2029ರ ವೇಳೆಗೆ ನಶ ಮುಕ್ತ ಭಾರತ: ಡ್ರಗ್ಸ್ ವಿರುದ್ಧ ಕೇಂದ್ರ ನಿರ್ಣಾಯಕ ಸಮರ
x

2029ರ ವೇಳೆಗೆ 'ನಶ ಮುಕ್ತ ಭಾರತ': ಡ್ರಗ್ಸ್ ವಿರುದ್ಧ ಕೇಂದ್ರ ನಿರ್ಣಾಯಕ ಸಮರ

ದೇಶದ ಗಡಿಯಿಂದ ಹಿಡಿದು ಗಲ್ಲಿ-ಗಲ್ಲಿಗಳವರೆಗೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಕೊಡುಗೆ ಅಪಾರ. ಶಾಂತಿ ಕಾಪಾಡಲು ಪೊಲೀಸರು ಶ್ರಮಿಸುತ್ತಿದ್ದಾರೆ ಎಂದು ಸಚಿವ ಅಮಿತ್‌ ಶಾ ಹೇಳಿದ್ದಾರೆ.


Click the Play button to hear this message in audio format

ದೇಶದ ಆಂತರಿಕ ಭದ್ರತೆ, ಸಾರ್ವಭೌಮತೆ ಮತ್ತು ನಾಗರಿಕರ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿ ಹುತಾತ್ಮರಾದ ವೀರ ಪೊಲೀಸ್ ಮತ್ತು ಸಶಸ್ತ್ರ ಪಡೆಗಳ ಸಿಬ್ಬಂದಿಯ ತ್ಯಾಗವನ್ನು ಸ್ಮರಿಸುವ ಪೊಲೀಸ್ ಸಂಸ್ಮರಣಾ ದಿನವನ್ನು ದೇಶಾದ್ಯಂತ ಅತ್ಯಂತ ಗೌರವದಿಂದ ಆಚರಿಸಲಾಯಿತು. ದೆಹಲಿಯ ಚಾಣಕ್ಯಪುರಿಯಲ್ಲಿರುವ ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿ, ಗೌರವ ನಮನ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರ್ತವ್ಯ ನಿರ್ವಹಣೆಯ ವೇಳೆ ದೇಶಕ್ಕಾಗಿ ಸರ್ವೋಚ್ಚ ಬಲಿದಾನ ನೀಡಿದ ವೀರ ಪೊಲೀಸರನ್ನು ಕೃತಜ್ಞತೆಯಿಂದ ಸ್ಮರಿಸಿದ್ದು, ಅವರ ಅಪ್ರತಿಮ ಸೇವೆ ಮತ್ತು ಸಮರ್ಪಣಾ ಮನೋಭಾವವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸದಾ ಸ್ಫೂರ್ತಿ ಎಂದು ಶ್ಲಾಘಿಸಿದ್ದಾರೆ.

ಮಾತೃಭೂಮಿಯ ರಕ್ಷಣೆಯೇ ಪರಮ ಧ್ಯೇಯ

ಪೊಲೀಸ್ ಸ್ಮರಣಾ ದಿನದ ಪರೇಡ್ ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, "ಮಾತೃಭೂಮಿಯ ಗೌರವವನ್ನು ಕಾಪಾಡಲು ಮತ್ತು ನೂರ ನಲವತ್ತು ಕೋಟಿ ಭಾರತೀಯರ ಶಾಂತಿ-ಸುರಕ್ಷತೆಯನ್ನು ಖಚಿತಪಡಿಸಲು ಪೊಲೀಸ್ ಸಿಬ್ಬಂದಿ ತಮ್ಮ ಬದುಕನ್ನೇ ಧಾರೆಯೆರೆದಿದ್ದಾರೆ. ದೇಶದ ಗಡಿಯಿಂದ ಹಿಡಿದು ಗಲ್ಲಿ-ಗಲ್ಲಿಗಳವರೆಗೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನಮ್ಮ ಪೊಲೀಸರ ಕೊಡುಗೆ ಅಪಾರ. ಕರ್ತವ್ಯದ ಹಾದಿಯಲ್ಲಿ ಹುತಾತ್ಮರಾದ ಪ್ರತಿಯೊಬ್ಬ ಯೋಧನ ಕುಟುಂಬಕ್ಕೂ ಇಡೀ ದೇಶವೇ ಬೆನ್ನೆಲುಬಾಗಿ ನಿಲ್ಲಲಿದೆ" ಎಂದು ಭರವಸೆ ನೀಡಿದರು. ಪೊಲೀಸ್ ವೃತ್ತಿಯು ಅತ್ಯಂತ ಸವಾಲಿನ ಮತ್ತು ಕಠಿಣ ಸೇವೆಯಾಗಿದೆ. ಸಾಮಾನ್ಯ ನಾಗರಿಕರು ತಮ್ಮ ಮನೆಗಳಲ್ಲಿ ದೀಪಾವಳಿ, ಈದ್, ಕ್ರಿಸ್‌ಮಸ್ ಸೇರಿದಂತೆ ಎಲ್ಲ ಹಬ್ಬ-ಹರಿದಿನಗಳನ್ನು ಕುಟುಂಬದೊಂದಿಗೆ ಸಂಭ್ರಮಿಸುವಾಗ, ಪೊಲೀಸ್ ಸಿಬ್ಬಂದಿ ತಮ್ಮ ಹೆಂಡತಿ, ಮಕ್ಕಳು ಮತ್ತು ಹೆತ್ತವರಿಂದ ದೂರವಿದ್ದು ಗಡಿಗಳಲ್ಲಿ ಮತ್ತು ಬೀದಿಗಳಲ್ಲಿ ನಿಂತು ಪಹರೆ ಕಾಯುತ್ತಾರೆ. ಈ ನಿಸ್ವಾರ್ಥ ತ್ಯಾಗವನ್ನು ಕೇವಲ ಒಂದು ದಿನವಲ್ಲ, ವರ್ಷದ ಪ್ರತಿಯೊಂದು ಕ್ಷಣವೂ ಸ್ಮರಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ ಎಂದು ಹೇಳಿದರು.

