
ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಬಂಗಾಳದಲ್ಲಿ ಗುರುವಾರದಿಂದಲೇ ಹೈಅಲರ್ಟ್ ಘೋಷಿಸಲಾಗಿತ್ತು ಹಾಗೂ ಮೆರವಣಿಗೆಯಲ್ಲಿ 500ಕ್ಕಿಂತ ಹೆಚ್ಚು ಜನ ಸೇರದಂತೆ ಮತ್ತು ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು.
ಚುನಾವಣೆ ಹೊಸ್ತಿಲಲ್ಲಿರುವ ಬಂಗಾಳದ ಮುರ್ಷಿದಾಬಾದ್‌ನಲ್ಲಿ ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ
ಈ ಘರ್ಷಣೆಯಲ್ಲಿ ಯಾವುದೇ ಸಾವುನೋವುಗಳು ವರದಿಯಾಗಿಲ್ಲವಾದರೂ, ಕಾರ್ಯನಿರತ ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಹಲವು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಮುಂಬರುವ ತಿಂಗಳು ನಡೆಯಲಿರುವ ಎರಡು ಹಂತದ ಚುನಾವಣೆ ಹೊಸ್ತಿಲಲ್ಲಿರುವ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ರಘುನಾಥಗಂಜ್ ಪಟ್ಟಣದಲ್ಲಿ ಶುಕ್ರವಾರ (ಮಾರ್ಚ್ 27) ರಾಮನವಮಿ ಮೆರವಣಿಗೆ ವೇಳೆ ಭಾರಿ ಹಿಂಸಾಚಾರ ಹಾಗೂ ಘರ್ಷಣೆ ಸಂಭವಿಸಿದೆ.
ಕಿರಿದಾದ ರಸ್ತೆಗಳಲ್ಲಿ ಮೆರವಣಿಗೆ ಸಾಗುತ್ತಿದ್ದಾಗ ವಾಗ್ವಾದಗಳು ಉಂಟಾಗಿ, ಎರಡು ಗುಂಪುಗಳ ನಡುವೆ ಕಲ್ಲು ತೂರಾಟ, ಆಸ್ತಿಪಾಸ್ತಿಗಳ ಧ್ವಂಸ ಹಾಗೂ ಬೆಂಕಿ ಹಚ್ಚುವ ಘಟನೆಗಳು ನಡೆದಿವೆ. ಘಟನೆಯ ಗಂಭೀರತೆಯನ್ನು ಅರಿತು ಭಾರಿ ಪ್ರಮಾಣದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸುವ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತರಲು ಯತ್ನಿಸಲಾಗಿದೆ.
ಭದ್ರತಾ ವ್ಯವಸ್ಥೆ ಭಿಗಿ
ಈ ಘರ್ಷಣೆಯಲ್ಲಿ ಯಾವುದೇ ಸಾವುನೋವುಗಳು ವರದಿಯಾಗಿಲ್ಲವಾದರೂ, ಕಾರ್ಯನಿರತ ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಹಲವು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮೆರವಣಿಗೆ ಸಾಗುವ ಮಾರ್ಗದ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸಲಾಯಿತು ಮತ್ತು ಸಾರ್ವಜನಿಕರನ್ನು ಪರ್ಯಾಯ ಮಾರ್ಗಗಳಲ್ಲಿ ಕಳುಹಿಸಲಾಯಿತು. ಪ್ರಸ್ತುತ ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿದ್ದು, ಕ್ಷಿಪ್ರ ಕಾರ್ಯಪಡೆ ಸೇರಿದಂತೆ ಹೆಚ್ಚುವರಿ ಭದ್ರತಾ ಪಡೆಗಳನ್ನು ರಘುನಾಥಗಂಜ್‌ನ ಪ್ರಮುಖ ಸ್ಥಳಗಳಲ್ಲಿ ನಿಯೋಜಿಸಿ ನಿರಂತರವಾಗಿ ಪಥಸಂಚಲನ ನಡೆಸಲಾಗುತ್ತಿದೆ.
ರಾಜಕೀಯ ನಾಯಕರ ಪ್ರತಿಕ್ರಿಯೆ ಏನು?
ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಬಂಗಾಳದಲ್ಲಿ ಗುರುವಾರದಿಂದಲೇ ಹೈಅಲರ್ಟ್ ಘೋಷಿಸಲಾಗಿತ್ತು ಹಾಗೂ ಮೆರವಣಿಗೆಯಲ್ಲಿ 500ಕ್ಕಿಂತ ಹೆಚ್ಚು ಜನ ಸೇರದಂತೆ ಮತ್ತು ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ನ್ಯಾಯಾಲಯದ ಆದೇಶದ ನಡುವೆಯೂ ಶಸ್ತ್ರಾಸ್ತ್ರ ಪ್ರದರ್ಶನ ಮಾಡಿದ್ದಕ್ಕಾಗಿ ಕೋಲ್ಕತ್ತಾ ಮತ್ತು ಹೌರಾದಲ್ಲಿ ಬಿಜೆಪಿ ನೇತೃತ್ವದ ಮೆರವಣಿಗೆಯನ್ನು ಪೊಲೀಸರು ತಡೆದಿದ್ದಾರೆ. ಈ ಹಿಂಸಾಚಾರದ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಸುಕಾಂತ ಮಜುಂದಾರ್ ಅವರು ಪ್ರಚೋದನಕಾರಿ ಶಕ್ತಿಗಳೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. ಅದೇ ವೇಳೆ, ಆಡಳಿತಾರೂಢ ಟಿಎಂಸಿ ವಕ್ತಾರ ಕುನಾಲ್ ಘೋಷ್ ಅವರು ಸಮುದಾಯಗಳ ನಡುವೆ ಶಾಂತಿ ಹಾಗೂ ಸಂಯಮ ಕಾಪಾಡುವಂತೆ ಮನವಿ ಮಾಡಿದ್ದಾರೆ.

