
ರಾಷ್ಟ್ರಪತಿ ಭವನದಲ್ಲಿ ಎಡ್ವರ್ಡ್ ಲುಟ್ಯೆನ್ಸ್ ಬದಲು ರಾಜಗೋಪಾಲಾಚಾರಿ ಪ್ರತಿಮೆ ಸ್ಥಾಪನೆ
ರಾಷ್ಟ್ರಪತಿ ಭವನದಲ್ಲಿ ಎಡ್ವರ್ಡ್ ಲುಟ್ಯೆನ್ಸ್ ಬದಲು ರಾಜಗೋಪಾಲಾಚಾರಿ ಪ್ರತಿಮೆ ಸ್ಥಾಪನೆ: 'ರಾಜಾಜಿ ಉತ್ಸವ'ದಲ್ಲಿ ಅನಾವರಣ
ಪ್ರಧಾನಿ ಮೋದಿ ತಮ್ಮ ಜನಪ್ರಿಯ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್'ನ ಇತ್ತೀಚಿನ ಸಂಚಿಕೆಯಲ್ಲಿ ಈ ಘೋಷಣೆ ಮಾಡಿದ್ದಾರೆ.
ರಾಷ್ಟ್ರಪತಿ ಭವನದಲ್ಲಿರುವ ಬ್ರಿಟಿಷ್ ವಾಸ್ತುಶಿಲ್ಪಿ ಸರ್ ಎಡ್ವಿನ್ ಲುಟ್ಯೆನ್ಸ್ (1869-1944) ಅವರ ಪ್ರತಿಮೆಯ ಬದಲಿಗೆ ಚಕ್ರವರ್ತಿ ರಾಜಗೋಪಾಲಾಚಾರಿ (1878-1972) ಅವರ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ಭಾನುವಾರ (ಫೆಬ್ರವರಿ 22) ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ರಾಜಗೋಪಾಲಾಚಾರಿ ಅವರು ಭಾರತದಲ್ಲಿ ಜನಿಸಿದ ದೇಶದ ಏಕೈಕ ಹಾಗೂ 1948 ರಿಂದ 1950ರ ನಡುವೆ ಈ ಹುದ್ದೆಯನ್ನು ಅಲಂಕರಿಸಿದ ಕೊನೆಯ ಗವರ್ನರ್ ಜನರಲ್ ಆಗಿದ್ದಾರೆ.
'ರಾಜಾಜಿ ಉತ್ಸವ'ದಲ್ಲಿ ಪ್ರತಿಮೆ ಅನಾವರಣ
ಪ್ರಧಾನಿ ಮೋದಿ ತಮ್ಮ ಜನಪ್ರಿಯ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್'ನ ಇತ್ತೀಚಿನ ಸಂಚಿಕೆಯಲ್ಲಿ ಈ ಘೋಷಣೆ ಮಾಡಿದ್ದಾರೆ. ಸೋಮವಾರ (ಫೆಬ್ರವರಿ 23) ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ 'ರಾಜಾಜಿ ಉತ್ಸವ'ದಲ್ಲಿ ಈ ಶ್ರೇಷ್ಠ ಭಾರತೀಯ ನಾಯಕನ ಪ್ರತಿಮೆಯನ್ನು ಅನಾವರಣಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಬ್ರಿಟಿಷ್ ವಾಸ್ತುಶಿಲ್ಪಿಗಳಾದ ಲುಟ್ಯೆನ್ಸ್ ಮತ್ತು ಸರ್ ಹರ್ಬರ್ಟ್ ಬೇಕರ್ ವಿನ್ಯಾಸಗೊಳಿಸಿದ ರಾಷ್ಟ್ರಪತಿ ಭವನದ ಸೆಂಟ್ರಲ್ ಕೋರ್ಟ್‌ಯಾರ್ಡ್‌ನಲ್ಲಿ (ಕೇಂದ್ರೀಯ ಪ್ರಾಂಗಣ) ಈ ಪ್ರತಿಮೆಯನ್ನು ಸ್ಥಾಪಿಸಲಾಗುವುದು. ಫೆಬ್ರವರಿ 23ರಂದು ರಾಷ್ಟ್ರಪತಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸ್ವತಂತ್ರ ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್ ಸಿ. ರಾಜಗೋಪಾಲಾಚಾರಿ ಅವರ ಪ್ರತಿಮೆ ಅನಾವರಣಗೊಳ್ಳಲಿದ್ದು, ಈ ಹಿಂದೆ ಇದ್ದ ಎಡ್ವಿನ್ ಲುಟ್ಯೆನ್ಸ್ ಪ್ರತಿಮೆಯ ಜಾಗದಲ್ಲಿ ರಾಜಾಜಿ ಅವರ ಪ್ರತಿಮೆ ರಾರಾಜಿಸಲಿದೆ ಎಂದು ಮೋದಿ ವಿವರಿಸಿದರು.