ಅಕ್ಟೋಬರ್ 21ರ ಐತಿಹಾಸಿಕ ಹಿನ್ನೆಲೆ

ಪೊಲೀಸ್ ಸಂಸ್ಮರಣಾ ದಿನದ ಐತಿಹಾಸಿಕ ಮಹತ್ವವನ್ನು ಮೆಲುಕು ಹಾಕಿದ ಗೃಹ ಸಚಿವರು, 1959ರ ಅಕ್ಟೋಬರ್ 21ರಂದು ಲಡಾಖ್‌ನ ದುರ್ಗಮ ಗಡಿ ಪ್ರದೇಶವಾದ ಹಾಟ್ ಸ್ಪ್ರಿಂಗ್ಸ್‌ನಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಂಡರು. ಅಂದು ಅತ್ಯಂತ ಪ್ರತಿಕೂಲ ಹವಾಮಾನ ಹಾಗೂ ಭೌಗೋಳಿಕ ಸವಾಲುಗಳ ನಡುವೆಯೂ ಭಾರತದ ಗಡಿ ಕಾಯುತ್ತಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆಯ ವೀರ ಯೋಧರ ಸಣ್ಣ ತುಕಡಿಯ ಮೇಲೆ ಚೀನಾದ ಸೇನೆಯು ಅನಿರೀಕ್ಷಿತವಾಗಿ ಭಾರೀ ದಾಳಿ ನಡೆಸಿತ್ತು. ಅತ್ಯಲ್ಪ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೂ ಎದೆಗುಂದದೆ ದೇಶದ ಮಣ್ಣಿಗಾಗಿ ಕೆಚ್ಚೆದೆಯಿಂದ ಹೋರಾಡಿದ 10 ಮಂದಿ ಸಿಆರ್‌ಪಿಎಫ್ ಯೋಧರು ಆ ರಣಭೂಮಿಯಲ್ಲಿ ವೀರಮರಣ ಅಪ್ಪಿದ್ದರು. ಈ ಪರಮೋಚ್ಚ ತ್ಯಾಗದ ಪ್ರತೀಕವಾಗಿ ಪ್ರತಿವರ್ಷ ಅಕ್ಟೋಬರ್ 21 ಅನ್ನು ದೇಶಾದ್ಯಂತ 'ಪೊಲೀಸ್ ಸಂಸ್ಮರಣಾ ದಿನ'ವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಅಂದಿನಿಂದ ಇಂದಿನವರೆಗೆ ಕರ್ತವ್ಯದ ವೇಳೆ ಹುತಾತ್ಮರಾದ ದೇಶದ ಎಲ್ಲಾ ರಾಜ್ಯ ಪೊಲೀಸ್ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಿಬ್ಬಂದಿಯನ್ನು ಈ ದಿನ ಗೌರವಿಸಲಾಗುತ್ತದೆ.

