್ದೆಯಿಂದ ಕೆಳಗಿಳಿಯಲು ಸಿದ್ಧನಿದ್ದೇನೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸ್ಪಷ್ಟಪಡಿಸಿದ್ದಾರೆ.
ಆದರೆ, 75 ವರ್ಷ ವಯಸ್ಸಾಗಿದ್ದರೂ ಸಂಘವು ತಮ್ಮನ್ನು ಮುಂದುವರಿಯುವಂತೆ ಸೂಚಿಸಿರುವುದರಿಂದ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಮುಂಬೈನ ವರ್ಲಿಯಲ್ಲಿರುವ ನೆಹರು ಕೇಂದ್ರದಲ್ಲಿ ನಡೆದ ಆರ್‌ಎಸ್‌ಎಸ್ ಶತಮಾನೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂಘದ ಆಂತರಿಕ ಕಾರ್ಯವೈಖರಿ, ಜಾತಿ ವ್ಯವಸ್ಥೆ, ಮತ್ತು ಬಾಂಗ್ಲಾದೇಶದ ಹಿಂದೂಗಳ ಸ್ಥಿತಿಗತಿಗಳ ಕುರಿತು ವಿಸ್ತೃತವಾಗಿ ಮಾತನಾಡಿದ್ದಾರೆ.
ಸರಸಂಘಚಾಲಕ ಹುದ್ದೆಗೆ ಜಾತಿ ಮಾನದಂಡವಲ್ಲ
ಆರ್‌ಎಸ್‌ಎಸ್ ಮುಖ್ಯಸ್ಥರ ಹುದ್ದೆಗೆ ಬ್ರಾಹ್ಮಣರೇ ಆಗಬೇಕೆಂಬ ನಿಯಮವಿಲ್ಲ ಎಂದು ಭಾಗವತ್ ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ. ಸಂಘದ ಮುಖ್ಯಸ್ಥರಾಗಲು ಇರುವ ಏಕೈಕ ಮಾನದಂಡವೆಂದರೆ ಅವರು 'ಹಿಂದೂ' ಆಗಿರಬೇಕು ಮತ್ತು 'ಅತ್ಯುತ್ತಮ ಅಭ್ಯರ್ಥಿ' ಆಗಿರಬೇಕು. ಕ್ಷತ್ರಿಯ, ವೈಶ್ಯ, ಶೂದ್ರ ಅಥವಾ ಬ್ರಾಹ್ಮಣ ಎಂಬ ಭೇದಭಾವವಿಲ್ಲದೆ, ಯಾರು ಸಂಘಕ್ಕಾಗಿ ಶ್ರದ್ಧೆಯಿಂದ ದುಡಿಯುತ್ತಾರೋ ಮತ್ತು ಆ ಜವಾಬ್ದಾರಿಯನ್ನು ಹೊರಲು ಸಮರ್ಥರಾಗಿರುತ್ತಾರೋ ಅವರೇ ಈ ಸ್ಥಾನಕ್ಕೆ ಅರ್ಹರು. ಪರಿಶಿಷ್ಟ ಜಾತಿ (ಎಸ್‌ಸಿ) ಅಥವಾ ಪರಿಶಿಷ್ಟ ಪಂಗಡದ (ಎಸ್‌ಟಿ) ವ್ಯಕ್ತಿಯೂ ಸರಸಂಘಚಾಲಕರಾಗಲು ಸಾಧ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಸಂಘದ ಆರಂಭದ ದಿನಗಳಲ್ಲಿ ಬ್ರಾಹ್ಮಣ ಸಮುದಾಯದ ಪ್ರಾಬಲ್ಯವಿದ್ದ ಪ್ರದೇಶಗಳಲ್ಲಿ ಕೆಲಸ ಪ್ರಾರಂಭವಾಗಿದ್ದರಿಂದ ಸಂಸ್ಥಾಪಕರು ಬ್ರಾಹ್ಮಣರಾಗಿದ್ದರು, ಆದರೆ ಇಂದು ಸಂಘದಲ್ಲಿ ಎಲ್ಲಾ ವರ್ಗದ ಪ್ರಾತಿನಿಧ್ಯವಿದೆ ಎಂದು ಅವರು ವಿವರಿಸಿದ್ದಾರೆ.
