ಬಂಗಾಳದಲ್ಲಿ ರಾಷ್ಟ್ರಪತಿ ಮುರ್ಮು ಹೇಳಿಕೆ ವಿವಾದ: ಟಿಎಂಸಿ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
x

ಬಂಗಾಳದಲ್ಲಿ ರಾಷ್ಟ್ರಪತಿ ಮುರ್ಮು ಹೇಳಿಕೆ ವಿವಾದ: ಟಿಎಂಸಿ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಪಶ್ಚಿಮ ಬಂಗಾಳದ ಉತ್ತರ ಭಾಗಕ್ಕೆ ಶನಿವಾರ ಭೇಟಿ ನೀಡಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾಡಿದ ಮಾರ್ಮಿಕ ಹೇಳಿಕೆಗಳು ಭಾರಿ ರಾಜಕೀಯ ವಿವಾದಕ್ಕೆ ಕಾರಣವಾಗಿವೆ.


Click the Play button to hear this message in audio format

ಪಶ್ಚಿಮ ಬಂಗಾಳದ ಬುಡಕಟ್ಟು ಜನಾಂಗದವರಿಗೆ ಸೂಕ್ತ ಸರ್ಕಾರಿ ಸೌಲಭ್ಯಗಳು ಸಿಗುತ್ತಿವೆಯೇ ಎಂದು ಪ್ರಶ್ನಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು, ತಮ್ಮ ಭೇಟಿಯ ವೇಳೆ ಮಾಡಿದ್ದ ವ್ಯವಸ್ಥೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಿಎಂ ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಟಿಎಂಸಿ ಸರ್ಕಾರದ ವಿರುದ್ಧ ತೀವ್ರ ಕಿಡಿಕಾರಿದ್ದಾರೆ.

ಪಶ್ಚಿಮ ಬಂಗಾಳದ ಉತ್ತರ ಭಾಗಕ್ಕೆ ಶನಿವಾರ ಭೇಟಿ ನೀಡಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾಡಿದ ಮಾರ್ಮಿಕ ಹೇಳಿಕೆಗಳು ಭಾರಿ ರಾಜಕೀಯ ವಿವಾದಕ್ಕೆ ಕಾರಣವಾಗಿವೆ. ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದ ಬುಡಕಟ್ಟು ಮತದಾರರ ಮೇಲಿನ ರಾಜಕೀಯ ಮೇಲಾಟವನ್ನು ಈ ಘಟನೆ ಮತ್ತಷ್ಟು ತೀವ್ರಗೊಳಿಸಿದೆ.

ಸಿಲಿಗುರಿ ಬಳಿ ನಡೆದ 'ಅಂತಾರಾಷ್ಟ್ರೀಯ ಸಂತಾಲ್ ಸಮ್ಮೇಳನ'ದಲ್ಲಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ನಾನೂ ಕೂಡ ಬಂಗಾಳದ ಮಗಳು, ಆದರೂ ನನ್ನನ್ನು ಬಂಗಾಳಕ್ಕೆ ಬರಲು ಬಿಡುತ್ತಿಲ್ಲ. ಮಮತಾ ದೀದಿಗೆ ನನ್ನ ಮೇಲೆ ಏಕಿಷ್ಟು ಕೋಪವಿದೆಯೋ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಶಿಷ್ಟಾಚಾರದ ಪ್ರಕಾರ ರಾಷ್ಟ್ರಪತಿಯವರನ್ನು ಸ್ವಾಗತಿಸಲು ಮುಖ್ಯಮಂತ್ರಿ ಅಥವಾ ರಾಜ್ಯ ಸರ್ಕಾರದ ಹಿರಿಯ ಸಚಿವರು ಇರಬೇಕಿತ್ತು. ಆದರೆ, ವಿಮಾನ ನಿಲ್ದಾಣದಲ್ಲಿ ಕೇವಲ ಸಿಲಿಗುರಿ ಮೇಯರ್ ಗೌತಮ್ ದೇವ್ ಮಾತ್ರ ಹಾಜರಿದ್ದರು. ಭದ್ರತೆಯ ಕಾರಣ ನೀಡಿ ಮೂಲ ಕಾರ್ಯಕ್ರಮದ ಸ್ಥಳವಾದ ಬಿಧಾನ್‌ನಗರದಿಂದ ಗೋಸೈನ್‌ಪುರಕ್ಕೆ ಕಾರ್ಯಕ್ರಮವನ್ನು ಸ್ಥಳಾಂತರಿಸಲಾಗಿತ್ತು. ಅಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ಸೇರಿದ್ದು ರಾಷ್ಟ್ರಪತಿಯವರ ಅಸಮಾಧಾನಕ್ಕೆ ಕಾರಣವಾಗಿತ್ತು. ಸೂಕ್ತ ಸ್ಥಳಾವಕಾಶವಿದ್ದ ಬಿಧಾನ್‌ನಗರದಲ್ಲಿ ಕಾರ್ಯಕ್ರಮ ನಡೆಸಿದ್ದರೆ ಹೆಚ್ಚಿನ ಜನ ಸೇರುತ್ತಿದ್ದರು ಎಂದು ಅವರು ಪರೋಕ್ಷವಾಗಿ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.

