
ಚೀನಾದ ಸಿಸಿಟಿವಿ: ಭಾರತೀಯರ ಭದ್ರತೆಯನ್ನು ಮೋದಿ ಸರ್ಕಾರ ಅಪಾಯಕ್ಕೆ ದೂಡುತ್ತಿದೆ ಎಂದ ರಾಹುಲ್
ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, "ನಿಷೇಧಿತ ಚೀನಿ ಆ್ಯಪ್‌ಗಳು ಹೆಸರು ಬದಲಾಯಿಸಿ ಮತ್ತೆ ಕಾರ್ಯಾಚರಿಸುತ್ತಿವೆ ಎಂದು ರಾಹುಲ್ ಗಾಂಧಿ ದೂರಿದ್ದಾರೆ.
ನಿಷೇಧಿತ ಚೀನಿ ಆ್ಯಪ್‌ಗಳು ಹೆಸರು ಬದಲಾಯಿಸಿಕೊಂಡು ಮತ್ತೆ ಮರುಕಳಿಸುತ್ತಿವೆ ಎಂದು ಎಚ್ಚರಿಸಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಸರ್ಕಾರಿ ಕಟ್ಟಡಗಳಲ್ಲಿ ಚೀನಿ ಸಿಸಿಟಿವಿ ಕ್ಯಾಮೆರಾಗಳನ್ನು ಬಳಸುವ ಮೂಲಕ ಕೇಂದ್ರ ಸರ್ಕಾರವು ಪ್ರತಿಯೊಬ್ಬ ಭಾರತೀಯ ನಾಗರಿಕನ ಭದ್ರತೆಯನ್ನು ಅಪಾಯಕ್ಕೆ ದೂಡುತ್ತಿದೆ ಎಂದು ಶನಿವಾರ (ಏಪ್ರಿಲ್ 4) ಗಂಭೀರ ಆರೋಪ ಮಾಡಿದ್ದಾರೆ.
ಕೇಂದ್ರ ಸರ್ಕಾರವು ಇತ್ತೀಚೆಗಷ್ಟೇ ಸಾರ್ವಜನಿಕ ಸ್ಥಳಗಳಲ್ಲಿ ಚೀನಿ ಸಿಸಿಟಿವಿ ಕ್ಯಾಮೆರಾಗಳ ಬಳಕೆಯನ್ನು ನಿಷೇಧಿಸಿತ್ತು. ಅಲ್ಲದೆ, ಭಾರತದಲ್ಲಿ ಬಳಸಲಾಗುತ್ತಿರುವ ಒಂದು ಮಿಲಿಯನ್ ಚೀನಿ ಕ್ಯಾಮೆರಾಗಳಿಂದ ದತ್ತಾಂಶ (ಡೇಟಾ) ವರ್ಗಾವಣೆ ಅಪಾಯವಿದೆ ಎಂಬುದನ್ನೂ ಒಪ್ಪಿಕೊಂಡಿತ್ತು. ಆದರೂ ಸರ್ಕಾರಿ ಕಚೇರಿಗಳಲ್ಲಿ ಇವುಗಳ ಅಳವಡಿಕೆ ಮತ್ತು ಬಳಕೆ ಮುಂದುವರಿದಿರುವುದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ವಿದೇಶಿ ಕೃತಕಬುದ್ಧಿಮತ್ತೆ ಬಳಕೆ
ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, "ನಿಷೇಧಿತ ಚೀನಿ ಆ್ಯಪ್‌ಗಳು ಹೆಸರು ಬದಲಾಯಿಸಿ ಮತ್ತೆ ಕಾರ್ಯಾಚರಿಸುತ್ತಿವೆ. ವಿದೇಶಿ ಕೃತಕ ಬುದ್ಧಿಮತ್ತೆ ಪ್ಲಾಟ್‌ಫಾರ್ಮ್‌ಗಳು ಸೂಕ್ಷ್ಮ ದತ್ತಾಂಶಗಳನ್ನು ಪ್ರಕ್ರಿಯೆಗೊಳಿಸುತ್ತಿವೆ. ಆದರೆ ಸರ್ಕಾರ ಈ ಬಗ್ಗೆ ಸಂಪೂರ್ಣ ಮೌನ ವಹಿಸಿದೆ" ಎಂದು ಕಿಡಿಕಾರಿದ್ದಾರೆ. ವಿದೇಶಿ ಕಣ್ಗಾವಲಿನ ವಾಸ್ತವವನ್ನು ಮರೆಮಾಚಿ ತನ್ನ ವೈಫಲ್ಯಗಳನ್ನು ಮುಚ್ಚಿಹಾಕುವ ಮೂಲಕ ಮೋದಿ ಸರ್ಕಾರ ಪ್ರತಿಯೊಬ್ಬ ನಾಗರಿಕನ ಭದ್ರತೆಯನ್ನು ಅಪಾಯಕ್ಕೆ ಸಿಲುಕಿಸುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
"ಈ ಸಿಸಿಟಿವಿ ಕ್ಯಾಮೆರಾಗಳ ಮೂಲ ಯಾವುದು? ಭದ್ರತಾ ದೃಷ್ಟಿಯಿಂದ ಇವುಗಳಲ್ಲಿ ಎಷ್ಟು ಕ್ಯಾಮೆರಾಗಳು ಪ್ರಮಾಣೀಕರಿಸಲ್ಪಟ್ಟಿವೆ? ಯಾವ ವಿದೇಶಿ ಎಐ ಪ್ಲಾಟ್‌ಫಾರ್ಮ್‌ಗಳು ಸರ್ಕಾರಿ ದತ್ತಾಂಶಗಳನ್ನು ನಿರ್ವಹಿಸುತ್ತಿವೆ? ಮತ್ತು ಯಾವ ನಿಷೇಧಿತ ಆ್ಯಪ್‌ಗಳು ಬದಲಾದ ಹೆಸರುಗಳಲ್ಲಿ ಕಾರ್ಯನಿರ್ವಹಿಸುತ್ತಿವೆ?" ಎಂದು ರಾಹುಲ್ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ಸಂಸತ್ತಿನಲ್ಲಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ (MeitY) ತಾವು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಸಿಕ್ಕಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವಾಲಯದ ಉತ್ತರದಲ್ಲಿ ಕೇವಲ ಪದಗಳ ಆಡಂಬರವಿತ್ತೇ ಹೊರತು, ತಾನು ಕೇಳಿದ ನಿರ್ದಿಷ್ಟ ಪ್ರಶ್ನೆಗಳಿಗೆ ಯಾವುದೇ ಅಂಕಿ-ಅಂಶ ಅಥವಾ ಪ್ಲಾಟ್‌ಫಾರ್ಮ್‌ಗಳ ಹೆಸರನ್ನು ನೀಡಲಿಲ್ಲ ಎಂದು ಅವರು ಹೇಳಿದ್ದಾರೆ. ಚೀನಿ ಕ್ಯಾಮೆರಾಗಳಿಂದ ಅಪಾಯವಿದೆ ಎಂದು ಐದು ವರ್ಷಗಳ ಹಿಂದೆಯೇ ಒಪ್ಪಿಕೊಂಡಿದ್ದರೂ, ನಮ್ಮ ಮೇಲೆ ನಿಗಾ ಇಡುತ್ತಿರುವ ಕ್ಯಾಮೆರಾಗಳು ಎಷ್ಟು ಸುರಕ್ಷಿತವಾಗಿವೆ ಎಂಬುದನ್ನು ಬಹಿರಂಗಪಡಿಸಲು ವಿಫಲವಾಗಿರುವ ಸರ್ಕಾರದ ನಡೆ 'ಭಾರತವನ್ನು ಕತ್ತಲಲ್ಲಿಡುವ ಉದ್ದೇಶಪೂರ್ವಕ ಸಂಚು' ಎಂದು ಅವರು ಬಣ್ಣಿಸಿದ್ದಾರೆ.

