
ದೇಶದ ಮೊದಲ 'ರಿಂಗ್ ಮೆಟ್ರೋ' ಲೋಕಾರ್ಪಣೆ: 35,500 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಪ್ರಧಾನಿ ಚಾಲನೆ
ದೆಹಲಿಯ ಬಹುತೇಕ ಭಾಗಗಳನ್ನು ಸಂಪರ್ಕಿಸುವ ಪಿಂಕ್ ಲೈನ್ ಈಗ 71.56 ಕಿಲೋಮೀಟರ್ ಉದ್ದದ ಬೃಹತ್ ಜಾಲವಾಗಿ ರೂಪುಗೊಂಡಿದ್ದು, ದೇಶಧ ರಾಜಧಾನಿಯ ಸುತ್ತಲೂ ಒಂದು ನಿರಂತರ ವರ್ತುಲವನ್ನು ಸೃಷ್ಟಿಸಿದೆ.
ರಾಷ್ಟ್ರರಾಜಧಾನಿ ದೆಹಲಿಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಮೈಲಿಗಲ್ಲೊಂದು ನಿರ್ಮಾಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ದೆಹಲಿ ಮೆಟ್ರೋದ ಎರಡು ಪ್ರಮುಖ ಹೊಸ ಮಾರ್ಗಗಳನ್ನು ಉದ್ಘಾಟಿಸಿದ್ದು, ಇದರೊಂದಿಗೆ ದೇಶದ ಮೊಟ್ಟಮೊದಲ 'ರಿಂಗ್ ಮೆಟ್ರೋ' ಸೇವೆಗೆ ಅಧಿಕೃತ ಚಾಲನೆ ದೊರೆತಂತಾಗಿದೆ. ಇದರ ಜೊತೆಗೆ ರಾಜಧಾನಿ ಮತ್ತು ರಾಷ್ಟ್ರೀಯ ರಾಜಧಾನಿ ವಲಯದ (NCR) ಮೂಲಸೌಕರ್ಯ ಅಭಿವೃದ್ಧಿಗಾಗಿ ಸುಮಾರು 35,500 ಕೋಟಿ ರೂಪಾಯಿ ಮೌಲ್ಯದ ವಿವಿಧ ಬೃಹತ್ ಯೋಜನೆಗಳಿಗೆ ಅವರು ಶಂಕುಸ್ಥಾಪನೆ ನೆರವೇರಿಸಿದರು.
ಉದ್ಘಾಟನೆಗೊಂಡ ಹೊಸ ಮೆಟ್ರೋ ಕಾರಿಡಾರ್‌ಗಳು
ಪ್ರಧಾನಿ ಮೋದಿಯವರು ಉದ್ಘಾಟಿಸಿದ ಎರಡು ಹೊಸ ಕಾರಿಡಾರ್‌ಗಳಲ್ಲಿ 12.3 ಕಿಲೋಮೀಟರ್ ಉದ್ದದ ಮಜ್ಲಿಸ್ ಪಾರ್ಕ್-ಮೌಜ್‌ಪುರ್ ಬಾಬರ್‌ಪುರ್ (ಪಿಂಕ್ ಲೈನ್) ಮತ್ತು 9.9 ಕಿಲೋಮೀಟರ್ ಉದ್ದದ ದೀಪಾಲಿ ಚೌಕ್-ಮಜ್ಲಿಸ್ ಪಾರ್ಕ್ (ಮೆಜೆಂಟಾ ಲೈನ್) ಸೇರಿವೆ. ಪಿಂಕ್ ಲೈನ್ ವಿಸ್ತರಣೆಯಿಂದಾಗಿ ಬುರಾರಿ, ಜಗತ್‌ಪುರ್-ವಜೀರಾಬಾದ್, ಖಜೂರಿ ಖಾಸ್, ಭಜನ್‌ಪುರ, ಯಮುನಾ ವಿಹಾರ್, ಹೈದರ್‌ಪುರ್ ಬದ್ಲಿ ಮೋರ್ ಸೇರಿದಂತೆ ಹಲವು ಪ್ರದೇಶಗಳ ಜನರಿಗೆ ನೇರ ಹಾಗೂ ತ್ವರಿತ ಸಂಪರ್ಕ ಲಭ್ಯವಾಗಿದೆ. ದೀಪಾಲಿ ಚೌಕ್‌ನಿಂದ ಮಜ್ಲಿಸ್ ಪಾರ್ಕ್‌ವರೆಗಿನ ವಿಸ್ತರಣೆಯೊಂದಿಗೆ ಮೆಜೆಂಟಾ ಲೈನ್‌ನ ಒಟ್ಟು ಉದ್ದ 49 ಕಿಲೋಮೀಟರ್‌ಗೆ ಏರಿಕೆಯಾಗಿದೆ. ಮಧುಬನ್ ಚೌಕ್, ಉತ್ತರ ಪೀತಾಂಪುರ-ಪ್ರಶಾಂತ್ ವಿಹಾರ್, ಭಾಲ್ಸ್ವಾ ಸೇರಿದಂತೆ ಏಳು ಹೊಸ ಎಲಿವೇಟೆಡ್ ನಿಲ್ದಾಣಗಳು ಈ ಮಾರ್ಗದಲ್ಲಿ ಕಾರ್ಯಾಚರಣೆ ಆರಂಭಿಸಿವೆ.
