ಭಾರತ-ಇಟಲಿ ಬಾಂಧವ್ಯಕ್ಕೆ ಕಲಾತ್ಮಕ ಮೆರುಗು: ಇಟಲಿ ನಾಯಕರಿಗೆ ಭಾರತದ ವಿಶೇಷ ಉಡುಗೊರೆಗಳು
x

ಭಾರತ-ಇಟಲಿ ಬಾಂಧವ್ಯಕ್ಕೆ ಕಲಾತ್ಮಕ ಮೆರುಗು: ಇಟಲಿ ನಾಯಕರಿಗೆ ಭಾರತದ ವಿಶೇಷ ಉಡುಗೊರೆಗಳು

ಇಟಲಿಯ ಪ್ರಧಾನಿ ಮತ್ತು ಅಧ್ಯಕ್ಷರಿಗೆ ನೀಡಲಾದ ಉಡುಗೊರೆಗಳು ಭಾರತದ ಈಶಾನ್ಯ ರಾಜ್ಯಗಳ ಕರಕುಶಲತೆ ಮತ್ತು ಉತ್ತರ ಭಾರತದ ಐತಿಹಾಸಿಕ ಕಲಾ ಪ್ರೌಢಿಮೆಯನ್ನು ಎತ್ತಿ ಹಿಡಿಯುತ್ತವೆ.


Click the Play button to hear this message in audio format

ಭಾರತೀಯ ರಾಜತಾಂತ್ರಿಕತೆಯಲ್ಲಿ ಉಡುಗೊರೆಗಳು ಕೇವಲ ಶಿಷ್ಟಾಚಾರದ ಭಾಗವಲ್ಲ, ಅವು ಆಯಾ ದೇಶದ ವೈವಿಧ್ಯಮಯ ಸಂಸ್ಕೃತಿ ಮತ್ತು ಕಲಾ ಪರಂಪರೆಯನ್ನು ಜಗತ್ತಿಗೆ ಪರಿಚಯಿಸುವುದಾಗಿದೆ. ಇಟಲಿಯ ಪ್ರಧಾನಿ ಮತ್ತು ಅಧ್ಯಕ್ಷರಿಗೆ ನೀಡಲಾದ ಉಡುಗೊರೆಗಳು ಭಾರತದ ಈಶಾನ್ಯ ರಾಜ್ಯಗಳ ಕರಕುಶಲತೆ ಮತ್ತು ಉತ್ತರ ಭಾರತದ ಐತಿಹಾಸಿಕ ಕಲಾ ಪ್ರೌಢಿಮೆಯನ್ನು ಎತ್ತಿ ಹಿಡಿಯುತ್ತವೆ.

ಇಟಲಿ ಪ್ರಧಾನಿಗೆ ಮುಗಾ ಸಿಲ್ಕ್

ಅಸ್ಸಾಂನ ಬ್ರಹ್ಮಪುತ್ರ ಕಣಿವೆಯಿಂದ ಬಂದಿರುವ ಮುಗಾ ಸಿಲ್ಕ್ ವಿಶ್ವದ ಅತ್ಯಂತ ಅಪರೂಪದ ರೇಷ್ಮೆಗಳಲ್ಲಿ ಒಂದಾಗಿದೆ. ಇದನ್ನು ಗೋಲ್ಡನ್ ಸಿಲ್ಕ್ (ಸುವರ್ಣ ರೇಷ್ಮೆ) ಎಂದೇ ಕರೆಯಲಾಗುತ್ತದೆ. ಮುಗಾ ರೇಷ್ಮೆಯು ಯಾವುದೇ ಕೃತಕ ಬಣ್ಣಗಳಿಲ್ಲದೆ ತನ್ನ ನೈಸರ್ಗಿಕ ಚಿನ್ನದ ಬಣ್ಣವನ್ನು ಹೊಂದಿರುವುದು ಇದರ ವಿಶೇಷತೆ. ಇದು ಸುಸ್ಥಿರ ಅಭಿವೃದ್ಧಿಯ ಸಾಂಪ್ರದಾಯಿಕ ಮಾದರಿಯನ್ನು ಪ್ರತಿಬಿಂಬಿಸುತ್ತದೆ. ಇದು ವಿಶ್ವದ ಅತ್ಯಂತ ಬಲಿಷ್ಠ ನೈಸರ್ಗಿಕ ಎಳೆಗಳಲ್ಲಿ ಒಂದಾಗಿದ್ದು, ದಶಕಗಳ ಕಾಲ ಬಾಳಿಕೆ ಬರುತ್ತದೆ. ಕಾಲ ಕಳೆದಂತೆ ಇದರ ಹೊಳಪು ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಇಟಲಿಯು ತನ್ನ ಐಷಾರಾಮಿ ಜವಳಿ ಉದ್ಯಮ ಮತ್ತು ಕಾಲಾತೀತ ವಿನ್ಯಾಸಗಳಿಗೆ ಜಗತ್ಪ್ರಸಿದ್ಧ. ಮುಗಾ ರೇಷ್ಮೆಯ ಸೊಬಗು ಮತ್ತು ಇಟಲಿಯ ಉನ್ನತ ಮಟ್ಟದ ಜವಳಿ ಸಂಪ್ರದಾಯದ ನಡುವೆ ಒಂದು ಸಹಜವಾದ ಸಾಮ್ಯತೆ ಇರುವುದರಿಂದ, ಇದು ಇಟಲಿ ಪ್ರಧಾನಿಗೆ ಸೂಕ್ತ ಉಡುಗೊರೆಯಾಗಿದೆ.