ಬಾಂಗ್ಲಾ ಹಿಂದೂಗಳಿಗೆ ಜಾಗತಿಕ ಬೆಂಬಲದ ಭರವಸೆ
ನೆರೆಹೊರೆಯ ಬಾಂಗ್ಲಾದೇಶದಲ್ಲಿನ ಪ್ರಕ್ಷುಬ್ಧ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಭಾಗವತ್, ಅಲ್ಲಿನ ಸುಮಾರು ೧.೨೫ ಕೋಟಿ ಹಿಂದೂಗಳಿಗೆ ಧೈರ್ಯ ತುಂಬಿದರು. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ, ವಿಶೇಷವಾಗಿ ಹಿಂದೂಗಳ ಮೇಲಿನ ದಾಳಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, "ಒಂದು ವೇಳೆ ಅಲ್ಲಿನ ಹಿಂದೂಗಳು ತಮ್ಮ ಹಕ್ಕುಗಳಿಗಾಗಿ ಅಲ್ಲೇ ಉಳಿದು ಹೋರಾಡಲು ನಿರ್ಧರಿಸಿದರೆ, ಪ್ರಪಂಚದಾದ್ಯಂತ ಇರುವ ಸಮಸ್ತ ಹಿಂದೂ ಸಮಾಜವು ಅವರಿಗೆ ಬೆನ್ನೆಲುಬಾಗಿ ನಿಲ್ಲಲಿದೆ," ಎಂದು ಅವರು ಭರವಸೆ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶದಲ್ಲಿ ಮೂಲಭೂತವಾದಿಗಳಿಂದ ಹಿಂದೂ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ನುಸುಳುಕೋರರ ಪತ್ತೆ ಮತ್ತು ಗಡಿಪಾರು: ನಾಗರಿಕರಿಗೆ ಕರೆ
ಭಾರತದ ಜನಸಂಖ್ಯಾ ಸ್ವರೂಪ ಬದಲಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಭಾಗವತ್, ಅಕ್ರಮ ವಲಸೆ ಮತ್ತು ಹೆಚ್ಚುತ್ತಿರುವ ಜನನ ಪ್ರಮಾಣವೇ ಇದಕ್ಕೆ ಕಾರಣ ಎಂದರು. ಹಿಂದಿನ ಸರ್ಕಾರಗಳು ಈ ವಿಷಯದಲ್ಲಿ ವಿಫಲವಾಗಿದ್ದವು ಎಂದು ಟೀಕಿಸಿದ ಅವರು, ಪ್ರಸ್ತುತ ಸರ್ಕಾರವು ನುಸುಳುಕೋರರನ್ನು ಪತ್ತೆಹಚ್ಚಿ ಗಡಿಪಾರು ಮಾಡುವ ಕೆಲಸವನ್ನು ನಿಧಾನವಾಗಿಯಾದರೂ ಪ್ರಾರಂಭಿಸಿದೆ ಎಂದು ಹೇಳಿದ್ದಾರೆ.
ನಾಗರಿಕರು ಸಹ ಈ ವಿಷಯದಲ್ಲಿ ಜಾಗರೂಕರಾಗಿರಬೇಕು. ಅಕ್ರಮವಾಗಿ ನೆಲೆಸಿರುವ ವಿದೇಶಿಯರನ್ನು ಅವರ ಭಾಷೆ ಮತ್ತು ವರ್ತನೆಯಿಂದ ಗುರುತಿಸಿ, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಅವರು ಕರೆ ನೀಡಿದರು. ಅಲ್ಲದೆ, ಅನುಮಾನಾಸ್ಪದ ವ್ಯಕ್ತಿಗಳಿಗೆ ಉದ್ಯೋಗ ನೀಡುವುದನ್ನು ತಪ್ಪಿಸಬೇಕು ಎಂದು ಸಲಹೆ ನೀಡಿದರು. ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಮತ್ತು ಜನಗಣತಿ ಪ್ರಕ್ರಿಯೆಗಳ ಮೂಲಕ ಪೌರತ್ವ ಇಲ್ಲದವರನ್ನು ಗುರುತಿಸಿ ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಪ್ರಚಾರದ ಹಂಗಿಲ್ಲದ ಸಂಘದ ಕಾರ್ಯ
ಸಂಘದ ಕಾರ್ಯವೈಖರಿಯ ಬಗ್ಗೆ ಮಾತನಾಡುತ್ತಾ, ಆರ್‌ಎಸ್‌ಎಸ್ ಪ್ರಚಾರಕ್ಕಾಗಿ ಕೆಲಸ ಮಾಡುವುದಿಲ್ಲ, ಬದಲಾಗಿ ಸಂಸ್ಕಾರ ನೀಡುವ ಕೆಲಸ ಮಾಡುತ್ತದೆ ಎಂದು ಭಾಗವತ್ ಹೇಳಿದರು. ಅತಿಯಾದ ಪ್ರಚಾರವು ಅಹಂಕಾರಕ್ಕೆ ದಾರಿಯಾಗುತ್ತದೆ, ಆದ್ದರಿಂದ ಮಳೆ ಸುರಿದಂತೆ ಪ್ರಚಾರವು ಅಗತ್ಯವಿದ್ದಾಗ ಮತ್ತು ಮಿತವಾಗಿರಬೇಕು ಎಂಬುದು ಸಂಘದ ನಿಲುವು. ಮುಸ್ಲಿಂ ಸಮುದಾಯದ ಪ್ರದೇಶಗಳಲ್ಲಿ ಕೆಲಸ ಮಾಡುವಾಗ ಎದುರಾಗುವ ಸವಾಲುಗಳ ಬಗ್ಗೆ ಉತ್ತರಿಸಿದ ಅವರು, ಸಂಘವು ಸಂಘರ್ಷವನ್ನು ಬಯಸುವುದಿಲ್ಲ. ಯಾರಾದರೂ ನಿಂದಿಸಿದರೂ ಅದಕ್ಕೆ ಪ್ರತಿಕ್ರಿಯಿಸದೆ ಮೌನವಾಗಿ ಕೆಲಸ ಮಾಡುವುದರಿಂದ ಸಂಘರ್ಷ ಕಡಿಮೆಯಾಗುತ್ತದೆ ಮತ್ತು ಸಾಮರಸ್ಯ ಮೂಡಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

