ಜು. 20ರಿಂದ ಸಂಸತ್‌ ಮುಂಗಾರು ಅಧಿವೇಶನ - ಹಲವು ಮಸೂದೆಗಳ ಮಂಡನೆ ಸಾಧ್ಯತೆ
x

ಜು. 20ರಿಂದ ಸಂಸತ್‌ ಮುಂಗಾರು ಅಧಿವೇಶನ - ಹಲವು ಮಸೂದೆಗಳ ಮಂಡನೆ ಸಾಧ್ಯತೆ

ಜುಲೈ 20ರಿಂದ ಸಂಸತ್ ಮುಂಗಾರು ಅಧಿವೇಶನ ಆರಂಭವಾಗುವ ಸಾಧ್ಯತೆ. ಒಂದು ದೇಶ ಒಂದು ಚುನಾವಣೆ, ಮಹಿಳಾ ಮೀಸಲಾತಿ ಸೇರಿದಂತೆ ಹಲವು ಪ್ರಮುಖ ಮಸೂದೆಗಳು ಮತ್ತು ಸರ್ಕಾರ-ವಿಪಕ್ಷ ಮುಖಾಮುಖಿಗೆ ವೇದಿಕೆ ಸಜ್ಜಾಗಿದೆ.


ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 20ರಿಂದ ಆಗಸ್ಟ್‌ 13ರವರೆಗೆ ನಡೆಯುವ ಸಾಧ್ಯತೆ ಇದ್ದು, ಸುಮಾರು 19 ಸಭೆಗಳು ನಡೆಯಲಿವೆ ಎಂದು ಮೂಲಗಳು ತಿಳಿಸಿವೆ. ನಾಲ್ಕು ವಾರಗಳ ಕಾಲ ನಡೆಯಲಿರುವ ಈ ಅಧಿವೇಶನದಲ್ಲಿ ಹಲವು ಮಹತ್ವದ ಮಸೂದೆಗಳು ಮಂಡನೆಯಾಗಲಿದ್ದು, ಸರ್ಕಾರ ಮತ್ತು ವಿಪಕ್ಷಗಳ ನಡುವೆ ತೀವ್ರ ವಾಗ್ವಾದ ಹಾಗೂ ರಾಜಕೀಯ ಸಂಘರ್ಷಕ್ಕೆ ವೇದಿಕೆಯಾಗುವ ಸಾಧ್ಯತೆ ಇದೆ.

ಬಂಡಾಯ ಸಂಸದರ ವಿಲೀನದ ಬಗ್ಗೆ ಸ್ಪೀಕರ್ ನಿರ್ಧಾರ ಸಾಧ್ಯತೆ

ಅಧಿವೇಶನಕ್ಕೂ ಮುನ್ನ ಲೋಕಸಭಾ ಸ್ಪೀಕರ್, ತೃಣಮೂಲ ಕಾಂಗ್ರೆಸ್ (TMC) ಪಕ್ಷದ 20 ಬಂಡಾಯ ಸಂಸದರು ಹಾಗೂ ಶಿವಸೇನೆ (UBT)ಯ 6 ಸಂಸದರು ಶಿಂಧೆ ಬಣದ ಶಿವಸೇನೆಯೊಂದಿಗೆ ವಿಲೀನಗೊಂಡಿರುವ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಇದರ ಜೊತೆಗೆ, ಬಂಡಾಯ ಸಂಸದರ ಲೋಕಸಭೆಯ ಆಸನ ವ್ಯವಸ್ಥೆ ಬಗ್ಗೆಯೂ ಅಂತಿಮ ತೀರ್ಮಾನ ಹೊರಬೀಳುವ ನಿರೀಕ್ಷೆಯಿದೆ.

ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ

131ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿದ್ದುಪಡಿಗಳೊಂದಿಗೆ ಸರ್ಕಾರ ಮತ್ತೆ ಮಂಡಿಸುವ ಸಾಧ್ಯತೆ ಇದೆ. ಈ ಮಸೂದೆಯಲ್ಲಿ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳ ಸದಸ್ಯರ ಸಂಖ್ಯೆಯನ್ನು ಶೇ. 50 ಹೆಚ್ಚಿಸುವ ಪ್ರಸ್ತಾವನೆ ಸೇರಿರಬಹುದು ಎಂದು ಮೂಲಗಳು ತಿಳಿಸಿವೆ.

ಜೈಲಿನಲ್ಲಿರುವ ಸಚಿವರು ಹುದ್ದೆಯಿಂದ ತೆರವು?

130ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯ ಪ್ರಕಾರ, ಪ್ರಧಾನಮಂತ್ರಿ, ಮುಖ್ಯಮಂತ್ರಿ ಅಥವಾ ಸಚಿವರು 30 ದಿನಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿದ್ದರೆ ತಮ್ಮ ಹುದ್ದೆಯನ್ನು ಕಳೆದುಕೊಳ್ಳಬೇಕು ಎಂಬ ನಿಯಮವನ್ನು ತರಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಆದರೆ ಈ ನಿಯಮದ ದುರುಪಯೋಗವನ್ನು ತಡೆಯಲು ಅಗತ್ಯ ರಕ್ಷಣಾತ್ಮಕ ಕ್ರಮಗಳನ್ನು ಜಂಟಿ ಸಂಸದೀಯ ಸಮಿತಿ (JPC) ಶಿಫಾರಸು ಮಾಡುವ ಸಾಧ್ಯತೆ ಇದೆ.

ಇತರೆ ಪ್ರಮುಖ ಮಸೂದೆಗಳು

ಮುಂಗಾರು ಅಧಿವೇಶನದಲ್ಲಿ ಈ ಕೆಳಗಿನ ಮಹತ್ವದ ಮಸೂದೆಗಳನ್ನು ಸರ್ಕಾರ ಮುಂದಿರಿಸುವ ಸಾಧ್ಯತೆ ಇದೆ.

• 'ಒಂದು ರಾಷ್ಟ್ರ-ಒಂದು ಚುನಾವಣೆ' ಮಸೂದೆಗೆ ಸಂಬಂಧಿಸಿದ ಪ್ರಕ್ರಿಯೆ ಮುಂದುವರಿಸುವುದು.

• ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ತಿದ್ದುಪಡಿ ಮಸೂದೆ.

• ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ ಮಸೂದೆ.

• ರಾಷ್ಟ್ರೀಯ ಡೋಪಿಂಗ್ ವಿರೋಧಿ ಕಾನೂನು ತಿದ್ದುಪಡಿ.

• ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆಯನ್ನು ಹೆಚ್ಚಿಸುವ ಮಸೂದೆ.

• ಕಾರ್ಪೊರೇಟ್ ಕಾನೂನು ಸುಧಾರಣೆ.

• ಸೆಕ್ಯುರಿಟೀಸ್ ಮಾರುಕಟ್ಟೆ ಸಂಹಿತೆ

ವಿಪಕ್ಷದ ಪ್ರಮುಖ ಅಸ್ತ್ರಗಳೇನು?

ಮುಖ್ಯವಾಗಿ, ದುರ್ಬಲ ಮುಂಗಾರು ಹಾಗೂ ಬರ ಪರಿಸ್ಥಿತಿ, ಪ್ರವಾಹ ಸಮಸ್ಯೆ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ, ಅಯೋಧ್ಯೆ ರಾಮ ಮಂದಿರದ ಕಾಣಿಕೆ ಕಳವು ಆರೋಪ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ, ಹಣದುಬ್ಬರ ಮತ್ತು ನಿರುದ್ಯೋಗ ವಿಚಾರವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದಕೊಳ್ಳಲು ಮುಂದಾಗಿದೆ.

ಇವುಗಳ ಜೊತೆಗೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹಾಗೂ ಪ್ರಾದೇಶಿಕ ಪಕ್ಷಗಳಲ್ಲಿ ಒಡಕು ಮೂಡಿಸಲು ಕೇಂದ್ರ ಸರ್ಕಾರ ಕಾರಣವಾಗಿದೆ ಎಂಬ ಆರೋಪವನ್ನೂ ವಿಪಕ್ಷ ಪ್ರಸ್ತಾಪಿಸುವ ಸಾಧ್ಯತೆ ಇದೆ.

ಇತ್ತೀಚೆಗೆ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂನಲ್ಲಿ ನಡೆದ ಚುನಾವಣಾ ಗೆಲುವಿನ ಬಳಿಕ ಬಿಜೆಪಿ ಈ ಅಧಿವೇಶನದಲ್ಲಿ ಇನ್ನಷ್ಟು ಆಕ್ರಮಣಕಾರಿ ಧೋರಣೆ ಅನುಸರಿಸುವ ನಿರೀಕ್ಷೆಯಿದೆ. ಇನ್ನೊಂದೆಡೆ, ವಿವಿಧ ರಾಜ್ಯಗಳಲ್ಲಿ ಆಡಳಿತಾರೂಢ ಪಕ್ಷವು ಶಾಸಕರು ಮತ್ತು ಸಂಸದರನ್ನು ಸೆಳೆಯಲು ಕುದುರೆ ವ್ಯಾಪಾರ ನಡೆಸುತ್ತಿದೆ ಎಂಬ ಆರೋಪವನ್ನೂ ವಿಪಕ್ಷ ಪ್ರಸ್ತಾಪಿಸುವ ಸಾಧ್ಯತೆ ಇದೆ.

Read More
Next Story