ಗುಲಾಮಗಿರಿಯ ಸಂಕೇತಗಳಿಂದ ಮುಕ್ತಿ
2022ರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ತಾವು ಉಲ್ಲೇಖಿಸಿದ 'ಪಂಚ ಪ್ರಾಣ' (ಐದು ಪ್ರತಿಜ್ಞೆಗಳು) ಸಂದೇಶವನ್ನು ಪ್ರಧಾನಿ ಈ ವೇಳೆ ನೆನಪಿಸಿಕೊಂಡರು. ಆಜಾದಿ ಕಾ ಅಮೃತ್ ಮಹೋತ್ಸವದ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪಂಚ ಪ್ರಾಣದ ಬಗ್ಗೆ ಮಾತನಾಡಿದ್ದೆ, ಅದರಲ್ಲಿ ಗುಲಾಮಗಿರಿಯ ಮನಸ್ಥಿತಿಯಿಂದ ಮುಕ್ತಿ ಪಡೆಯುವುದು ಕೂಡ ಒಂದಾಗಿದೆ ಎಂದು ಅವರು ಹೇಳಿದರು.
ಇಂದು ದೇಶವು ಗುಲಾಮಗಿರಿಯ ಸಂಕೇತಗಳನ್ನು ಹಿಂದೆ ಬಿಡುತ್ತಿದ್ದು, ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ ಸಂಕೇತಗಳನ್ನು ಗೌರವಿಸಲು ಪ್ರಾರಂಭಿಸಿದೆ ಮತ್ತು ರಾಷ್ಟ್ರಪತಿ ಭವನವು ಈ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆ ಇಟ್ಟಿದೆ ಎಂದು ಮೋದಿ ಅಭಿಪ್ರಾಯಪಟ್ಟರು. ವಸಾಹತುಶಾಹಿ ಗತಕಾಲದಿಂದ ಭಾರತವು ಹೊರಬರುತ್ತಿರುವುದರ ಸಂಕೇತವಾಗಿ ಈ ನಿರ್ಧಾರವನ್ನು ಅವರು ಬಣ್ಣಿಸಿದರು.
ಅಧಿಕಾರವನ್ನು ಸೇವೆಯಾಗಿ ಕಂಡಿದ್ದ ರಾಜಾಜಿ
ದೇಶಕ್ಕೆ ಸ್ವಾತಂತ್ರ್ಯ ಬರುವ ಮುನ್ನವೇ ಬ್ರಿಟಿಷ್ ಆಡಳಿತಗಾರರ ಪ್ರತಿಮೆಗಳು ರಾಷ್ಟ್ರಪತಿ ಭವನದಲ್ಲಿ ಉಳಿದುಕೊಂಡಿದ್ದವು ಮತ್ತು ದೇಶದ ಸ್ವಂತ ನಾಯಕರಿಗೆ ಅಲ್ಲಿ ಸ್ಥಾನ ನಿರಾಕರಿಸಲಾಗಿತ್ತು ಎಂದು ಮೋದಿ ಬೇಸರ ವ್ಯಕ್ತಪಡಿಸಿದರು. ರಾಜಗೋಪಾಲಾಚಾರಿ ಅವರ ಪರಂಪರೆಯನ್ನು ಸ್ಮರಿಸಿದ ಅವರು, ಅಧಿಕಾರವನ್ನು ಒಂದು ಸ್ಥಾನವಾಗಿ ನೋಡದೆ ಸೇವೆಯಾಗಿ ಕಂಡ ಮಹಾನ್ ವ್ಯಕ್ತಿಗಳಲ್ಲಿ ರಾಜಾಜಿ ಕೂಡ ಒಬ್ಬರು ಎಂದು ಶ್ಲಾಘಿಸಿದರು. ಸಾರ್ವಜನಿಕ ಜೀವನದಲ್ಲಿ ಅವರ ನಡವಳಿಕೆ, ಆತ್ಮಸಂಯಮ ಮತ್ತು ಸ್ವತಂತ್ರ ಚಿಂತನೆಗಳು ಇಂದಿಗೂ ನಮಗೆ ಸ್ಫೂರ್ತಿ ನೀಡುತ್ತವೆ ಎಂದು ಪ್ರಧಾನಿ ಹೇಳಿದರು.
ಯಾರಿವರು ಸಿ. ರಾಜಗೋಪಾಲಾಚಾರಿ?
