
ನೆಹರೂ ದಾಖಲೆ ಮುರಿದ ಮೋದಿ ಆಡಳಿತ: ದೇಶದ ಇತಿಹಾಸದಲ್ಲಿ ಬರೆಯಲ್ಪಟ್ಟ ಸುವರ್ಣ ಅಧ್ಯಾಯ
ಪ್ರಧಾನಿ ನರೇಂದ್ರ ಮೋದಿಯವರು ದೇಶದ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ಸುದೀರ್ಘವಾಗಿ ಸೇವೆ ಸಲ್ಲಿಸಿದ ಪ್ರಧಾನಿಯಾಗಿ ಹೊರಹೊಮ್ಮಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ದೇಶದ ರಾಜಕೀಯ ಮತ್ತು ಆರ್ಥಿಕ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯವನ್ನು ದಾಖಲಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ಸುದೀರ್ಘವಾಗಿ ಸೇವೆ ಸಲ್ಲಿಸಿದ ಪ್ರಧಾನಿಯಾಗಿ ಹೊರಹೊಮ್ಮಿರುವುದು, ದೇಶದ ಅಭಿವೃದ್ಧಿ ಪಥದಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಅವರು, ಸತತ 4,399 ದಿನಗಳ ಕಾಲ ಅಧಿಕಾರದಲ್ಲಿದ್ದು, ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ದಾಖಲೆಯನ್ನು ಮೀರಿ ನಿಂತಿದ್ದಾರೆ. ಇದು ಕೇವಲ ವ್ಯಕ್ತಿಯೊಬ್ಬರ ಸಾಧನೆಯಲ್ಲ, ಬದಲಾಗಿ ದೇಶದ ಕೋಟ್ಯಂತರ ಜನರು 2014, 2019 ಮತ್ತು 2024ರ ಸಾರ್ವತ್ರಿಕ ಚುನಾವಣೆಗಳಲ್ಲಿ ವ್ಯಕ್ತಪಡಿಸಿದ ಅಚಲ ನಂಬಿಕೆಯ ಫಲವಾಗಿದೆ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಕನಸಿನಿಂದ ಆರಂಭವಾಗಿ, ದೀನದಯಾಳ್ ಉಪಾಧ್ಯಾಯರ ತ್ಯಾಗ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಮಾರ್ಗದರ್ಶನದಲ್ಲಿ ರೂಪುಗೊಂಡ ಬಿಜೆಪಿ ಪಕ್ಷವು ಇಂದು ಮೋದಿಯವರ ನೇತೃತ್ವದಲ್ಲಿ ತನ್ನ ಸುವರ್ಣ ಕಾಲವನ್ನು ಕಾಣುತ್ತಿದೆ ಎಂದಿದ್ದಾರೆ.
ಆರ್ಥಿಕ ಮಹಾಶಕ್ತಿಯತ್ತ ಭಾರತ
ಕಳೆದ ಹನ್ನೆರಡು ವರ್ಷಗಳಲ್ಲಿ ಭಾರತದ ಆರ್ಥಿಕತೆಯು ಬೆರಗುಗೊಳಿಸುವ ರೀತಿಯಲ್ಲಿ ಬದಲಾಗಿದೆ. 2014ರಲ್ಲಿ 11ನೇ ಸ್ಥಾನದಲ್ಲಿದ್ದ ಭಾರತೀಯ ಆರ್ಥಿಕತೆಯು, ಇಂದು ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಜಿಡಿಪಿ 2 ಟ್ರಿಲಿಯನ್ ಡಾಲರ್‌ನಿಂದ 4.18 ಟ್ರಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ವಿದೇಶಿ ನೇರ ಹೂಡಿಕೆ 1 ಟ್ರಿಲಿಯನ್ ಡಾಲರ್ ದಾಟಿದೆ. 'ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್' ಸೂಚ್ಯಂಕದಲ್ಲಿ 142ನೇ ಸ್ಥಾನದಿಂದ 63ನೇ ಸ್ಥಾನಕ್ಕೆ ಜಿಗಿದಿರುವುದು, 'ರೆಡ್ ಟೇಪ್'ನಿಂದ 'ರೆಡ್ ಕಾರ್ಪೆಟ್' ಸಂಸ್ಕೃತಿಗೆ ಭಾರತ ಬದಲಾಗಿರುವುದನ್ನು ತೋರಿಸುತ್ತದೆ. ಐಎಂಎಫ್ ವರದಿಯಂತೆ, 2030ರ ವೇಳೆಗೆ ಭಾರತ ಜರ್ಮನಿ ದೇಶವನ್ನು ಹಿಂದಿಕ್ಕಿ 3ನೇ ಅತಿದೊಡ್ಡ ಆರ್ಥಿಕತೆಯಾಗುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ಸಾಮಾಜಿಕ ಕ್ರಾಂತಿ ಹಾಗೂ ಕಲ್ಯಾಣ ಯೋಜನೆಗಳು
