
ಗದ್ದಲ ಸೃಷ್ಟಿಸಲು ನಾನೇನು ಸಂಸತ್ತಿಗೆ ಹೋಗಿಲ್ಲ: ಎಎಪಿಗೆ ರಾಘವ್ ಛಡ್ಡಾ ತಿರುಗೇಟು
ವಿಪಕ್ಷಗಳ ಸಭಾತ್ಯಾಗದ (ವಾಕ್ ಔಟ್) ವೇಳೆ ತಾವು ಭಾಗವಹಿಸಿಲ್ಲ ಎಂಬ ಎಎಪಿ ನಾಯಕರ ಆರೋಪವನ್ನು ಛಡ್ಡಾ ಸಾರಾಸಗಟಾಗಿ ತಳ್ಳಿಹಾಕಿದ್ದು, "ನನ್ನ ಮೇಲಿನ ಈ ಎಲ್ಲ ಆರೋಪಗಳು ಶುದ್ಧ ಸುಳ್ಳು" ಎಂದು ಕಿಡಿಕಾರಿದ್ದಾರೆ.
ರಾಜ್ಯಸಭೆ ಉಪನಾಯಕ ಸ್ಥಾನದಿಂದ ತಮ್ಮನ್ನು ಕೆಳಗಿಳಿಸಿದ ಬೆನ್ನಲ್ಲೇ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರ ಟೀಕೆಗಳಿಗೆ ಸಂಸದ ರಾಘವ್ ಛಡ್ಡಾ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. "ನಾನು ಸಂಸತ್ತಿಗೆ ಹೋಗುವುದು ಜನರ ಸಮಸ್ಯೆಗಳ ಪರ ಧ್ವನಿ ಎತ್ತುವುದಕ್ಕೇ ಹೊರತು, ಅಲ್ಲಿ ಗದ್ದಲ ಸೃಷ್ಟಿಸುವುದಕ್ಕಲ್ಲ," ಎಂದು ಅವರು ತಿರುಗೇಟು ನೀಡಿದ್ದಾರೆ.
ವಿಪಕ್ಷಗಳ ಸಭಾತ್ಯಾಗದ (ವಾಕ್ ಔಟ್) ವೇಳೆ ತಾವು ಭಾಗವಹಿಸಿಲ್ಲ ಎಂಬ ಎಎಪಿ ನಾಯಕರ ಆರೋಪವನ್ನು ಛಡ್ಡಾ ಸಾರಾಸಗಟಾಗಿ ತಳ್ಳಿಹಾಕಿದ್ದು, "ನನ್ನ ಮೇಲಿನ ಈ ಎಲ್ಲ ಆರೋಪಗಳು ಶುದ್ಧ ಸುಳ್ಳು" ಎಂದು ಕಿಡಿಕಾರಿದ್ದಾರೆ. ಮುಖ್ಯ ಚುನಾವಣಾ ಆಯುಕ್ತರಿಗೆ ಸಂಬಂಧಿಸಿದ ನಿರ್ಣಯಕ್ಕೆ ಸಹಿ ಹಾಕಲು ನಿರಾಕರಿಸಿದ್ದಾರೆ ಎಂಬ ಮತ್ತೊಂದು ಆರೋಪಕ್ಕೂ ಸ್ಪಷ್ಟನೆ ನೀಡಿರುವ ಅವರು, "ಈ ನಿರ್ಣಯಕ್ಕೆ ಸಹಿ ಹಾಕುವಂತೆ ಯಾವುದೇ ಪಕ್ಷದ ನಾಯಕರು ನನ್ನನ್ನು ಔಪಚಾರಿಕವಾಗಿ ಅಥವಾ ಅನೌಪಚಾರಿಕವಾಗಿ ಕೇಳಿಕೊಂಡಿಲ್ಲ. ನಮ್ಮದೇ ಪಕ್ಷದ ಇತರ ಹಲವು ಸಂಸದರು ಕೂಡ ಈ ನಿರ್ಣಯಕ್ಕೆ ಸಹಿ ಹಾಕಿಲ್ಲ," ಎಂದು ಹೇಳಿದ್ದಾರೆ.
ಜನರ ಧ್ವನಿಯಾಗುವುದೇ ನನ್ನ ಆದ್ಯತೆ
"ಸಂಸತ್ತಿನಲ್ಲಿ ಜಿಎಸ್‌ಟಿ, ಆದಾಯ ತೆರಿಗೆ, ದೆಹಲಿಯ ವಾಯು ಮಾಲಿನ್ಯ, ಪಂಜಾಬ್‌ನ ನೀರಿನ ಸಮಸ್ಯೆ, ಸಾರ್ವಜನಿಕ ಆರೋಗ್ಯ ರಕ್ಷಣೆ, ಶಿಕ್ಷಣ, ರೈಲ್ವೆ ಪ್ರಯಾಣಿಕರ ಪರದಾಟ, ಮಹಿಳೆಯರ ಮುಟ್ಟಿನ ಆರೋಗ್ಯ, ನಿರುದ್ಯೋಗ ಮತ್ತು ಹಣದುಬ್ಬರದಂತಹ ಜ್ವಲಂತ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವುದರ ಕಡೆಗೆ ಮಾತ್ರ ನನ್ನ ಗಮನವಿದೆ," ಎಂದು ರಾಘವ್ ಛಡ್ಡಾ ತಿಳಿಸಿದ್ದಾರೆ.
"ಸಂಸತ್ತು ನಡೆಯುವುದು ತೆರಿಗೆದಾರರು ಕಟ್ಟುವ ಹಣದಿಂದ. ಹಾಗಾಗಿ, ಅಲ್ಲಿ ಅನಗತ್ಯವಾಗಿ ಗದ್ದಲ ಮಾಡುವುದಕ್ಕಿಂತ ಜನರ ಧ್ವನಿಯಾಗಿ ಕೆಲಸ ಮಾಡುವುದು ನನ್ನ ಜವಾಬ್ದಾರಿಯಾಗಿದೆ. ನನ್ನ ವಿರುದ್ಧ ಮಾಡಲಾಗುತ್ತಿರುವ ಪ್ರತಿಯೊಂದು ಸುಳ್ಳು ಆರೋಪಗಳು ಶೀಘ್ರದಲ್ಲೇ ಬಯಲಾಗಲಿವೆ," ಎಂದು ಅವರು ಗುಡುಗಿದ್ದಾರೆ.
ಇತ್ತೀಚೆಗಷ್ಟೇ ರಾಜ್ಯಸಭೆಯಲ್ಲಿನ ಎಎಪಿ ಉಪನಾಯಕ ಸ್ಥಾನದಿಂದ ರಾಘವ್ ಛಡ್ಡಾ ಅವರನ್ನು ಪಕ್ಷ ಕೆಳಗಿಳಿಸಿತ್ತು. ಇದರ ಬೆನ್ನಲ್ಲೇ ಆಮ್ ಆದ್ಮಿ ಪಕ್ಷದ ನಾಯಕರು ಛಡ್ಡಾ ವಿರುದ್ಧ ಸರಣಿ ವಾಗ್ದಾಳಿ ನಡೆಸಿದ್ದರು. ಇದೀಗ ಛಡ್ಡಾ ತಮ್ಮ ಮೌನ ಮುರಿದು ಪಕ್ಷಕ್ಕೆ ತಿರುಗೇಟು ನೀಡಿದ್ದಾರೆ.

