ದೆಹಲಿ-ಸಿಲಿಗುರಿ ಬುಲೆಟ್ ಟ್ರೈನ್: 20 ಗಂಟೆಯ ಪ್ರಯಾಣ ಇನ್ನು ಕೇವಲ 6 ಗಂಟೆಗೆ ಸೀಮಿತ
x

ದೆಹಲಿ-ಸಿಲಿಗುರಿ ಬುಲೆಟ್ ಟ್ರೈನ್: 20 ಗಂಟೆಯ ಪ್ರಯಾಣ ಇನ್ನು ಕೇವಲ 6 ಗಂಟೆಗೆ ಸೀಮಿತ

ಬುಲೆಟ್ ಟ್ರೈನ್ ದೆಹಲಿಯಿಂದ ಲಕ್ನೋ, ವಾರಣಾಸಿ ಮತ್ತು ಪಾಟ್ನಾ ಮೂಲಕ ಹಾದು ಸಿಲಿಗುರಿ ತಲುಪಲಿದೆ. ಮುಂಬೈ-ಅಹಮದಾಬಾದ್ ಕಾರಿಡಾರ್‌ ನಂತರ ದೇಶದ ಎರಡನೇ ಬುಲೆಟ್ ಟ್ರೈನ್ ಯೋಜನೆ ಇದಾಗಿದೆ.


Click the Play button to hear this message in audio format

ಭಾರತೀಯ ರೈಲ್ವೆ ತನ್ನ ಮಹತ್ವಾಕಾಂಕ್ಷೆಯ ಬುಲೆಟ್ ಟ್ರೈನ್ ಯೋಜನೆಗಳ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದು, ಇದೀಗ ದೇಶದ ರಾಜಧಾನಿ ದೆಹಲಿಯನ್ನು ಪಶ್ಚಿಮ ಬಂಗಾಳದ ಸಿಲಿಗುರಿಯೊಂದಿಗೆ ಸಂಪರ್ಕಿಸುವ ಹೊಸ ಬುಲೆಟ್ ಟ್ರೈನ್ ಯೋಜನೆಯನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ. ಈ ಯೋಜನೆಯು ಪೂರ್ಣಗೊಂಡ ನಂತರ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡಲಿದ್ದು, ಪ್ರಸ್ತುತ 20 ಗಂಟೆಗಳಿರುವ ಪ್ರಯಾಣವನ್ನು ಕೇವಲ 6 ಗಂಟೆಗಳಿಗೆ ಇಳಿಸಲಿದೆ.

ಈ ಹೊಸ ಬುಲೆಟ್ ಟ್ರೈನ್ ಮಾರ್ಗವು ದೆಹಲಿಯಿಂದ ಲಕ್ನೋ, ವಾರಣಾಸಿ ಮತ್ತು ಪಾಟ್ನಾ ಮೂಲಕ ಹಾದು ಸಿಲಿಗುರಿಯನ್ನು ತಲುಪಲಿದೆ. ಮುಂಬೈ-ಅಹಮದಾಬಾದ್ ಕಾರಿಡಾರ್‌ನ ನಂತರ ದೇಶದ ಎರಡನೇ ಬುಲೆಟ್ ಟ್ರೈನ್ ಯೋಜನೆಯಾಗಿ ಇದು ಗುರುತಿಸಿಕೊಳ್ಳಲಿದೆ. ಮುಂಬೈ-ಅಹಮದಾಬಾದ್ ನಡುವಿನ 508 ಕಿ.ಮೀ ಉದ್ದದ ಮೊದಲ ಬುಲೆಟ್ ಟ್ರೈನ್ ಯೋಜನೆ ಮುಂದಿನ ವರ್ಷ ಕಾರ್ಯಾಚರಣೆಗೆ ಸಿದ್ಧವಾಗಲಿದೆ.

ಕೊಲ್ಕತ್ತಾ ಮೆಟ್ರೋಗೆ ಹೊಸ ರೂಪ

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌, ಕೊಲ್ಕತ್ತಾ ಮೆಟ್ರೋ ಕುರಿತು ವಿಶೇಷ ಗಮನ ಹರಿಸಿದ್ದು, ಮುಂದಿನ ಐದು ವರ್ಷಗಳಲ್ಲಿ 60 ಹೊಸ ತಲೆಮಾರಿನ ರೈಲುಗಳನ್ನು ಪರಿಚಯಿಸುವುದಾಗಿ ಭರವಸೆ ನೀಡಿದ್ದಾರೆ. ಕಳೆದ 42 ವರ್ಷಗಳಲ್ಲಿ ಕೊಲ್ಕತ್ತಾ ಮೆಟ್ರೋ ನೆಟ್‌ವರ್ಕ್ ಕೇವಲ 28 ಕಿ.ಮೀ ಮಾತ್ರ ಪೂರ್ಣಗೊಂಡಿತ್ತು. ಆದರೆ, 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ನಂತರ, ಕಳೆದ ಹತ್ತು ವರ್ಷಗಳಲ್ಲಿ 45 ಕಿ.ಮೀ ಮೆಟ್ರೋ ಮಾರ್ಗಗಳನ್ನು ಸೇರಿಸಲಾಗಿದೆ ಎಂದು ಅವರು ಅಂಕಿ-ಅಂಶಗಳ ಸಮೇತ ವಿವರಿಸಿದರು.

ರಾಜಕೀಯ ವಾಕ್ಸಮರ

ಪಶ್ಚಿಮ ಬಂಗಾಳದ ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡಿದ ಅಶ್ವಿನಿ ವೈಷ್ಣವ್, ರಾಜ್ಯದಲ್ಲಿ ನಡೆಯುತ್ತಿರುವ ಸುಮಾರು 1 ಲಕ್ಷ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ರೈಲ್ವೆ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಇಷ್ಟು ವರ್ಷಗಳ ಕಾಲ ಇಲ್ಲಿ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿದ್ದವು, ಈಗ ಕೆಲಸ ಮಾಡಲು ನಿಮಗೆ ಅವಕಾಶ ಸಿಕ್ಕಿದೆ ಎಂದು ಹೇಳಿದರು. ಯೋಜನೆಗಳ ಅನುಷ್ಠಾನದಲ್ಲಿ ಎದುರಾಗುತ್ತಿರುವ ಅಡೆತಡೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಚಿಂಗ್ರಿಹಾಟಾ ಮೆಟ್ರೋ ಯೋಜನೆಯನ್ನು ಟಿಎಂಸಿ ಸರ್ಕಾರ ಈ ಯೋಜನೆಯನ್ನು ಸುಪ್ರೀಂಕೋರ್ಟ್ ವರೆಗೂ ತೆಗೆದುಕೊಂಡು ಹೋಗಿ ಅಡೆತಡೆಗಳನ್ನು ಉಂಟುಮಾಡುತ್ತಿತ್ತು. ಅವರ ಧೋರಣೆ ಅಭಿವೃದ್ಧಿ ಕೆಲಸಗಳಿಗೆ ಸಹಕಾರ ನೀಡುವಂತಿರಲಿಲ್ಲ ಎಂದು ಟೀಕಿಸಿದರು.

Read More
Next Story