
ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿರುವ ರಾಜಧಾನಿ ರೈಲು ಬೋಗಿಗಳು
ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಭೀಕರ ಅಗ್ನಿ ಅವಘಡ: 68 ಪ್ರಯಾಣಿಕರು ಪಾರು, ತಪ್ಪಿದ ಭಾರಿ ದುರಂತ!
ಬೆಂಕಿ ಹೊತ್ತಿಕೊಂಡಾಗ ಬಿ-1 ಕೋಚ್‌ನಲ್ಲಿ ಒಟ್ಟು 68 ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದರು. ತಕ್ಷಣವೇ ಎಚ್ಚೆತ್ತ ರೈಲಿನ ಗಾರ್ಡ್ ಮತ್ತು ಆರ್‌ಪಿಎಫ್ ಸಿಬ್ಬಂದಿ ಲೋಕೋ ಪೈಲಟ್‌ಗೆ ಮಾಹಿತಿ ನೀಡಿ ರೈಲನ್ನು ನಿಲ್ಲಿಸಿದರು.
ಕೇರಳದ ತಿರುವನಂತಪುರಂನಿಂದ ದೆಹಲಿಗೆ ತೆರಳುತ್ತಿದ್ದ ಪ್ರತಿಷ್ಠಿತ 'ರಾಜಧಾನಿ ಎಕ್ಸ್‌ಪ್ರೆಸ್' ರೈಲಿನಲ್ಲಿ ಭಾನುವಾರ ಬೆಳಗಿನ ಜಾವ ಭೀಕರ ಅಗ್ನಿ ಅವಘಡ ಸಂಭವಿಸಿದೆ.
ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯ ವ್ಯಾಪ್ತಿಯಲ್ಲಿ ಚಲಿಸುತ್ತಿದ್ದ ರೈಲಿನ ಎಸಿ ಕೋಚ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ರೈಲ್ವೆ ಸಿಬ್ಬಂದಿ ಮತ್ತು ಪ್ರಯಾಣಿಕರ ಸಮಯಪ್ರಜ್ಞೆಯಿಂದಾಗಿ ಭಾರಿ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಮುಂಜಾನೆ ಭಯಾನಕ ಅಗ್ನಿ ದೃಶ್ಯ!
ರೈಲ್ವೆ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ರೈಲು ಸಂಖ್ಯೆ 12431 ತಿರುವನಂತಪುರಂ–ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ ರೈಲು ವೆಸ್ಟ್ ಸೆಂಟ್ರಲ್ ರೈಲ್ವೆಯ ಕೋಟಾ ವಿಭಾಗದ ಲೂನಿ ರಿಚ್ಛಾ ಮತ್ತು ವಿಕ್ರಮ್‌ಗಢ್ ಅಲೋಟ್ ನಿಲ್ದಾಣಗಳ ಮಧ್ಯೆ ಚಲಿಸುತ್ತಿದ್ದಾಗ ಈ ಘಟನೆ ನಡೆದಿದೆ.
ಬೆಳಗಿನ ಜಾವ 5.15ರ ಸುಮಾರಿಗೆ ರೈಲಿನ ಹಿಂಭಾಗದಲ್ಲಿದ್ದ ಬಿ-1 ಎಸಿ ಕೋಚ್‌ನಲ್ಲಿ ಮೊದಲು ಹೊಗೆ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ಇಡೀ ಬೋಗಿಗೆ ಬೆಂಕಿ ವ್ಯಾಪಿಸಿದೆ.
ಕೇವಲ 15 ನಿಮಿಷದಲ್ಲಿ ಕಾರ್ಯಾಚರಣೆ
ಬೆಂಕಿ ಹೊತ್ತಿಕೊಂಡಾಗ ಬಿ-1 ಕೋಚ್‌ನಲ್ಲಿ ಒಟ್ಟು 68 ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದರು. ತಕ್ಷಣವೇ ಎಚ್ಚೆತ್ತ ರೈಲಿನ ಗಾರ್ಡ್ ಮತ್ತು ಆರ್‌ಪಿಎಫ್ ಸಿಬ್ಬಂದಿ ಲೋಕೋ ಪೈಲಟ್‌ಗೆ ಮಾಹಿತಿ ನೀಡಿ ರೈಲನ್ನು ನಿಲ್ಲಿಸಿದರು. ಕೇವಲ 15 ನಿಮಿಷಗಳ ಅತ್ಯಂತ ವೇಗದ ಕಾರ್ಯಾಚರಣೆಯಲ್ಲಿ ಕೋಚ್‌ನಲ್ಲಿದ್ದ ಎಲ್ಲಾ 68 ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು.
