
ಎಸ್‌ಐಆರ್ ವಿರುದ್ಧ ಮುಂದುವರಿದ ಪ್ರತಿಭಟನೆ; ರಾಹುಲ್, ಪ್ರಿಯಾಂಕಾ ಪೊಲೀಸ್ ವಶಕ್ಕೆ
ಮತದಾರರ ಪಟ್ಟಿ ಪರಿಷ್ಕರಣೆ ವಿರುದ್ಧ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಮುಂದಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ INDIA ಬ್ಲಾಕ್ ನಾಯಕರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ವಿರೋಧಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ INDIA ಬ್ಲಾಕ್ ನಡೆಸುತ್ತಿರುವ ಪ್ರತಿಭಟನೆ ಬುಧವಾರವೂ ಮುಂದುವರಿದಿದೆ. ದೆಹಲಿಯ ಜಂತರ್ ಮಂತರ್‌ಗೆ ತೆರಳಿ ಪ್ರತಿಭಟನೆ ನಡೆಸಲು ಮುಂದಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವು ವಿರೋಧ ಪಕ್ಷಗಳ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ದೆಹಲಿಯ ಜನಪಥ್‌ನಲ್ಲಿರುವ ಸಾಗರ್ ರತ್ನ ರೆಸ್ಟೋರೆಂಟ್‌ನಲ್ಲಿ ವಿರೋಧ ಪಕ್ಷಗಳ ಸಂಸದರು ಸಭೆ ನಡೆಸಿದರು. ಬಳಿಕ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ನಾಯಕರು ಬಸ್‌ಗಳಲ್ಲಿ ತೆರಳಿದರು. ಆದರೆ ಪ್ರತಿಭಟನೆಗೆ ಪೂರ್ವಾನುಮತಿ ಅಗತ್ಯವಿದೆ ಎಂದು ತಿಳಿಸಿದ ಪೊಲೀಸರು, ಜಂತರ್ ಮಂತರ್‌ಗೆ ತೆರಳುವ ಮಾರ್ಗಗಳಲ್ಲಿ ಬ್ಯಾರಿಕೇಡ್ ಹಾಕಿ ನಾಯಕರನ್ನು ತಡೆದರು.
ಪೊಲೀಸರು ನಾಯಕರನ್ನು ಬಸ್‌ಗಳಲ್ಲಿ ಕರೆದೊಯ್ಯಲು ಮುಂದಾದಾಗ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಸೇರಿದಂತೆ ಕೆಲವರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ಮುಂದುವರಿಸಿದರು. ಬಳಿಕ ಪೊಲೀಸರು ಅವರನ್ನು ವಶಕ್ಕೆ ಪಡೆದು ಬಸ್‌ಗಳಲ್ಲಿ ಕರೆದೊಯ್ದರು ಎಂದು ವರದಿಯಾಗಿದೆ.
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಹಾಗೂ ಅರ್ಹ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ ಎಂಬ ಆರೋಪವನ್ನು ವಿರೋಧ ಪಕ್ಷಗಳು ಮಾಡುತ್ತಿವೆ. ಜ್ಞಾನೇಶ್ ಕುಮಾರ್ ರಾಜೀನಾಮೆ, SIR ಪ್ರಕ್ರಿಯೆ ರದ್ದು ಹಾಗೂ ಪರಿಷ್ಕರಣೆಯಲ್ಲಿ ಕೈಬಿಡಲಾಗಿದೆ ಎನ್ನಲಾದ ಮತದಾರರ ಹೆಸರುಗಳನ್ನು ಮರುಸ್ಥಾಪಿಸಬೇಕು ಎಂಬುದು INDIA ಬ್ಲಾಕ್‌ನ ಪ್ರಮುಖ ಬೇಡಿಕೆಗಳಾಗಿವೆ. ಈ ಆರೋಪಗಳನ್ನು ಚುನಾವಣಾ ಆಯೋಗ ಮತ್ತು ಸರ್ಕಾರ ತಳ್ಳಿಹಾಕಿವೆ.
ರಾಹುಲ್, ಪ್ರಿಯಾಂಕಾ ವಿರುದ್ಧ ಎಫ್‌ಐಆರ್
ಇದಕ್ಕೂ ಮುನ್ನ ಮಂಗಳವಾರ ಚುನಾವಣಾ ಆಯೋಗದ ಕಚೇರಿಗೆ ತೆರಳಲು ಅವಕಾಶ ನೀಡದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಹಾಗೂ ಇತರ ವಿರೋಧ ಪಕ್ಷದ ಸಂಸದರು ಆಕಾಶವಾಣಿ ಭವನದ ಆವರಣದಲ್ಲಿ ಧರಣಿ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಮತ್ತು ಪ್ರಿಯಾಂಕಾ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ. ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಕನಿಷ್ಠ 10 ದಿನಗಳ ಮುಂಚಿತವಾಗಿ ಅನುಮತಿಗಾಗಿ ಅರ್ಜಿ ಸಲ್ಲಿಸಬೇಕು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