2026ರ ಮಾರ್ಚ್ 31ಕ್ಕೆ ನಕ್ಸಲ್ ಸಮಸ್ಯೆಗೆ ಶಾಶ್ವತ ಮುಕ್ತಿ

ದೇಶದ ಆಂತರಿಕ ಭದ್ರತೆಯ ಇತಿಹಾಸದಲ್ಲೇ ಮಹತ್ವದ ಮೈಲಿಗಲ್ಲನ್ನು ಪ್ರಕಟಿಸಿದ ಅಮಿತ್ ಶಾ, ದಶಕಗಳಿಂದ ದೇಶದ ಅಭಿವೃದ್ಧಿ ಮತ್ತು ಆಂತರಿಕ ಶಾಂತಿಗೆ ದೊಡ್ಡ ಕ್ಯಾನ್ಸರ್ ಆಗಿ ಕಾಡುತ್ತಿದ್ದ ನಕ್ಸಲಿಸಂ ಸಂಪೂರ್ಣವಾಗಿ ಕಿತ್ತೊಗೆಯಲಾಗಿದೆ. 2026ರ ಮಾರ್ಚ್ 31ಕ್ಕೆ ಭಾರತವು ನಕ್ಸಲ್ ಸಮಸ್ಯೆಯಿಂದ ಸಂಪೂರ್ಣ ಮುಕ್ತಿ ಹೊಂದಿದೆ. ನಕ್ಸಲ್ ಹಿಂಸಾಚಾರಕ್ಕೆ ಅಂತಿಮ ಮೊಳೆ ಹೊಡೆಯಲಾಗಿದೆ. 1981ರಿಂದ 2026ರ ಮಾರ್ಚ್‌ವರೆಗೆ ನಕ್ಸಲೀಯರ ರಕ್ತಸಿಕ್ತ ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ ಬೆಚ್ಚಿಬೀಳಿಸುವಂತಿದೆ. ಈ ಅವಧಿಯಲ್ಲಿ 3,600ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ. ಕೇವಲ ಯೋಧರಷ್ಟೇ ಅಲ್ಲದೆ, ನಕ್ಸಲರ ಅಟ್ಟಹಾಸಕ್ಕೆ ಸುಮಾರು 13,700ಕ್ಕೂ ಅಧಿಕ ಅಮಾಯಕ ನಾಗರಿಕರು ಜೀವ ಕಳೆದುಕೊಂಡಿದ್ದಾರೆ. ನಕ್ಸಲ್ ಪೀಡಿತ ದುರ್ಗಮ ಕಾಡುಗಳಲ್ಲಿ ನಕ್ಸಲರನ್ನು ಸದೆಬಡಿಯುವಲ್ಲಿ ಸಿಆರ್‌ಪಿಎಫ್, ಕೋಬ್ರಾ ವಿಶೇಷ ಪಡೆ ಹಾಗೂ ಛತ್ತೀಸ್‌ಗಢ, ಜಾರ್ಖಂಡ್, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ವಿಶೇಷ ಪೊಲೀಸ್ ಪಡೆಗಳು ತೋರಿದ ಶೌರ್ಯ ಸಾಟಿಯಿಲ್ಲದ್ದು ಎಂದು ಮುಕ್ತಕಂಠದಿಂದ ಶ್ಲಾಘಿಸಿದರು. ಇಂದು ನಕ್ಸಲ್ ಪೀಡಿತ ಕೆಂಪು ಕಾರಿಡಾರ್ ಕೇವಲ ಬೆರಳೆಣಿಕೆಯ ಪ್ರದೇಶಗಳಿಗೆ ಸೀಮಿತವಾಗಿದ್ದು, ಶಸ್ತ್ರಾಸ್ತ್ರ ಹಿಡಿದಿದ್ದ ಯುವಕರು ಶರಣಾಗಿ ಸಮಾಜದ ಮುಖ್ಯವಾಹಿನಿಗೆ ಮರಳುತ್ತಿದ್ದಾರೆ ಎಂದರು.