ಹಿರಿಯ ಅಧಿಕಾರಿಗಳ ಸಮಯಪ್ರಜ್ಞೆ, ಹೆಚ್ಚಿದ ಸುರಕ್ಷತೆ
ಅನಾಹುತದ ತೀವ್ರತೆಯನ್ನು ಅರಿತ ರೈಲ್ವೆ ಸಿಬ್ಬಂದಿ ತಕ್ಷಣವೇ ಬೆಂಕಿ ತಗುಲಿದ ಬಿ-1 ಕೋಚ್ ಮತ್ತು ಅದರ ಪಕ್ಕದಲ್ಲಿದ್ದ ಎಸ್‌ಎಲ್‌ಆರ್ ಬೋಗಿಯನ್ನು ರೈಲಿನಿಂದ ಯಶಸ್ವಿಯಾಗಿ ಬೇರ್ಪಡಿಸಿದರು . ಇದರಿಂದಾಗಿ ಬೆಂಕಿ ಉಳಿದ ಬೋಗಿಗಳಿಗೆ ವ್ಯಾಪಿಸುವುದು ತಪ್ಪಿದಂತಾಗಿದೆ. ಇದೇ ವೇಳೆ ಸುರಕ್ಷತೆಯ ದೃಷ್ಟಿಯಿಂದ ರೈಲ್ವೆ ಹಳಿಗಳ ಮೇಲಿದ್ದ ಓವರ್ ಹೆಡ್ ವಿದ್ಯುತ್ ಸರಬರಾಜನ್ನು ತಕ್ಷಣವೇ ಸ್ಥಗಿತಗೊಳಿಸಲಾಯಿತು. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಅಥವಾ ರೈಲ್ವೆ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳೂ ಆಗಿಲ್ಲ ಎಂದು ಕೋಟಾ ವಿಭಾಗದ ರೈಲ್ವೆ ಸಂಪರ್ಕಾಧಿಕಾರಿ ರವೀಂದ್ರ ಲಖೇರಾ ಖಚಿತಪಡಿಸಿದ್ದಾರೆ.
ದೆಹಲಿ ತಲುಪಲು 450 ಕಿ.ಮೀ ಬಾಕಿ
ಕೇರಳದಿಂದ ಹೊರಟಿದ್ದ ಈ ರೈಲು ಸುಮಾರು 2,600 ಕಿಲೋಮೀಟರ್ ದೂರವನ್ನು ಕ್ರಮಿಸಿ, ದೆಹಲಿ ತಲುಪಲು ಇನ್ನು ಕೇವಲ 450 ಕಿ.ಮೀ ಬಾಕಿ ಇರುವಾಗ ಈ ಘಟನೆ ನಡೆದಿದೆ. ರತ್ಲಾಮ್ ವಿಭಾಗದ ಡಿಆರ್‌ಎಂ ಮುಕೇಶ್ ಕುಮಾರ್ ಮತ್ತು ಅಗ್ನಿಶಾಮಕ ದಳದ ಪರಿಹಾರ ರೈಲು ತಕ್ಷಣವೇ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಸಂಪೂರ್ಣವಾಗಿ ಹತೋಟಿಗೆ ತಂದಿದ್ದಾರೆ.
ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ
ಬೋಗಿ ಕಳೆದುಕೊಂಡ ಪ್ರಯಾಣಿಕರನ್ನು ಸದ್ಯ ರೈಲಿನ ಇತರ ಕೋಚ್‌ಗಳಲ್ಲಿ ರಾಜಸ್ಥಾನದ ಕೋಟಾ ನಿಲ್ದಾಣದವರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿದೆ. ಕೋಟಾ ನಿಲ್ದಾಣ ತಲುಪಿದ ಬಳಿಕ ರೈಲಿಗೆ ಹೆಚ್ಚುವರಿ ಎಸಿ ಕೋಚ್ ಒಂದನ್ನು ಜೋಡಿಸಿ, ಪ್ರಯಾಣಿಕರು ದೆಹಲಿಗೆ ಸುಗಮವಾಗಿ ಪ್ರಯಾಣಿಸಲು ಅನುಕೂಲ ಮಾಡಿಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯಕ್ಕೆ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ಘಟನೆಗೆ ನಿಖರ ಕಾರಣ ತಿಳಿಯಲು ರೈಲ್ವೆ ಇಲಾಖೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.