ಶಿರೂಯಿ ಲಿಲಿ ರೇಷ್ಮೆ ಶಾಲು

ಮಣಿಪುರದ ಶಿರೂಯಿ ಕಶೊಂಗ್ ಶಿಖರದ ಮಂಜಿನ ಬೆಟ್ಟಗಳಲ್ಲಿ ಮಾತ್ರ ಅರಳುವ ಶಿರೂಯಿ ಲಿಲಿ ಹೂವು, ಅತೀವ ಸೌಂದರ್ಯಕ್ಕೆ ಸಾಕ್ಷಿಯಾಗಿದೆ. ಈ ಹೂವಿನ ಸ್ಫೂರ್ತಿಯಿಂದ ತಯಾರಿಸಿದ ರೇಷ್ಮೆ ಶಾಲನ್ನು ಇಟಲಿ ಪ್ರಧಾನಿಗೆ ಕಾಣಿಕೆಯಾಗಿ ನೀಡಲಾಗಿದೆ. ಮಣಿಪುರದ ಟಾಂಗ್‌ಖುಲ್ ನಾಗಾ ಸಮುದಾಯದ ಪಾಲಿಗೆ ಶಿರೂಯಿ ಲಿಲಿ ಪವಿತ್ರತೆ ಮತ್ತು ಸಾಂಸ್ಕೃತಿಕ ಹೆಮ್ಮೆಯ ಸಂಕೇತ. ಈ ಶಾಲು ಕೇವಲ ಕರಕುಶಲತೆಯಲ್ಲ, ಇದು ಆದಿವಾಸಿ ಸಂಪ್ರದಾಯ ಮತ್ತು ಜಾನಪದ ಕಥನಗಳ ಪ್ರತೀಕವಾಗಿದೆ. ಇಟಲಿಯ ಕಲಾ ಇತಿಹಾಸದಲ್ಲೂ ಲಿಲಿ ಹೂವು ಪವಿತ್ರತೆ ಮತ್ತು ಸೌಂದರ್ಯದ ಸಂಕೇತವಾಗಿ ರೇನೈಸನ್ಸ್ ಕಾಲದ ಚಿತ್ರಕಲೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಭಾರತ ಮತ್ತು ಇಟಲಿಯ ಕಲೆಗಳಲ್ಲಿನ ಈ ಸಾಮಾನ್ಯ ಅಂಶವು ಎರಡೂ ದೇಶಗಳನ್ನು ಸಾಂಸ್ಕೃತಿಕವಾಗಿ ಹತ್ತಿರ ತರುತ್ತದೆ.

ಇಟಲಿ ಅಧ್ಯಕ್ಷರಿಗೆ ಮಾರ್ಬಲ್ ಇನ್ಲೇ ಪೆಟ್ಟಿಗೆ

ಇಟಲಿ ಅಧ್ಯಕ್ಷರಿಗೆ ನೀಡಲಾದ ಉಡುಗೊರೆಯು ಭಾರತ ಮತ್ತು ಇಟಲಿಯ ನಡುವಿನ ಅತ್ಯಂತ ಹಳೆಯ ಕಲಾತ್ಮಕ ಸಂಬಂಧಕ್ಕೆ ಸಾಕ್ಷಿಯಾಗಿದೆ. ಆಗ್ರಾದ ಕುಶಲಕರ್ಮಿಗಳಿಂದ ತಯಾರಿಸಲ್ಪಟ್ಟ ಈ ಮಾರ್ಬಲ್ ಪೆಟ್ಟಿಗೆಯಲ್ಲಿನ ಪಚ್ಚಿಕಾರಿ ಕಲೆಯು ಮೂಲತಃ ಇಟಲಿಯ ಫ್ಲಾರೆನ್ಸ್ ನಗರದಲ್ಲಿ ಹುಟ್ಟಿಕೊಂಡಿದ್ದು ಎಂದು ನಂಬಲಾಗಿದೆ. ಭಾರತದಲ್ಲಿ ಮೊಘಲರ ರಾಜಾಶ್ರಯದಲ್ಲಿ ಈ ಕಲೆ ಬೆಳೆದು ಬಂದಿತು. ಅಂದರೆ, ಇಟಲಿಯ ಮೂಲದ ಈ ಕಲೆ ಈಗ ಭಾರತೀಯ ಕರಕುಶಲತೆಯ ಶ್ರೇಷ್ಠ ನಿದರ್ಶನವಾಗಿದೆ. ಈ ಉಡುಗೊರೆಯು ಎರಡೂ ರಾಷ್ಟ್ರಗಳ ನಡುವೆ ಒಂದು ಕಲಾತ್ಮಕ ಸೇತುವೆಯನ್ನು ನಿರ್ಮಿಸುತ್ತದೆ. ಬಿಳಿ ಅಮೃತಶಿಲೆಯ ಮೇಲೆ ನೀಲಿ ನೀಲಮಣಿ , ವೈಡೂರ್ಯ , ಮಾಲಾಕೈಟ್ ಮತ್ತು ಮುತ್ತಿನ ಚಿಪ್ಪಿನಂತಹ ಅರೆ-ಬೆಲೆಬಾಳುವ ಕಲ್ಲುಗಳನ್ನು ಬಳಸಿ ಹೂವಿನ ವಿನ್ಯಾಸಗಳನ್ನು ಕೆತ್ತಲಾಗಿದೆ. ಇದರ ಕರಾರುವಾಕ್ ಕೆಲಸವು ಭಾರತೀಯ ಕುಶಲಕರ್ಮಿಗಳ ಅದ್ಭುತ ಕೌಶಲ್ಯವನ್ನು ತೋರಿಸುತ್ತದೆ.

Read More
Next Story