'ರಾಜಾಜಿ ಉತ್ಸವ' ಆಚರಣೆಯ ಭಾಗವಾಗಿ, ನಾಯಕನ ಜೀವನ ಮತ್ತು ಕೊಡುಗೆಗಳಿಗೆ ಮೀಸಲಾದ ವಸ್ತುಪ್ರದರ್ಶನವು ಫೆಬ್ರವರಿ 24 ರಿಂದ ಮಾರ್ಚ್ 1ರವರೆಗೆ ನಡೆಯಲಿದೆ. ಜನರು ಈ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿ ರಾಜಗೋಪಾಲಾಚಾರಿ ಅವರ ಬಗ್ಗೆ ತಿಳಿದುಕೊಳ್ಳುವಂತೆ ಮೋದಿ ಕರೆ ನೀಡಿದರು.
ರಾಜಾಜಿ ಎಂದೇ ಜನಪ್ರಿಯರಾಗಿದ್ದ ರಾಜಗೋಪಾಲಾಚಾರಿ ಅವರು ಪ್ರಮುಖ ಭಾರತೀಯ ರಾಜನೀತಿಜ್ಞ, ಸ್ವಾತಂತ್ರ್ಯ ಹೋರಾಟಗಾರ, ಬರಹಗಾರ ಮತ್ತು ಸ್ವಾತಂತ್ರ್ಯದ ನಂತರ ಭಾರತದ ಗವರ್ನರ್ ಜನರಲ್ ಆಗಿ ಸೇವೆ ಸಲ್ಲಿಸಿದ ಏಕೈಕ ಭಾರತೀಯರಾಗಿದ್ದಾರೆ. 1950ರಲ್ಲಿ ಭಾರತವು ಗಣರಾಜ್ಯವಾದಾಗ ಈ ಹುದ್ದೆಯನ್ನು ರದ್ದುಗೊಳಿಸಲಾಯಿತು. ಆಡಳಿತ ಮತ್ತು ಸಾರ್ವಜನಿಕ ಜೀವನಕ್ಕೆ ನೀಡಿದ ಕೊಡುಗೆಗಳಿಗೆ ಹೆಸರಾಗಿದ್ದ ಅವರು ಹಿಂದಿನ ಮದ್ರಾಸ್ ರಾಜ್ಯದ ಮುಖ್ಯಮಂತ್ರಿಯಾಗಿ ಮತ್ತು ಸ್ವತಂತ್ರ ಪಕ್ಷದ ಸಂಸ್ಥಾಪಕರಾಗಿಯೂ ಸೇವೆ ಸಲ್ಲಿಸಿದ್ದರು. ಅವರು ಕೇಂದ್ರ ಗೃಹ ಸಚಿವರಾಗಿ ಮತ್ತು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸಿದ್ದರು.
ಲುಟ್ಯೆನ್ಸ್ ಮತ್ತು ಆಧುನಿಕ ರಾಜಕೀಯ ಚರ್ಚೆ
ಸರ್ ಬೇಕರ್ ಅವರೊಂದಿಗೆ ಸೇರಿ ಲುಟ್ಯೆನ್ಸ್ ಅವರು ವಸಾಹತುಶಾಹಿ ದೆಹಲಿಯ ಅನೇಕ ಅಪ್ರತಿಮ ರಚನೆಗಳನ್ನು ವಿನ್ಯಾಸಗೊಳಿಸಿದ್ದರು. ರಾಷ್ಟ್ರಪತಿ ಭವನ, ನಾರ್ತ್ ಬ್ಲಾಕ್, ಸೌತ್ ಬ್ಲಾಕ್ ಮತ್ತು ಇಂಡಿಯಾ ಗೇಟ್ ಪ್ರದೇಶಗಳು ಇದರಲ್ಲಿ ಸೇರಿವೆ. ಇವೆಲ್ಲವನ್ನೂ 'ಲುಟ್ಯೆನ್ಸ್ ದೆಹಲಿ' ಎಂದು ಕರೆಯಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ, ಲುಟ್ಯೆನ್ಸ್ ಮತ್ತು ಲುಟ್ಯೆನ್ಸ್ ದೆಹಲಿಯ ಉಲ್ಲೇಖಗಳನ್ನು ಬಲಪಂಥೀಯ ವಿಮರ್ಶಕರು ರಾಜಕೀಯ ಚರ್ಚೆಗಳಲ್ಲಿ ಬಳಸುತ್ತಿದ್ದಾರೆ. ವಸಾಹತುಶಾಹಿ ಕಾಲದಲ್ಲಿ ರೂಪುಗೊಂಡ ಅಧಿಕಾರಶಾಹಿ ರಚನೆಗಳು ಸಮಕಾಲೀನ ಆಡಳಿತದ ಚರ್ಚೆಗಳಲ್ಲಿಯೂ ಮುಂದುವರಿದಿದ್ದು, ಇದು ಗಣ್ಯ ಉದಾರವಾದಿಗಳ ಪ್ರಾಬಲ್ಯವಾಗಿದೆ ಎಂದು ಅವರು ಟೀಕಿಸುತ್ತಾ ಬಂದಿದ್ದಾರೆ.

