Another shock for TMC: Rajya Sabha member Prakash Chikbaraik suddenly resigns!
x

ರಾಜ್ಯಸಭಾ ಸದಸ್ಯ ಪ್ರಕಾಶ್ ಚಿಕ್ ಬರೈಕ್

ಟಿಎಂಸಿಗೆ ಮತ್ತೊಂದು ಶಾಕ್: ರಾಜ್ಯಸಭಾ ಸದಸ್ಯ ಪ್ರಕಾಶ್ ಚಿಕ್ ಬರೈಕ್ ದಿಢೀರ್ ರಾಜೀನಾಮೆ!

ಟಿಎಂಸಿ ಪಕ್ಷಕ್ಕೆ ಈಗ ಜನರ ಬೆಂಬಲ ಇಲ್ಲ. ಜನರ ಭಾವನೆಗಳನ್ನು ಗೌರವಿಸಿ ನಾನು ಈ ನಿರ್ಧಾರ ಕೈಗೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಬೇರೆ ಪಕ್ಷಕ್ಕೆ ಹೋಗುವ ಬಗ್ಗೆ ಕಾಲವೇ ನಿರ್ಧರಿಸುತ್ತದೆ ಎಂದು ಪ್ರಕಾಶ್ ಚಿಕ್ ಬರೈಕ್ ತಿಳಿಸಿದ್ದಾರೆ.


Click the Play button to hear this message in audio format

ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ತೀವ್ರ ಆಂತರಿಕ ಭಿನ್ನಮತ ಸ್ಫೋಟಗೊಂಡಿದ್ದು, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಮತ್ತೊಂದು ಭಾರೀ ಹಿನ್ನಡೆಯಾಗಿದೆ. ಪಕ್ಷದ ಸರಣಿ ರಾಜೀನಾಮೆಗಳ ಪರ್ವ ಮುಂದುವರಿದಿದ್ದು, ಗುರುವಾರ (ಜೂ. 11) ಪಕ್ಷದ ಮತ್ತೊಬ್ಬ ಪ್ರಭಾವಿ ರಾಜ್ಯಸಭಾ ಸಂಸದ ಪ್ರಕಾಶ್ ಚಿಕ್ ಬರೈಕ್ ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ.

ಕಳೆದ ಒಂದು ವಾರದಲ್ಲೇ ಟಿಎಂಸಿಗೆ ಲಗಾಮು ಬಿದ್ದಿರುವ ಮೂರನೇ ದೊಡ್ಡ ಆಘಾತ ಇದಾಗಿದೆ. ಇತ್ತೀಚೆಗಷ್ಟೇ ಹಿರಿಯ ಸಂಸದರಾದ ಸುಖೇಂದು ಶೇಖರ್ ರಾಯ್ ಮತ್ತು ಸುಶ್ಮಿತಾ ದೇವ್ ಅವರು ಮೇಲ್ಮನೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಬರೈಕ್ ಅವರ ಈ ನಿರ್ಧಾರ ಹೊರಬಿದ್ದಿರುವುದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಬಿಜೆಪಿ ಸೇರ್ಪಡೆ ಮುನ್ಸೂಚನೆ ನೀಡಿದ ಬರೈಕ್?

ರಾಜ್ಯಸಭಾ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ ತಮ್ಮ ರಾಜೀನಾಮೆ ಪತ್ರ ರವಾನಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಕಾಶ್ ಚಿಕ್ ಬರೈಕ್ ಸ್ಪೋಟಕ ಹೇಳಿಕೆ ನೀಡಿದ್ದು, "ಪಶ್ಚಿಮ ಬಂಗಾಳದ ಸಾರ್ವಜನಿಕರ ಅಭಿಪ್ರಾಯ ಮತ್ತು ಜನರ ಭಾವನೆಗಳನ್ನು ಗೌರವಿಸಿ ನಾನು ಈ ನಿರ್ಧಾರ ಕೈಗೊಂಡಿದ್ದೇನೆ. ಟಿಎಂಸಿ ಪಕ್ಷಕ್ಕೆ ಈಗ ಜನರ ಬೆಂಬಲ ಇಲ್ಲ. ಇದೇ ವೇಳೆ, ಮುಂದಿನ ದಿನಗಳಲ್ಲಿ ಬೇರೆ ಪಕ್ಷಕ್ಕೆ ಹೋಗುವ ಬಗ್ಗೆ ಕಾಲವೇ ನಿರ್ಧರಿಸುತ್ತದೆ," ಎಂದು ಹೇಳುವ ಮೂಲಕ ಕಮಲ ಪಾಳಯ ಸೇರುವ ಸ್ಪಷ್ಟ ಮುನ್ಸೂಚನೆ ನೀಡಿದ್ದಾರೆ. ಬರೈಕ್ ಅವರು ಉತ್ತರ ಬಂಗಾಳದ ಅಲಿಪುರ್ದುವಾರ್ ವಲಯದ ಪ್ರಭಾವಿ ಆದಿವಾಸಿ ಮತ್ತು ಚಹಾ ತೋಟದ ಕಾರ್ಮಿಕರ ನಾಯಕರಾಗಿದ್ದು, ಇವರ ನಿರ್ಗಮನ ಉತ್ತರ ಬಂಗಾಳದಲ್ಲಿ ಟಿಎಂಸಿಗೆ ದೊಡ್ಡ ಪೆಟ್ಟಾಗಲಿದೆ.