ಬಿಜೆಪಿ ತಂತ್ರಕ್ಕೆ ರಾಷ್ಟ್ರಪತಿ ಬಲಿಪಶು: ಮಮತಾ ತಿರುಗೇಟು

ರಾಷ್ಟ್ರಪತಿಯವರ ಈ ಹೇಳಿಕೆಗಳಿಗೆ ಕೋಲ್ಕತ್ತಾದಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿ ರಾಷ್ಟ್ರಪತಿಯವರನ್ನು ಬಳಸಿಕೊಂಡು ರಾಜಕೀಯ ಅಜೆಂಡಾ ಜಾರಿಗೊಳಿಸುತ್ತಿದೆ ಎಂದು ಆರೋಪಿಸಿದರು. ರಾಷ್ಟ್ರಪತಿಯವರು ಬಿಜೆಪಿಯ ನೀತಿಗಳಿಗೆ ಬಲಿಯಾಗಿದ್ದಾರೆ ಹಾಗೂ ಬಿಜೆಪಿಯ ಸಲಹೆಯ ಮೇರೆಗೇ ಮಾತನಾಡಿದ್ದಾರೆ ಎಂದು ಅವರು ದೂರಿದರು. ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಬಿಜೆಪಿ ವೇದಿಕೆ ಸಿದ್ಧಪಡಿಸುತ್ತಿದೆ ಎಂದು ಆರೋಪಿಸಿದ ಅವರು, ಮಣಿಪುರದ ಜನಾಂಗೀಯ ಹಿಂಸಾಚಾರ ಹಾಗೂ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬುಡಕಟ್ಟು ಜನಾಂಗದ ಮೇಲಾಗುತ್ತಿರುವ ದೌರ್ಜನ್ಯಗಳ ಬಗ್ಗೆ ರಾಷ್ಟ್ರಪತಿಯವರು ಏಕೆ ಮೌನ ವಹಿಸಿದ್ದಾರೆ ಎಂದು ಮಮತಾ ಪ್ರಶ್ನಿಸಿದರು. ಇದೇ ವೇಳೆ ರಾಜ್ಯದ ಅರಣ್ಯ ಸಚಿವೆ ಬೀರ್ಬಹಾ ಹನ್ಸ್‌ದಾ ಹಾಗೂ ಸಿಲಿಗುರಿ ಮೇಯರ್ ರಾಜ್ಯ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದು, ಬುಡಕಟ್ಟು ಕಲ್ಯಾಣದಲ್ಲಿ ಬಂಗಾಳ ಮುಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ನಾಚಿಕೆಗೇಡಿನ ಸಂಗತಿ ಎಂದ ಪ್ರಧಾನಿ ಮೋದಿ

ಈ ವಿವಾದದ ಬೆನ್ನಲ್ಲೇ ಎಕ್ಸ್ (ಟ್ವಿಟರ್) ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದೊಂದು ನಾಚಿಕೆಗೇಡಿನ ಘಟನೆ ಎಂದಿದ್ದಾರೆ. ಬುಡಕಟ್ಟು ಸಮುದಾಯದಿಂದ ಬಂದಿರುವ ರಾಷ್ಟ್ರಪತಿಯವರ ನೋವು ಭಾರತೀಯರ ಮನಸ್ಸಿನಲ್ಲಿ ತೀವ್ರ ಬೇಸರ ಮೂಡಿಸಿದೆ. ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರ ಎಲ್ಲಾ ಮಿತಿಗಳನ್ನು ಮೀರಿದ್ದು, ರಾಷ್ಟ್ರಪತಿಯವರ ಈ ಅವಮಾನಕ್ಕೆ ಅಲ್ಲಿನ ಆಡಳಿತವೇ ನೇರ ಹೊಣೆ ಎಂದು ಪ್ರಧಾನಿ ಗುಡುಗಿದ್ದಾರೆ. ದಾರ್ಜಿಲಿಂಗ್ ಬಿಜೆಪಿ ಸಂಸದ ರಾಜು ಬಿಸ್ತಾ ಅವರು ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕೆಂದು ಆಗ್ರಹಿಸಿದ್ದಾರೆ. ಒಟ್ಟಾರೆಯಾಗಿ ಜಂಗಲ್‌ಮಹಲ್ ಮತ್ತು ಉತ್ತರ ಬಂಗಾಳದ ಬುಡಕಟ್ಟು ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವಿನ ರಾಜಕೀಯ ಜಿದ್ದಾಜಿದ್ದಿಗೆ ಈ ಘಟನೆ ಇಂಬು ನೀಡಿದೆ.

Read More
Next Story