
ರಾಮಮಂದಿರ ದೇಣಿಗೆ ಹಣ ದುರುಪಯೋಗ ಆರೋಪ: ವಿಚಾರಣೆಯನ್ನು ಅಯೋಧ್ಯೆ ಕೋರ್ಟ್‌ಗೆ ವರ್ಗಾಯಿಸಿದ ಸುಪ್ರೀಂ ಕೋರ್ಟ್
ಅಯೋಧ್ಯೆಯ ರಾಮಮಂದಿರ ಟ್ರಸ್ಟ್‌ನ ದೇಣಿಗೆ ಹಣ ದುರುಪಯೋಗ ಆರೋಪ ಪ್ರಕರಣದ ವಿಚಾರಣೆಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಒಪ್ಪಿಸಿ ಸುಪ್ರೀಂ ಕೋರ್ಟ್ ಆದೇಶಿಸಿದೆ. ಎಸ್‌ಐಟಿ ತನಿಖೆಯಲ್ಲಿ ಹಣ ದುರುಪಯೋಗದ ಅಂಶಗಳು ಪತ್ತೆಯಾಗಿರುವುದಾಗಿ ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.
ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಭಕ್ತರು ನೀಡಿದ ದೇಣಿಗೆ ಹಣ ದುರುಪಯೋಗವಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಅಯೋಧ್ಯೆಯ ಸ್ಥಳೀಯ ನ್ಯಾಯಾಲಯಕ್ಕೆ ವರ್ಗಾಯಿಸಿದೆ. ಪ್ರಕರಣದ ಆರೋಪಗಳ ಸತ್ಯಾಸತ್ಯತೆ ಅಥವಾ ಗುಣಾವಗುಣಗಳ ಕುರಿತು ತಾನು ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ ಎಂದೂ ನ್ಯಾಯಪೀಠ ಸ್ಪಷ್ಟಪಡಿಸಿದೆ.
ಸ್ವತಂತ್ರ ತನಿಖೆಗೆ ಆದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಿಲೇವಾರಿ ಮಾಡಿದ ಸುಪ್ರೀಂ ಕೋರ್ಟ್, ಪ್ರಕರಣದ ಮುಂದಿನ ವಿಚಾರಣೆಯನ್ನು ಸ್ಥಳೀಯ ನ್ಯಾಯಾಲಯದಲ್ಲೇ ಮುಂದುವರಿಸಲು ಅವಕಾಶ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ಉತ್ತರ ಪ್ರದೇಶ ಸರ್ಕಾರವು ವಿಶೇಷ ತನಿಖಾ ತಂಡ (ಎಸ್‌ಐಟಿ) ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಸಿದೆ ಎಂದು ತಿಳಿಸಿತು. ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ದೇವಾಲಯದಲ್ಲಿ ಸಂಗ್ರಹವಾದ ದೇಣಿಗೆ ಹಣವನ್ನು ಎಣಿಕೆ ಮಾಡುವ ಪ್ರಕ್ರಿಯೆಯಲ್ಲೇ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬುದು ಎಸ್‌ಐಟಿ ತನಿಖೆಯಿಂದ ಬಹಿರಂಗವಾಗಿದೆ ಎಂದು ನ್ಯಾಯಾಲಯಕ್ಕೆ ವಿವರಿಸಿದರು.
ದುರುಪಯೋಗಪಡಿಸಿಕೊಂಡ ಹಣದಿಂದ ಕೆಲವು ಆರೋಪಿಗಳು ಆಸ್ತಿಗಳನ್ನು ಖರೀದಿಸಿದ್ದರೆ, ಇನ್ನು ಕೆಲವರು ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಿದ್ದಾರೆ ಎಂದು ಅವರು ವಾದಿಸಿದರು. ಈ ಅಂಶಗಳನ್ನು ದಾಖಲಿಸಿಕೊಂಡ ನ್ಯಾಯಪೀಠ, ಸ್ವತಂತ್ರ ತನಿಖೆಗೆ ಮನವಿ ಸಲ್ಲಿಸಿದ್ದ ಅರ್ಜಿದಾರರು ಅಯೋಧ್ಯೆಯ ಸ್ಥಳೀಯ ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಗೆ ಸಹಕರಿಸಬಹುದು ಎಂದು ತಿಳಿಸಿತು.
ರಾಮಮಂದಿರ ನಿರ್ಮಾಣದ ಸ್ಥಳದ ಕುರಿತು ಅರ್ಜಿ ತಿರಸ್ಕಾರ
ಇದೇ ವಿಚಾರಣೆಯ ವೇಳೆ, ರಾಮಮಂದಿರವು ಅಯೋಧ್ಯೆ ಭೂ ವಿವಾದದ ಮುಖ್ಯ ಪ್ರಕರಣದಲ್ಲಿ ತೀರ್ಪು ನೀಡಲಾಗಿದ್ದ ಭೂಮಿಯಲ್ಲೇ ನಿರ್ಮಾಣವಾಗಿದೆಯೇ ಎಂಬುದನ್ನು ನಿರ್ಧರಿಸುವಂತೆ ಕೋರಿ ಸಲ್ಲಿಸಲಾಗಿದ್ದ ಹೊಸ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತು. ಇದಕ್ಕೂ ಮೊದಲು ಸೆಪ್ಟೆಂಬರ್ 21ರಂದು, ನ್ಯಾಯಾಲಯ ನೇಮಿಸಿದ್ದ ಎಸ್‌ಐಟಿಯು ದೇಣಿಗೆ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದ ಮೊದಲ ದೋಷಾರೋಪ ಪಟ್ಟಿಯನ್ನು ಸೆಪ್ಟೆಂಬರ್ 25ರೊಳಗೆ ಸಲ್ಲಿಸುವುದಾಗಿ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.