ಅಂಕಿ ಅಂಶಗಳಾಚೆಗೆ, ಮೋದಿಯವರ ಆಡಳಿತವು ಸಾಮಾನ್ಯ ಜನರ ಜೀವನಮಟ್ಟವನ್ನು ಸುಧಾರಿಸಿದೆ. ಉಜ್ವಲ ಯೋಜನೆಯು 10 ಕೋಟಿಗೂ ಹೆಚ್ಚು ಮಹಿಳೆಯರಿಗೆ ಹೊಗೆಮುಕ್ತ ಅಡುಗೆ ಅನಿಲ ಒದಗಿಸಿ, ಅವರ ಆರೋಗ್ಯ ಮತ್ತು ಜೀವನಶೈಲಿಯನ್ನು ಸುಧಾರಿಸಲಾಗಿದೆ. 58 ಕೋಟಿಗೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ತೆರೆಯುವ ಮೂಲಕ ಸಾಮಾನ್ಯ ಜನರನ್ನು ಔಪಚಾರಿಕ ಹಣಕಾಸು ವ್ಯವಸ್ಥೆಯ ಮುಖ್ಯವಾಹಿನಿಗೆ ತರಲಾಗಿದೆ. ಮಧ್ಯವರ್ತಿಗಳ ಹಾವಳಿಯನ್ನು ತಡೆದು, ನೇರ ನಗದು ವರ್ಗಾವಣೆ (DBT) ಮೂಲಕ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸವಲತ್ತು ತಲುಪುವಂತೆ ಮಾಡಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆ ಮೂಲಕ 22 ಕೋಟಿ ಜನರಿಗೆ ಉಚಿತ ಆರೋಗ್ಯ ವಿಮೆ ಮತ್ತು ಉಡಾನ್ ಯೋಜನೆಯಡಿ ದೇಶದಾದ್ಯಂತ ವಿಮಾನ ನಿಲ್ದಾಣಗಳ ಜಾಲವನ್ನು 74ರಿಂದ 157ಕ್ಕೆ ವಿಸ್ತರಿಸಲಾಗಿದೆ. ಕೇವಲ ಆರ್ಥಿಕತೆಯಲ್ಲದೆ, ಭಾರತೀಯತೆಯ ಅಸ್ಮಿತೆಯನ್ನು ಮರುಸ್ಥಾಪಿಸುವ ದಿಟ್ಟ ನಿರ್ಧಾರಗಳನ್ನು ಪ್ರಧಾನಿ ಕೈಗೊಂಡಿದ್ದಾರೆ. 2019ರ ಆ.5ರಂದು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಮೂಲಕ ಏಕ ಭಾರತದ ಸಂಕಲ್ಪವನ್ನು ನನಸಾಗಿಸಿದರು. ಇದು ಶ್ಯಾಮ ಪ್ರಸಾದ್ ಮುಖರ್ಜಿ ಅವರ ಬಲಿದಾನಕ್ಕೆ ಸಲ್ಲಿಸಿದ ಗೌರವವಾಗಿದೆ. 2024ರ ಜ.22 ರಂದು ಪ್ರಾಣ ಪ್ರತಿಷ್ಠಾಪನೆಯ ಮೂಲಕ ಐದು ಶತಮಾನಗಳ ನಿರೀಕ್ಷೆಯನ್ನು ಈಡೇರಿಸಿ, ದೇಶದ ಸಾಂಸ್ಕೃತಿಕ ಅಸ್ಮಿತೆಯನ್ನು ಮರುಸ್ಥಾಪಿಸಿದರು ಎಂದು ಹೇಳಿದ್ದಾರೆ.
ಜಾಗತಿಕ ವೇದಿಕೆಯಲ್ಲಿ ಭಾರತದ ಸ್ಥಾನ
ಇಂದು ಭಾರತ ಕೇವಲ ದೇಶೀಯವಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಲ್ಪಟ್ಟಿದೆ. ಮೋದಿಯವರು ವಿಶ್ವದ ವಿವಿಧ ರಾಷ್ಟ್ರಗಳಿಂದ 32ಕ್ಕೂ ಹೆಚ್ಚು ಅತ್ಯುನ್ನತ ನಾಗರಿಕ ಗೌರವಗಳನ್ನು ಪಡೆದಿದ್ದಾರೆ. ಜಿ20 ಅಧ್ಯಕ್ಷ ಸ್ಥಾನ, ಚಂದ್ರಯಾನ-3ರ ಯಶಸ್ಸು ಮತ್ತು ಯುಪಿಐ ಜಾಗತಿಕ ಅಳವಡಿಕೆ, ಭಾರತವು ಇಂದು ವಿಶ್ವಗುರುವಿನತ್ತ ಹೆಜ್ಜೆ ಹಾಕುತ್ತಿದೆ ಎಂಬುದನ್ನು ಸಾರಿ ಹೇಳುತ್ತವೆ. 'ವಿಕಸಿತ ಭಾರತ 2047' ಕೇವಲ ಒಂದು ಘೋಷಣೆಯಲ್ಲ, ಅದೊಂದು ದೃಢವಾದ ಮಿಷನ್ ಎಂದು ಯಡಿಯೂರಪ್ಪನವರು ಪ್ರತಿಪಾದಿಸಿದ್ದಾರೆ. ಸುಸ್ಥಿರ ಆರ್ಥಿಕ ಬೆಳವಣಿಗೆ ಮತ್ತು ವಿಶ್ವಮಟ್ಟದ ಮೂಲಸೌಕರ್ಯಗಳ ನಿರ್ಮಾಣದೊಂದಿಗೆ, ಭಾರತವು ಸ್ವಾತಂತ್ರ್ಯದ ಶತಮಾನೋತ್ಸವದ ಹೊತ್ತಿಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