ದೇಶದ ಮೊದಲ 'ರಿಂಗ್ ಮೆಟ್ರೋ' ಸಾಕಾರ
ಈ ಹೊಸ ಮಾರ್ಗಗಳ ಉದ್ಘಾಟನೆಯ ಅತಿದೊಡ್ಡ ಸಾಧನೆಯೆಂದರೆ ಭಾರತದ ಮೊದಲ 'ರಿಂಗ್ ಮೆಟ್ರೋ' ಕನಸು ನನಸಾಗಿರುವುದು. ದೆಹಲಿಯ ಬಹುತೇಕ ಭಾಗಗಳನ್ನು ಸಂಪರ್ಕಿಸುವ ಪಿಂಕ್ ಲೈನ್ ಈಗ 71.56 ಕಿಲೋಮೀಟರ್ ಉದ್ದದ ಬೃಹತ್ ಜಾಲವಾಗಿ ರೂಪುಗೊಂಡಿದ್ದು, ರಾಜಧಾನಿಯ ಸುತ್ತಲೂ ಒಂದು ನಿರಂತರ ವರ್ತುಲವನ್ನು ಸೃಷ್ಟಿಸಿದೆ. ಈ ವಿಸ್ತೃತ ಸಂಪರ್ಕ ಜಾಲದಿಂದಾಗಿ ಈಶಾನ್ಯ ಮತ್ತು ವಾಯುವ್ಯ ದೆಹಲಿಯ ನಡುವಿನ ಪ್ರಯಾಣದ ಸಮಯ ಗಣನೀಯವಾಗಿ ತಗ್ಗಲಿದೆ. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಈ ಕುರಿತು ಪ್ರತಿಕ್ರಿಯಿಸಿದ್ದು, 2025-26ರ ಆರ್ಥಿಕ ವರ್ಷದ ಬಜೆಟ್‌ನಲ್ಲಿ ಸಾರ್ವಜನಿಕ ಸಾರಿಗೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಹಾಗೂ ಈ ಯೋಜನೆಯು ದೆಹಲಿಯ ಸಾರಿಗೆ ವ್ಯವಸ್ಥೆಯ ಪ್ರಮುಖ ಆಧಾರಸ್ತಂಭವಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
5ನೇ ಹಂತದ ಮೆಟ್ರೋ ಯೋಜನೆಗಳಿಗೆ ಶಂಕುಸ್ಥಾಪನೆ
ಇದೇ ಸಮಾರಂಭದಲ್ಲಿ ಪ್ರಧಾನಿಯವರು ದೆಹಲಿ ಮೆಟ್ರೋದ ಐದನೇ ಹಂತದ (Phase V-A) ಮೂರು ಹೊಸ ಕಾರಿಡಾರ್‌ಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಒಟ್ಟು 16.1 ಕಿಲೋಮೀಟರ್ ಉದ್ದದ ಈ ನೂತನ ಮಾರ್ಗಗಳು ಆರ್.ಕೆ. ಆಶ್ರಮ ಮಾರ್ಗದಿಂದ ಇಂದ್ರಪ್ರಸ್ಥ, ಏರೋಸಿಟಿಯಿಂದ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1, ಮತ್ತು ತುಘಲಕಾಬಾದ್‌ನಿಂದ ಕಾಳಿಂದಿ ಕುಂಜ್‌ವರೆಗೆ ಸಂಪರ್ಕ ಕಲ್ಪಿಸಲಿವೆ. ಮುಂಬರುವ ದಿನಗಳಲ್ಲಿ ಈ ಮಾರ್ಗಗಳು ನೋಯ್ಡಾ, ದಕ್ಷಿಣ ದೆಹಲಿ ಮತ್ತು ವಿಮಾನ ನಿಲ್ದಾಣದ ನಡುವೆ ಸಂಚರಿಸುವ ಪ್ರಯಾಣಿಕರಿಗೆ ಅತ್ಯಂತ ಅನುಕೂಲಕರವಾಗಲಿವೆ. ಇದರ ಜೊತೆಗೆ ಕೇಂದ್ರ ಸರ್ಕಾರದ ಜಿಪಿಆರ್‌ಎ (GPRA) ಮರು-ಅಭಿವೃದ್ಧಿ ಯೋಜನೆಯಡಿ 15,200 ಕೋಟಿ ರೂಪಾಯಿಗಳ ಕಾಮಗಾರಿಗಳಿಗೂ ಪ್ರಧಾನಿ ಚಾಲನೆ ನೀಡಿದರು.