ಮೂರು ಪ್ರಮುಖ ರಂಗಗಳಲ್ಲಿ ಐತಿಹಾಸಿಕ ಶಾಂತಿ

1960ರ ದಶಕದಿಂದಲೂ ಭಾರತದ ಆಂತರಿಕ ಸುರಕ್ಷತೆಗೆ ಸದಾ ತಲೆನೋವಾಗಿದ್ದ ಮೂರು ಪ್ರಮುಖ ಬಿಕ್ಕಟ್ಟುಗಳನ್ನು ನಿಯಂತ್ರಣಕ್ಕೆ ತರುವಲ್ಲಿ ಪೊಲೀಸ್ ಮತ್ತು ಭದ್ರತಾ ಪಡೆಗಳು ಯಶಸ್ವಿಯಾಗಿವೆ. ಸಂವಿಧಾನದ 370ನೇ ವಿಧಿ ರದ್ದತಿಯ ನಂತರ ಕಣಿವೆ ರಾಜ್ಯದಲ್ಲಿ ಭಯೋತ್ಪಾದನೆ, ಕಲ್ಲುತೂರಾಟ ಮತ್ತು ಪ್ರತ್ಯೇಕತಾವಾದಕ್ಕೆ ಸಂಪೂರ್ಣ ಕಡಿವಾಣ ಬಿದ್ದಿದೆ. ಅಲ್ಲಿ ಇಂದು ಪ್ರಜಾಪ್ರಭುತ್ವ ಬೇರೂರಿದ್ದು, ದಾಖಲೆ ಪ್ರಮಾಣದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಭಯದ ವಾತಾವರಣ ಹೋಗಿ ಶಾಂತಿ ಮತ್ತು ಕೈಗಾರಿಕಾ ಅಭಿವೃದ್ಧಿಯ ಹೊಸ ಪರ್ವ ಆರಂಭವಾಗಿದೆ. ಹಲವು ದಶಕಗಳಿಂದ ಹೊತ್ತಿ ಉರಿಯುತ್ತಿದ್ದ ಬಂಡುಕೋರ ಗುಂಪುಗಳೊಂದಿಗೆ ಶಾಂತಿ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಬಹುತೇಕ ಪ್ರದೇಶಗಳಿಂದ ಅಫ್ಸ್ಪಾ ಹಿಂಪಡೆಯಲಾಗಿದ್ದು, ಈಶಾನ್ಯ ಭಾಗವು ದೇಶದ ಆರ್ಥಿಕತೆಯ ಮುಂಚೂಣಿ ಎಂಜಿನ್ ಆಗಿ ಹೊರಹೊಮ್ಮುತ್ತಿದೆ. ಹಿಂಸಾಚಾರದ ಜಾಗದಲ್ಲಿ ರಸ್ತೆಗಳು, ಶಾಲೆಗಳು, ಆಸ್ಪತ್ರೆಗಳು ಮತ್ತು ಮೊಬೈಲ್ ಟವರ್‌ಗಳು ತಲೆಯೆತ್ತುತ್ತಿವೆ. ಶಾಲಾ ಮಕ್ಕಳ ಕೈಗೆ ಬಂದೂಕುಗಳ ಬದಲು ಲ್ಯಾಪ್‌ಟಾಪ್‌ಗಳು ಮತ್ತು ಪುಸ್ತಕಗಳು ಬಂದಿವೆ.

2029ರ ವೇಳೆಗೆ 'ನಶ ಮುಕ್ತ ಭಾರತ': ಡ್ರಗ್ಸ್ ವಿರುದ್ಧ ನಿರ್ಣಾಯಕ ಸಮರ

ದೇಶದ ಭದ್ರತೆಗೆ ಎದುರಾಗಿರುವ ಆಧುನಿಕ ಸವಾಲುಗಳ ಬಗ್ಗೆ ಎಚ್ಚರಿಕೆ ನೀಡಿದ ಅಮಿತ್ ಶಾ, ಮಾದಕ ವಸ್ತುಗಳ ಹಾವಳಿಯನ್ನು ದೇಶದ ಎರಡನೇ ಅತಿದೊಡ್ಡ ಆಂತರಿಕ ಶತ್ರು ಎಂದು ಬಣ್ಣಿಸಿದರು. ಕೇಂದ್ರ ಸರ್ಕಾರವು 2029ರ ಡಿಸೆಂಬರ್ 31ರೊಳಗೆ ಇಡೀ ಭಾರತವನ್ನು ಮಾದಕ ವಸ್ತುಗಳ ಸಮಸ್ಯೆಯಿಂದ ಮುಕ್ತಗೊಳಿಸುವ ಬೃಹತ್ ಗುರಿಯನ್ನು ಹೊಂದಿದೆ. ಡ್ರಗ್ಸ್ ಕೇವಲ ಯುವಜನತೆಯ ಭವಿಷ್ಯವನ್ನು ಹಾಳುಮಾಡುವುದಿಲ್ಲ, ಬದಲಾಗಿ ಇದರಿಂದ ಬರುವ ಕಪ್ಪುಹಣವು ಭಯೋತ್ಪಾದನೆ, ದೇಶದ್ರೋಹಿ ಕೃತ್ಯಗಳಿಗೆ ಮತ್ತು ರಾಷ್ಟ್ರದ ಆರ್ಥಿಕತೆಯನ್ನು ದುರ್ಬಲಗೊಳಿಸಲು ಬಳಕೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಈ ನಾರ್ಕೋ-ಟೆರರಿಸಂ ವಿರುದ್ಧದ ಸಮರದಲ್ಲಿ ದೇಶದ ಎಲ್ಲಾ ರಾಜ್ಯಗಳ ಪೊಲೀಸ್ ಪಡೆಗಳು, ಕೇಂದ್ರ ತನಿಖಾ ಸಂಸ್ಥೆಗಳು ಮತ್ತು ಗುಪ್ತಚರ ವಿಭಾಗಗಳು 'ಶೂನ್ಯ ಸಹಿಷ್ಣುತೆ' ನೀತಿಯೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.

Read More
Next Story