PM Narendra Modi| 2029ರ ವೇಳೆಗೆ ಮಹಿಳಾ ಮೀಸಲಾತಿ ಕಾಯ್ದೆ ಜಾರಿ ಶತಸಿದ್ಧ: ಪ್ರಧಾನಿ ಮೋದಿ ಘೋಷಣೆ
x
ವಿಜ್ಞಾನ ಭವನದಲ್ಲಿ ನಡೆದ 'ನಾರಿ ಶಕ್ತಿ ವಂದನ್ ಸಮ್ಮೇಳನ'ದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ

PM Narendra Modi| 2029ರ ವೇಳೆಗೆ ಮಹಿಳಾ ಮೀಸಲಾತಿ ಕಾಯ್ದೆ ಜಾರಿ ಶತಸಿದ್ಧ: ಪ್ರಧಾನಿ ಮೋದಿ ಘೋಷಣೆ

Womens Reservation Act| 2029ರ ವೇಳೆಗೆ ಮಹಿಳಾ ಮೀಸಲಾತಿ ಕಾಯ್ದೆ ಜಾರಿ ಶತಸಿದ್ಧ ಎಂದು ಪ್ರಧಾನಿ ಮೋದಿ ನಾರಿ ಶಕ್ತಿ ವಂದನ್ ಸಮ್ಮೇಳನದಲ್ಲಿ ತಿಳಿಸಿದ್ದಾರೆ.


Click the Play button to hear this message in audio format

ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿಗೆ ತರಲು ಸರ್ಕಾರವು 2029ರ ಗಡುವನ್ನು ನಿಗದಿಪಡಿಸಿದೆ. ಎಷ್ಟೇ ಕಠಿಣ ಪರಿಸ್ಥಿತಿ ಇದ್ದರೂ ಈ ಕಾಲಮಿತಿಯೊಳಗೆ ಅದನ್ನು ಜಾರಿಗೆ ತರಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ (ಏಪ್ರಿಲ್ 13) ಪ್ರತಿಪಾದಿಸಿದ್ದಾರೆ.

ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ 'ನಾರಿ ಶಕ್ತಿ ವಂದನ್ ಸಮ್ಮೇಳನ' ಉದ್ದೇಶಿಸಿ ಮಾತನಾಡಿದ ಅವರು, ಈ ಐತಿಹಾಸಿಕ ನಿರ್ಧಾರದ ಬಗ್ಗೆ ಏಪ್ರಿಲ್ 16 ರಿಂದ ಸಂಸತ್ತಿನಲ್ಲಿ ಸುದೀರ್ಘ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.

ಏಪ್ರಿಲ್ 16ರಿಂದ ಸಂಸತ್ತಿನಲ್ಲಿ ಚರ್ಚೆ

"2029ರ ವೇಳೆಗೆ ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂಬುದು ಸರ್ವಾನುಮತದ ಬೇಡಿಕೆಯಾಗಿದೆ. ನಾವು 2029ರ ಗಡುವನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದೇವೆ. ಏಪ್ರಿಲ್ 16 ರಿಂದ ಸಂಸತ್ತಿನಲ್ಲಿ ಈ ಬಗ್ಗೆ ಸಮಗ್ರ ಚರ್ಚೆ ನಡೆಯಲಿದೆ. ಪರಸ್ಪರ ಸಹಕಾರ ಮತ್ತು ಭಾಗವಹಿಸುವಿಕೆಯೊಂದಿಗೆ ಈ ಕಾರ್ಯ ಯಶಸ್ವಿಯಾಗಲಿ ಎಂಬುದು ನಮ್ಮ ಆಶಯ," ಎಂದು ಪ್ರಧಾನಿ ಮೋದಿ ಹೇಳಿದರು.

21ನೇ ಶತಮಾನದ ಅತಿದೊಡ್ಡ ನಿರ್ಧಾರ

ಈ ಉಪಕ್ರಮವನ್ನು ಭಾರತದ ಇತಿಹಾಸದ ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದ ಪ್ರಧಾನಿ, "ಇದು 21ನೇ ಶತಮಾನದ ಅತ್ಯಂತ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ ಎಂದು ನಾನು ಜವಾಬ್ದಾರಿಯಿಂದ ಹೇಳುತ್ತಿದ್ದೇನೆ. ಈ ನಿರ್ಧಾರವು ಸಂಪೂರ್ಣವಾಗಿ 'ನಾರಿ ಶಕ್ತಿ'ಗೆ ಸಮರ್ಪಿತವಾಗಿದೆ," ಎಂದರು.

ಸಾಮಾಜಿಕ ನ್ಯಾಯಕ್ಕೆ ಸಂದ ಜಯ

ಈ ಕಾಯ್ದೆಯು ಆಡಳಿತ ಮತ್ತು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಸಾಮಾಜಿಕ ನ್ಯಾಯವನ್ನು ಪ್ರಮುಖ ಭಾಗವಾಗಿಸಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು. "ನಮ್ಮ ದೇಶದ ಸಂಸತ್ತು ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ. ದಶಕಗಳ ಕಾಯುವಿಕೆಗೆ ಅಂತ್ಯ ಹಾಡುವ ಸಮಯ ಬಂದಿದೆ. ರಾಜ್ಯ ವಿಧಾನಸಭೆಗಳಿಂದ ಹಿಡಿದು ದೇಶದ ಸಂಸತ್ತಿನವರೆಗೆ ಮಹಿಳೆಯರಿಗೆ ಸಮಾನ ಅವಕಾಶ ಸಿಗಲಿದೆ. ಏಪ್ರಿಲ್ 16, 17 ಮತ್ತು 18 ರಂದು ಈ ಬಗ್ಗೆ ಮಹತ್ವದ ಪ್ರಕ್ರಿಯೆ ನಡೆಯಲಿದೆ" ಎಂದು ಅವರು ತಿಳಿಸಿದರು.

ಕಳೆದ ನಾಲ್ಕು ದಶಕಗಳಿಂದ ಮಹಿಳಾ ಮೀಸಲಾತಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಎಲ್ಲಾ ಪಕ್ಷಗಳು ತಮ್ಮದೇ ಆದ ರೀತಿಯಲ್ಲಿ ಈ ಆಲೋಚನೆಯನ್ನು ಮುಂದಕ್ಕೆ ಕೊಂಡೊಯ್ದಿವೆ. ಈಗ ಇದನ್ನು ಕಾರ್ಯರೂಪಕ್ಕೆ ತರುವ ಸಮಯ ಬಂದಿದೆ ಎಂದು ಮೋದಿ ಅಭಿಪ್ರಾಯಪಟ್ಟರು.


Read More
Next Story