ಒಡೆದ ಮನೆಯಾದ 'ದೀದಿ' ಕೋಟೆ!

ಪಶ್ಚಿಮ ಬಂಗಾಳದ ಇತ್ತೀಚಿನ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಬಳಿಕ ಟಿಎಂಸಿ ಸಂಪೂರ್ಣವಾಗಿ ನಲುಗಿ ಹೋಗಿದೆ. ಪಕ್ಷದ ಒಳಗಿನ ಆಂತರಿಕ ಬಂಡಾಯ ಕೇವಲ ರಾಜ್ಯಸಭೆಗೆ ಸೀಮಿತವಾಗಿಲ್ಲ, ಅದು ಲೋಕಸಭೆ ಮತ್ತು ವಿಧಾನಸಭೆಗೂ ಹಬ್ಬಿದೆ. ಕಳೆದ ವಾರವಷ್ಟೇ ಟಿಎಂಸಿಯ 80 ಶಾಸಕರ ಪೈಕಿ ಬರೋಬ್ಬರಿ 58 ಶಾಸಕರು ಬಂಡಾಯವೆದ್ದು, ಉಚ್ಚಾಟಿತ ನಾಯಕ ರಿತಬ್ರತ ಬ್ಯಾನರ್ಜಿ ನೇತೃತ್ವದಲ್ಲಿ ಪ್ರತ್ಯೇಕ ಬಣ ರಚಿಸಿಕೊಂಡು ಪಶ್ಚಿಮ ಬಂಗಾಳ ವಿಧಾನಸಭೆಯ ಮುಖ್ಯ ವಿರೋಧ ಪಕ್ಷವಾಗಿ ಗುರುತಿಸಿಕೊಂಡಿದ್ದಾರೆ!. ಲೋಕಸಭೆಯಲ್ಲೂ ಸುಮಾರು 20 ಟಿಎಂಸಿ ಸಂಸದರು ಕಕೋಲಿ ಘೋಷ್ ದಸ್ತಿದಾರ್ ನೇತೃತ್ವದಲ್ಲಿ ಬಂಡಾಯವೆದ್ದಿದ್ದು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ತಮಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸುವಂತೆ ಅಧಿಕೃತವಾಗಿ ಪತ್ರ ಬರೆದಿದ್ದಾರೆ. ಇವರೆಲ್ಲರೂ ಕೇಂದ್ರದ ಎನ್‌ಡಿಎ (NDA) ಸರ್ಕಾರಕ್ಕೆ ಬೆಂಬಲ ನೀಡುವ ಸಾಧ್ಯತೆ ದಟ್ಟವಾಗಿದೆ.

ಮಮತಾ ಬ್ಯಾನರ್ಜಿ ಅಸ್ತಿತ್ವದ ಹೋರಾಟ

15 ವರ್ಷಗಳ ಕಾಲ ಪಶ್ಚಿಮ ಬಂಗಾಳವನ್ನು ಏಕಚಕ್ರಾಧಿಪತ್ಯದಿಂದ ಆಳಿದ ಮಮತಾ ಬ್ಯಾನರ್ಜಿ ಅವರಿಗೆ ಇದು ರಾಜಕೀಯ ಜೀವನದ ಅತ್ಯಂತ ಕಠಿಣ ಸವಾಲಾಗಿದೆ. ಸಾಲು ಸಾಲು ಭ್ರಷ್ಟಾಚಾರದ ಆರೋಪಗಳು, ಆಡಳಿತ ವಿರೋಧಿ ಅಲೆ ಮತ್ತು ಇತ್ತೀಚಿನ ಚುನಾವಣಾ ಸೋಲು ಪಕ್ಷದೊಳಗೆ ದಶಕಗಳಿಂದ ಹೊಗೆಯಾಡುತ್ತಿದ್ದ ಅಸಮಾಧಾನ ಸ್ಫೋಟಗೊಳ್ಳುವಂತೆ ಮಾಡಿದೆ. ಸಂಸತ್ತಿನ ಮೇಲ್ಮನೆಯಲ್ಲಿ ಟಿಎಂಸಿಯ ಸಂಖ್ಯಾಬಲ ಕುಸಿಯುತ್ತಿರುವುದು ಒಂದು ಕಡೆಯಾದರೆ, ರಾಜ್ಯದಲ್ಲಿ ಸ್ವಂತ ಪಕ್ಷವನ್ನು ಉಳಿಸಿಕೊಳ್ಳುವುದೇ ದೀದಿಗೆ ಈಗ ಯಕ್ಷಪ್ರಶ್ನೆಯಾಗಿದೆ.

Read More
Next Story